ಈ ಬಾರಿ ಮಲ್ಲಿಕಾರ್ಜುನ ಖರ್ಗೆ, ದೇವೇಗೌಡ, ಮುನಿಯಪ್ಪ ಸೋಲು ಖಚಿತ: ಬಿಎಸ್ ವೈ ಭವಿಷ್ಯ

ಕೋಲಾರದ ಮೈತ್ರಿ ಅಭ್ಯರ್ಥಿ ಕೆ.ಹೆಚ್.ಮುನಿಯಪ್ಪ, ಕಲಬುರಗಿ ಹಾಲಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸುವುದು....
ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ
ಬೆಂಗಳೂರು: ಕೋಲಾರದ ಮೈತ್ರಿ ಅಭ್ಯರ್ಥಿ ಕೆ.ಹೆಚ್.ಮುನಿಯಪ್ಪ, ಕಲಬುರಗಿ ಹಾಲಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸುವುದು ಖಚಿತ. ತುಮಕೂರಿನಿಂದ ಸ್ಪರ್ಧಿಸಿದ್ದ ಎಚ್.ಡಿ.ದೇವೇಗೌಡರು ಸಹ ಸೋಲು ಅನುಭವಿಸಿದರೆ ಅದರಲ್ಲಿ ಆಶ್ಚರ್ಯ ಪಡಬೇಕಾಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ಬಿಜೆಪಿ ಕಚೇರಿಯಲ್ಲಿ ನಡೆದ ಚುನಾವಣಾ ನಿರ್ವಹಣಾ ಸಮಿತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ ವೈ, ಮೇ 23 ರಂದು ಮೈತ್ರಿ ಪಕ್ಷಗಳ ಘಟಾನುಘಟಿ ನಾಯಕರ  ಸೋಲು ಬಹಿರಂಗಗೊಳ್ಳುವುದು ಖಚಿತ. ಕಾಂಗ್ರೆಸ್, ಜೆಡಿಎಸ್ ಪಕ್ಷದ ಘಟಾನುಘಟಿ ನಾಯಕರಿಗೆ ಈ ಭಾರಿ ಜನ ಸೂಕ್ತ ಉತ್ತರ ನೀಡಲಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಗೊಂದಲ ಶುರುವಾಗಿದ್ದು, ಮೇ 23 ರ ಫಲಿತಾಂಶ ಪ್ರಕಟವಾದ ಬಳಿಕ ಉಭಯ ಪಕ್ಷಗಳಲ್ಲಿಯ ಗೊಂದಲ ಇನ್ನಷ್ಟು ಉಲ್ಭಣಗೊಳ್ಳಲಿದೆ ಎಂದು ಭವಿಷ್ಯ ನುಡಿದರು.
ಚಿಂಚೋಳಿ, ಕುಂದಗೋಳ ಉಪಚುನಾವಣೆಯನ್ನು ಬಿಜೆಪಿ ಪ್ರತಿಷ್ಠೆಯಾಗಿ ಸ್ವೀಕರಿಸಿದೆ. ಚುನಾವಣೆ ಮುಗಿಯುವವರೆಗೆ ಪ್ರಮುಖ ನಾಯಕರು ಅಭ್ಯರ್ಥಿಗಳ ಗೆಲುವಿಗೆ ದುಡಿಯಬೇಕು. ವಿದೇಶ ಪ್ರಯಾಣ, ಪ್ರವಾಸ ಸೇರಿದಂತೆ ವೈಯಕ್ತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಚುನಾವಣೆ ನಿರ್ಲಕ್ಷ್ಯಿಸಬೇಡಿ ಎಂದು ಮನವಿ ಮಾಡಿದರು.
ಪ್ರಸಕ್ತ ಕುಂದಗೋಳ, ಚಿಂಚೋಳಿ ಕ್ಷೇತ್ರಗಳ ಉಪಚುನಾವಣೆ ನಡೆಯುತ್ತಿದ್ದು, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕು. ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ಕೇಂದ್ರೀಯ ಸಮಿತಿ ರವಾನಿಸಲಾಗಿದ್ದು, ನಾಳೆ ಒಳಗೆ ಅಧಿಕೃತ ಪಟ್ಟಿ ಪ್ರಕಟವಾಗಲಿದೆ ಎಂದು ಅವರು ತಿಳಿಸಿದರು.
