ಯುಪಿಎ ಸರ್ಕಾರ ಅಧಿಕಾರಕ್ಕೆ, ರಾಹುಲ್ ಗಾಂಧಿ ಪ್ರಧಾನಿ: ಸಿದ್ದರಾಮಯ್ಯ ವಿಶ್ವಾಸ

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 150 ಸ್ಥಾನ ಹಾಗೂ ಮೈತ್ರಿ ಪಕ್ಷಗಳು 150 ಸ್ಥಾನ ಗೆದ್ದು ಯುಪಿಎ ಪೂರ್ಣ ಬಹುಮತದಿಂದ ಕೇಂದ್ರದಲ್ಲಿ ಅಧಿಕಾರಕ್ಕೆ....
ಸಿದ್ದರಾಮಯ್ಯ
ಸಿದ್ದರಾಮಯ್ಯ
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 150 ಸ್ಥಾನ ಹಾಗೂ ಮೈತ್ರಿ ಪಕ್ಷಗಳು 150 ಸ್ಥಾನ ಗೆದ್ದು ಯುಪಿಎ ಪೂರ್ಣ ಬಹುಮತದಿಂದ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ.ಆ ಮೂಲಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿಯಾಗಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಆಯೋಜಿಸಿದ್ದ ಟ್ವಿಟರ್ ನೇರ ಸಂದರ್ಶನದಲ್ಲಿ ಭಾಗವಹಿಸಿ ಟ್ವೀಟರ್ ಬೆಂಬಲಿಗರು,ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಲೋಕಸಭಾ ಚುನಾವಣೆಯಲ್ಲಿ ಯುಪಿಎ ಪೂರ್ಣ ಬಹುಮತದೊಂದಿಗೆ ಕೇಂದ್ರದಲ್ಲಿ ಆಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ 150 ಹಾಗೂ ಮೈತ್ರಿ ಪಕ್ಷಗಳು 150 ಸ್ಥಾನದಲ್ಲಿ ಜಯಬೇರಿ ಭಾರಿಸಲಿವೆ. ಕರ್ನಾಟಕದಲ್ಲಿ ಮೈತ್ರಿ ಪಕ್ಷಗಳು 20 ಸ್ಥಾನಗಳಲ್ಲಿ ಗೆಲುವು ಸಾಧಿಸಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಂಡ್ಯ, ತುಮಕೂರು ಕ್ಷೇತ್ರ ಜೆಡಿಎಸ್ ಗೆ ಬಿಟ್ಟುಕೊಟ್ಟಿದ್ದೇಕೆ? ಎಂಬ ಪ್ರತಿಕ್ಷಾ ಎಂಬುವರ ಟ್ವೀಟ್ ಪ್ರಶ್ನೆಗೆ ಉತ್ತರಿಸಿದ ಅವರು, ಮೈಸೂರು ಅಥವಾ ತುಮಕೂರು ಕ್ಷೇತ್ರದಲ್ಲಿ ಒಂದನ್ನು ಬಿಟ್ಟುಕೊಡಿ ಎಂಬ ಬೇಡಿಕೆಯಿತ್ತು. ಮೈಸೂರಿನಲ್ಲಿ ಪಕ್ಷಕ್ಕೆ ಹೆಚ್ಚು ಶಕ್ತಿ ಇದೆ. ಹೀಗಾಗಿ ತುಮಕೂರು ಕ್ಷೇತ್ರ ಬಿಟ್ಟು ಕೊಟ್ಟಿದ್ದೇವೆ. ಮಂಡ್ಯದಲ್ಲಿ ಹಾಲಿ ಜೆಡಿಎಸ್ ಸಂಸದರು ಇದ್ದರು,ಹಾಗಾಗಿ ಅವರಿಗೆ ಬಿಟ್ಟುಕೊಟ್ಟಿದ್ದೇವೆ. ಮಂಡ್ಯ, ತುಮಕೂರು ಕ್ಷೇತ್ರಗಳಲ್ಲಿ  ಪಕ್ಷದ ನಾಯಕರಿಗೆ ಅಸಮಧಾನ ಇರುವುದು ಸತ್ಯ. ಅದನ್ನು ಆದಷ್ಟು ಬೇಗ ಬಗೆಹರಿಸಿಕೊಳ್ಳುತ್ತೇವೆ ಎಂದರು.
