ರಾಜ್ಯದಲ್ಲಿ ಜೆಡಿಎಸ್‌ಗೇ ಅಡ್ರೆಸ್ಸಿಲ್ಲ, ಮೊದಲು ತುಮಕೂರಲ್ಲಿ ಗೆದ್ದು ಬನ್ನಿ: ಗೌಡರಿಗೆ ಯಡಿಯೂರಪ್ಪ ಸವಾಲ್

ಎಂಥೆಂತಾ ಅತಿರಥ ಮಾಹಾರಥರೇ ಬಿಜೆಪಿಯನ್ನು ದಕ್ಷಿಣದಲ್ಲಿ ಕಟ್ಟಿಹಾಕಲು ಸಾಧ್ಯವಾಗಲಿಲ್ಲ, ಕರ್ನಾಟಕದಲ್ಲಿ ಜೆಡಿಎಸ್ ಪಕ್ಷಕ್ಕೆ ಅಡ್ರೆಸ್ಸೇ ಇಲ್ಲ ಇನ್ನು ನೀವು ಬಿಜೆಪಿಗೆ ಅಡ್ರೆಸ್ ಇಲ್ಲದಂತೆ....

Published: 29th March 2019 12:00 PM  |   Last Updated: 29th March 2019 08:00 AM   |  A+A-


BS Yeddyurappa

ಯಡಿಯೂರಪ್ಪ

Posted By : RHN RHN
Source : UNI
ಬೆಂಗಳೂರು: "ಎಂಥೆಂತಾ ಅತಿರಥ ಮಾಹಾರಥರೇ ಬಿಜೆಪಿಯನ್ನು ದಕ್ಷಿಣದಲ್ಲಿ ಕಟ್ಟಿಹಾಕಲು ಸಾಧ್ಯವಾಗಲಿಲ್ಲ, ಕರ್ನಾಟಕದಲ್ಲಿ ಜೆಡಿಎಸ್ ಪಕ್ಷಕ್ಕೆ ಅಡ್ರೆಸ್ಸೇ ಇಲ್ಲ ಇನ್ನು ನೀವು ಬಿಜೆಪಿಗೆ ಅಡ್ರೆಸ್ ಇಲ್ಲದಂತೆ ಮಾಡುವುದಾಗಿ ಹಗುರವಾಗಿ ಮಾತನಾಡಬೇಡಿ" ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.   

ಡಾಲರ್ಸ್ ಕಾಲೋನಿಯ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಉತ್ತರ ಕ್ಷೇತ್ರದ ಚುನಾವಣಾ ಸಭೆಯಲ್ಲಿ ದೇವೇಗೌಡರು ದಕ್ಷಿಣದಲ್ಲಿ ಬಿಜೆಪಿ ತಲೆ ಎತ್ತಲು ಬಿಡುವುದಿಲ್ಲ ಎಂಬ ಹೇಳಿಕೆ ಕೊಟ್ಟಿದ್ದಾರೆ. ನೀವು ನಿಮ್ಮ‌ ಕುಟುಂಬ ಮಕ್ಕಳು‌, ಮೊಮ್ಮಕ್ಕಳಿಗೆ ಆದ್ಯತೆ ಕೊಟ್ಟಿದ್ದೀರಿ. ಇಡೀ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮಧ್ಯೆ ಒಡಕಿಗೆ ನೀವೇ ಕಾರಣರಾಗಿದ್ದೀರಿ, ತುಮಕೂರಿನಲ್ಲಿ‌ ಕೈಕಾಲು ಕಟ್ಟಿ ಅಲ್ಲಿನ ಅಭ್ಯರ್ಥಿ ಮುದ್ದ ಹನುಮೇಗೌಡ ಅವರ ನಾಮಪತ್ರ ವಾಪಸ್ ತಗೆದುಕೊಳ್ಳುವಂತೆ ಮಾಡಿರುವ ನೀವು ಮೊದಲು ತುಮಕೂರಲ್ಲಿ ಗೆದ್ದು‌ ಬನ್ನಿ.ಆ ಮೇಲೆ ಪೌರುಷದ ಮಾತಾಡಿ ಎಂದು ದೇವೇಗೌಡರಿಗೆ ಸವಾಲು ಹಾಕಿದರು.

