ಮೋದಕ ಪ್ರಿಯನಿಗೆ ವಿವಿಧ ನ್ಯೆವೇದ್ಯಗಳು

ಭಾದ್ರಪದ ಶುಕ್ಲ ಪಕ್ಷದ ಚೌತಿಯಂದು ಆಚರಿಸಲ್ಪಡುವ ಗಣೇಶ ಚತುರ್ಥಿಯಂದು, ಗಣಪತಿಗೆ, ನ್ಯೆವೇದ್ಯ ರೂಪದಲ್ಲಿ ಸಮರ್ಪಿಸಬಹುದಾದ ಕೆಲವೊಂದು ಪಾಕವಿಧಾನಗಳು ಇಲ್ಲಿವೆ. 
ಗಣೇಶ ಚತುರ್ಥಿಗೆ ವಿಶೇಷ ನೈವೇದ್ಯಗಳು
ಗಣೇಶ ಚತುರ್ಥಿಗೆ ವಿಶೇಷ ನೈವೇದ್ಯಗಳು

ಲೇಖಕಿ: ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು

ಭಾದ್ರಪದ ಶುಕ್ಲ ಪಕ್ಷದ ಚೌತಿಯಂದು ಆಚರಿಸಲ್ಪಡುವ ಗಣೇಶ ಚತುರ್ಥಿಯಂದು, ಗಣಪತಿಗೆ, ನ್ಯೆವೇದ್ಯ ರೂಪದಲ್ಲಿ ಸಮರ್ಪಿಸಬಹುದಾದ ಕೆಲವೊಂದು ಪಾಕವಿಧಾನಗಳು ಇಲ್ಲಿವೆ.

ಭತ್ತದ ಅರಳಿನ ಪಂಚಕಜ್ಜಾಯ

ಪದಾರ್ಥ:
ಭತ್ತದ ಅರಳು-2 ಕಪ್ /ತೆಂಗಿನಕಾಯಿ ತುರಿ-1 ಕಪ್ /ಜೇನು ತುಪ್ಪ-3 ಚಮಚ 
ಏಲಕ್ಕಿ ಪುಡಿ-1/2 ಚಮಚ /ಲವಂಗದ ಪುಡಿ-1/2 ಚಮಚ /ಜಾಕಾಯಿ ಪುಡಿ-1/4 ಚಮಚ 
ಬೆಲ್ಲದ ತುರಿ-1/2 ಕಪ್ /ಹಾಲು-1/2 ಕಪ್ /ತುಪ್ಪದಲ್ಲಿ ಹುರಿದ ದ್ರಾಕ್ಷಿ-7-8 
ತುಪ್ಪದಲ್ಲಿ ಹುರಿದ ಗೋಡಂಬಿ ಪುಡಿ-೨ ಚಮಚ /ತುಪ್ಪ-2 ಚಮಚ /ಜೇನುತುಪ್ಪ-3 ಚಮಚ
ಕತ್ತರಿಸಿದ ಬಾಳೆ ಹಣ್ಣಿನ ತುಂಡುಗಳು-1/4 ಕಪ್ 
ವಿಧಾನ:
ಬಾಣಲೆಯಲ್ಲಿ, ತುಪ್ಪ ಕಾಯಿಸಿ, ಭತ್ತದ ಅರಳನ್ನು ಸ್ವಲ್ಪ ಬಿಸಿ ಮಾಡಿ, ತೆಂಗಿನಕಾಯಿ ತುರಿ 
ಹಾಕಿ ಚನ್ನಾಗಿ ಕೈಯಾಡಿ.
ತಣಿದ ಮೇಲೆ, ಬೆಲ್ಲದ ತುರಿ, ಏಲಕ್ಕಿ ಪುಡಿ, ಲವಂಗದ ಪುಡಿ, ಜಾಕಾಯಿ ಪುಡಿ, 
ಹುರಿದ ದ್ರಾಕ್ಷಿ, ಗೋಡಂಬಿ, ಬಾಳೆ ಹಣ್ಣು, ಜೇನುತುಪ್ಪ, ಹಾಲು, ಸ್ವಲ್ಪ ತುಪ್ಪ ಬೆರೆಸಿ, 
ಚನ್ನಾಗಿ ಕಲಕಿದರೆ, ಸಿಹಿ ಭತ್ತದ ಅರಳಿನ ಪಂಚಕಜ್ಜಾಯ ರೆಡಿ.

