ಮತದಾರರ ತೀರ್ಪನ್ನು ತಲೆಬಾಗಿ ಒಪ್ಪಿಕೊಳ್ಳುವೆ: ಎಚ್.ವಿಶ್ವನಾಥ್

ಕಾಂಗ್ರೆಸ್ ಜತೆ ಲೋಕಸಭಾ ಚುನಾವಣೆ ಮೈತ್ರಿ ಮಾಡಿಕೊಂಡಾಗಲೇ ಈ ರೀತಿಯ ಫಲಿತಾಂಶವನ್ನು ನಿರೀಕ್ಷೆ ಮಾಡಿದ್ದೆವು. ಆದರೂ ಇಷ್ಟು ಕೆಟ್ಟ ಫಲಿತಾಂಶ ಬರುತ್ತದೆ.....
ಎಚ್.ವಿಶ್ವನಾಥ್
ಎಚ್.ವಿಶ್ವನಾಥ್
ಬೆಂಗಳೂರು: ಕಾಂಗ್ರೆಸ್ ಜತೆ ಲೋಕಸಭಾ ಚುನಾವಣೆ ಮೈತ್ರಿ ಮಾಡಿಕೊಂಡಾಗಲೇ ಈ ರೀತಿಯ ಫಲಿತಾಂಶವನ್ನು ನಿರೀಕ್ಷೆ ಮಾಡಿದ್ದೆವು. ಆದರೂ ಇಷ್ಟು ಕೆಟ್ಟ ಫಲಿತಾಂಶ ಬರುತ್ತದೆ ಎಂದುಕೊಂಡಿರಲಿಲ್ಲ ಮತದಾರರು ನೀಡಿರುವ ತೀರ್ಪನ್ನು ತಲೆಬಾಗಿ ಒಪ್ಪಿಕೊಳ್ಳುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿದ್ದಾರೆ.

ಪದ್ಮನಾಭ ನಗರದಲ್ಲಿ ದೇವೇಗೌಡರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಬೇಕೆಂಬ ತೀರ್ಮಾನ ಮಾಡಲಾಗಿತ್ತು.ಆದರೆ ಹೈಕಮಾಂಡ್ ನಾಯಕರು ತೆಗೆದುಕೊಂಡ ತೀರ್ಮಾನದಂತೆ ಒಟ್ಟಾಗಿ ಚುನಾವಣೆ ಎದುರಿಸುವ ನಿರ್ಧಾರಕ್ಕೆ ಬರಬೇಕಾಗಿ ಬಂದಿದ್ದೇ ಚುನಾವಣೆಯಲ್ಲಿ ಹೀನಾಯ ಸೋಲಿಗೆ ಕಾರಣ ಎಂದು ವಿಶ್ವನಾಥ್ ವಿಶ್ಲೇಷಣೆ ಮಾಡಿದ್ದಾರೆ.

ಲೋಕಸಭಾ ಚುನಾವಣೆ ಸೋಲಿನ ಹಿನ್ನಲೆಯಲ್ಲಿ ತಮ್ಮ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದೆ. ಜೆಡಿಎಸ್ ವರಿಷ್ಠರು ತಮ್ಮ ರಾಜೀನಾಮೆಯನ್ನು ಸ್ವೀಕರಿಸಲಿಲ್ಲ. ಈ ಬಗ್ಗೆ ಜೆಡಿಎಸ್ ವರಿಷ್ಟ ಎಚ್.ಡಿ.ದೇವೇಗೌಡರ ಬಳಿ ಚರ್ಚೆ ಮಾಡಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ವಿಶ್ವನಾಥ್ ತಿಳಿಸಿದ್ದಾರೆ.

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ, ತುಮಕೂರಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಒಂದು ಕುಟುಂಬದ ಸದಸ್ಯರು ಚುನಾವಣೆಯಲ್ಲಿ ಸೋತಿರುವುದು ಹೊಸದೇನಲ್ಲ. ಚುನಾವಣೆಯ ಸೋಲನ್ನು ಸ್ವೀಕಾರ ಮಾಡುವ ಮನಸ್ಥಿತಿ ಇರಬೇಕಷ್ಟೆ. ಇದೇ ಕೊನೆಯ ಚುನಾವಣೆ ಏನಲ್ಲ. ಚುನಾವಣೆಗಳು ಬರುತ್ತವೆ ಹೋಗುತ್ತವೆ ಆ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಸೋಲಿನ ಬಗ್ಗೆ ಆತ್ಮಾವಲೋಕನ ನಡೆಸಿಕೊಳ್ಳಬೇಕು. ಆಶಾವಾದಿಯಾಗಿರಬೇಕು ಆಗ ಮುಂದಿನ ಚುನಾವಣೆಯಲ್ಲಿ ಹೋರಾಟ ನಡೆಸುವ ಧೈರ್ಯ ಬರಲಿದೆ ಎಂದು ತಿಳಿಸಿದರು.

ಪಕ್ಷದ ಹೀನಾಯ ಸೋಲಿನ ಹೊಣೆ ಯಾರಾದರೂ ಹೊರಲೇಬೇಕು. ಹೀಗಾಗಿ ರಾಜ್ಯಧ್ಯಕ್ಷನಾಗಿ ನಾನೇ ತೀರ್ಮಾನ ಕೈಗೊಂಡು ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ನನ್ನ ತೀರ್ಮಾನವನ್ನು ವರಿಷ್ಟರಿಗೆ ತಿಳಿಸುತ್ತೇನೆ ಮುಂದಿನ ತೀರ್ಮಾನವನ್ನು ಅವರೇ ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜಿಲ್ಲೆಯಲ್ಲಿ ಎಂಟು ಜನ ಶಾಸಕರು, ಮೂವರು ವಿಧಾನ ಪರಿಷತ್ ಸದಸ್ಯರು, ಮೂವರು ಮಂತ್ರಿಗಳಿರಬಹುದು ಆದರೆ ಚುನಾವಣೆಯಲ್ಲಿ ಮತಗಳ ಡಬ್ಬ ತುಂಬೋದು ಮತದಾರರೇ ಹೊರತು ಜನಪ್ರತಿನಿಧಿಗಳಲ್ಲ ಎಂದು ಹೇಳುವ ಮೂಲಕ ಸೋಲಿನಲ್ಲಿ ಅವರ ಪಾತ್ರ ನಗಣ್ಯ ಎಂದು ವಿಶ್ವನಾಥ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com