ಮಂಡ್ಯ ರಣಕಣ: ಸುಮಲತಾ ಗೆಲುವು, ನಿಖಿಲ್ ಕುಮಾರಸ್ವಾಮಿ ಸೋಲಿಗೆ ಕಾರಣಗಳು!

ಹಾಲಿ ಲೋಕಸಭಾ ಚುನಾವಣೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ ಸುಮಲತಾ ಅಂಬರೀಷ್ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಇಡೀ ಸರ್ಕಾರವೇ ನಿಖಿಲ್ ಪರವಾಗಿದ್ದರೂ, ಅವರ ಈ ಸೋಲಿಗೆ ಕಾರಣಗಳೇನು..?
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮಂಡ್ಯ: ಹಾಲಿ ಲೋಕಸಭಾ ಚುನಾವಣೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ ಸುಮಲತಾ ಅಂಬರೀಷ್ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಇಡೀ ಸರ್ಕಾರವೇ ನಿಖಿಲ್ ಪರವಾಗಿದ್ದರೂ, ಅವರ ಈ ಸೋಲಿಗೆ ಕಾರಣಗಳೇನು..?
ಮಂಡ್ಯದಲ್ಲಿ ನಿಂತಿದ್ದೇ ನಿಖಿಲ್ ಸೋಲಿಗೆ ಕಾರಣ!
ಮೊದಲೇ ಕುಟುಂಬ ರಾಜಕಾರಣದ ಕಾರಣದಿಂದ ಸುದ್ದಿಯಾಗಿದ್ದ ದೇವೇಗೌಡರ ಕುಟುಂಬದಿಂದ ದೇವೇಗೌಡರೂ ಸೇರಿದಂತೆ ಮೂರು ಮಂದಿ ಕಣಕ್ಕಿಳಿದಿದ್ದರು. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ, ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಕುರಿತು ನಿರ್ಧರಿಸಲಾಗಿತ್ತು. ಆ ಮೂಲಕ ಮತ್ತೆ ಕುಟುಂಬ ರಾಜಕಾರಣದ ಮಾತು ಬಲವಾಗಿ ಕೇಳಿಬಂದಿತ್ತು. ಅಲ್ಲದೆ ಇಬ್ಬರೂ ಮೊಮ್ಮಕ್ಕಳನ್ನೂ ಗೆಲ್ಲಿಸುವ ಪಣ ತೊಟ್ಟಿದ್ದ ದೇವೇಗೌಡರು, ಮೊಮ್ಮಕ್ಕಳಿಗಾಗಿ ಸುರಕ್ಷಿತ ಕ್ಷೇತ್ರಗಳ ಆಯ್ಕೆ ಮಾಡಿದರು. ಈ ಪೈಕಿ ಪ್ರಜ್ವಲ್ ರೇವಣ್ಣರನ್ನು ಹಾಸನದಿಂದ ನಿಲ್ಲಿಸಿದರೆ, ಮಂಡ್ಯದಿಂದ ನಿಖಿಲ್ ರನ್ನು ಕಣಕ್ಕಿಳಿಸಿದರು.
ಜೆಡಿಎಸ್ ಕಾರ್ಯಕರ್ತರ ಒತ್ತಡಕ್ಕೆ ಮಣಿದ ಎಚ್ ಡಿಕೆ
ನಿಖಿಲ್ ರನ್ನು ಮಂಡ್ಯ ಕ್ಷೇತ್ರಕ್ಕೆ ಆಯ್ಕೆ ಮಾಡುವಾಗ ಸಿಎಂ ಕುಮಾರಸ್ವಾಮಿ ಮತ್ತು ದೇವೇಗೌಡರು ಜೆಡಿಎಸ್ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು  ಆಯ್ಕೆ ಮಾಡಿದರಾದರೂ, ಆಯ್ಕೆಗೂ ಮುನ್ನ ದೋಸ್ತಿ ಪಕ್ಷ ಕಾಂಗ್ರೆಸ್ ಜೊತೆ ಈ ಕುರಿತು ಚರ್ಚೆ ಮಾಡಲೇ ಇಲ್ಲ. ಇದು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರ ಆಕ್ರೋಶಕ್ಕೆ ಕಾರಣವಾಗಿತ್ತು. ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಪರ್ಕಿಸದೇ ಏಕಾಏಕಿ ಅಭ್ಯರ್ಥಿ ಘೋಷಣೆ ಮಾಡಿದ್ದು ಕಾರ್ಯಕರ್ತರ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು.