ಹೆಸರುಕಾಳಿನ ಕೋಸಂಬರಿ

ಪದಾರ್ಥ: 
ಮೊಳಕೆ ತರಿಸಿದ ಹೆಸರುಕಾಳು-2 ಕಪ್ /ದಾಳಿಂಬೆ ಕಾಳುಗಳು-1 ಕಪ್
ಕತ್ತರಿಸಿದ ಟೊಮೆಟೊ-1/2 ಕಪ್ /ಕತ್ತರಿಸಿದ ಹಸಿಮೆಣಸಿಕಾಯಿ-4-5
ಉಪ್ಪು-ರುಚಿಗೆ ತಕ್ಕಷ್ಟು /ಸಕ್ಕರೆ-1/2 ಚಮಚ /ತೆಂಗಿನಕಾಯಿ ತುರಿ-1/2 ಕಪ್
ಕತ್ತರಿಸಿದ ಕೊತ್ತಂಬರಿ ಸೊಪ್ಪು-4 ಚಮಚ /ಎಣ್ಣೆ-4 ಚಮಚ
ಸಾಸಿವೆ-1 ಚಮಚ /ಅರಸಿನ-1/2 ಚಮಚ /ಇಂಗು-1/4 ಚಮಚ
ವಿಧಾನ:
ಮೊಳಕೆ ತರಿಸಿದ ಹೆಸರುಕಾಳು, ದಾಳಿಂಬೆ ಬೀಜಗಳು, ಟೊಮೆಟೊ, ಸಕ್ಕರೆ, ಉಪ್ಪುಗಳನ್ನು
ಸೇರಿಸಿ ಚನ್ನಾಗಿ ಕಲಕಿಡಿ. 
ಬಾಣಲೆಯಲ್ಲಿ ಎಣ್ಣೆ ಕಾಯಲಿರಿಸಿ, ಸಾಸಿವೆ-ಅರಸಿನ-ಇಂಗಿನ ಒಗ್ಗರಣೆ ಮಾಡಿ, 
ಹಸಿಮೆಣಸಿನಕಾಯಿ ಸೇರಿಸಿ ಬಾಡಿಸಿ. 
ಒಗ್ಗರಣೆಯ ಮಿಶ್ರಣಕ್ಕೆ, ಹೆಸರುಕಾಳಿನ ಮಿಶ್ರಣ ಸೇರಿಸಿ ಕಲಕಿ ಒಲೆಯಿಂದ ಕೆಳಗಿರಿಸಿ.
ಈ ಮಿಶ್ರಣಕ್ಕೆ, ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ.
ರುಚಿಯಾದ, ಆರೋಗ್ಯಕರವಾದ ಹೆಸರುಕಾಳಿನ ಕೋಸಂಬರಿ ರೆಡಿ.