2019 ರ ಲೋಕಸಭಾ ಚುನಾವಣೆಗೆ ತಯಾರಿ ಹೇಗಿದೆ ? ಎಂಬ ಪ್ರಶ್ನೆಗೆ ಉ್ತತರಿಸಿದ ಸಿದ್ದರಾಮಯ್ಯ ಅವರು, ವಿಧಾನಸಭೆ ಚುನಾವಣೆ ಬಳಿಕ ಯಾವ ಪಕ್ಷಕ್ಕೂ ಬಹುಮತ ಸಿಗಲಿಲ್ಲ. ಹೀಗಾಗಿ ಸಮ್ಮಿಶ್ರ ಸರ್ಕಾರ ರಚಿಸಲಾಯಿತು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡೆವು.ಅಂದಿನಿಂದಲೂ ಒಟ್ಟಾಗಿ ಚುನಾವಣೆ ತಯಾರಿ ನಡೆಸಿದ್ದೇವೆ.ಜೆಡಿಎಸ್ 7 ಹಾಗು ಕಾಂಗ್ರೆಸ್ 21ರಲ್ಲಿ ಸ್ಪರ್ಧಿಸುತ್ತಿದ್ದು, ಆತ್ಮವಿಶ್ವಾಸದಿಂದ ಚುನಾವಣೆ ಎದುರಿಸುತ್ತಿದ್ದೇವೆ ಎಂದರು. 
ಮೈತ್ರಿಯಲ್ಲಿ ಅಸಮಾಧಾನವಿದೆ.ಅದನ್ನು ಹೇಗೆ ನಿಭಾಯಿಸುತ್ತೀರಿ ಎಂಬ ಪುಟ್ಟನಂಜ ಬಾರ್ಕಿ ಟ್ವೀಟ್ ಪ್ರಶ್ನೆಗೆ ಉತ್ತರಿಸಿದ ಅವರು, ಎರಡು ಮೂರು ಕಡೆಗಳಲ್ಲಿ ಗೊಂದಲಗಳಿರುವುದು ಸತ್ಯ. ಗೊಂದಲ ಬಗೆಹರಿಸುವ ಕೆಲಸ ಮಾಡುತ್ತಿದ್ದೇವೆ.ಸಮಾಧಾನಮಾಡುವ ಶಕ್ತಿಯೂ ತಮ್ಮಲ್ಲಿದೆ.ಅಸಮಾಧಾನಿತರು ಸಮಾಧಾನ ಗೊಳ್ಳುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಮೋದಿಯ ಅವರನ್ನು ಟೀಕಿಸುವ ಧೈರ್ಯ ನಿಮಗೇಕೆ ಬಂತು ಎಂಬ ಟ್ವೀಟ್ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ನಾಯಕರಿಗೆ ಯಾವುದೇ ಸಿದ್ಧಾಂತವಿಲ್ಲ, ಅವರು ಮಾತನಾಡುವ ಶೈಲಿಗೆ ತಮ್ಮ ವಿರೋಧವಿದೆ. ಪ್ರಧಾನಿ ನರೇಂದ್ರ ಮೋದಿ ಹೆಚ್ಚು ಸುಳ್ಳು ಹೇಳುತ್ತಾರೆ. ಆ ಸುಳ್ಳನ್ನು ನಾವು ಜನರಿಗೆ ಮನವರಿಕೆ ಮಾಡಿಕೊಡಬೇಕು. ಹೀಗಾಗಿಯೇ ಬಿಜೆಪಿಗರ ಸುಳ್ಳನ್ನು ವಿರೋಧಿಸುತ್ತೇನೆ. ವೈಯುಕ್ತಿಕ ಕಾರಣಕ್ಕೆ ನಾನು ವಿರೋಧಿಸುವುದಿಲ್ಲ ನೈತಿಕ ಶಕ್ತಿ ಇರುವುದರಿಂದ ಎದುರಿಸುತ್ತೇನೆ ಎಂದರು.
ಸಮಿಶ್ರ ಸರ್ಕಾರವನ್ನು ರಚಿಸಲಾಗಿದ್ದು, ಎರಡೂ ಪಕ್ಷಕ್ಕೆ ಒಪ್ಪಿಗೆಯಾಗುವಂತೆ ಚರ್ಚಿಸಿ ನಿರ್ದಾರ ಕೈಗೊಳ್ಳಲಾಗಿದೆ. ಸಾಮಾನ್ಯ ಕನಿಷ್ಟ ಕಾರ್ಯಕ್ರಮ ರೂಪಿಸಿದ್ದೇವೆ. ಹಿಂದಿನ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಮುಂದುವರಿಸಲಾಗಿದೆ. ಸಮ್ಮಿಶ್ರದಿಂದ ಪಕ್ಷಕ್ಕೆ ತಮಗೆ ಯಾವುದೇ ಅನಾನುಕೂಲವಿಲ್ಲ ಎಂದರು.
