ನಾನು ಸಚಿವ ಸ್ಥಾನ ಕೇಳುವುದಿಲ್ಲ, ಅವರಾಗಿಯೇ ಕೊಟ್ಟರೆ ನಿಭಾಯಿಸುತ್ತೇನೆ: ಉಮೇಶ್ ಜಾಧವ್

ಕಾಂಗ್ರೆಸ್ಸಿನ ಸೋಲಲ್ಲದ ಸರದಾರ ಹಾಗೂ ಲೋಕಸಭೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ಸಿನ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೋಲಿನ ರುಚಿ ತೋರಿಸಿರುವ ...
ಉಮೇಶ್ ಜಾಧವ್
ಉಮೇಶ್ ಜಾಧವ್
ಬೆಂಗಳೂರು: ಕಾಂಗ್ರೆಸ್ಸಿನ ಸೋಲಲ್ಲದ ಸರದಾರ ಹಾಗೂ ಲೋಕಸಭೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ಸಿನ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೋಲಿನ ರುಚಿ ತೋರಿಸಿರುವ ಬಿಜೆಪಿಯ ಡಾ.ಉಮೇಶ್ ಜಾಧವ್ ಅವರಿಗೆ ಕೇಂದ್ರದ ನೂತನ ಸರ್ಕಾರದಲ್ಲಿ ಸಚಿವ ಸ್ಥಾನ ಲಭಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.  
ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ತೊರೆದು ಬಂದಿದ್ದ ಜಾಧವ್ ಅವರು ರಾಜಕೀಯ ಭವಿಷ್ಯವನ್ನೇ ಪಣಕ್ಕಿಟ್ಟು ಕಲಬುರಗಿ ಮೀಸಲು ಕ್ಷೇತ್ರದಲ್ಲಿ ಖರ್ಗೆ ವಿರುದ್ಧ ಸಮರ ನಡೆಸಿ ಗೆದ್ದಿದ್ದಾರೆ.
ವೃತ್ತಿಯಿಂದ ವೈದ್ಯರಾಗಿ ರುವ ಜಾಧವ್‌ರನ್ನು ಖರ್ಗೆ ವಿರುದ್ಧ ಕಣಕ್ಕಿಳಿಸಬೇಕೆಂಬ ನಿರ್ಧಾರ ಕೈಗೊಂಡಿದ್ದು ಕಳೆದ ಆಗಸ್ಟ್-ಸಪ್ಟೆಂಬರ್ ತಿಂಗಳಲ್ಲಿ. ಆ ವೇಳೆ ನಡೆದ ಮಾತುಕತೆಯಲ್ಲಿ ಖರ್ಗೆ ವಿರುದ್ಧ ಜಯಗಳಿಸಿದಲ್ಲಿ ಸಚಿವ ಸ್ಥಾನ ಸಿಗುವ ಭರವಸೆ ನೀಡಲಾಗಿತ್ತೆಂಬ ಮಾಹಿತಿ ಗೊತ್ತಾಗಿದೆ.
ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಇದ್ದರು
ಈ ಸಂಬಂಧ ಪ್ರತಿಕ್ರಿಯಿಸಿರುವ ಉಮೇಶ್ ಜಾಧವ್ ಕೇಂದ್ರದಲ್ಲಿ ಸಚಿವ ಸ್ಥಾನವನ್ನು ನಾನಾಗಿಯೇ ಅಪೇಕ್ಷಿಸುವುದಿಲ್ಲ, ಅವರಾಗಿಯೇ ನನಗೆ ಸಂಪುಟದಲ್ಲಿ ಸ್ಥಾನ ನೀಡಿದರೇ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಹೇಳಿದ್ದಾರೆ. 
ನಾನು ಮೊದಲಿನಿಂದಲೂ ಮೈತ್ರಿ ಸರ್ಕಾರವನ್ನು ವಿರೋಧಿಸುತ್ತಿದ್ದೆ. ನನ್ನ ಕ್ಷೇತ್ರಕ್ಕೆ ಬರಬೇಕಿದ್ದ ಎಲ್ಲ ಅನುದಾನವನ್ನೂ ಸಂಪೂರ್ಣ ನಿಲ್ಲಿಸಲಾಗಿತ್ತು. ಹಾಗಾಗಿ ನಾನು ಕಾಂಗ್ರೆಸ್ ಬಿಟ್ಟು ಬಂದು ಬಿಜೆಪಿಯಿಂದ ಸಂಸದನಾಗಿದ್ದೇನೆ ಎಂದು ಹೇಳಿದರು.
ನಾವು ಮೈತ್ರಿ ಸರ್ಕಾರವನ್ನು ಕೆಡವುವ ಅಗತ್ಯವಿಲ್ಲ. ಅದಾಗಿಯೇ ಬೀಳುತ್ತದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದು ಸಂಜೆಯೊಳಗಾಗಿ ಸ್ವಯಂ ಪ್ರೇರಿತರಾಗಿ ತಮ್ಮ ಹುದ್ದೆಗೆ ರಾಜೀನಾಮೆ ಕೊಡಬೇಕು. ಇದು ಅವರಿಗೆ ಒಳ್ಳೆಯದು. ಇದರಿಂದ ರಾಜ್ಯದ ಜನರಿಗೆ ಉತ್ತಮ ಸಂದೇಶ ಹೋಗುತ್ತದೆ ಎಂದು ಹೇಳಿದರು.ಕಾಂಗ್ರೆಸ್ ನಿಂದ ನಮ್ಮ ಹಲವಾರು ಸ್ನೇಹಿತರು ಬಿಜೆಪಿಗೆ ಬರುತ್ತಾರೆ ಎಂದು ಅವರು ಇದೇ ವೇಳೆ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com