ನಾಳೆ ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ: ಪ್ರಭಾವಿ ಅಭ್ಯರ್ಥಿಗಳಿಂದ ಚುನಾವಣಾ ಕಣಕ್ಕೆ ರಂಗು

ದೇಶಾದ್ಯಂತ ನಾಳೆ ನಡೆಯಲಿರುವ ಮೂರನೇ ಹಂತದ ಚುನಾವಣೆಗೆ ವ್ಯಾಪಕ ಸಿದ್ಧತೆಗಳು ನಡೆಯುತ್ತಿದ್ದು, ರಾಜ್ಯದ ಉತ್ತರ ಹಾಗೂ ಮಧ್ಯ ಕರ್ನಾಟಕ ಭಾಗದ 14 ಕ್ಷೇತ್ರಗಳಿಗೆ ಎರಡನೇ ಹಾಗೂ ಅಂತಿಮ ಹಂತದ
ನಾಳೆ ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ: ಪ್ರಭಾವಿ ಅಭ್ಯರ್ಥಿಗಳಿಂದ ಚುನಾವಣಾ ಕಣಕ್ಕೆ ರಂಗು
ನಾಳೆ ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ: ಪ್ರಭಾವಿ ಅಭ್ಯರ್ಥಿಗಳಿಂದ ಚುನಾವಣಾ ಕಣಕ್ಕೆ ರಂಗು
ಬೆಂಗಳೂರು: ದೇಶಾದ್ಯಂತ ನಾಳೆ ನಡೆಯಲಿರುವ ಮೂರನೇ ಹಂತದ ಚುನಾವಣೆಗೆ ವ್ಯಾಪಕ ಸಿದ್ಧತೆಗಳು ನಡೆಯುತ್ತಿದ್ದು, ರಾಜ್ಯದ ಉತ್ತರ ಹಾಗೂ ಮಧ್ಯ ಕರ್ನಾಟಕ ಭಾಗದ 14 ಕ್ಷೇತ್ರಗಳಿಗೆ ಎರಡನೇ ಹಾಗೂ ಅಂತಿಮ ಹಂತದ ಹಣಾಹಣಿ ಕಣ ಸಜ್ಜಾಗಿದೆ. 
ಎರಡನೇ ಹಂತದಲ್ಲಿ14 ಲೋಕಸಭಾ ಕ್ಷೇತ್ರಗಳ  28,022 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, 1.22 ಕೋಟಿ ಪುರುಷರು, 1.20 ಕೋಟಿ ಮಹಿಳೆಯರು, 2022 ಲೈಂಗಿಕ ಅಲ್ಪಸಂಖ್ಯಾತರು ಸೇರಿ 2.43 ಕೋಟಿ ಅರ್ಹ ಮತದಾರರಿದ್ದಾರೆ. ನಾಳೆ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. 
ಲೋಕಸಭೆಯ ಕಾಂಗ್ರೆಸ್‌ನ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವರಾದ ಅನಂತ್ ಕುಮಾರ್ ಹೆಗಡೆ, ರಮೇಶ್ ಜಿಗಜಿಣಗಿ, ಮಾಜಿ ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ. ರಾಘವೇಂದ್ರ, ಮಾಜಿ ಮುಖ್ಯಮಂತ್ರಿ ದಿ. ಎಸ್ ಬಂಗಾರಪ್ಪನವರ ಪುತ್ರ ಮಧು ಬಂಗಾರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರಖಂಡ್ರೆ, ಕಾಂಗ್ರೆಸ್‌ನ ಹಿರಿಯ ನಾಯಕ ವಿ.ಎಸ್. ಉಗ್ರಪ್ಪ, ಬಿಜೆಪಿ ನಾಯಕ ಪ್ರಹ್ಲಾದ್ ಜೋಷಿ ಸೇರಿ ಚುನಾವಣಾ ಅಖಾಡದಲ್ಲಿರುವ ಪ್ರಮುಖ ಉಮೇದುವಾರರಾಗಿದ್ದಾರೆ.
