ಲೋಕಸಭೆಯ ಸ್ಥಾನ ಪರಿಚಯ

ಲೋಕಸಭೆಯ ಸ್ಥಾನ ಪರಿಚಯ
Updated on

ದೇಶಕ್ಕೆ 1947ರ ಆಗಸ್ಟ್‌ನಲ್ಲಿ ಸ್ವಾತಂತ್ರ್ಯ ಬಂದು ಜವಾಹರಲಾಲ್ ನೆಹರು ಪ್ರಥಮ ಪ್ರಧಾನಮಂತ್ರಿಯಾದರೂ, ಪ್ರಥಮ ಸಾರ್ವತ್ರಿಕ ಚುನಾವಣೆ ನಡೆದ್ದದ್ದು ಐದು ವರ್ಷಗಳ ನಂತರ. 1952ರಲ್ಲಿ ಲೋಕಸಭೆಗೆ ಪ್ರಥಮ ಚುನಾವಣೆ ನಡೆಯಿತು. ಪ್ರಥಮ ಲೋಕಸಭೆ 1952ರ ಏಪ್ರಿಲ್ 17ರಂದು ಅಸ್ತಿತ್ವಕ್ಕೆ ಬಂದು, ಮೇ 13ರಂದು ಪ್ರಥಮ ಅಧಿವೇಶನ ನಡೆಯಿತು. ನಮ್ಮ ಸಂವಿಧಾನದ ಪ್ರಕಾರ ಲೋಕಸಭೆಯ ಗರಿಷ್ಠ ಸ್ಥಾನ 552. ಪ್ರಥಮ ಚುನಾವಣೆಯಲ್ಲಿ 489 ಸ್ಥಾನಗಳು ಮಾತ್ರ ಇದ್ದವು. ಪ್ರಸ್ತುತ 543 ಸ್ಥಾನಗಳಿವೆ. ಜತೆಗೆ ರಾಷ್ಟ್ರಪತಿಯವರು ಇಬ್ಬರು ಆಂಗ್ಲೊ-ಇಂಡಿಯನ್‌ರನ್ನು ನಾಮನಿರ್ದೇಶನ ಮಾಡಬಹುದು. ಲೋಕಸಭೆ ಚುನಾವಣೆಗೆ ಸದಸ್ಯರಾಗಲು 25 ವರ್ಷ ತುಂಬಿರಬೇಕು. ಲೋಕಸಭೆಯ ಅವಧಿ ಕಲಾಪ ಆರಂಭವಾದಂದಿನಿಂದ ಐದು ವರ್ಷಗಳು. ತುರ್ತು ಸಂದರ್ಭದಲ್ಲಿ ಆರು ತಿಂಗಳಂತೆ ಎರಡು ಬಾರಿ ಅಂದರೆ ಗರಿಷ್ಠ ಒಂದು ವರ್ಷ ಮಾತ್ರ ಲೋಕಸಭೆ ಅವಧಿಯನ್ನು ವಿಸ್ತರಿಸಬಹುದು.
ಲೋಕಸಭೆಯಲ್ಲಿ ಸಾಮಾನ್ಯವಾಗಿ ವರ್ಷದಲ್ಲಿ ಮೂರು ಅಧಿವೇಶನಗಳು ನಡೆಯುತ್ತವೆ. ಫೆಬ್ರವರಿ-ಮೇ ಅವಧಿಯಲ್ಲಿ ಬಜೆಟ್ ಅಧಿವೇಶನ, ಜುಲೈ-ಆಗಸ್ಟ್‌ನಲ್ಲಿ ಮುಂಗಾರು ಅಧಿವೇಶನ, ನವೆಂಬರ್-ಡಿಸೆಂಬರ್‌ನಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತವೆ. ಲೋಕಸಭೆಯ ಸ್ಪೀಕರ್ ಅವರಿಗೆ ಸಂವಿಧಾನದಂತೆ ವಿಸ್ತಾರವಾದ ಅಧಿಕಾರ ನೀಡಲಾಗಿದೆ. ಸದನ, ಸಮಿತಿ ಹಾಗೂ ಸದಸ್ಯರ ಹಕ್ಕುಗಳಿಗೆ ಸ್ಪೀಕರ್ ಬೆನ್ನೆಲುಬು. ಸದನದಲ್ಲಿ ಸ್ಪೀಕರ್‌ಗೇ ಪರಮಾಧಿಕಾರ. ಎಲ್ಲ ಸದನ ಸಮಿತಿಗಳು ಅವರ ನಿರ್ದೇಶನದಂತೆ ನಡೆಯಬೇಕು. ಅದರ ಅಧ್ಯಕ್ಷರನ್ನೂ ಸ್ಪೀಕರ್ ಅವರೇ ನಾಮನಿರ್ದೇಶಿಸುತ್ತಾರೆ. ಹಣಕಾಸು ವಿಧೇಯಕಗಳಿಗೆ ಸಂಬಂಧಿಸಿದಂತೆ ನಿರ್ಧಾರತೆಗೆದುಕೊಳ್ಳುವ ಅಧಿಕಾರವಿದ್ದು, ಯಾವುದೇ ನಿರ್ಧಾರ ಕೈಗೊಳ್ಳುವಲ್ಲಿ ಉಭಯ ಸದನಗಳಲ್ಲಿ ಗೊಂದಲವಾದರೆ ಲೋಕಸಭೆ-ರಾಜ್ಯಸಭೆಯ ಜಂಟಿ ಸದನ ಇವರ ಅಧ್ಯಕ್ಷತೆಯಲ್ಲೇ ನಡೆದು ಪರಿಹಾರ ಕಂಡುಕೊಳ್ಳಲಾಗುತ್ತದೆ.
ಪ್ರಧಾನ ಮಂತ್ರಿಯವರು ಲೋಕಸಭೆಯ ಸಭಾನಾಯಕರಾಗಿರುತ್ತಾರೆ. ಆದರೆ, ಪ್ರಧಾನಮಂತ್ರಿ ಲೋಕಸಭೆಯ ಸದಸ್ಯರಾಗಿರದಿದ್ದ ಸಂದರ್ಭದಲ್ಲಿ ಸಂಸದೀಯ ವ್ಯವಹಾರಗಳ ಸಚಿವರು ಸಭಾನಾಯಕರಾಗುತ್ತಾರೆ. ಹಿರಿಯ ಸದಸ್ಯರನ್ನು ರಾಜ್ಯಸಭೆಯ ಸಭಾನಾಯಕರಾಗಿ ಪ್ರಧಾನಮಂತ್ರಿ ನೇಮಕ ಮಾಡುತ್ತಾರೆ.
1969ರ ಡಿಸೆಂಬರ್‌ನಿಂದ 1970ರ ಡಿಸೆಂಬರ್ ನಡುವಿನ ಕನಿಷ್ಠ ಅವಧಿ ಹೊರತುಪಡಿಸಿದರೆ  ಲೋಕಸಭೆಯಲ್ಲಿ 1977ರವರೆಗೂ ಪ್ರತಿಪಕ್ಷ ನಾಯಕ ಎಂದು ಲೋಕಸಭೆಯಲ್ಲಿ ಮಾನ್ಯತೆ ಇರಲಿಲ್ಲ. ಸ್ವಾತಂತ್ರ್ಯ ನಂತರ 1969ರಲ್ಲಿ ಪ್ರಥಮ ಬಾರಿಗೆ ಪ್ರತಿಪಕ್ಷ ಎಂದು ಗುರುತಿಸಲಾಯಿತು. ನಂತರ 1977ರಿಂದ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಮಾನ್ಯತೆ ದೊರೆಯಿತು.
ಕಲಾಪಗಳ ವಿಷಯಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಪಕ್ಷಗಳ ಆಧಾರದಲ್ಲಿ ಆಯಾ ಪಕ್ಷ ಸಚೇತಕ (ವಿಪ್)ರನ್ನು ನೇಮಿಸಿಕೊಳ್ಳುತ್ತಾರೆ. ಲೋಕಸಭೆಯಲ್ಲಿ ಸಂಸದೀಯ ವ್ಯವಹಾರಗಳ ಖಾತೆ ಸಚಿವರೇ ಸರ್ಕಾರದ ಮುಖ್ಯ ಸಚೇತಕರಾಗಿರುತ್ತಾರೆ.   ರಾಜ್ಯಸಭೆಯಲ್ಲಿ ಇದೇ ಖಾತೆಯ ರಾಜ್ಯ ಸಚಿವರು ಸರ್ಕಾರದ ಮುಖ್ಯ ಸಚೇತಕರಾಗಿರುತ್ತಾರೆ.

- ಕೆರೆ ಮಂಜು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com