ತೇಜಸ್ವಿನಿಗೆ ತಪ್ಪಿದ ಟಿಕೆಟ್‌: ಕಮಲ ಪಾಳಯದಲ್ಲಿ ಅಸಹನೆ, ರವಿಸುಬ್ರಮಣ್ಯ ಕಡೆ ವಿ.ಸೋಮಣ್ಣ ಬೊಟ್ಟು!

ತೇಜಸ್ವಿನಿ ಅನಂತ್ ಕುಮಾರ್‌ ಅವರಿಗೆ ಟಿಕೆಟ್‌ ತಪ್ಪಿರುವುದು ದುರ್ದೈವದ ಸಂಗತಿ. ಹೀಗೆ ಆಗಬಾರದಿತ್ತು. ತೇಜಸ್ವಿನಿ ಅನಂತಕುಮಾರ್ ಯಾವುದೇ ತಪ್ಪನ್ನು ಮಾಡಿಲ್ಲ. ಅಂತಹವರಿಗೆ ಹೀಗೆ ಮಾಡಿದ್ದು ಸರಿಯಲ್ಲ ...
ವಿ.ಸೋಮಣ್ಣ ಮತ್ತು ರವಿ ಸುಬ್ರಮಣ್ಯ
ವಿ.ಸೋಮಣ್ಣ ಮತ್ತು ರವಿ ಸುಬ್ರಮಣ್ಯ
ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಟಿಕೆಟ್‌ ನಿರಾಕರಿಸಿದ್ದರಿಂದ ಬಿಜೆಪಿಯಲ್ಲಿ ಉಂಟಾಗಿರುವ ಅಸಹನೆಯ ಕಿಡಿ ಮತ್ತಷ್ಟು ಹೆಚ್ಚಾಗುತ್ತಿದ್ದು, ಇಂದು ಮಾಜಿ ಸಚಿವ ಹಾಗೂ ಪಕ್ಷದ ಹಿರಿಯ ನಾಯಕ ವಿ.ಸೋಮಣ್ಣ ಬಹಿರಂಗವಾಗಿಯೇ ಹೈಕಮಾಂಡ್‌ ವಿರುದ್ಧ ಕಿಡಿಕಾರಿದ್ದಾರೆ.
ಇಂದು ಬೆಳಗ್ಗೆ ತೇಜಸ್ವಿನಿ ಅನಂತ್ ಕುಮಾರ್ ಅವರನ್ನು ವಿ.ಸೋಮಣ್ಣ ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿ.ಸೋಮಣ್ಣ, ತೇಜಸ್ವಿನಿ ಅನಂತ್ ಕುಮಾರ್‌ ಅವರಿಗೆ ಟಿಕೆಟ್‌ ತಪ್ಪಿರುವುದು ದುರ್ದೈವದ ಸಂಗತಿ. ಹೀಗೆ ಆಗಬಾರದಿತ್ತು. ತೇಜಸ್ವಿನಿ ಅನಂತಕುಮಾರ್ ಯಾವುದೇ ತಪ್ಪನ್ನು ಮಾಡಿಲ್ಲ. ಅಂತಹವರಿಗೆ ಹೀಗೆ ಮಾಡಿದ್ದು ಸರಿಯಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಟಿಕೆಟ್ ತಪ್ಪುವ ವಿಷಯ ನಾಲ್ಕು ಗೋಡೆಯ ಮಧ್ಯೆ ನಡೆದಿದ್ದರೂ ಅದು ನಮಗೆ ಗೊತ್ತಾಗಲೇಬೇಕು. ಶಾಸಕ ರವಿಸುಬ್ರಹ್ಮಣ್ಯ ತಮಗೆ ಕರೆ ಮಾಡಿ ಮಾತನಾಡಿದ್ದಾರೆ. ಅವರು ನಮ್ಮ ನೇತಾರರು. ಅವರಿಗೂ ಈ ಬಗ್ಗೆ ಸ್ಪಷ್ಟವಾಗಿಯೇ ಹೇಳಿದ್ದೇನೆ. ಇದರಲ್ಲಿ ನಮ್ಮ ಭವಿಷ್ಯವೂ ಅಡಗಿದೆ. ಹಾಗಾಗಿ ಟಿಕೆಟ್ ಕಡೇ ಕ್ಷಣದಲ್ಲಿ ಕೈ ತಪ್ಪಿದ್ದು ಹೇಗೆ? ಮತ್ತು ಏಕೆ ? ಹಾಗೂ ಇದಕ್ಕೆ ಯಾರು ಕಾರಣ ? ಎಲ್ಲವೂ ನಮಗೆ ಗೊತ್ತಾಗಬೇಕು ಎಂದು ಸೋಮಣ್ಣ ಪ್ರಶ್ನಿಸಿದ್ದಾರೆ.