ಚಾಮುಂಡೇಶ್ವರಿ ಸೋಲಿನಿಂದ ಹತಾಶೆಯಾಗಿದ್ದೀರಾ.. ವಿದಾನ ಸಭೆ ಚುನಾವಣೆಯಲ್ಲಿ ಕೆಲಸ ಮಾಡಿದ್ದರೂ ಕಾಂಗ್ರೆಸ್ ಗೆ ಹಿನ್ನಡೆಯಾಗಿದೆಯಾ ಎಂಬ ಬೀದರ್ ಮಹಿಳೆಯ ಟ್ವೀಟ್ ಗೆ ಉತ್ತರಿಸಿದ ಸಿದ್ದರಾಮಯ್ಯ, ತಾವು ಹತಾಶರಾಗಿಲ್ಲ, ಸ್ವಲ್ಪ ಬೇಸರವಾಗಿದ್ದು ನಿಜ. ನಾವು ಉತ್ತಮ ಕಾರ್ಯಕ್ರಮಗಳನ್ನು ನೀಡಿದ್ದೆವು. ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬಿಜೆಪಿ ಕಾಂಗ್ರೆಸ್ ಬಗ್ಗೆ ಅಪಪ್ರಚಾರ ಮಾಡಿದರು. ವ್ಯವಸ್ಥಿತವಾಗಿ ನನ್ನ ವಿರುದ್ಧ ಅಪಪ್ರಚಾರ ತೀವ್ರಗೊಳಿಸಿದರು. ಆದರೂ 
ತಾವು ಹತಾಶನಾಗಿಲ್ಲ, ಇದನ್ನು ಮತ್ತಷ್ಟು ಸವಾಲಾಗಿ ತೆಗದುಕೊಂಡಿದ್ದೇನೆ. ಹಿಂದುತ್ವ, ದೇಶಭಕ್ತಿ ಕಲ್ಪನೆ ಮುಂದೊಡ್ಡಿ ಹಿಂದುತ್ವ ವಿರೋಧಿ ಎಂದು ಬಿಂಬಿಸಿ ಜನರನ್ನು ದಾರಿ ತಪ್ಪಿಸಿದರು. ಜನರ ಮನವೊಲಿಸುವುದಲ್ಲಿ ತಾವು ಹಾಗೂ ಪಕ್ಷ ವಿಫಲವಾಯಿತು, ಹೀಗಾಗಿ ಚುನಾವಣೆಯಲ್ಲಿ ಹಿನ್ನಡೆಯಾಗಿದೆ ಎಂದು ಅವರು ವಿವರಿಸಿದರು. 
ಮತ್ತೊಂದು ಟ್ವೀಟ್ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷ ಸಮಾಜದಲ್ಲಿ ನಂಬಿಕೆ ಹೊಂದಿದೆ. ಬಡವರ ಪರ ಯೋಜನೆ ಘೋಷಣೆ ಮಾಡಿದಾಗ ಪಟ್ಟ ಭದ್ರ ಹಿತಾಸಕ್ತಿಗಳು ವಿರೋಧ ಮಾಡುತ್ತಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ತಂದಾಗ ಇದೇ ರೀತಿ ವಿರೋಧ ಇತ್ತು. ದೇಶದ 25 ಕೋಟಿ ಜನರಿಗೆ ನಾವು ಅನುಕೂಲ ಮಾಡುತ್ತಿದ್ದೇವೆ ಎಂದರು.
ಕನಿಷ್ಟ ಆದಾಯ ಯೋಜನೆಗೆ ಅರುಣ್ ಜೇಟ್ಲಿ ಸೇರಿದಂತೆ ಬಿಜೆಪಿಗರು ವಿರೋಧಿಸುತ್ತಿರುವುದು ಖಂಡನೀಯ ಎಂದರು.