ಮೋದಕ

ಪದಾರ್ಥ:
ಗೋದಿ ಹಿಟ್ಟು-1 ಕಪ್ /ಮ್ಯೈದಾ ಹಿಟ್ಟು-1/2 ಕಪ್ /ಉಪ್ಪು-1/2 ಚಮಚ /ಎಣ್ಣೆ-3 ಕಪ್ 
ಹೂರಣ
ಸಕ್ಕರೆ ಪುಡಿ-1 ಕಪ್ /ಒಣಕೊಬ್ಬರಿ ತುರಿ-1/2 ಕಪ್ /ಏಲಕ್ಕಿ ಪುಡಿ-1 ಚಮಚ 
ಗಸಗಸೆ ಪುಡಿ-2 ಚಮಚ /ಎಳ್ಳಿನ ಪುಡಿ-1 ಚಮಚ /ಹುರಿಗಡಲೆ ಪುಡಿ-3 ಚಮಚ                                         
ವಿಧಾನ:
ಸಕ್ಕರೆ, ಒಣಕೊಬ್ಬರಿ ತುರಿ, ಏಲಕ್ಕಿ ಪುಡಿ, ಎಳ್ಳು ಪುಡಿ, ಗಸಗಸೆ ಪುಡಿ, ಹುರಿಗಡಲೆ ಪುಡಿ 
ಸೇರಿಸಿ ಹೂರಣ ತಯಾರಿಸಿಡಿ. 
ಗೋದಿ ಹಿಟ್ಟು, ಮ್ಯೆದಾ ಹಿಟ್ಟು, ಉಪ್ಪು, ಎರಡು ಚಮಚ ಎಣ್ಣೆ ಸೇರಿಸಿ ಪೂರಿ ಹದಕ್ಕೆ
ಗಟ್ಟ್ಟಿಯಾಗಿ ಕಲಸಿಡಿ. 
ಹಿಟ್ಟಿನ ಮಿಶ್ರಣದಿಂದ ಸ್ವಲ್ಪ ಹಿಟ್ಟು ತೆಗೆದುಕೊಂಡು, ಕ್ಯೆಯಲ್ಲಿ ತಟ್ಟಿ, ಸ್ವಲ್ಪ ಹೂರಣ ತುಂಬಿಸಿ.
ಮೋದಕದ ಆಕಾರದಲ್ಲಿ ಒತ್ತಿ ಕಾಯಿಸಿದ ಎಣ್ಣೆಯಲ್ಲಿ ಕರಿದರೆ ಗಣಪತಿಗೆ ಅತಿ ಪ್ರಿಯವಾದ
ರುಚಿಯಾದ ಮೋದಕ ರೆಡಿ.  
(ಅಚ್ಚು ಉಪಯೋಗಿಸಿ ಮೋದಕ ತಯಾರಿಸಬಹುದು)

ಅವರೆಕಾಳು-ತೆಂಗಿನತುರಿ ಬಾತ್

ಪದಾರ್ಥ:
ಅವರೆಕಾಳು-1 ಕಪ್ /ಅಕ್ಕಿ-2 ಕಪ್ /ತೆಂಗಿನಕಾಯಿ ತುರಿ-1 ಕಪ್
ಕತ್ತರಿಸಿದ ಹಸಿಮೆಣಸಿನಕಾಯಿ-5-6ಂಡುಗಳು /ನಿಂಬೆರಸ-1 ಚಮಚ
ಉಪ್ಪು-ರುಚಿಗೆ ತಕ್ಕಷ್ಟು /ಸಕ್ಕರೆ-1/2 ಚಮಚ
ಒಗ್ಗರಣೆಗೆ-
ತುಪ್ಪ-4 ಚಮಚ /ಸಾಸಿವೆ-1 ಚಮಚ /ಇಂಗು-1/4 ಚಮಚ
ಕಡಲೇಬೇಳೆ-2 ಚಮಚ /ಉದ್ದಿನಬೇಳೆ-1 ಚಮಚ /ಕರಿಬೇವಿನ ಎಲೆಗಳು-7-8
ವಿಧಾನ:
ಅಕ್ಕಿಯನ್ನು ಬೇಯಸಿ, ಉದುರುದುರಾಗಿ ಅನ್ನ ಮಾಡಿರಿಸಿ.
ಅವರೆಕಾಳುಗಳನ್ನು ಸ್ವಲ್ಪ ನೀರು ಹಾಕಿ ಬೇಯಿಸಿ. 
ಬಾಣಲೆಯಲ್ಲಿ ತುಪ್ಪ ಕಾಯಲಿರಿಸಿ, ಸಾಸಿವೆ-ಇಂಗು-ಕಡಲೇಬೇಳೆ-ಉದ್ದಿನಬೇಳೆ ಹಾಕಿ
ಒಗ್ಗರಣೆ ಮಾಡಿ.
ಒಗ್ಗರಣೆಗೆ ಹಸಿಮೆಣಸಿನಕಾಯಿ, ಕರಿಬೇವಿನ ಎಲೆಗಳು ಹಾಗೂ ಬೇಯಿಸಿರಿದ 
ಅವರೆಕಾಳುಗಳನ್ನು ಹಾಕಿ ಬಾಡಿಸಿ, ಬೇಯಿಸಿದ ಅನ್ನಹಾಕಿ ಕೈಯಾಡಿ. 
ಈ ಮಿಶ್ರಣಕ್ಕೆ ತೆಂಗಿನಕಾಯಿ ತುರಿ, ನಿಂಬೆರಸ, ಉಪ್ಪು, ಸಕ್ಕರೆ ಹಾಕಿ ಮಗುಚಿ,
ಒಲೆಯಿಂದ ಕೆಳಗಿರಿಸಿ.
ರುಚಿಯಾದ ಅವರೆಕಾಳು-ತೆಂಗಿನ ತುರಿ ಬಾತ್ ತಿನ್ನಲು ಬಲು ರುಚಿ. 

ಸಜ್ಜಪ್ಪ

ಪದಾರ್ಥ:
ಹುರಿದ ಚಿರೋಟಿ ರವೆ-1 ಕಪ್ /ಮೈದಾ ಹಿಟ್ಟು-2 ಕಪ್ /ಎಣ್ಣೆ-1/4 ಕಪ್
ಹೂರಣ-
ಬೆಲ್ಲ-1 ಕಪ್ /ತುಪ್ಪ-1 ಕಪ್ /ಚಿರೋಟಿ ರವೆ-1/2 ಕಪ್ /ತೆಂಗಿನಕಾಯಿ ತುರಿ-1 ಕಪ್ 
ಏಲಕ್ಕಿ ಪುಡಿ-1/2 ಚಮಚ /ಗೋಡಂಬಿ ಪುಡಿ-3 ಚಮಚ /ಜಾಕಾಯಿ ಪುಡಿ-1/4 ಚಮಚ
ವಿಧಾನ:
ಮೈದಾ ಹಿಟ್ಟು, ಚಿರೋಟಿ ರವೆಗಳನ್ನು ಸೇರಿಸಿ ಚಿಟಿಕೆ ಅರಸಿನ, ಎಣ್ಣೆ, ಉಪ್ಪು ಸೇರಿಸಿ ನೀರಿನೊಂದಿಗೆ 
ಚಪಾತಿ ಹಿಟ್ಟಿಗಿಂತ ತೆಳುವಾಗಿ ಕಲಸಿ ಮೂರು ಗಂಟೆ ನೆನೆಯಲಿರಿಸಿ ಕಣಕ ತಯಾರಿಸಿ. 
ಬಾಣಲೆಯಲ್ಲಿ ತುಪ್ಪ ಕಾಯಲಿರಿಸಿ, ಬೆಲ್ಲ ಕರಗಿಸಿ. ಬೆಲ್ಲ ಕರಗಿದ ನಂತರ ಚಿರೋಟಿ ರವೆ, ತೆಂಗಿನಕಾಯಿ ತುರಿ, ಗೋಡಂಬಿ ಪುಡಿ, ಏಲಕ್ಕಿ ಪುಡಿ, ಜಾ ಕಾಯಿ ಪುಡಿ ಸೇರಿಸಿ ಚನ್ನಾಗಿ ಕಲಕಿ. 
ಮಿಶ್ರಣ, ಪಾತ್ರೆಯ ತಳ ಬಿಡುತ್ತಿದ್ದಂತೆಯೇ ಒಲೆಯಿಂದ ಕೆಳಗಿರಿಸಿ ತಣಿಯಲು ಬಿಡಿ. 
ನೆನೆಯಲು ಇರಿಸಿದ ಕಣಕದಿಂದ ಚಿಕ್ಕ ಚಿಕ್ಕ ಉಂಡೆಯನ್ನು ಮಾಡಿ ವಡೆಯಾಕಾರದಲ್ಲಿ ತಟ್ಟಿ, 
ಹೂರಣವಿರಿಸಿ ಅಂಚುಗಳನ್ನು ಎತ್ತರಿಸಿ ಮುಚ್ಚಿ, ಪೂರಿಯಾಕಾರದಲ್ಲಿ ಬಾಳೆಯ ಎಲೆಯ ಮೇಲೆ ಇಲ್ಲವೆ 
ಪ್ಲಾಸ್ಟಿಕ್ ಹಾಳೆಯ ಮೇಲೆ ತಟ್ಟಿ ಕಾಯಿಸಿದ ಎಣ್ಣೆಯಲ್ಲಿ ಕರಿದರೆ ರುಚಿಯಾದ ಸಜ್ಜಪ್ಪ ರೆಡಿ. 

