ರಮೇಶ್ ಜಾರಕಿಹೊಳಿ ಜೊತೆ 20 ಅಲ್ಲ, 78 ಶಾಸಕರೂ ಇದ್ದಾರೆ: ಬಿಜೆಪಿಗೆ ಡಿಕೆ ಶಿವಕುಮಾರ್ ತಿರುಗೇಟು

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಪಕ್ಷವು ಶಾಸಕ, ಸಚಿವ ಸ್ಥಾನ ಸೇರಿದಂತೆ ಎಲ್ಲಾ ಸ್ಥಾನಮಾನ ನೀಡಿದೆ. ಆದರೂ ಯಾಕೆ ಪಕ್ಷದಲ್ಲಿ ಉಸಿರುಕಟ್ಟುವ ವಾತಾವರಣೆ ಇದೆ ಎನ್ನುತ್ತಾರೆ.

Published: 24th April 2019 12:00 PM  |   Last Updated: 24th April 2019 06:58 AM   |  A+A-


DK Shivakumar

ಡಿಕೆ ಶಿವಕುಮಾರ್

Posted By : VS VS
Source : Online Desk
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಪಕ್ಷವು ಶಾಸಕ, ಸಚಿವ ಸ್ಥಾನ ಸೇರಿದಂತೆ ಎಲ್ಲಾ ಸ್ಥಾನಮಾನ ನೀಡಿದೆ. ಆದರೂ ಯಾಕೆ ಪಕ್ಷದಲ್ಲಿ ಉಸಿರುಕಟ್ಟುವ ವಾತಾವರಣೆ ಇದೆ ಎನ್ನುತ್ತಾರೆ ಎಂಬುದು ತಿಳಿಯುತ್ತಿಲ್ಲ. ದೇವರು ಅವರ ಆಸೆಗಳನ್ನು ಈಡೇರಿಸಲಿ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ನಗರದ ಸದಾಶಿವನಗರದ ಮನೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ವಿಚಾರ ಸೇರಿದಂತೆ ಎಲ್ಲವನ್ನೂ ಪಕ್ಷದ ವರಿಷ್ಠ ನಾಯಕರು ಗಮನಿಸುತ್ತಿದ್ದಾರೆ. ಬೆಳಗಾವಿ  ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಮಾಜಿ ಸಚಿವರ ಜೊತೆಗೆ ಮಾತನಾಡುತ್ತಾರೆ. ಅವರು ತಮ್ಮನ್ನು ಭೇಟಿಯಾದರೆ ಮನವೊಲಿಸಲು ಸಾಧ್ಯ. ಅವರು ಸಿಕ್ಕಿದರೆ ತಾವು ಅವರ  ಜೊತೆ ಚರ್ಚೆ ಮಾಡುತ್ತೇನೆ ಎಂದು ಅವರು ತಿಳಿಸಿದರು

ಕಾಂಗ್ರೆಸ್ಸಿನ 20 ಶಾಸಕರು ಬಿಜೆಪಿ  ಸಂಪರ್ಕದಲ್ಲಿದ್ದಾರೆಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯವರು ತುಂಬಾ ದಡ್ಡರಿದ್ದಾರೆ. ಅವರ ಜೊತೆ 20 ಅಲ್ಲ, 78 ಶಾಸಕರು ಇದ್ದೇವೆ. ಕಲಾಪದಲ್ಲಿ ಅವರ ಜೊತೆಗೆ ಕುಳಿತುಕೊಳ್ಳುತ್ತೇವೆ, ಮಾತನಾಡುತ್ತೇವೆ. ಸಂಸಾರ ಬೇರೆ, ರಾಜಕಾರಣ ಬೇರೆ. ನಾವು ಜನರ ಮೇಲೆ ನಂಬಿಕೆ ಇಟ್ಟಿದ್ದೇವೆ. ಗಂಟೆ, ಮುಹೂರ್ತ ಇಡುವವರಲ್ಲ ಎಂದು ಸರ್ಕಾರ ಪತನಕ್ಕೆ ಹಬ್ಬ, ದಿನಗಳನ್ನು ನಿಗದಿ ಮಾಡುವ ಬಿಜೆಪಿ ವಿರುದ್ಧ ಕಿಡಿಕಾರಿದರು.

ನಾವೆಲ್ಲ  ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ಹಳ್ಳಿಯಿಂದ ಬಂದಿರುವವರು. ನಮಗೆ ಯಾಕೆ ಬೇರೆಯವರ ರಾಜಕಾರಣ?  ಬಿಜೆಪಿಯವರು ಖುಷಿಯಿಂದ ಮಾತನಾಡುತ್ತಿದ್ದಾರೆ, ಮಾತನಾಡಲಿ ಬಿಡಿ ಎಂದು ಬಿಜೆಪಿ ನಾಯಕರನ್ನು ವ್ಯಂಗ್ಯವಾಗಿ ಟೀಕಿಸಿದರು.

ಈಗಲ್ಟನ್ ರೆಸಾರ್ಟ್ ಹಲ್ಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಕಂಪ್ಲಿ ಶಾಸಕ ಗಣೇಶ್ ಅವರಿಗೆ ಜಾಮೀನು ದೊರೆತ  ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಶಾಸಕ ಜೆ.ಎನ್. ಗಣೇಶ್ ತುಂಬಾ ದಿನಗಳಿಂದ ನೋವು ಅನುಭವಿಸಿದ್ದಾರೆ. ಹಲ್ಲೆಗೆ ಒಳಗಾಗಿದ್ದ ಆನಂದ್ ಸಿಂಗ್ ಅವರು ಕೂಡ ನೋವು ಪಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಬ್ಬರೂ ಒಂದಾದರೆ ಸಾಕು ಎಂದು ಆಶಯ ವ್ಯಕ್ತಪಡಿಸಿದರು.
Stay up to date on all the latest ಕರ್ನಾಟಕ news with The Kannadaprabha App. Download now
facebook twitter whatsapp