ಯುವಕರಿಗೆ ರಾಜಕೀಯ ಜಾಗೃತಿ ಮೂಡಿಸುವುದು ಹೇಗೆ ಎಂಬ ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯುವಕರನ್ನು ಸಂಘ ಪರಿವಾರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಮೀಸಲಾತಿ ಗಂಡಾತರ, ಕಾಂಗ್ರೆಸ್ ಒಂದು ವರ್ಗವನ್ನು ಓಲೈಸುವ ಕೆಲಸ ಮಾಡುತ್ತಿದೆ ಎಂದು ದಾರಿ ತಪ್ಪಿಸುತ್ತಿದೆ. ನಾವು ಯುವಕರನ್ನು ತಲುಪುವ ಕೆಲಸ ಮಾಡಬೇಕು. ಸಹಬಾಳ್ವೆ ಸಹಿಷ್ಣುತೆ ನಮ್ಮ ದೇಶದ ಸಂಸ್ಕೃತಿ. ಇವೆರಡೂ ಬಂದರೆ ಸಮಾಜದ ಸ್ವಾಸ್ಥ್ಯ ಉಳಿಯುತ್ತದೆ. ಯುವಕರಿಗೆ ಇದನ್ನು ತಿಳಿಸಿದರೆ ಸರಿದಾರಿಗೆ ಬರುತ್ತಾರೆ ಎಂದರು.
ಆಪರೇಷನ್ ಕಮಲವನ್ನು ಹೇಗೆ ನಿಯಂತ್ರಿಸುತ್ತಿರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,
ಆಪರೇಷನ್ ಕಮಲ ಪ್ರಜಾಪ್ರಭುತ್ವಕ್ಕೆ ಮಾರಕ. ಯಡಿಯೂರಪ್ಪ ಅಧಿಕಾರದ ಆಸೆಯಿಂದ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ನರೇಂದ್ರ ಮೋದಿ ಚೌಕಿದಾರ್ ಎಂದು ಹೇಳುತ್ತಾರೆ. ಅವರಿಗೆ ಇದೆಲ್ಲಾ ತಿಳಿದಿಲ್ಲವೇ. ಅದರಲ್ಲಿ ಅವರದೂ ಕುಮ್ಮಕ್ಕಿದೆ. ಅಮಿತ್ ಶಾ ಕೂಡ ಇದರಲ್ಲಿ ಸೇರಿಕೊಡಿದ್ದಾರೆ.  ಸಾರ್ವಜನಿಕರೇ ಇವರಿಗೆ ತಕ್ಕ ಪಾಠ ಕಲಿಸುವ ಕೆಲಸ ಮಾಡಬೇಕು. ಪಕ್ಷಾಂತರ ನಿಷೇಧ ಕಾಯ್ದೆ ತಿದ್ದುಪಡಿ ಮಾಡಬೇಕು. ಕನಿಷ್ಠ ಐದು ವರ್ಷ ಚುನಾವಣೆಗೆ ನಿರ್ಬಂಧಿಸುವ ಕಾನೂನು ಬೇಕು. ಪ್ರಜಾಪ್ರಭುತ್ವ ಉಳಿಸಲು ಕಠಿಣ ನಿರ್ಬಂಧ ಹೇರಬೇಕಿದೆ ಎಂದರು.
ಯಡಿಯೂರಪ್ಪ ಆಪರೇಷನ್ ಕಮಲದ ಆಡಿಯೋ ತಮ್ಮದೇ ಎಂದರೂ ಯಾಕೆ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಇದು ವಿಧಾನ ಸಭೆಯಲ್ಲಿ ಚರ್ಚೆಯಾಗಿದೆ. ದೇವದುರ್ಗದಲ್ಲಿ ದೂರು ದಾಖಲಾಗಿದೆ. ಯಡಿಯೂರಪ್ಪ ಅವರು ಕಲಬುರಗಿ ಪೀಠದಲ್ಲಿ ಜಾಮೀನು ತೆಗೆದುಕೊಂಡಿದ್ದಾರೆ. ಸರ್ಕಾರ ತನಿಖೆ ನಡೆಸುವ ವಿಶ್ವಾಸ ಇದೆ ಎಂದರು.