ಮಿಶ್ರ ಹಿಟ್ಟುಗಳ ಉಂಡೆ

ಪದಾರ್ಥ:
ರಾಗಿ ಹಿಟ್ಟು-2 ಕಪ್ /ಅಕ್ಕಿ ಹಿಟ್ಟು-1 ಕಪ್ /ಗೋದಿ ಹಿಟ್ಟು-1 ಕಪ್
ಬಾದಾಮಿ ಪುಡಿ-1 ಕಪ್ /ಬೆಲ್ಲದ ಪುಡಿ-1 ಕಪ್ /ಏಲಕ್ಕಿ ಪುಡಿ-1 ಚಮಚ
ಗಸಗಸೆ ಪುಡಿ-2 ಚಮಚ /ಒಣಕೊಬ್ಬರಿ ತುರಿ-1 ಕಪ್ /ಜಾಕಾಯಿ ಪುಡಿ-1/2 ಚಮಚ
ತುಪ್ಪ-1/2 ಕಪ್
ವಿಧಾನ:
ರಾಗಿ ಹಿಟ್ಟು, ಅಕ್ಕಿ ಹಿಟ್ಟು, ಗೋದಿ ಹಿಟ್ಟು ಹಾಗೂ ಬಾದಾಮಿ ಪುಡಿಗಳನ್ನು  ಬೇರೆಬೇರೆಯಾಗಿ 
ತುಪ್ಪದಲ್ಲಿ ಹುರಿದು ಸೇರಿಸಿಡಿ.  
ಬಾಣಲೆಯಲ್ಲಿ ತುಪ್ಪ ಕಾಯಲಿರಿಸಿ, ಬೆಲ್ಲ ಕರಗಿಸಿ. 
ಬೆಲ್ಲ ಕರಗಿದ ನಂತರ, ಹುರಿದಿರಿಸಿದ ಹಿಟ್ಟುಗಳ ಮಿಶ್ರಣ, ಗಸಗಸೆ ಪುಡಿ,
ಏಲಕ್ಕಿ ಪುಡಿ, ಒಣಕೊಬ್ಬರಿ ತುರಿ, ಜಾಕಾಯಿ ಪುಡಿ ಸೇರಿಸಿ ಕಲಕಿ ಒಲೆಯಿಂದ ಕೆಳಗಿರಿಸಿ. 
ತಣಿದ ಮೇಲೆ, ಕ್ಯೆಗೆ ತುಪ್ಪ ಸವರಿಕೊಂಡು ಉಂಡೆ ಕಟ್ಟಿ.
ಮಕ್ಕಳ ಆರೋಗ್ಯಕ್ಕೂ ಹಿತಕರವಾದ ಮಿಶ್ರ ಹಿಟ್ಟುಗಳ ಉಂಡೆ ಸವಿಯಲು ಸಿಧ್ಧ. 