ಅತಿಯಾದ ಆತ್ಮ ವಿಶ್ವಾಸ
ಇನ್ನು ಮಂಡ್ಯದಲ್ಲಿ 7 ಜನ ಜೆಡಿಎಸ್ ಶಾಸಕರಿದ್ದು, ಅಲ್ಲದೆ ಹಾಲಿ ಸಂಸದರೂ ಕೂಡ ಜೆಡಿಎಸ್ ನವರೇ ಅಗಿದ್ದರಿಂದ ನಿಖಿಲ್ ಕುಮಾರಸ್ವಾಮಿಗೆ ಮಂಡ್ಯ ಅತ್ಯಂತ ಸುರಕ್ಷಿತ ಕ್ಷೇತ್ರ ಎಂದೇ ಭಾವಿಸಲಾಗಿತ್ತು. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಸ್ಪರ ಕಚ್ಚಾಡಿಕೊಂಡಿದ್ದ ಕಾಂಗ್ರೆಸ್ ಜೆಡಿಎಸ್ ಪಕ್ಷದ ಕಾರ್ಯಕರ್ತರು ಒಲ್ಲದ ಮನಸ್ಸಿನಿಂದಲೇ ದೋಸ್ತಿ ಸರ್ಕಾರಕ್ಕೆ ಜೈ ಎಂದಿದ್ದರು. ಆದರೂ ಒಳಗಿಂದೊಳಗೇ ಪರಸ್ಪರರ ನಡುವೆ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿತ್ತು. ಅಲ್ಲದೆ ಮಂಡ್ಯ ಕಾಂಗ್ರೆಸ್ ಮುಖಂಡರನ್ನು ನಿರ್ಲಕ್ಷಿಸಿ ನಿಖಿಲ್ ಹೆಸರು ಘೋಷಣೆ ಮಾಡಿದ್ದು ಹಲವು ಮುಖಂಡರ ಅಸಮಾಧಾನಕ್ಕೂ ಕಾರಣವಾಗಿತ್ತು.
ಪರಸ್ಪರ ಕೈ ಜೋಡಿಸಿದ ಜೆಡಿಎಸ್ ವಿರೋಧಿಗಳು
ಇನ್ನು ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಕಣಕ್ಕಿಳಿಯುತ್ತಿದ್ದಂತೆಯೇ ಸಕ್ಕರೆ ನಾಡಲ್ಲಿ ಜೆಡಿಎಸ್ ವಿರೋಧಿಗಳ ಬಣ ಒಂದು ಗೂಡಿತ್ತು. ಜಿಲ್ಲೆಯಲ್ಲಿ ರೈತ ಸಂಘ ಸೇರಿದಂತೆ ಹಲವು ಸಂಘಟನೆಗಳು ಸುಮಲತಾ ಬೆಂಬಲಕ್ಕೆ ನಿಂತಿದ್ದವು. ಅಲ್ಲದೆ ಜೆಡಿಎಸ್ ವಿರೋಧಿಗಳ ಬಣಕೂಡ ದೊಡ್ಡ ಪ್ರಮಾಣದಲ್ಲೇ ಸುಮಲತಾ ಅವರ ಬೆಂಬಲಕ್ಕೆ ನಿಂತಿತ್ತು. ನಟ ಅಂಬರೀಶ್ ಅವರ ಆಪ್ತರು, ಅಭಿಮಾನಿಗಳು  ಸೇರಿದಂತೆ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಅಸ್ಥಿತ್ವದಲ್ಲಿಲ್ಲದ ಬಿಜೆಪಿ ಕೂಡ ಸುಮಲತಾ ಅವರಿಗೆ ಬೇಷರತ್ ಬೆಂಬಲ ಘೋಷಣೆ ಮಾಡಿತ್ತು.  ಅಲ್ಲದೆ ನಿಖಿಲ್ ಆಯ್ಕೆ ಬಳಿಕ ಒಳಗಿಂದೊಳಗೇ ಕುದಿಯುತ್ತಿದ್ದ ಮಂಡ್ಯ ಕಾಂಗ್ರೆಸ್ ನ ಕೆಲ ಪ್ರಭಾವಿ ನಾಯಕರೂ ಕೂಡ ಬಹಿರಂಗವಾಗಿಯೇ ಸುಮಲತಾ ಅಂಬರೀಷ್ ರೊಂದಿಗೆ ಗುರುತಿಸಿಕೊಳ್ಳುವುದರೊಂದಿಗೆ ಕಾಂಗ್ರೆಸ್ ಹೈಕಮಾಂಡ್ ಗೆ ಸೆಡ್ಡು ಹೊಡೆದಿದ್ದರು. ಮಂಡ್ಯ ಕಾಂಗ್ರೆಸ್ ನ ಪ್ರಮುಖ ಮುಖಂಡರೇ ಪರೋಕ್ಷವಾಗಿ ಸುಮಲತಾ ಬೆಂಬಲಕ್ಕೆ ನಿಂತಿದ್ದರು.
ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವ ಸುಮಲತಾ ದಿಟ್ಟ ನಿರ್ಧಾರ
ಇನ್ನು ಲೋಕಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಸುಮಲತಾ ಕೂಡ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈ ಸಂಬಂಧ ಸುಮಾಲತಾ ಅವರು ಕಾಂಗ್ರೆಸ್ ಕಚೇರಿಗೆ ಅಂತಿಮ ಕ್ಷಣದವರೆಗೂ ಅಲೆದಾಡಿದ್ದರು. ಸಿದ್ದರಾಮಯ್ಯ ಸೇರಿದಂತೆ ಅಂಬರೀಶ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ನಾಯಕರೂ ಕೂಡ ಸುಮಲತಾ ಅವರಿಗೆ ಟಿಕೆಟ್ ದೊರೆಯುವ ಕುರಿತು ವಿಶ್ವಾಸ ವ್ಯಕ್ತಪಡಿಸಿದ್ಗರು. ಆದರೆ ಅಂತಿಮ ಕ್ಷೇಣಗಲ್ಲಿ ಜೆಡಿಎಸ್ ನಾಯಕರ ಒತ್ತಡಕ್ಕೆ ಮಣಿದ ಕಾಂಗ್ರೆಸ್ ನಿಖಿಲ್ ಕುಮಾರ ಸ್ವಾಮಿ ಅವರನ್ನು ದೋಸ್ತಿ ಅಭ್ಯರ್ಥಿಯಾಗಿ ಘೋಷಣೆ ಮಾಡಿತು.
ನಿಖಿಲ್ ಬೇರೆಡೆಯಿಂದ ತಂದು ಮಂಡ್ಯದಲ್ಲಿ ನಿಲ್ಲಿಸಿದ್ದು
ಇನ್ನು ನಿಖಿಲ್ ಕುಮಾರಸ್ವಾಮಿ ಮೂಲತಃ ಮಂಡ್ಯ ಮೂಲದವರಲ್ಲ. ಮಂಡ್ಯ ಜೆಡಿಎಸ್ ಭದ್ರಕೋಟೆ ಎಂಬ ಒಂದೇ ಕಾರಣಕ್ಕಾಗಿ ನಿಖಿಲ್ ರನ್ನು ಮಂಡ್ಯದಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿತ್ತು, ಆದರೆ ಕಾರ್ಯಕರ್ತರಲ್ಲಿ ಮಂಡ್ಯದಲ್ಲಿ ಗೆಲ್ಲುವ ನಾಯರೇ ಇರಲಿಲ್ಲವೇ ಎಂಬ ಪ್ರಶ್ನೆ ಮೂಡಿತ್ತು. ದೇವೇಗೌಡರ ಮೊಮ್ಮಗ ಎಂಬ ಕಾರಣಕ್ಕೇ ಟಿಕೆಟ್ ನೀಡಲಾಯಿತು ಎಂಬ ಚರ್ಚೆ ಕೂಡ ಹರಿದಾಡಿತ್ತು. ಇದು ಮತದಾರರಿಗೆ ಬೇರೆ ರೀತಿಯ ಸಂದೇಶ ನೀಡಿದಂತಾಗಿತ್ತು.