ಈ ವೇಳೆ ಮಾತನಾಡಿದ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಆರ್. ಅಶೋಕ್ ಅವರು, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳ ಗೆಲುವಿಗೆ ರೂಪಿಸಿದ ತಂತ್ರಗಾರಿಕೆ ಯಶಸ್ವಿಯಾಗಿದ್ದು, ಲೋಕಸಭಾ ಚುನಾವಣಾ ಮಾದರಿಯ ತಂತ್ರಗಾರಿಕೆಯನ್ನೇ ಚಿಂಚೋಳಿ, ಕುಂದಗೋಳ ಕ್ಷೇತ್ರಗಳ ಉಪ ಚುನಾವಣೆಯಲ್ಲಿಯೂ ಅಳವಡಿಸಿಕೊಳ್ಳಲಾಗುವುದು ಎಂದರು.
ಚುನಾವಣಾ ಸಂಚಾಲನಾ ಸಮಿತಿ, ನಿರ್ವಹಣಾ ಸಮಿತಿ ಸೇರಿದಂತೆ 32 ಉಪ ಸಮಿತಿಗಳ ವರದಿಯನ್ನು ಪರಿಶೀಲನಾ ಸಭೆಯಲ್ಲಿ ಮಂಡಿಸಲಾಗಿದೆ. ಸಮಿತಿ ರೂಪಿಸಿದ ತಂತ್ರಗಾರಿಕೆಯಿಂದ ರಾಜ್ಯದಲ್ಲಿ 22 ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸ ಮೂಡಿದೆ. ಹೀಗಾಗಿ ಮುಂಬರುವ ಉಪ ಚುನಾವಣೆಗಳಲ್ಲೂ ಇದೆ ತಂತ್ರ ಅನುಸರಿಸುವುದಾಗಿ ಅವರು ಹೇಳಿದರು.
ಕೇಂದ್ರ ಸಮಿತಿ ನೀಡಿದಂತಹ 22 ಸ್ಥಾನಗಳ ಗುರಿ ತಲುಪುವ ವಿಶ್ವಾಸವಿದೆ. ಈ ಬಗ್ಗೆ ಕೇಂದ್ರೀಯ ಚುನಾವಣಾ ಸಮಿತಿ ಸಹ ಆಶ್ಚರ್ಯ ವ್ಯಕ್ತಪಡಿಸಿ ರಾಜ್ಯ ಸಮಿತಿಗೆ ಶ್ಲಾಘನೆ ವ್ಯಕ್ತಪಡಿಸಿದೆ. 27 ಲೋಕಸಭಾ ಕ್ಷೇತ್ರಗಳ ಸಮಿತಿಗಳ ವರದಿಯನ್ನು ರಾಜ್ಯಾಧ್ಯಕ್ಷರಿಗೆ ಸಲ್ಲಿಸಲಾಗಿದೆ ಎಂದರು.
ನಿರ್ವಹಣಾ ಸಮಿತಿ ಸಭೆ ಬಳಿಕ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಉಸ್ತುವಾರಿಗಳು, ಜಿಲ್ಲಾ ಪ್ರಮುಖರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ರಾಷ್ಟ್ರೀಯ ಸಂಘಟನಾ ಸಹ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನೇತೃತ್ವದಲ್ಲಿ ಮತ್ತೊಂದು ಸಭೆ ನಡೆಸಲಾಯಿತು. ಸಭೆಯಲ್ಲಿ ಲೋಕಸಭಾ ಚುನಾವಣಾ ಮತದಾನ, ಬಿಜೆಪಿ ಗೆಲುವಿನ ಲೆಕ್ಕಚಾರ, ಸಾಧಕ ಬಾಧಕಗಳು, ಫಲಿತಾಂಶ ನಿರೀಕ್ಷೆ ಕುರಿತು ಮುಖಂಡರು ಸಂತೋಷ್ ಅವರಿಗೆ ವರದಿ ಸಲ್ಲಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com