'ಸೋಲಿಲ್ಲದ ಸರದಾರ' ಖರ್ಗೆಗೆ ಕಲಬುರ್ಗಿಯಲ್ಲಿ ಜಾಧವ್ ಕಠಿಣ ಸ್ಪರ್ಧೆ

ವೀರೇಂದ್ರ ಪಾಟೀಲ್ ಮತ್ತು ಧರಮ್ ಸಿಂಗ್ ಸೇರಿದಂತೆ ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿರುವ ಕಲಬುರ್ಗಿ ಕೃಷ್ಣ, ಭೀಮಾ, ಬೆಣ್ಣೆತೊರೆ ಮತ್ತು ಇತರ ಸಣ್ಣ ನದಿಗಳ ಸಂಗಮ ಕ್ಷೇತ್ರವಾಗಿದೆ;
'ಸೋಲಿಲ್ಲದ ಸರದಾರ' ಖರ್ಗೆಗೆ ಕಲಬುರ್ಗಿಯಲ್ಲಿ ಜಾಧವ್ ಕಠಿಣ ಸ್ಪರ್ಧೆ
'ಸೋಲಿಲ್ಲದ ಸರದಾರ' ಖರ್ಗೆಗೆ ಕಲಬುರ್ಗಿಯಲ್ಲಿ ಜಾಧವ್ ಕಠಿಣ ಸ್ಪರ್ಧೆ
ಕಲಬುರ್ಗಿ: ವೀರೇಂದ್ರ ಪಾಟೀಲ್ ಮತ್ತು ಧರಮ್ ಸಿಂಗ್ ಸೇರಿದಂತೆ ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿರುವ ಕಲಬುರ್ಗಿ ಕೃಷ್ಣ, ಭೀಮಾ, ಬೆಣ್ಣೆತೊರೆ ಮತ್ತು ಇತರ ಸಣ್ಣ ನದಿಗಳ ಸಂಗಮ ಕ್ಷೇತ್ರವಾಗಿದೆ; ತೊಗರಿಯ ಕಣಜವಾಗಿದೆ; 55 ವರ್ಷಗಳ ರಾಜಕೀಯ ಜೀವನದಲ್ಲಿ ಸೋಲಿಲ್ಲದ ಸರದಾರ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹ್ಯಾಟ್ರಿಕ್ ಬಾರಿಸಲಿದ್ದಾರೆಯೇ ?
ಮೂರನೇ ಬಾರಿಗೆ ಸಂಸತ್ ಪ್ರವೇಶಿಸಲು ಮಲ್ಲಿಕಾರ್ಜುನ ಖರ್ಗೆ ಭರ್ಜರಿ ತಯಾರಿ ನಡೆಸಿದ್ದಾರೆ, ಇಲ್ಲಿ ಜಾತಿ ಲೆಕ್ಕಾಚಾರಗಳೇ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ನಿರೀಕ್ಷೆಯಂತೆ ನಡೆದರೆ ಖರ್ಗೆ ಗೆಲುವಿಗೆ ಅದು ಬಗ್ಗಲ ಮುಳ್ಳಾಗಬಹುದು.
ಇದೇ 23 ರಂದು ಚುನಾವಣೆ ನಡೆಯಲಿದ್ದು ಅವರಿಗೆ ಅವರ ಪಕ್ಷದವರೇ ಆಗಿದ್ದ ಉಮೇಶ್ ಜಾಧವ್ ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ. ಗೆಲುವಿಗಾಗಿ ಮಲ್ಲಿಕಾರ್ಜುನ ಖರ್ಗೆ ಭಾರೀ ಕಸರತ್ತು ನಡೆಸಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿದೆ. ನಿಜ, 55 ವರ್ಷಗಳ ರಾಜಕೀಯ ಬದುಕಿನಲ್ಲಿ ಖರ್ಗೆ ಲೋಕಸಭೆ ಚುನಾವಣೆಯಲ್ಲಾಗಲಿ, ವಿಧಾನಸಭಾ ಚುನಾವಣೆಯಲ್ಲಾಗಲಿ ಎಂದೂ ಸೋತಿಲ್ಲ ಎಂಬುದು ಹೆಗ್ಗಳಿಕೆಯ ವಿಚಾರ. ಆದರೆ ಈ ಬಾರಿ ಪರಿಸ್ಥಿತಿ ವಿಭಿನ್ನವಾಗಿದೆ. ಗೆಲುವಿಗೆ ಅವರು ಏಳು ಕೆರೆ ನೀರು ಕುಡಿಯಬೇಕಾದ ದಾರುಣ ಪರಿಸ್ಥಿತಿಯೂ ಬಂದಿದೆ.