ದರ್ಶನ್-ಯಶ್ ಜೊಡೆತ್ತುಗಳ ಅಬ್ಬರ
ನಟ ಅಂಬರೀಷ್ ನಿಧನದ ಬಳಿಕ ಸುಮಲತಾ ಅವರ ಬೆನ್ನಿಗೆ ನಿಂತಿದ್ದ ನಟ ದರ್ಶನ್ ಹಾಗೂ ಯಶ್ ಚುನಾವಣೆಗೆ ನಿಲ್ಲುವ ಅವರ ನಿರ್ಧಾರಕ್ಕೂ ಬೆನ್ನೆಲುಬಾಗಿ ನಿಂತಿದ್ದರು. ಸುಮಲತಾ ಪರ ಮಂಡ್ಯದಲ್ಲಿ ಅಬ್ಬರದ ಪ್ರಚಾರ ನಡೆಸಿದ್ದ ದರ್ಶನ್ ಮತ್ತು ಯಶ್, ತಮ್ಮ ವಿರುದ್ಧ ಕೇಳಿ ಬಂದ ಎಲ್ಲ ಆರೋಪಗಳನ್ನೂ ಶಾಂತವಾಗಿಯೇ ಎದುರಿಸಿದ್ದರು. ಜೆಡಿಎಸ್ ನಾಯಕರು ನಟರಿಗೆ ಐಟಿ ದಾಳಿಯ ಬೆದರಿಕೆ ಸೇರಿದಂತೆ ನಾನಾ ರೀತಿಯ ಟೀಕೆ ಟಿಪ್ಪಣಿಗಳನ್ನು ಮಾಡಿದ್ದರೂ ನಟರು ಮಾತ್ರ ಸೌಮ್ಯವಾಗಿಯೇ ಅದನ್ನು ಎದುರಿಸಿದ್ದರು. ಸ್ವತಃ ಕುಮಾರಸ್ವಾಮಿ ಅವರೇ ದರ್ಶನ್ ಮತ್ತು ಯಶ್ ರನ್ನು ಕಳ್ಳೆತ್ತುಗಳು ಎಂದು ಟೀಕಿಸಿದ್ದು, ಡಿ ಬಾಸ್ ಟೀಕೆಗಳು ಕೂಡ ಭಾರಿ ಸುದ್ದಿಗೆ ಗ್ರಾಸವಾಗಿತ್ತು. ಇಷ್ಟೆಲ್ಲಾ ಟಿಕೆಗಳ ನಡುವೆಯೇ ತಮ್ಮ ಹಠ ಬಿಡದ ನಟರು ಮಂಡ್ಯ ಪ್ರತೀ ಹಳ್ಳಿಗಳಿಗೂ ತೆರಳಿ ಮತ ಕೇಳಿದ್ದರು. ಅಲ್ಲದೆ ಸುಮಲತಾ ಅವರ ಚಿನ್ಹೆ ಕುರಿತು ನಟರು ಮಾಡಿದ್ದ ಪ್ರಚಾರ ಕೂಡ ಗಮನ ಸೆಳೆದಿತ್ತು.
ಸುಮಲತಾ ವಿರುದ್ಧ ಜೆಡಿಎಸ್ ನಾಯಕರ ಎಲ್ಲ ಮೀರಿದ ವಾಗ್ದಾಳಿ
ಸುಮಲತಾ ಅಂಬರೀಷ್ ನಾಮಪತ್ರ ಸಲ್ಲಿಕೆ ಮಾಡಿದ ಬೆನ್ನಲ್ಲೇ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ ಜೆಡಿಎಸ್ ನಾಯಕರು, ಪರೋಕ್ಷವಾಗಿ ಮತದಾರರ ಆಕ್ರೋಶಕ್ಕೆ ಕಾರಣರಾಗಿದ್ದರು. ಚುನಾವಣೆ ಆರಂಭದಲ್ಲೇ ಸಚಿವ ಎಚ್ ರೇವಣ್ಣ ನೀಡಿದ್ದ ಹೇಳಿಕೆ ಭಾರಿ ವಿವಾದ ಸೃಷ್ಟಿಸಿತ್ತು, ಗಂಡ ಸತ್ತ ಬಳಿಕ ಚುನಾವಣೆಗೆ ಹೆಣ್ಣು ನಿಲ್ಲಬಾರದಾ ಎಂಬ ಬೆಂಬಲ ಸುಮಲತಾ ಅವರಿಗೆ ವ್ಯಕ್ತವಾಗಿತ್ತು. ರೇವಣ್ಣ ಅವರ ಹೇಳಿಕೆಗೆ ಅವರದೇ ಪಕ್ಷದ ನಾಯಕರಿಂದಲೇ ವಿರೋಧ ವ್ಯಕ್ತವಾಗಿತ್ತು. ಆ ಬಳಿಕ ಶಿವರಾಮೇಗೌಡ ಅವರು ನೀಡಿದ್ದ ಮಾಯಾಂಗನೆ, ಐಟಿ ದಾಳಿ ಬೆದರಿಕೆ, ಸಿನಿಮಾ ನಟರು, ವಿದೇಶಿ ಪ್ರವಾಸಿಗರು. ಸಿಂಗಾಪುರಕ್ಕೆ ಹೋಗ್ತಾರೆ, ಕೆಲಸ ಮಾಡಲ್ಲ ಎಂಬ ಹೇಳಿಕೆಗಳೂ ಕೂಡ ಮಾಧ್ಯಮಗಳಲ್ಲಿ ವ್ಯಾಪಕ ವೈರಲ್ ಆಗಿತ್ತು. ಇದು ಸುಮಲತಾ ಪರ ಜಿಲ್ಲೆಯಲ್ಲಿ ಅನುಕಂಪದ ಅಲೆ ಸೃಷ್ಟಿಯಾಗಲು ಕಾರಣವಾಗಿತ್ತು. 