ಉದ್ದಿನ ಕಡುಬು

ಪದಾರ್ಥ:
ಕಣಕ-ಗೋದಿ ಹಿಟ್ಟು-1 ಕಪ್ /ಚಿರೋಟಿ ರವೆ-1 ಕಪ್ / ಅಕ್ಕಿ ಹಿಟ್ಟು-2 ಚಮಚ 
ಹೂರಣ-ಉದ್ದಿನಬೇಳೆ-2 ಕಪ್ /ಕತ್ತರಿಸಿದ ಹಸಿಮೆಣಸಿನಕಾಯಿ-5-6 ತುಂಡುಗಳು 
ಕತ್ತರಿಸಿದ ಕರಿಬೇವು-3 ಚಮಚ /ಕತ್ತರಿಸಿದ ಕೊತ್ತಂಬರಿ ಸೊಪ್ಪು-3 ಚಮಚ 
ಶುಂಠಿ ತುರಿ-1 ಚಮಚ /ಉಪ್ಪು-ರುಚಿಗೆ ತಕ್ಕಷ್ಟು
ವಿಧಾನ:
ಗೋದಿ ಹಿಟ್ಟು, ಚಿರೋಟಿ ರವೆ, ಅಕ್ಕಿ ಹಿಟ್ಟುಗಳನ್ನು ಸೇರಿಸಿ ನೀರಿನೊಂದಿಗೆ ಕಲಸಿ ಕಣಕ ತಯಾರಿಸಿಡಿ.
ಉದ್ದಿನ ಬೇಳೆಯನ್ನು ಆರು ಗಂಟೆ ನೆನೆಯಿಸಿ ನುಣ್ಣಗೆ ಅರೆದು, ಹಸಿಮೆಣಸಿನಕಾಯಿ 
ಕರಿಬೇವು, ಕೊತ್ತಂಬರಿ ಸೊಪ್ಪು, ಶುಂಠಿ ತುರಿ, ಉಪ್ಪುಗಳನ್ನು ಸೇರಿಸಿ ಹೂರಣ ತಯಾರಿಸಿಡಿ
ಕಣಕದಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ, ಪೂರಿಯಾಕಾರದಲ್ಲಿ ಲಟ್ಟಿಸಿ, ಎರಡು ಚಮಚ ಹೂರಣವಿರಿಸಿ, ಎರಡೂ ಅಂಚುಗಳನ್ನು ಸೇರಿಸಿ, ಹಬೆಯಲ್ಲಿ ಬೇಯಿಸಿದರೆ ರುಚಿಯಾದ 
ಉದ್ದಿನ ಕಡುಬು ತಯಾರು. ಸೌತೆಕಾಯಿ ರಾಯತದೊಂದಿಗೆ ಒಳ್ಳೆಯ ಕಾಂಬಿನೇಶನ್.

ಆಂಬೊಡೆ

ಪದಾರ್ಥ: 
ಕಡಲೇಬೇಳೆ-2 ಕಪ್ /ತೆಂಗಿನಕಾಯಿ ತುರಿ-1 ಕಪ್ /ಅಕ್ಕಿ ಹಿಟ್ಟು-2 ಚಮಚ
ಕತ್ತರಿಸಿದ ಕರಿಬೇವಿನ ಸೊಪ್ಪು-3 ಚಮಚ /ಕತ್ತರಿಸಿದ ಕೊತ್ತಂಬರಿ ಸೊಪ್ಪು-3 ಚಮಚ
ಕತ್ತರಿಸಿದ ಪುದಿನಾ ಸೊಪ್ಪು-3 ಚಮಚ /ಇಂಗು-1/2 ಚಮಚ 
ಅಚ್ಚ ಖಾರದ ಪುಡಿ-2 ಚಮಚ /ಶುಂಠಿ ತುರಿ-1 ಚಮಚ /ಉಪ್ಪು-ರುಚಿಗೆ ತಕ್ಕಷ್ಟು 
ಎಣ್ಣೆ-ಕರಿಯಲು
ವಿಧಾನ:
ಕಡಲೇಬೇಳೆಯನ್ನು ಒಂದು ಗಂಟೆ ನೀರಿನಲ್ಲಿ ನೆನೆಸಿ, ಬಸಿದು ತರಿತರಿಯಾಗಿ ಅರೆದಿರಿಸಿ.
ಅರೆದ ಮಿಶ್ರಣಕ್ಕೆ, ಅಕ್ಕಿ ಹಿಟ್ಟು, ತೆಂಗಿನಕಾಯಿ ತುರಿ, ಕರಿಬೇವಿನ ಸೊಪ್ಪು, 
ಕೊತ್ತಂಬರಿ ಸೊಪ್ಪು, ಪುದಿನಾ ಸೊಪ್ಪು, ಇಂಗು, ಅಚ್ಚ ಖಾರದ ಪುಡಿ, ಶುಂಠಿ ತುರಿ, ಉಪ್ಪು
ಸೇರಿಸಿ ಸ್ವಲ್ಪ ನೀರು ಹಾಕಿ ವಡೆಯ ಹದಕ್ಕೆ ಗಟ್ಟಿಯಾಗಿ ಕಲಸಿ.
ಕಲಸಿದ ಮಿಶ್ರಣದಿಂದ. ಚಿಕ್ಕೆ ಉಂಡೆ ಮಾಡಿ, ತಟ್ಟಿ, ಕಾಯಿಸಿದ ಎಣ್ಣೆಯಲ್ಲಿ 
ಕರಿಯಿರಿ. ಗರಿಗರಿಯಾದ ಆಂಬೋಡೆ, ಕಾಯಿ ಚಟ್ನಿಯೊಂದಿಗೆ ಬಲು ರುಚಿ. 