ಅತಿರಥ ಮಹಾರಥರೇ ಬಿಜೆಪಿಯನ್ನು ದಕ್ಷಿಣ ಭಾರತದಲ್ಲಿ ಕಟ್ಟಿಹಾಕಲು ಯತ್ನಿಸಿ ವಿಫಲರಾದರು. 

ಅವರಿಂದಲೇ ಬಿಜೆಪಿ ಬೆಳವಣಿಗೆಯನ್ನು ತಡೆಯಲು ಸಾಧ್ಯವಾಗಲಿಲ್ಲ. ರಾಜ್ಯದ ಜನರಿಗೆ ಸುಳ್ಳು ಭರವಸೆ ಕೊಟ್ಟು 38 ಸ್ಥಾನ ಗೆದ್ದಿರುವ ನಿಮ್ಮ ಪಕ್ಷಕ್ಕೆ ಕರ್ನಾಟಕದಲ್ಲಿ‌ ಅಡ್ರೆಸ್ಸೇ ಇಲ್ಲ.ಹೀಗಿರುವಾಗ ಬಿಜೆಪಿ ವಿಳಾಸ ಇಲ್ಲದಂತೆ ಮಾಡುತ್ತೇನೆ ಎನ್ನುವುದು ಹಾಸ್ಯಾಸ್ಪದ. ಬಿಜೆಪಿ ಬಗ್ಗೆ ಅಷ್ಟು ಹಗುರವಾಗಿ ಮಾತಾಡಬೇಡಿ.ಮಾಜಿ  ಪ್ರಧಾನಿ ಎಂಬುದನ್ನು ಮರೆತು ತೀರಾ ಕೆಳಮಟ್ಟಕ್ಕೆ ಇಳಿದು ಮಾತನಾಡುವುದು ಶೋಭೆ ತರುವುದಿಲ್ಲ ಎಂದರು.

ನಮ್ಮಲ್ಲಿ ಆರ್ ಎಸ್ಎಸ್ ಬಿಜೆಪಿ ಎಂಬ ಬೇಧವಿಲ್ಲ. ಪಕ್ಷದ ಶಿಫಾರಸ್ಸಿನಂತೆ ಹೈಕಮಾಂಡ್ ಟಿಕೆಟ್ ಹಂಚಿಕೆ ಮಾಡಿದೆ. ಬೆಳಗಾವಿ ಹಾಗೂ ಬೆಂಗಳೂರಲ್ಲಿ ಸ್ವಲ್ಪ ಮಾತ್ರ ವ್ಯತ್ಯಾಸ ಆಗಿದೆ. ಅದನ್ನು ಆದಷ್ಟು ಶೀಘ್ರದಲ್ಲಿ ಸರಿ ಮಾಡುತ್ತೇವೆ. ಸರ್ಕಾರ ರಚನೆ ಮಾಡಲು ತಮಗೆ ಅಮಿತ್ ಶಾ ತಮಗೆ ಆಹ್ವಾನಿಸಿದ್ದರು ಎಂಬ ಹೇಳಿಕೆಯನ್ನು ದೇವೇಗೌಡರು ಇಷ್ಟು ದಿನ ಮುಚ್ಚಿಟ್ಟಿ ಉದ್ದೇಶವೇನು. ಮಾಧ್ಯಮಗಳ ಮುಂದೆ ಹೇಳಿಕೆ ನೀಡುವ ಮೂಲಕ ರಾಜಕೀಯ ಲಾಭಕ್ಕಾಗಿ ಷಡ್ಯಂತ್ರ ರೂಪಿಸಿದ್ದೀರಿ ಎಂದು ದೇವೇಗೌಡರ ವಿರುದ್ದ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.
Stay up to date on all the latest ಕರ್ನಾಟಕ news with The Kannadaprabha App. Download now
facebook twitter whatsapp