ಕೋಳಿಯೇ ಹುಟ್ಟಿಲ್ಲ, ಕಬಾಬ್‌ ಮಾಡೋಕೆ ಹೊರಟಿದ್ದಾರೆ ರೋಷನ್‌ ಬೇಗ್: ದಿನೇಶ್ ವ್ಯಂಗ್ಯ

ಕೋಳಿನೇ ಹುಟ್ಟದೇ ರೋಷನ್‌ ಬೇಗ್‌ ಕಬಾಬ್‌ ಮಾಡಲು ಹೊರಟಿದ್ದಾರೆ. 23ರಂದು ಫಲಿತಾಂಶ ಎಲ್ಲದಕ್ಕೂ ಉತ್ತರ ಸಿಗಲಿದೆ. ಹಾಗಾಗಿ, ಮತಗಟ್ಟೆ ಸಮೀಕ್ಷೆ ಬಗ್ಗೆ ....
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್
ಬೆಂಗಳೂರು; ಕೋಳಿನೇ ಹುಟ್ಟದೇ ರೋಷನ್‌ ಬೇಗ್‌ ಕಬಾಬ್‌ ಮಾಡಲು ಹೊರಟಿದ್ದಾರೆ. 23ರಂದು ಫಲಿತಾಂಶ ಎಲ್ಲದಕ್ಕೂ ಉತ್ತರ ಸಿಗಲಿದೆ. ಹಾಗಾಗಿ, ಮತಗಟ್ಟೆ ಸಮೀಕ್ಷೆ ಬಗ್ಗೆ ಇಷ್ಟೊಂದು ಆತುರ ಏಕೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಪ್ರಶ್ನಿಸಿದ್ದಾರೆ. 
"ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಒಬ್ಬ ಬಫೂನ್, ಸಿದ್ದರಾಮಯ್ಯ ಮೊಂಡುತನದಿಂದ ವರ್ತಿಸುತ್ತಿದ್ದಾರೆ ಎಂದು ರೋಷನ್ ಬೇಗ್ ಕಾಂಗ್ರೆಸ್ ನಾಯಕರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಿಸಿದ ದಿನೇಶ್‌ ಗುಂಡೂರಾವ್‌, " ರೋಷನ್ ಬೇಗ್ ಒಬ್ಬ ಹಿರಿಯ ನಾಯಕ. ಈ ರೀತಿ  ಹೇಳಿಕೆಗಳು ಅವರಿಗೆ ಶೋಭೆ ತರುವುದಿಲ್ಲ. ಅವರು ಏನೇ  ಮಾತನಾಡುವುದಿದ್ದರೂ ಪಕ್ಷದ ವೇದಿಕೆಯಲ್ಲಿ ಮಾತನಾಡಬಹುದಿತ್ತು. ರೋಷನ್‌ ಬೇಗ್‌  ಪ್ರಬುದ್ಧ ರಾಜಕಾರಣಿ. ತಕ್ಷಣ ಅವರ ಮಾತಿನ ಹಿಂದಿನ ಉದ್ದೇಶ ಏನಿದೆ ಎಂಬುದು ತಮಗೆ ತಿಳಿದಿಲ್ಲ ಎಂದರು.
ಕಾಂಗ್ರೆಸ್‌ ಪಕ್ಷದಲ್ಲಿ ಎಲ್ಲಾ ಅಧಿಕಾರವನ್ನು ಅವರು ಅನುಭವಿಸಿದವರು. ಇಷ್ಟು ಕೆಳ ಮಟ್ಟಕ್ಕೆ ಇಳಿಯಬೇಕಿರಲಿಲ್ಲ. ಎಕ್ಸಿಟ್ ಪೋಲ್ ಫಲಿತಾಂಶ ರೋಷನ್ ಬೇಗ್ ಗೆ ಖುಷಿ ತಂದಿರಬೇಕು. ಹಾಗಾಗಿ, ಪಕ್ಷದ ಶಿಸ್ತಿನ ಚೌಕಟ್ಟು ಮೀರುವ ಹೇಳಿಕೆ ನೀಡುತ್ತಿದ್ದಾರೆ" ಎಂದು ಹೇಳಿದರು.
"ಕೋಳಿಯೇ ಹುಟ್ಟಿಲ್ಲ ಆಗಲೇ ಎಣಿಸೋಕೆ ಶುರು ಮಾಡಿದ್ದಾರೆ. ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿಲ್ಲ. ಆಗಲೇ, ರೋಷನ್‌ ಬೇಗ್‌ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಯಾವುದೇ ವಿಚಾರಗಳಿದ್ದರೆ ಅದನ್ನು ಪಕ್ಷದ ಚೌಕಟ್ಟಿನೊಳಗೆ ಹೇಳಬಹುದಿತ್ತು. ಅವರಿಗೆ ಯಾಕೆ ಇಷ್ಟು ತರಾತುರಿ, ಯಾಕಿಷ್ಟು ಆತುರ ಅರ್ಥವಾಗುತ್ತಿಲ್ಲ ಎಂದು ಗುಂಡೂರಾವ್‌ ತಿಳಿಸಿದರು.
ಪ್ರಬುದ್ಧ, ನಿಸ್ವಾರ್ಥ, ನಿಷ್ಠೆ ಇರುವ ರಾಜಕಾರಣಿ ಈ ರೀತಿ ಹೇಳಿಕೆ ನೀಡುವುದಿಲ್ಲ. ಪ್ರಾಮಾಣಿಕತೆ, ಬದ್ಧತೆ, ಸುಸಂಸ್ಕೃತ ನಾಗರಿಕತೆ ಇರುವ ರಾಜಕಾರಣಿ ರೋಷನ್ ಬೇಗ್ ರೀತಿ ಮಾತನಾಡುವುದಿಲ್ಲ.
ಪಕ್ಷ ಅಂದರೆ ನಾವೆಲ್ಲ ತಾಯಿ ಸಮಾನ ಅಂದುಕೊಂಡವರು. ಮಂತ್ರಿ ಆಗಬೇಕು ಅಧಿಕಾರದ ಹಿಂದೆ ಹೋಗಬೇಕು ಅನ್ನುವ ಸಣ್ಣತನವನ್ನಂತೂ ನಾನು ಮಾಡಿಲ್ಲ ಎಂದು ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com