ಬಿ.ಎಸ್‌.ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ಅವರು ತಮ್ಮನ್ನು ಪಕ್ಷಕ್ಕೆ ಕರೆತಂದಿದ್ದಾರೆ. ತಮಗೂ 30 ವರ್ಷಗಳ ರಾಜಕೀಯ ಅನುಭವವಿದೆ. ಅದೃಷ್ಟ ಯಾರಪ್ಪನ ಸ್ವತ್ತೂ ಅಲ್ಲ, ಇಲ್ಲಿ ತೇಜಸ್ವಿ ಸೂರ್ಯ ಗೌಣ. ಕಡೆ ಕ್ಷಣ ಆದ ಬೆಳವಣಿಗೆ ಬಗ್ಗೆ ಚರ್ಚೆ ಆಗಬೇಕು ಎಂದು ಖಾರವಾಗಿಯೇ ಹೇಳಿದ್ದಾರೆ..
ತೇಜಸ್ವಿನಿ ಅನಂತಕುಮಾರ್ ಗೆ ಟಿಕೆಟ್ ತಪ್ಪಿದ್ದರ ಹಿಂದೆ ಶಾಸಕ ರವಿಸುಬ್ರಮಣ್ಯ ಅವರ ಪಾತ್ರ ದೊಡ್ಡದಿದೆ. ಇದರ ಹಿಂದಿನ ಸತ್ಯವೇನು ಎಂದು ತಿಳಿಸುವಂತೆ ರವಿಸುಬ್ರಮಣ್ಯ ಅವರಿಗೂ ಕೇಳಿದ್ದೇನೆ. ಇದಲ್ಲದೆ ಬಿಜೆಪಿ ಹಿರಿಯ ನಾಯಕರೊಂದಿಗೆ ಇನ್ನು ಮೂರು ದಿನಗಳ ಒಳಗಾಗಿ ಸಭೆ ನಡೆದ ಬಳಿಕ ಹೈಕಮಾಂಡ್ ನಿರ್ಧಾರದ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈಗಾಗಲೇ ರವಿಸುಬ್ರಮಣ್ಯ ಶಾಸಕರಾಗಿದ್ದಾರೆ. ಅವರ ಅಣ್ಣನ ಮಗ ಲೋಕಸಭಾ ಚುನಾವಣೆಗೆ ಟಿಕೆಟ್ ಗಿಟ್ಟಿಸಿದ್ದಾರೆ. ತೇಜಸ್ವಿ ಸೂರ್ಯ ಇನ್ನೂ ಯುವಕ. ಅನುಭವದ ಅವಶ್ಯಕತೆಯಿದೆ. ಅನಂತಕುಮಾರ್ ರಾಷ್ಟ್ರ ರಾಜಕಾರಣದಲ್ಲಿ ಅಜಾತಶತ್ರು. ಅಂತಹ ವ್ಯಕ್ತಿಯ ಪತ್ನಿಗೆ ಅನ್ಯಾಯವಾಗಿದ್ದು ತಮಗೆ ನೋವಾಗಿದೆ ಎಂದು ಗೋವಿಂದರಾಜನಗರ ಶಾಸಕರೂ ಆದ ವಿ. ಸೋಮಣ್ಣ ಹೇಳಿದರು.