ಚಕ್ಕುಲಿ ಮುರುಕು

ಪದಾರ್ಥ:
ಅಕ್ಕಿ ಹಿಟ್ಟು-1 ಕಪ್ /ಮೈದಾ ಹಿಟ್ಟು-3/4 ಕಪ್ /ಕಡಲೆ ಹಿಟ್ಟು-3/4 ಕಪ್ /ಹುರಿಗಡಲೆ ಹಿಟ್ಟು-3/4 ಕಪ್
ಅಚ್ಚ ಖಾರದ ಪುಡಿ-1/2 ಕಪ್ /ಜೀರಿಗೆ ಪುಡಿ-3 ಚಮಚ /ಎಳ್ಳಿನ ಪುಡಿ-3 ಚಮಚ
ಉಪ್ಪು-ರುಚಿಗೆ ತಕ್ಕಷ್ಟು /ತಿನ್ನುವ ಸೋಡಾ-1/4 ಚಮಚ /ಬೆಣ್ಣೆ-1/2 ಕಪ್
ಎಣ್ಣೆ-ಕರಿಯಲು
ವಿಧಾನ:
ಎಲ್ಲಾ ಹಿಟ್ಟುಗಳು, ಖಾರದ ಪುಡಿ, ಉಪ್ಪು, ಸೋಡ, ಜೀರಿಗೆ ಹಾಗೂ ಎಳ್ಳಿನ ಪುಡಿಗಳನ್ನು ಸೇರಿಸಿ ಕಲಸಿಡಿ.
ಬೆಣ್ಣೆ ಕಾಯಿಸಿ ಹಿಟ್ಟಿನ ಮಿಶ್ರಣಕ್ಕೆ ಸೇರಿಸಿ, ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲಸಿ. 
ಎಣ್ಣೆ ಸವರಿದ ಚಕ್ಕುಲಿ ವರಳಿಗೆ, ನಿಂಬೆ ಗಾತ್ರದ ಹಿಟ್ಟಿನ ಮಿಶ್ರಣವನ್ನು ಹಾಕಿ, ಕಾಯಿಸಿದ ಎಣ್ಣೆಯಲ್ಲಿ ಕರಿದರೆ, ರುಚಿಯಾದ ಚಕ್ಕುಲಿ ಮುರುಕು ರೆಡಿ.

ದೊಣ್ಣಮೆಣಸಿನಕಾಯಿ ಪಕೋಡಾ

ಪದಾರ್ಥ:
ದೊಣ್ಣಮೆಣಸಿನಕಾಯಿ ಬಿಲ್ಲೆಗಳು-10-12 /ಕಡಲೆ ಹಿಟ್ಟು-2 ಕಪ್ /ಅಕ್ಕಿ ಹಿಟ್ಟು--1/2 ಕಪ್
ಮ್ಯೆದಾ ಹಿಟ್ಟು-2 ಚಮಚ /ಅಚ್ಚ ಖಾರದ ಪುಡಿ-2 ಚಮಚ /ಜೀರಿಗೆ--2 ಚಮಚ
ಇಂಗು--1/4 ಚಮಚ /ತಿನ್ನುವ ಸೋಡಾ-1/4 ಚಮಚ /ಉಪ್ಪು-ರುಚಿಗೆ ತಕ್ಕಷ್ಟು
ಎಣ್ಣೆ-ಕರಿಯಲು
ವಿಧಾನ:
ಕಡಲೆ ಹಿಟ್ಟು, ಅಕ್ಕಿ ಹಿಟ್ಟು ಹಾಗೂ ಮ್ಯೆದಾ ಹಿಟ್ಟುಗಳನ್ನು ಒಂದು ಟೀ ಚಮಚ ಬಿಸಿ
ಎಣ್ಣೆ ಸೇರಿಸಿ ಕಲಕಿಡಿ.
ಈ ಮಿಶ್ರಣಕ್ಕೆ, ಉಪ್ಪು, ಅಚ್ಚ ಖಾರದ ಪುಡಿ, ಜೀರಿಗೆ, ಇಂಗು, ಸೋಡಾಗಳನ್ನು ಸೇರಿಸಿ,
ಸ್ವಲ್ಪ ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿ.
ಕತ್ತರಿಸಿರಿಸಿದ ದೊಣ್ಣಮೆಣಸಿನಕಾಯಿ ಬಿಲ್ಲೆಗಳನ್ನು ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ತೆಗೆದು,
ಕಾಯಿಸಿದ ಎಣ್ಣೆಯಲ್ಲಿ ಹೊಂಬಣ್ಣ ಬರುವ ವರೆಗೆ ಕರಿದು ತೆಗೆಯಿರಿ.
ರುಚಿರುಚಿಯಾದ ದೊಣ್ಣಮೆಣಸಿನ ಕಾಯಿ ಪಕೋಡಾ ರೆಡಿ ಟು ಈಟ್.