ಈ ಭಾಗದ ಜನರ ಮತ ಸೆಳೆಯಲು ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಸಾಕಷ್ಟು ಕಸರತ್ತು ನಡೆಸಿದ್ದು, ತಮ್ಮ ಪಕ್ಷಗಳ ಸ್ಟಾರ್ ಪ್ರಚಾರಕರ ಮೂಲಕ ಶಕ್ತಿ ಪ್ರದರ್ಶನ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‍ ಅಧ್ಯಕ್ಷ ರಾಹುಲ್‍ ಗಾಂಧಿ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರು ಇಲ್ಲಿ ಚುನಾವಣಾ ಪ್ರಚಾರ ನಡೆಸಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ‍್ಯಕ್ಷ ಬಿ.ಎಸ್.ಯಡಿಯೂರಪ್ಪ ಕೂಡ ಮತದಾರರನ್ನು ಸೆಳೆಯುವ ಪ್ರಯತ್ನಗಳಲ್ಲಿ ಹಿಂದೆ ಬಿದ್ದಿಲ್ಲ. ಆದರೆ, ಈ ಎಲ್ಲ ಪ್ರಯತ್ನಗಳ ನಂತರವೂ ಮತದಾರ ಯಾರಿಗೆ ಒಲಿಯುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ.  
ಈ ಹಂತದಲ್ಲಿ ಒಟ್ಟಾರೆ 2 ಲಕ್ಷ ಚುನಾವಣಾ ಸಿಬ್ಬಂದಿ ಕಾರ್ಯನಿರತವಾಗಿದ್ದು, 1.43 ಲಕ್ಷ ಮತಗಟ್ಟೆ ಸಿಬ್ಬಂದಿ, 34,548 ಪೊಲೀಸ್, 5407 ಸಾರಿಗೆ ಹಾಗೂ 20 ಸಾವಿರ ಇತರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಸಿಬ್ಬಂದಿ ಈಗಾಗಲೇ ಜಿಲ್ಲಾಧಿಕಾರಿಗಳ ಕಚೇರಿಯಿಂದ ಮತಗಟ್ಟೆಯ ಸಾಮಾಗ್ರಿಗಳನ್ನು ಕಲೆ ಹಾಕಿ , ಮತಗಟ್ಟೆಗಳಿಗೆ ಪ್ರಯಾಣ ಬೆಳೆಸಿದರು.
ಮತದಾನಕ್ಕೆ 48 ಗಂಟೆಗಳ ಅವಧಿ ಬಾಕಿ ಇರುವ ಹಿನ್ನೆಲೆಯಲ್ಲಿ ಇಂದು ಇಡೀ ದಿನ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಚುನಾವಣಾ ಕಣ್ಗಾವಲು ತಂಡಗಳು ಎಲ್ಲೆಡೆ ಚುರುಕಿನಿಂದ ಕಾರ್ಯನಿರ್ವಹಿಸುತ್ತಿದ್ದು, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಚ್ಯುತಿಯಾಗದಂತೆ ಅಗತ್ಯ ಕ್ರಮ ಕೈಗೊಂಡಿವೆ.  
ಮಂಗಳವಾರ ಉತ್ತರಕರ್ನಾಟಕದ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗಾ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ ದಾವಣಗೆರೆ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಗುಲ್ಬರ್ಗಾದಲ್ಲಿ ಅತಿ ಹೆಚ್ಚು ಅಂದರೆ 19 ಲಕ್ಷ  ಹಾಗೂ ಉತ್ತರ ಕನ್ನಡದಲ್ಲಿ ಅತಿ ಕಡಿಮೆ ಎಂದರೆ 15 ಲಕ್ಷ ಮತದಾರರಿದ್ದಾರೆ. ಕಳೆದ ಚುನಾವಣೆಗಳಿಗೆ ಹೋಲಿಸಿದರೆ, ಈ ಬಾರಿ ಮೊದಲ ಬಾರಿಗೆ ಮತಚಲಾಯಿಸುವರ ಸಂಖ್ಯೆ 10 ಲಕ್ಷದಷ್ಟು ಹೆಚ್ಚಾಗಿದೆ.
