ಒಂದೆಡೆ ಸೇರುವುದು ಅಪರಾಧವಲ್ಲ: ಚಲುವರಾಯಸ್ವಾಮಿ ಸಮರ್ಥನೆ

ನಾವು ಒಟ್ಟಾಗಿ ಸೇರಿದ ವೀಡಿಯೋ ಪೊಲೀಸ್ ಅಧಿಕಾರಿಗಳ ಮೂಲಕವೇ ಬಹಿರಂಗ ಆಗಿದೆ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ....
ಚಲುವರಾಯಸ್ವಾಮಿ
ಚಲುವರಾಯಸ್ವಾಮಿ
ಬೆಂಗಳೂರು: ನಾವು ಒಟ್ಟಾಗಿ ಸೇರಿದ ವೀಡಿಯೋ ಪೊಲೀಸ್ ಅಧಿಕಾರಿಗಳ ಮೂಲಕವೇ ಬಹಿರಂಗ ಆಗಿದೆ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಜೆಪಿ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೆಲ್ಲಾ ಒಂದೆಡೆ ಸೇರಿರುವುದು ಅಪರಾಧವೆಂಬಂತೆ ಬಿಂಬಿಸಲಾಗುತ್ತಿದೆ. ಒಂದೆಡೆ ಸೇರುವುದು ದೊಡ್ಡ ಅಪರಾಧವೇನು ಅಲ್ಲ ನಾವು ಒಟ್ಟಾಗಿ ಸೇರಿರುವುದರಿಂದ ಮುಖ್ಯಮಂತ್ರಿ ಸೇರಿದಂತೆ ಯಾರಿಗೂ ತಳಮಳ ಆಗಿಲ್ಲ, ಚುನಾವಣೆ ಮುಗಿದುಹೋಗಿದೆ, ಮಾಧ್ಯಮದವರು ಇದನ್ನು ದೊಡ್ಡದು ಮಾಡುತ್ತಿದ್ದಾರೆ ಅಷ್ಟೆ ಎಂದು ಹೇಳಿದರು.
ಮಂಡ್ಯದಲ್ಲಿ ನಾವೇ ಸಮರ್ಥರಿದ್ದೇವೆ ಎಂದು  ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೊಂಡಿದ್ದರು. ಅದೇ ಕಾರಣಕ್ಕೆ ಚುನಾವಣೆ ಸಂದರ್ಭದಲ್ಲಿ ನಮ್ಮನ್ನೆಲ್ಲ ಅವರು ಸಂಪರ್ಕಿಸಿಲ್ಲ ಅನಿಸುತ್ತದೆ. ಮೈಸೂರಲ್ಲಿ ಜೆಡಿಎಸ್ ನ ಎಲ್ಲ ಪ್ರಮುಖರ ಜೊತೆ ಸಂಪರ್ಕ ಮಾಡಿ ಮೈತ್ರಿ ಅಭ್ಯರ್ಥಿ ಹಾಕಿದ್ದಾರೆ. ಅಲ್ಲಿ ವ್ಯತ್ಯಾಸ ಆದರೆ ಜೆಡಿಎಸ್ ಮೇಲೆ ಹೊಣೆ ಹಾಕಬಹುದು, ತುಮಕೂರಲ್ಲೂ ಎಲ್ಲ ಕಾಂಗ್ರೆಸ್ ಪ್ರಮುಖರನ್ನು ಸಂಪರ್ಕಿಸಿ ಅಭ್ಯರ್ಥಿ ಹಾಕಿದ್ದಾರೆ. ಸಚಿವರಾದ ಜಿ.ಟಿ.ದೇವೇಗೌಡ, ಸಾರಾ ಮಹೇಶ್ ಮಂಡ್ಯ ಅಭ್ಯರ್ಥಿ ಸಂಬಂಧ ಮಾತಾಡಿದ್ದರು. ಆದರೆ ಅವರೆಲ್ಲ ಮೈಸೂರಿನವರು, ಮುಖ್ಯಮಂತ್ರಿ ಅಲ್ಲದಿದ್ದರೂ ಕನಿಷ್ಠ ಜಿಲ್ಲಾ ಉಸ್ತುವಾರಿ ಸಚಿವರಾದರೂ ನನ್ನ ಜೊತೆ ಮಾತಾಡಬಹುದಿತ್ತು ಎಂದು ಚಲುವರಾಯಸ್ವಾಮಿ ಮತ್ತೊಮ್ಮೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಸುಮಲತಾ ಕಾಂಗ್ರೆಸ್ ನಿಂದ ಟಿಕೆಟ್ ಕೇಳಿದ್ದರು. ಆದರೆ ಅವರಿಗೆ ಟಿಕೆಟ್ ಕೊಟ್ಟಿಲ್ಲ, ಅವರ ಪರ ಕೆಲಸ ಮಾಡಬಾರದು ಎಂದು ಕಾಂಗ್ರೆಸ್ ಮುಖಂಡರು ನಮಗೆ ಸೂಚಿಸಿದ್ದರು. ನಾವ್ಯಾರು ಅವರ ಪರ ಪ್ರಚಾರ ನಡೆಸಿಲ್ಲ, ಸ್ಥಳೀಯವಾಗಿ ನಾವು ಯಾರದ್ದೋ ಮನೆಯ ಕಾರ್ಯಕ್ರಮಕ್ಕೆ ಹೋಗಿದ್ದೇವೆ ಅಷ್ಟೆ, ಸಭೆ ಸಮಾರಂಭ ನಡೆಸಿ ನಾವ್ಯಾರೂ ಪ್ರಚಾರ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಆಪ್ತರು ಸಿಕ್ಕಾಗ ನಿಮಗೆ ಇಷ್ಟ ಬಂದ ಹಾಗೆ ಮಾಡಿ ಅಂದಿದ್ದೇವೆ, ಅದೆಲ್ಲಾ ಪ್ರಚಾರ ಅಲ್ಲ, ಈ ಚುನಾವಣೆಯನ್ನು ಮಂಡ್ಯ ಜನತೆಗೆ ಬಿಟ್ಟುಬಿಡೋಣ ಎಂದು ಚಲುವರಾಯಸ್ವಾಮಿ ಹೇಳಿದರು.
ಮಂಡ್ಯ ಲೋಕಸಭಾ ಕ್ಷೇತ್ರದ ತೀರ್ಪು ಬರುವ ತನಕ ಸುಮ್ಮನಿರೋಣ, ಮುಖ್ಯಮಂತ್ರಿಯವರು ಕೂಡ ಹಾಗೆ ಮಾಡಬಹುದು ಅಂದುಕೊಂಡಿದ್ದೇನೆ. ಮಂಡ್ಯದಲ್ಲಿ ಅಧಿಕಾರಿಗಳ ಪತ್ನಿಯರೆಲ್ಲಾ ಪ್ರಚಾರ ಮಾಡಿದ್ದಾರೆ. ಹಣ  ಹಂಚಿದ್ದಾರೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com