ತೇಜಸ್ವಿನಿ ಮೇಡಂ ನನಗೆ ತುಂಬು ಮನಸ್ಸಿನಿಂದ ಹರಸಿದ್ದಾರೆ: ತೇಜಸ್ವಿ ಸೂರ್ಯ

ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾದ ನಂತರ ತಮ್ಮ ರಾಜಕೀಯ ...
ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ
ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾದ ನಂತರ ತಮ್ಮ ರಾಜಕೀಯ ಗುರು ದಿವಂಗತ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರನ್ನು ಭೇಟಿ ಮಾಡಲು ಜಯನಗರದ ಸೌತ್ ಎಂಡ್ ಸರ್ಕಲ್ ನಲ್ಲಿರುವ ತೇಜಸ್ವಿನಿ ನಿವಾಸಕ್ಕೆ ತೇಜಸ್ವಿ ಸೂರ್ಯ ಮಂಗಳವಾರ ಬೆಳಗ್ಗೆ ಆಗಮಿಸಿದರು.
ಈ ಸಂದರ್ಭದಲ್ಲಿ ತೇಜಸ್ವಿ ಸೂರ್ವ ಅವರ ಜೊತೆ ಶಾಸಕ ರವಿ ಸುಬ್ರಹ್ಮಣ್ಯ ಮತ್ತು ಸಂಸದ ರಾಜೀವ್ ಚಂದ್ರಶೇಖರ್ ಹಾಜರಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ತೇಜಸ್ವಿ ಸೂರ್ಯ, ರಾಜ್ಯದ ಬಿಜೆಪಿ ನಾಯಕರಾದ ಆರ್ ಅಶೋಕ್ ಸೇರಿದಂತೆ ಹಲವರು ಕೆಲ ದಿನಗಳ ಹಿಂದೆ ಬೆಂಗಳೂರು ದಕ್ಷಿಣದ ಅಭ್ಯರ್ಥಿಯಾಗಿ ತೇಜಸ್ವಿನಿ ಅನಂತ್ ಕುಮಾರ್ ಅವರನ್ನು ನಿಲ್ಲಿಸಬೇಕು, ಕೇಂದ್ರ ನಾಯಕರಿಗೆ ಮನದಟ್ಟು ಮಾಡಿ ಟಿಕೆಟ್ ಗಿಟ್ಟಿಸುತ್ತೇವೆ ಎಂದು ಹೇಳಿದಾಗ ನಾನು ಕೂಡ ಖುಷಿಪಟ್ಟಿದ್ದೆ.
ಆದರೆ ಇದೀಗ ಪಕ್ಷದ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಧಾರ ಮಾಡಿ ನನ್ನನ್ನು ನಿಲ್ಲಿಸಿದ್ದಾರೆ, ಇದು ಯಾಕಾಯಿತು, ಹೇಗಾಯಿತು ಎಂದು ನನಗೂ ಗೊತ್ತಿಲ್ಲ. ಪಕ್ಷದ ನಾಯಕರು ನೀಡಿದ ಜವಾಬ್ದಾರಿಯನ್ನು ಸರಿಯಾಗಿ ಪಾಲಿಸಬೇಕೆಂದು ನಾನು ಈ ಸಂದರ್ಭದಲ್ಲಿ ಬಯಸುತ್ತೇನೆ ಎಂದರು.
ನನಗಂತೂ ಯಾರೂ ಅಭ್ಯರ್ಥಿಯಾಗುತ್ತೀರಿ ಎಂದು ಸೂಚನೆ ಬಂದಿರಲಿಲ್ಲ. ಇದೊಂದು ಅಚ್ಚರಿಯ ಬೆಳವಣಿಗೆ, ಎಬಿವಿಪಿಯಿಂದ ಬಿಜೆಪಿಯ ಕಾರ್ಯಕರ್ತನಾಗಿದ್ದೇನೆ. ಪಕ್ಷದ ಹೈಕಮಾಂಡ್ ತೀರ್ಮಾನವೇ ಬಿಜೆಪಿಯಲ್ಲಿ ಮುಖ್ಯವಾಗಿರುತ್ತದೆ. ನಾನು ಈ ಸಂದರ್ಭದಲ್ಲಿ ದಿವಂಗತ ಕೇಂದ್ರ ಸಚಿವ ಅನಂತ್ ಕುಮಾರ್ ಅವರನ್ನು ಸ್ಮರಿಸುತ್ತಾ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಧನ್ಯವಾದ ಹೇಳಲಿಚ್ಛಿಸುತ್ತೇನೆ. 30 ವರ್ಷಗಳ ಹಿಂದೆ ಆರ್ ಎಸ್ಎಸ್ ಕಾರ್ಯಕರ್ತರಾಗಿದ್ದ ಅನಂತ್ ಕುಮಾರ್ ಅವರು ಯುವ ನಾಯಕರಾಗಿ ಬಿಜೆಪಿಯಲ್ಲಿ ಕೆಲಸ ಮಾಡಿ ಬೆಳೆದು ನನ್ನಂತಹ ಸಾವಿರಾರು ಕಾರ್ಯಕರ್ತರನ್ನು ಹುಟ್ಟುಹಾಕಿದರು. ಇಂದಿನ ಯುವಕರಿಗೆ, ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡಬೇಕೆಂಬ ದೃಷ್ಟಿಯಿಂದ ನನ್ನನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರಬಹುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com