ಈ ಎಲ್ಲಾ ಬೆಳವಣಿಗೆ ನಡೆದಿರುವುದು ದುರ್ದೈವದ ಸಂಗತಿ. ಇದರಲ್ಲಿ ನನಗೆ ವೈಯಕ್ತಿಕವಾಗಿ ತೊಂದರೆ ಇಲ್ಲ, ಆದರೆ ತಮಗೆ ಸ್ಪಷ್ಟತೆ ಬೇಕು ಎಂದು ಹೇಳಿದ ಅವರು, ಈ ಬಗ್ಗೆ ರವಿ ಸುಬ್ರಹ್ಮಣ್ಯ ಸ್ಪಷ್ಟನೆ ಕೊಟ್ಟರೆ ಅವರಿಗೆ ಕೋಟಿ ನಮಸ್ಕಾರ ಹಾಕುವುದಾಗಿ ಪ್ರಶ್ನೆಯೊಂದಕ್ಕೆ ವಿ.ಸೋಮಣ್ಣ ಉತ್ತರಿಸಿದರು.
ಈ ರೀತಿ ಟೇಕನ್ ಫಾರ್ ಗ್ರಾಂಟೆಡ್ ಆದರೆ ನಾಳೆ ನಮ್ಮ ಭವಿಷ್ಯಕ್ಕೆ ಕತ್ತಲು ಆವರಿಸಲಿದೆ. ರವಿಸುಬ್ರಮಣ್ಯ ಇದರಲ್ಲಿ ಮುಂಚೂಣಿಯಲ್ಲಿರುವ ಮಹಾನ್ ನಾಯಕ. ತೇಜಸ್ವಿ ಸೂರ್ಯ, ಮತ್ತೊಬ್ಬ ಮಗದೊಬ್ಬ ಎಲ್ಲರೂ ಇಲ್ಲಿ ಗೌಣ. ಸ್ಪಷ್ಟತೆ ಸಿಕ್ಕಿದರೆ ಪ್ರಚಾರಕ್ಕೆ ಹೋಗಲು ತೊಂದರೆ ಇಲ್ಲ. ಮನಸ್ಸಿನಲ್ಲಿ ಒಂದು ಹೊರಗೆ ಒಂದು ಇಟ್ಟುಕೊಂಡು ನಾಟಕ ನಾನು ಮಾಡುವುದಿಲ್ಲ. ಸ್ಪಷ್ಟತೆ ಸಿಗದೇ ಇದ್ದರೆ ಸ್ವಲ್ಪ ಕಷ್ಟ ಆಗುತ್ತದೆ. ಈ ಎಪಿಸೋಡ್ ನಲ್ಲಿ ರವಿಸುಬ್ರಮಣ್ಯ ಅವರ ಪಾತ್ರ ಜಾಸ್ತಿ ಇದೆ. ಅದಕ್ಕೆ ಅವರ ಹೆಸರನ್ನು ಮತ್ತೆ ಮತ್ತೆ ಹೇಳುತ್ತಿದ್ದೇನೆ ಎಂದು ರವಿಸುಬ್ರಹ್ಮಣ್ಯ ವಿರುದ್ಧ ನೇರ ಆರೋಫ ಮಾಡಿದರು.
ರವಿಸುಬ್ರಮಣ್ಯ ಶಾಸಕರಾಗಿದ್ದಾರೆ. ಅವರ ಮನೆಯಲ್ಲಿ ಕಾರ್ಪೋರೇಟರ್ ಇದ್ದಾರೆ. ಅವರ ಅಣ್ಣನ ಮಗ ಲೋಕಸಭಾ ಅಭ್ಯರ್ಥಿ.ಇದು ಯಾಕೆ ಹೀಗೆ ಎಂಬ ಸ್ಪಷ್ಟತೆ ಬೇಕು ಎಂದು ವಿ.ಸೋಮಣ್ಣ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com