ಎಲೆಕ್ಷನ್ ಲ್ಲಿ ಮತ ಹಾಕಿದರೆ ನಿಮ್ಮ ಮಕ್ಕಳಿಗೆ ಒಂದು ಮಾರ್ಕ್ ಎಕ್ಸ್ ಟ್ರಾ; ಖಾಸಗಿ ಶಾಲೆಗಳ ತಂತ್ರ!

ಚುನಾವಣೆಯಲ್ಲಿ ಮತ ಹಾಕಿದ ಪೋಷಕರ ಮಕ್ಕಳಿಗೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ನೀಡುವುದಾಗಿ ಕಳೆದ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಚುನಾವಣೆಯಲ್ಲಿ ಮತ ಹಾಕಿದ ಪೋಷಕರ ಮಕ್ಕಳಿಗೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ನೀಡುವುದಾಗಿ ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಖಾಸಗಿ ಶಾಲೆಗಳು ಪ್ರೋತ್ಸಾಹ ನೀಡಿದ ನಂತರ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರಿಂದ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕೂಡ ಅಂತಹದ್ದೇ ತಂತ್ರ ಅನುಸರಿಸಲು ಶಾಲೆಗಳು ಮುಂದಾಗಿವೆ.
ಮತ ಚಲಾಯಿಸಿದ ಪ್ರತಿ ಪೋಷಕರ ಮಕ್ಕಳಿಗೆ ಒಂದು ಅಂಕ ಹೆಚ್ಚಿಗೆ ನೀಡಲಾಗುವುದು ಎಂದು ಖಾಸಗಿ ಶಾಲೆಗಳು ಹೇಳಿವೆ.
ಈ ಬಾರಿಯ ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕ ರಜಾ ದಿನಗಳು ಹೆಚ್ಚಿಗೆ ಬರುತ್ತಿವೆ. ಅಲ್ಲದೆ ಬೇಸಿಗೆ ರಜೆ ಬೇರೆ, ಹೀಗಾಗಿ ಮಕ್ಕಳನ್ನು ಕರೆದುಕೊಂಡು ನೆಂಟರ ಮನೆಗೋ, ಪ್ರವಾಸಕ್ಕೋ ಹೋಗುವ ಪೋಷಕರೇ ಅಧಿಕ ಮಂದಿ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಮತ ಚಲಾಯಿಸಲು ಹೀಗೆ ಮಾಡುತ್ತೇವೆ ಎನ್ನುತ್ತಾರೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ ಶಶಿ ಕುಮಾರ್.
ಪ್ರತಿ ಮತ ಕೂಡ ಅಭ್ಯರ್ಥಿಗಳ ಪಾಲಿಗೆ ಮುಖ್ಯವಾಗುತ್ತದೆ. ಹೀಗಾಗಿ ಪೋಷಕರಲ್ಲಿ ಜಾಗೃತಿ ಮೂಡಿಸಲು ಈ ತಂತ್ರ ಅನುಸರಿಸುತ್ತೇವೆ ಎಂದು ಹೇಳಿದರು. ಇದಕ್ಕಾಗಿ ಎಲ್ಲಾ ಖಾಸಗಿ ಶಾಲೆಗಳಿಗೆ ಮಾಹಿತಿ ಕಳುಹಿಸಲಾಗಿದ್ದು ಶಾಲೆಗಳು ಪೋಷಕರಿಗೆ ಎಸ್ಎಂಎಸ್ ಮೂಲಕ ಅಥವಾ ಮಕ್ಕಳ ಫಲಿತಾಂಶ ನೋಡಲು ಶಾಲೆಗೆ ಬರುವಾಗ ಹೇಳಲು ಸೂಚಿಸಲಾಗಿದೆ. ಮಕ್ಕಳಿಗೆ ಹೆಚ್ಚು ಅಂಕ ನೀಡುತ್ತಾರೆ ಎಂದರೆ ಎಲ್ಲ ಪೋಷಕರಿಗೆ ಇಷ್ಟವಾಗುತ್ತದೆ. ಸಹಜವಾಗಿ ಮತ ಚಲಾಯಿಸಲು ಮುಂದೆ ಬರುತ್ತಾರೆ ಎಂದರು ಶಶಿ ಕುಮಾರ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com