ಸ್ವಾಭಿಮಾನ ವಿಚಾರ
ಎಲ್ಲಕ್ಕಿಂತ  ಮುಖ್ಯವಾಗಿ ಜೆಡಿಎಸ್ ನಾಯಕರ ಟೀಕೆಗಳ ನಡುವೆಯೇ ಜಿಲ್ಲೆಯಲ್ಲಿ ಸುಮಲತಾ ಸ್ಪರ್ಧೆ ಮಂಡ್ಯ ಜಿಲ್ಲೆಯ ಸ್ವಾಭಿಮಾನದ ವಿಚಾರವಾಗಿ ಮಾರ್ಪಟ್ಟಿತ್ತು. ಪ್ರಚಾರದ ಅಂತಿಮ ಸಮಾವೇಶದಲ್ಲೂ ಇದೇ ಸ್ವಾಭಿಮಾನವನ್ನು ಮುಂದಿಟ್ಟುಕೊಂಡು ಸುಮಲತಾ ಅವರು ತಮ್ಮ ಸೆರಗನ್ನು ಒಡ್ಡಿ ಮಂಡ್ಯ ಮತದಾರರ ಮತಭಿಕ್ಷೆ ಕೇಳಿದ್ದರು.
ನಿರ್ಣಾಯಕವಾದ ಮಹಿಳಾ ಮತದಾರರ ಮತಗಳು
ಇನ್ನು ಮಂಡ್ಯದಲ್ಲಿ ನಿರ್ಣಾಯಕವಾಗಿದ್ದು ಮಹಿಳಾ ಮತದಾರರು. ಸುಮಲತಾ ತಮ್ಮ ಹಿಂದಿನ ಭಾಷಣಗಳಲ್ಲಿ ತಾವೊಬ್ಬ ಹೆಣ್ಣು ಎಂಬ ಕಾರಣಕ್ಕೇ ತಮ್ಮನ್ನು ಟೀಕಿಸಲಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದರು. ಇದೂ ಕೂಡ ಮಹಿಳಾ ಮತದಾರರ ಮೇಲೆ ಪರಿಣಾಮ ಬೀರಿದೆ. ಅಲ್ಲದೆ ಅಂಬಿ ಸಾವಿನ ಬಳಿಕ ಮಂಡ್ಯದಲ್ಲಿ ಸುಮಲತಾ ಅವರ ಪರ ಅನುಕಂಪದ ಅಲೆ ಸೃಷ್ಟಿಯಾಗಿತ್ತು, ಇದನ್ನು ಸರಿಯಾಗಿ ಅರ್ಥೈಸಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲವಾಗಿತ್ತು. 
ಕೈ ಕೊಟ್ಟ ಸುಮಲತಾ ಹೆಸರಿನ ತಂತ್ರಗಾರಿಕೆ
ಇನ್ನು ಈ ಚುನಾವಣೆಯಲ್ಲಿ ಸುಮಲತಾ ಅಂಬರೀಷ್ ಅವರಿಗೆ ಎದುರಾಗಿ ಮೂವರು ಸುಮಲತಾ ಎಂಬ ಹೆಸರಿನ ಅಭ್ಯರ್ಥಿಗಳೂ ಕೂಡ ಸ್ಪರ್ಧೆ ಮಾಡಿದ್ದು ವಿಶೇಷ. ಇದು ಮಂಡ್ಯದಲ್ಲಿ ಹೆಸರಿನ ಗೊಂದಲಕ್ಕೆ ಕಾರಣವಾಗಿತ್ತು. ಆದರೂ ಸುಮಲತಾ ಅವರು, ದರ್ಶನ್ ಮತ್ತು ಯಶ್ ಸುಮಲತಾ ಅವರ ಚಿಹ್ನೆ ಕುರಿತು ಮತದಾರರನ್ನು ಜಾಗೃತಿ ಅಭಿಯಾನ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com