ಮತದಾನದಲ್ಲಿ ನೋಟಾ ಬಟನ್ ಒತ್ತಿ: ಬೋವಿ ಜನಾಂಗದವರಿಗೆ ಸಿದ್ದರಾಮೇಶ್ವರ ಶ್ರೀಗಳ ಕರೆ

ರಾಷ್ಟ್ರಮಟ್ಟದಲ್ಲಿ ರಾಜಕೀಯ ಪಕ್ಷಗಳ ಗಮನ ಸೆಳೆಯಲು ಚಿತ್ರದುರ್ಗದ ಬೋವಿ ಗುರುಪೀಠ ಈ ಬಾರಿಯ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಚಿತ್ರದುರ್ಗ: ರಾಷ್ಟ್ರಮಟ್ಟದಲ್ಲಿ ರಾಜಕೀಯ ಪಕ್ಷಗಳ ಗಮನ ಸೆಳೆಯಲು ಚಿತ್ರದುರ್ಗದ ಬೋವಿ ಗುರುಪೀಠ ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ಪಕ್ಷದ ಅಭ್ಯರ್ಥಿಗೆ ಮತ ಹಾಕದೆ ನೋಟಾ ಆಯ್ಕೆಯನ್ನು ಚಲಾಯಿಸುವುದಾಗಿ ನಿರ್ಧರಿಸಿದೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಬೋವಿ ಗುರುಪೀಠದ ಸ್ವಾಮೀಜಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿ, ಚಿತ್ರದುರ್ಗದಲ್ಲಿ ಸುಮಾರು 2 ಲಕ್ಷ ಬೋವಿ ಜನಾಂಗದ ಮತದಾರರಿದ್ದರೂ ಕೂಡ ಈ ಸಮಾಜ ಹಲವು ವರ್ಷಗಳಿಂದ ತುಳಿತಕ್ಕೊಳಗಾಗಿದ್ದು ಸೌಲಭ್ಯವಂಚಿತವಾಗಿದೆ. ಚಿತ್ರದುರ್ಗ ಪರಿಶಿಷ್ಟ ಜಾತಿ ಕ್ಷೇತ್ರದಿಂದ ಬೋವಿ ಜನಾಂಗದ ಒಬ್ಬರಿಗೆ ಕೂಡ ಚುನಾವಣೆಯಲ್ಲಿ ನಿಲ್ಲುವ ಅವಕಾಶ ಸಿಕ್ಕಿಲ್ಲ. ಯಾವುದೇ ರಾಜಕೀಯ ಪಕ್ಷಗಳು ಈ ನಿಟ್ಟಿನಲ್ಲಿ ಗಮನ ಹರಿಸಿಲ್ಲ. ಹೀಗಾಗಿ ಚಿತ್ರದುರ್ಗ ಸೇರಿದಂತೆ ರಾಜ್ಯಾದ್ಯಂತ ಇರುವ ಬೋವಿ ಜನಾಂಗದವರಿಗೆ ಈ ಚುನಾವಣೆಯಲ್ಲಿ ಮತ ಚಲಾಯಿಸದಂತೆ ನಿರ್ದೇಶನ ನೀಡಲು ಮಠ ನಿರ್ಧರಿಸಿದೆ ಎಂದು ಹೇಳಿದರು.
ಚಿತ್ರದುರ್ಗದಲ್ಲಿ ಬೋವಿ ಜನಾಂಗದವರು ಚುನಾವಣೆಗೆ ನಿಂತರೆ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಕಾಂಗ್ರೆಸ್ಸಾಗಲಿ, ಬಿಜೆಪಿಯಾಗಲಿ ಈ ನಿಟ್ಟಿನಲ್ಲಿ ಯೋಚಿಸಿಲ್ಲ. ಹೀಗಾಗಿ ರಾಜಕೀಯ ಪಕ್ಷಗಳಿಗೆ ಪಾಠ ಕಲಿಸಲು ಈ ಬಾರಿ ಬೋವಿ ಜನಾಂಗದವರು ಮತ ಹಾಕದಂತೆ ಹೇಳುತ್ತಿದ್ದೇವೆ ಎಂದು ಸ್ವಾಮೀಜಿ ಹೇಳಿದರು.
ನಾಡಿದ್ದು 30 ಅಥವಾ ಏಪ್ರಿಲ್ 1ರಂದು ನಡೆಯಲಿರುವ ಬೋವಿ ಜನಾಂಗದ ಸಮಾವೇಶದಲ್ಲಿ ಇದನ್ನು ಜನರ ಮುಂದೆ ಪ್ರಸ್ತಾಪಿಸಲಾಗುವುದು. ಈ ಹಿಂದೆ ಬೋವಿ ಜನಾಂಗದವರು ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಮಾಡಿ ಎಂ ಚಂದ್ರಪ್ಪ ಮತ್ತು ಗೂಳಿಹಟ್ಟಿ ಡಿ ಶೇಖರ್ ಅವರ ಗೆಲುವಿಗೆ ಕಾರಣರಾಗಿದ್ದರು. ಆದರೆ ಈ ಬಾರಿ ಬಿಜೆಪಿ ಭರವಸೆ ನೀಡಿದ್ದರೂ ಕೂಡ ಜನಾರ್ದನ ಸ್ವಾಮಿ, ಮಾನಪ್ಪ ವಿಜ್ಜಲ್ ಮತ್ತು ಸೋಮಶೇಖರ್ ಅವರ ಹೆಸರುಗಳನ್ನು ಪರಿಗಣಿಸದೆ ಮಾದಿಗ ಸಮುದಾಯದ ಆನೆಕಲ್ ನಾರಾಯಣಸ್ವಾಮಿ ಅವರನ್ನು ನಿಲ್ಲಿಸಿದೆ. ಇದು ಬೋವಿ ಜನಾಂಗದ ಅಸಮಾಧಾನಕ್ಕೆ ಕಾರಣವಾಗಿದ್ದು ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಗಳಿಗೆ ಮತ ಹಾಕದಿರಲು ನಿರ್ಧರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com