ಈ ಹಂತದಲ್ಲಿ ಒಟ್ಟು 2.38 ದಿವ್ಯಾಂಗ ಮತದಾರರಿದ್ದಾರೆ. 14 ಕ್ಷೇತ್ರಗಳಲ್ಲಿ ಒಟ್ಟು 28, 022ಗಳನ್ನು ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 216 ಸಖಿ ಮತಗಟ್ಟೆಗಳು, 7 ಸಾಂಪ್ರದಾಯಿಕ ಹಾಗೂ 37 ದಿವ್ಯಾಂಗರೇ ನಿರ್ವಹಿಸುವ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ದಿವ್ಯಾಂಗ ಮತದಾರರಿಗೆ ಅನುಕೂಲ ಕಲ್ಪಸುವ ಸಲುವಾಗಿ ಸಲುವಾಗಿ ಮತಗಟ್ಟೆಗಳಲ್ಲಿ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.
87.43 ಕೋಟಿ ರೂ. ವಶ 
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯನಿರತವಾಗಿರುವ ಫ್ಲೈಯಿಂಗ್, ಸ್ಟಾಟಿಕ್‍ ಹಾಗೂ ಇತರ ಕಾವಲು ಪಡೆಗಳು ಇಲ್ಲಿಯವರೆಗೆ ಒಟ್ಟು 87.43 ಕೋಟಿ ನಗದನ್ನು ವಶಪಡಿಸಿಕೊಂಡಿದೆ. 
ಫ್ಲೈಯಿಂಗ್, ಸ್ಟಾಟಿಕ್‍ ಸೇರಿ ಇತರ ಪಡೆಗಳು 17.11 ಕೋಟಿ ರೂ. ಹಾಗೂ 65.20 ಕೋಟಿ ರೂ. ಮೌಲ್ಯದ 18,529 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದೆ. 
7.52 ಕೋಟಿ ರೂ. ಮೌಲ್ಯದ 143.2 ಕೆಜಿ ಮಾದಕ ದ್ರವ್ಯಗಳು, 3.58 ಕೋಟಿ  ರೂ. ಮೌಲ್ಯದ  ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 2012 ಎಫ್‍ಐಆರ್  ದಾಖಲಿಸಲಾಗಿದೆ. ಆದಾಯ ತೆರಿಗೆ ಇಲಾಖೆ ಇಲ್ಲಿಯವರೆಗೆ 22.07 ಕೋಟಿ ರೂ. ಹಾಗೂ 7.03  ಕೋಟಿ ರೂ. ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಿದೆ. 
ಅಬಕಾರಿ ಇಲಾಖೆ ಇಲ್ಲಿಯವರೆಗೆ 37.06 ಕೋಟಿ ರೂ. ಮೌಲ್ಯದ 9.42 ಲಕ್ಷ ಲೀಟರ್ ಮದ್ಯ, 4.48 ಲಕ್ಷ  ರೂ ಮೌಲ್ಯದ 14 ಕೆಜಿ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡು 2589 ಗಂಭೀರ ಪ್ರಕರಣಗಳನ್ನು ದಾಖಲಿಸಿಕೊಂಡಿದೆ.
ಚುನಾವಣಾ ಹಿನ್ನೆಲೆಯಲ್ಲಿ ಇಲ್ಲಿಯವರೆಗೆ ಒಟ್ಟು  95429 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಳ್ಳಲಾಗಿದೆ. 8 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 10 ಶಸ್ತ್ರಾಸ್ತ್ರಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ.  ಸಿಆರ್ ಪಿಸಿ ಕಾಯ್ದೆಯಡಿ 45151 ಪ್ರಕರಣಗಳನ್ನು ದಾಖಲಿಸಲಾಗಿದೆ. 40957 ಜಾಮೀನು ರಹಿತ  ವಾರಂಟ್ ಗಳನ್ನು ಜಾರಿಗೊಳಿಸಲಾಗಿದೆ ಎಂದು ಚುನಾವಣಾ ಆಯೋಗದ ವರದಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com