ಸಂವಿಧಾನದ ಬಗ್ಗೆ ಬಿಜೆಪಿಗೆ ಗೌರವ ತೋರುತ್ತಿಲ್ಲ. ಗೌರವಿಸುವಂತೆ ಮಾಡುತ್ತಿರಾ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಾಬಾಸಾಹೇಬ್ ಅಂಬೇಡ್ಕರ್ ಅವರಿಂದ ರಚಿತವಾದ ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ಒದಗಿಸಿದೆ. ಬಿಜೆಪಿಯವರಿಗೆ ಇದು ಇಷ್ಟ ಇಲ್ಲ. ಅವರು ಯಥಾ ಸ್ಥಿತಿವಾದಿಗಳು ಅದಕ್ಕೆ ಸಂವಿಧಾನ ಒಪ್ಪುವುದಿಲ್ಲ. ಆರ್ ಎಸ್ಎಸ್  ಸರಸಂಘ ಚಾಲಕರೇ ಸಂವಿಧಾನ ಬದಲಾಯಿಸುವ ಮಾತನಾಡುತ್ತಾರೆ. ಅನಂತಕುಮಾರ್ ಹೆಗಡೆ ಅವರು ಬಿಜೆಪಿ ಒಪ್ಪಿಗೆ ಇಲ್ಲದೆ ಮಾತನಾಡಿಲ್ಲ. ಅದಕ್ಕೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ. ಆರ್ ಎಸ್ಎಸ್ ಅಜೆಂಡಾವನ್ನು ಜಾರಿ ಮಾಡಲು ಹೊರಟಿದ್ದಾರೆ. ಅದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದರು. 
ನಿಮ್ಮ ಆಡಳಿತ ಅವಧಿಯಲ್ಲಿ ನೆಮ್ಮದಿ ತಂದ ಯೋಜನೆ ಯಾವುದು ಎಂದು ಕೊಪ್ಪಳದ ಬೆಂಬಲಿಗರ ಪ್ರಶ್ನೆಗೆ ಖುಷಿಯಾಗಿಯೇ ಉತ್ತರಿಸಿದ ಅವರು, ಬಡವರಿಗೆ ಎರಡು ಹೊತ್ತು ಊಟ ಕೊಟ್ಟ ಅನ್ನಭಾಗ್ಯ ಯೋಜನೆ, ಹಸಿವು ಮುಕ್ತ ರಾಜ್ಯ ಮಾಡಿದ್ದಾಗಿದೆ. ಮಕ್ಕಳಿಗೆ ಬಿಸಿಯೂಟ, ಹಾಲು, ಶೂ ಕೊಟ್ಟು ಸಮಾನತೆ ತರುವ ಪ್ರಯತ್ನ ಮಾಡಿದ್ದೇನೆ.ಇಷ್ಟು ವರ್ಷ ಆದರೂ ಗುಲಾಮಗಿರಿಯಿಂದ ಮುಕ್ತರಾಗಿಲ್ಲ. ಆ ಮನಸ್ಥಿತಿಯನ್ನು ಬಿಡಬೇಕು. ನಾನು ಅದನ್ನು ವಿರೋಧಿವಿದ್ದೇನೆ ಎಂದರು. 
ರಾಹುಲ್ ಗಾಂಧಿ-ನರೇಂದ್ರ ಮೋದಿ ನಾಯಕತ್ವದಲ್ಲಿ ವ್ಯತ್ಯಾಸಗಳೇನು ಎಂಬ ಪ್ರಶ್ನಗೆ ಉತ್ತರಿಸಿದ ಸಿದ್ದರಾಮಯ್ಯ, ನರೇಂದ್ರ ಮೋದಿ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿಲ್ಲ. ಕೇಂದ್ರಿಕೃತ ವ್ಯವಸ್ಥೆಯ ಪರವಾಗಿದ್ದಾರೆ. ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ಪರವಾಗಿ ಇದ್ದಾರೆ. ಅವರು ವಿಕೇಂದ್ರಿಕೃತ ವ್ಯವಸ್ಥೆಯ ಪರವಾಗಿದ್ದಾರೆ ಎಂದರು.
ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಯಾಕೆ ಹೋಗುವುದಿಲ್ಲ ಎಂಬ ಪ್ರಶ್ನೆಗೆ ,ಕರ್ನಾಟಕವನ್ನು ಅಭಿವೃದ್ಧಿ ಮಾಡಿ ದೇಶಕ್ಕೆ ಕೊಡುಗೆ ಕೊಡಬೇಕು ಎಂದುಕೊಂಡಿದ್ದೇವೆ. ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ ಎಂದು ಹೇಳುವುದೇ ಇಲ್ಲ. ಪ್ರಸ್ತುತ ರಾಜ್ಯದಲ್ಲೇ ಉಳಿದು ಕೆಲಸ ಮಾಡಬೇಕು ಎಂದುಕೊಂಡಿದ್ದೇನೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com