ಹೈದರಾಬಾದ್ ಕರ್ನಾಟಕ ಭಾಗದ ಅತಿ ಎತ್ತರದ ನಾಯಕ ಎಂಬ ಬಿರುದನ್ನು ಅವರು ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಪರವಾಗಿ ಎರಡೂ ಪಕ್ಷಗಳ ಅಗ್ರನಾಯಕರು ಅಬ್ಬರದ ಪ್ರಚಾರ ನಡೆಸಿ ಕಲಬುರಗಿಯಲ್ಲಿ ಧೂಳೆಬ್ಬಿಸಿದ್ದಾರೆ. ಖರ್ಗೆ ಪರವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂದಿ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಚಿತ್ರತಾರೆ ವಿಜಯಶಾಂತಿ ಮೊದಲಾದವರು ಅಬ್ಬರದ ಪ್ರಚಾರ ನಡೆಸಿದ್ದಾರೆ. ಬಿಜೆಪಿ ಪರ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮೊದಲಾದ ನಾಯಕರು ಪ್ರಚಾರ ಮಾಡಿದ್ದಾರೆ.
ಈ ನಡುವೆ ಯುಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಪ್ರಧಾನಿ ನರೇಂದ್ರ ಮೋದಿ, ಇತರೆ ಬಿಜೆಪಿ ನಾಯಕರು ಪ್ರಚಾರ ಮಾಡಿದ ಮಾತ್ರಕ್ಕೆ ಬಿಜೆಪಿ ಗೆಲ್ಲುತ್ತದೆ, ನನಗೆ ಸೋಲಾಗುತ್ತದೆ ಎಂಬ ಅಂಜಿಕೆ, ಅಳುಕು ನನಗಿಲ್ಲ. ಕ್ಷೇತ್ರದ ಜನ ನನ್ನನ್ನು ಅರ್ಥ ಮಾಡಿಕೊಂಡಿದ್ದಾರೆ. ನಾನು ಮಾಡಿದ ಕೆಲಸ ಮತ್ತು ಸಾಧನೆಗಳ ಆಧಾರದ ಮೇಲೆ ಮತ ಕೇಳುತ್ತಿದ್ದೇನೆ ಎಂದು ಹೇಳಿದ್ದಾರೆ. ಹಿಂದುಳಿದ ಹೈದರಾಬಾದ್ – ಕರ್ನಾಟಕ ಪ್ರದೇಶಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಈ ಭಾಗದ ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ವಿಶೇಷ ಸ್ಥಾನಮಾನ ನೀಡಲು ಸಂವಿಧಾನದ 371 (ಜೆ) ಕಲಂಗೆ ತಿದ್ದುಪಡಿ ತರಲು ಹೋರಾಟ ಮಾಡಿರುವುದನ್ನು ಈ ಭಾಗದ ಜನರು ಮರೆಯುವುದಿಲ್ಲ. ಇದರ ಜೊತೆಗೆ ಈ ಭಾಗಕ್ಕೆ ಅನೇಕ ಹೊಸ ಯೋಜನೆಗಳನ್ನು ತಂದಿದ್ದೇನೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಯೋಜನೆಗಳು ಮತ್ತು ವಿಮಾನ ಸಂಪರ್ಕದ, ಹೊಸ ನೀರಾವರಿ ಯೋಜನೆಗಳ ಸೌಲಭ್ಯ ಕಲ್ಪಿಸಲಾಗಿದೆ” ಎಂದು ಅವರು ತಮ್ಮ ಸಾಧನೆಗಳ ಪಟ್ಟಿಯನ್ನು ಬಿಚ್ಚಿಟ್ಟಿದ್ದಾರೆ. ಜೊತೆಗೆ ಕ್ಷೇತ್ರದ ಜನತೆ ತಮ್ಮ ಕೊಡುಗೆಯನ್ನು ಅರಿತುಕೊಂಡಿದ್ದಾರೆ ಎಂದು ಖರ್ಗೆ ಹೇಳಿಕೊಂಡಿದ್ದಾರೆ.