ನುಚ್ಚಿನುಂಡೆ

ಪದಾರ್ಥ:
ತೊಗರಿಬೇಳೆ-2 ಕಪ್ /ಕಡಲೆಬೇಳೆ-1/2 ಕಪ್ /ತೆಂಗಿನ ತುರಿ-2 ಕಪ್
ಕತ್ತರಿಸಿದ ಕೊತ್ತಂಬರಿ ಸೊಪ್ಪು-೨ ಚಮಚ /ಕತ್ತರಿಸಿದ ಕರಿಬೇವಿನ ಸೊಪ್ಪು-1 ಚಮಚ
ಜೀರಿಗೆ ಪುಡಿ-೨ ಚಮಚ /ಶುಂಠಿ ತುರಿ-೨ ಚಮಚ /ಕಾಳುಮೆಣಸಿನಪುಡಿ-1 ಚಮಚ
ಹಸಿಮೆಣಸಿನಕಾಯಿ-6 /ಇಂಗು-1/4 ಚಮಚ /ಉಪ್ಪು-ರುಚಿಗೆ ತಕ್ಕಷ್ಟು
ವಿಧಾನ:
ತೊಗರೀಬೇಳೆ, ಕಡಲೇಬೇಳೆಗಳನ್ನು 1 ಗಂಟೆ ನೀರಿನಲ್ಲಿ ನೆನೆಯಿಸಿ, ಬಸಿದಿಡಿ.
ನೆನೆಸಿದ ಬೇಳೆಗಳನ್ನು ತರಿತರಿಯಾಗಿ ರುಬ್ಬಿಕೊಳ್ಳಿ.
ರುಬ್ಬಿದ ಮಿಶ್ರಣಕ್ಕೆ, ಹಸಿಮೆಣಸಿನಕಾಯಿ, ಶುಂಠಿ, ಇಂಗು, ಉಪ್ಪು, ತೆಂಗಿನಕಾಯಿತುರಿ, 
ಕಾಳುಮೆಣಸಿನಪುಡಿ, ಜೀರಿಗೆಪುಡಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಸೇರಿಸಿ ಕಲಸಿಡಿ.
ಕಲಿಸಿದ ಮಿಶ್ರಣದಿಂದ ಸ್ವಲ್ಪ ಹಿಟ್ಟು ತೆಗೆದುಕೊಂಡು, ಬೇಕಾದ ಆಕಾರದಲ್ಲಿ ತಟ್ಟಿ, ಎಣ್ಣೆ ಸವರಿದ 
ಇಡ್ಲಿ ತಟ್ಟೆಯ ಮೇಲಿರಿಸಿ, 10ನಿಮಿಷ ಉಗಿಯಲ್ಲಿ ಬೇಯಿಸಿ.
ತಯಾರಾದ ನುಚ್ಚಿನುಂಡೆಗಳನ್ನು ಕಾಯಿ ಚಟ್ನಿಯೊಂದಿಗೆ ಸವಿಯಿರಿ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com