ಮೊದ್ಲು ನಮಗೆ ಸೌಲಭ್ಯ ಕೊಡಿ, ನಂತರ ವೋಟ್ ಕೇಳಿ: ಬೆಳಗಾವಿಯ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

ಜಿಲ್ಲೆಯ ಖಾನಾಪುರ ತಾಲ್ಲೂಕಿನ ಪಶ್ಚಿಮ ಘಟ್ಟದ ಮಧ್ಯೆ ಇರುವ ಸುಮಾರು 12 ಗ್ರಾಮಗಳ ಗ್ರಾಮಸ್ಥರು ಈ ...
ಮತಗಟ್ಟೆಯಲ್ಲಿ ಕಂಡುಬಂದ ನೀರವ ದೃಶ್ಯ
ಮತಗಟ್ಟೆಯಲ್ಲಿ ಕಂಡುಬಂದ ನೀರವ ದೃಶ್ಯ
ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲ್ಲೂಕಿನ ಪಶ್ಚಿಮ ಘಟ್ಟದ ಮಧ್ಯೆ ಇರುವ ಸುಮಾರು 12 ಗ್ರಾಮಗಳ ಗ್ರಾಮಸ್ಥರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮತದಾನದಿಂದ ಸಾಮೂಹಿಕ ಬಹಿಷ್ಕಾರ ಹಾಕಿದ್ದಾರೆ.
ಕಳೆದ 6 ದಶಕಗಳಿಂದ ಗ್ರಾಮ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ಜನಪ್ರತಿನಿಧಿಗಳು ಹಾಗೂ ರಾಜಕೀಯ ಮುಖಂಡರ, ಪಕ್ಷಗಳ ಗಮನ ಸೆಳೆಯಲು ಈ ಬಾರಿ ಗ್ರಾಮಸ್ಥರೆಲ್ಲಾ ಮತದಾನದಿಂದ ದೂರವುಳಿಯಲು ನಿರ್ಧರಿಸಿದರು. ಸುಮಾರು 2 ಸಾವಿರದ 176 ಮತದಾರರು ಮತಗಟ್ಟೆಗೆ ತೆರಳಿ ಮತದಾನ ಮಾಡದೆ ದೂರವುಳಿದಿದ್ದಾರೆ.
ಕಳೆದ 60 ವರ್ಷಗಳಲ್ಲಿ ನಮ್ಮ ಸಮಸ್ಯೆಗಳನ್ನು ಯಾವ ರಾಜಕೀಯ ನಾಯಕರು ಕೂಡ ಕೇಳಿ ಬಗೆಹರಿಸಿಲ್ಲ. ನಮ್ಮ ಮತ ಕೂಡ ಅವರಿಗೆ ಬೇಕಾದಂತಿಲ್ಲ ಎನ್ನುತ್ತಾರೆ ಗ್ರಾಮಸ್ಥರೊಬ್ಬರು. ಅವರ ಮಾತಿಗೆ ಗ್ರಾಮದ ಬೇರೆಯವರು ಕೂಡ ದನಿಗೂಡಿಸಿದರು. ಸರ್ಕಾರಕ್ಕೆ ಹಿಡಿಶಾಪ ಹಾಕಿದರು. ಬೆಳಗಾವಿಯ ಖಾನಾಪುರ ತಾಲ್ಲೂಕಿನ ಗವಳಿ, ಕೃಷ್ಣಾಪುರ, ಪಸ್ತೊಲಿ, ಕೊಂಗಲ, ತಲೆವಾಡಿ, ಜೊರ್ದನ್, ಸಯಚೆ ಮಾಲಾ, ಚಪೊಲಿ, ಕಪೊಲಿ, ಮುಡಗೈ, ಚಿರೆಖಾನಿ ಮತ್ತು ಆಮ್ಗೌನ್ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದವರು.
ಈ ಗ್ರಾಮಗಳಲ್ಲಿ ರಸ್ತೆ, ವೈದ್ಯಕೀಯ ಸೌಲಭ್ಯ, ಶಾಲೆ, ವಿದ್ಯುತ್ ಸಂಪರ್ಕ ವ್ಯವಸ್ಥೆಗಳಿಲ್ಲ. ಚುನಾವಣಾ ಆಯೋಗ ಕೂಡ ಇಷ್ಟೊಂದು ಗ್ರಾಮಗಳಿಗೆ ಮತ ಚಲಾಯಿಸಲು ನೀಡಿದ್ದು ಕೇವಲ ಮೂರು ಮತಗಟ್ಟೆಗಳು ಮಾತ್ರ.
ಇತ್ತೀಚೆಗೆ ಗ್ರಾಮಸ್ಥರೆಲ್ಲ ಸೇರಿ ಸಭೆ ನಡೆಸಿ ಮತದಾನ ಮಾಡದಂತೆ ನಿರ್ಣಯ ತೆಗೆದುಕೊಂಡೆವು ಎನ್ನುತ್ತಾರೆ ಕೊಂಗಲ ನಿವಾಸಿ ಸೂರ್ಯಕಾಂತ್ ಕೃಷ್ಣ ಗಾವ್ಕಾರ್. ಏಳು ಗ್ರಾಮಗಳ ಗ್ರಾಮಸ್ಥರು ಗವಲಿಗೆ ಬಂದು ಮತ ಚಲಾಯಿಸಬೇಕು, ಹೊರ್ಡ ಗ್ರಾಮದ ಮತದಾರರಿಗೆ 21 ಕಿಲೋ ಮೀಟರ್ ನಡೆದುಕೊಂಡು ಬಂದು ಮತ ಚಲಾಯಿಸಬೇಕು. ಇಷ್ಟು ಕಷ್ಟಪಟ್ಟು ಮತ ಚಲಾಯಿಸಿ ಗೆದ್ದುಬಂದ ಜನಪ್ರತಿನಿಧಿಗಳು ನಮಗೆ ಏನೂ ಮಾಡುವುದಿಲ್ಲ ಎನ್ನುತ್ತಾರೆ ಮತ್ತೊಬ್ಬರು.
ನಿನ್ನೆ ಮತದಾನದ ದಿನ ಹಲವು ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. ಮತದಾರರ  ಮನವೊಲಿಸಲು ನೋಡಿದ್ದಾರೆ. ಆದರೆ ಗ್ರಾಮಸ್ಥರು ಮನಸ್ಸು ಬದಲಾಯಿಸದೆ ಕಠಿಣ ನಿರ್ಧಾರ ತೆಗೆದುಕೊಂಡರು.
ಶಿವಮೊಗ್ಗದ ಅಂಬೇಡ್ಕರ್ ನಗರ ಮತದಾರರು ಕೂಡ ನಿನ್ನೆ ಬೆಳಗಿನ ಹೊತ್ತು ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದರು. ನಂತರ ಜಿಲ್ಲಾಧಿಕಾರಿ ಕೆ ಎ ದಯಾನಂದ್ ಬಂದು ಮನವೊಲಿಸಿದರು. ಸಾಗರ ತಾಲ್ಲೂಕಿನ ಸಿಗ್ಗಲು ಗ್ರಾಮದಲ್ಲಿ ಕೂಡ ಚುನಾವಣಾಧಿಕಾರಿಗಳು ಬಂದು ಮತದಾರರ ಮತವೊಲಿಸಿದ ನಂತರ ಸಾಯಂಕಾಲದ ಹೊತ್ತಿಗೆ ಹೋಗಿ ಮತ ಚಲಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com