ಖರ್ಗೆ ವಿರುದ್ಧ ಕಣಕ್ಕಿಳಿಸಲು ಯಾವುದೇ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ಬಿಜೆಪಿ ವಿಫಲವಾಗಿದೆ. ಕಾಂಗ್ರೆಸ್ ನಲ್ಲಿದ್ದ ಉಮೇಶ್ ಜಾಧವ್ ಅವರನ್ನೇ ಕಾಡಿ, ಬೇಡಿ ಕರೆದುಕೊಂಡು ಬಂದಿರುವುದು ಬಿಜೆಪಿಯ ರಾಜಕೀಯ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಕ್ಷೇತ್ರದ ಜನ ಅರ್ಥ ಮಾಡಿಕೊಂಡಿದ್ದಾರೆ. ಜನರ ಪ್ರೀತಿ ವಿಶ್ವಾಸದಿಂದಲೇ ಅವರು ಇಲ್ಲಿಯವರೆಗೂ ವಿಜಯ ಯಾತ್ರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ ಎಂದು ಕಲಬುರಗಿಯ ಮಾಜಿ ಪಾಲಿಕೆ ಸದಸ್ಯ ಅರುಣ್ ಕುಮಾರ್ ಓಜಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನಾಯಕರು ಯಾವುದೇ ತಂತ್ರ, ಮಂತ್ರ ಮಾಡಿದರೂ ಖರ್ಗೆ ಅವರನ್ನು ಸುಲಭವಾಗಿ ಮಣಿಸಲು ಸಾಧ್ಯವಿಲ್ಲ. ಹೀಗಾಗಿ ಈ ಬಾರಿಯೂ ಅವರಿಗೆ ಜಯ ಲಭಿಸಲಿದೆ ಎಂಬ ವಿಶ್ವಾಸದ ಮಾತುಗಳನ್ನು ಅವರು ಹೇಳಿದ್ದಾರೆ.
ಆದರೆ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಅವರಿಗೆ ಜಾತಿಯ ಬೆಂಬಲ ಗಟ್ಟಿಯಾಗಿರುವುದು ಖರ್ಗೆ ವಿಜಯದ ಹಾದಿಗೆ ಬಗ್ಗಲ ಮುಳ್ಳಾಗಬಹುದು ಎಂದು ಅಳುಕು ಕೂಡ ಕಾಡುತ್ತಿದೆ. ಉಮೇಶ್ ಜಾಧವ್ ಅವರಿಗೆ ಲಂಬಾಣಿ, ಲಿಂಗಾಯತ, ವಾಲ್ಮೀಕಿ ಮತ್ತು ಮೇಲ್ವರ್ಗದ ಮತಗಳು ಶ್ರೀರಕ್ಷೆಯಾಗಬಹುದು. ಕಲಬುರಗಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಕಾಂಗ್ರೆಸ್ ನಾಯಕರ ಕೊಡುಗೆ ಅಪಾರವಾಗಿದ್ದರೂ ಅದು ಅವರ ಗೆಲುವಿಗೆ ನೆರವಾಗುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ.
ಈ ನಡುವೆ ರಾಜಕೀಯ ನಿಂತ ನೀರಾಗಬಾರದು, ಹೊಸ ನೀರು ಬರಬೇಕು, ರಾಜಕೀಯದಲ್ಲಿ ಹೊಸ ಗಾಳಿ ಬೀಸಬೇಕು ಎಂಬ ಕಾರಣದಿಂದ ಈ ಬಾರಿ ಜನ ಬದಲಾವಣೆ ಬಯಸಿ ಹೊಸ ವ್ಯವಸ್ಥೆಗೆ ಒಲವು ತೋರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಜಾತಿಯ ಮತಗಳನ್ನೇ ಪ್ರಧಾನವಾಗಿ ನಂಬಿಕೊಂಡಿರುವ, ಗೆಲುವಿಗೆ ಅದೇ ಆಧಾರವಾಗಲಿದೆ ಎಂದು ಭಾವಿಸಿಕೊಂಡಿರುವ ಉಮೇಶ್ ಜಾಧವ್ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಈ ಬಾರಿ ತೀವ್ರ ಸ್ಪರ್ಧೆ ಎದುರಿಸುತ್ತಿದ್ದಾರೆ ಎಂಬ ಅಂಶವನ್ನು ಕಲಬುರಗಿ ಜಿಲ್ಲೆಯ ರಾಜಕೀಯ ವಿಶ್ಲೇಷಕ ಬಸವರಾಜು ವ್ಯಕ್ತಪಡಿಸಿದ್ದಾರೆ.
ಜಾತಿ ಲೆಕ್ಕಾಚಾರವೇ ಕ್ಷೇತ್ರದಲ್ಲಿ ಕೆಲಸ ಮಾಡಿದರೆ, ಅದು ಖರ್ಗೆ ಗೆಲುವಿಗೆ ತೊಡಕಾಗಬಹುದು. ಆದಾಗ್ಯೂ ಕಳೆದ ಐದು ದಶಕಗಳ ಅವಧಿಯಲ್ಲಿ ಖರ್ಗೆ ಅವರು ಜಾತಿ, ಮತ, ಪಂಥ ಮೀರಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದು ಈ ವರ್ಚಸ್ಸು ಅವರನ್ನು ಈ ಬಾರಿ ಪಾರು ಮಾಡಲಿದೆಯೇ ಎಂಬುದೂ ಕುತೂಹಲಕಾರಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com