ಗೌರಿ ಹಬ್ಬದ ಪೂಜಾ ವಿಧಿ ವಿಧಾನ

ಸ್ವರ್ಣ ಅಂದರೆ ಬಂಗಾರ, ಬಂಗಾರದ ಬಣ್ಣದಂತೆ ಹೊಳೆಯುವ ಜಗನ್ಮಾತೆಯಾದ ಗೌರಿಯನ್ನು ಈ ದಿನ ಷೋಡಶೋಪಚಾರದಿಂದ...
ಗೌರಿ
ಗೌರಿ

ಭಾದ್ರಪದ ಮಾಸದ ಚತುರ್ಥಿಯ ಮುನ್ನಾ ದಿನ ಬರುವ ಗೌರಿ ಹಬ್ಬ ಮುತ್ತೈದೆಯರಿಗೆ ಸಕಲ ಸೌಭಾಗ್ಯ ನೀಡುವ ಹಬ್ಬ. ಗೌರಿ ಹಬ್ಬವನ್ನು ಸ್ವರ್ಣ ಗೌರಿ ವ್ರತದ ಮೂಲಕ ಆಚರಣೆ ಮಾಡಲಾಗುತ್ತದೆ.

ಸ್ವರ್ಣ ಅಂದರೆ ಬಂಗಾರ, ಬಂಗಾರದ ಬಣ್ಣದಂತೆ ಹೊಳೆಯುವ ಜಗನ್ಮಾತೆಯಾದ ಗೌರಿಯನ್ನು ಈ ದಿನ ಷೋಡಶೋಪಚಾರದಿಂದ ಪೂಜಿಸಲಾಗುತ್ತದೆ. ಗೌರಿ ಎಂಬುದು ಪರಮೇಶ್ವರನ ಪತ್ನಿ ಪಾರ್ವತಿಯ ಮತ್ತೊಂದು ಹೆಸರು. ಪಾರ್ವತಿಯ ತಂದೆ ಪರ್ವತರಾಜ. ಅಂದರೆ ಹಿಮಾಲಯವಿರುವ ಭಾರತ (ಭೂಲೋಕ). ಶಿವನನ್ನು ವರಿಸಿ ಕೈಲಾಸದಲ್ಲಿ ನೆಲೆಸಿರುವ ಗೌರಿ ವರ್ಷಕ್ಕೊಮ್ಮೆ ತವರಿಗೆ (ಭೂಮಿಗೆ) ಬಂದು ಪೂಜೆ ಸ್ವೀಕರಿಸಿ, ಹೆಣ್ಣು ಮಕ್ಕಳಿಂದ ಬಾಗಿನ ಪಡೆದು ಸಂತೃಪ್ತಳಾಗಿ ಕೈಲಾಸಕ್ಕೆ ಹೋಗುತ್ತಾಳೆ ಎಂಬ ನಂಬಿಕೆ ಇದೆ.

ಶ್ರೀ ಸ್ವರ್ಣ ಗೌರಿ ವ್ರತ ಹೆಸರೇ ಸೂಚಿಸುವಂತೆ ಸ್ವರ್ಣ ಅಂದರೆ ಬಂಗಾರ, ಅಂದರೆ ಬಂಗಾರ ಬಣ್ಣದಂತೆ ಹೊಳೆಯುವ ಗೌರಿ ಎಂದು ಅರ್ಥ. ಅಂತಹ  ಜಗನ್ಮಾತೆಯಾದ ಗೌರಿಯನ್ನು ಸುಮಂಗಲಿಯರು ಪೂಜಿಸುವ ವಿಧಿ ವಿಧಾನ ಇಲ್ಲಿದೆ.

ಈ ದಿನ ಹೆಣ್ಣುಮಕ್ಕಳು ಮತ್ತು ಮುತ್ತೈದೆಯರು ಮಂಗಳ ಸ್ನಾನ ಮಾಡಿ, ಪೂಜಗೃಹ ಅಥವಾ ದೇವರು ಇಡುವ ಜಾಗವನ್ನು ರಂಗೋಲಿಯಿಂದ ಅಲಂಕರಿಸಬೇಕು. ಒಂದು ಮಣೆ ಇಟ್ಟು, ಅದರ ಮೇಲೆ ರವಿಕೆ ಬಟ್ಟೆ ಹಾಸಿ, ಅದರ ಮೇಲೆ ಒಂದು ತಟ್ಟೆಯಲ್ಲಿ ದೇವರನ್ನು ಇಡಬೇಕು.ಗಣಪತಿ, ಗೌರಿ ವಿಗ್ರಹ, ಅರಿಶಿನದ ಗೌರಮ್ಮ(ಸ್ವಲ್ಪ ಅರಿಶಿನಕ್ಕೆ ಚೂರು ಹಾಲು ಹಾಕಿ ಕಲೆಸಿ ಗೋಪುರದ ಆಕರ ಕೊಡಿ), ಕನ್ನಡಿ, ಕಲಶ, ಇವುಗಳನ್ನು ಇಟ್ಟುಕೊಳ್ಳಬೇಕು. 3 ರವಿಕೆ ಬಟ್ಟೆಯನ್ನು ತ್ರಿಕೋಣಾಕಾರದಲ್ಲಿ ಮಡಿಸಿ ಹಿಂದೆ ಇಡಬೇಕು.

ಬಾಗಿನ ಹೀಗಿರಲಿ: ಮೊರದ ಬಾಗಿನಕ್ಕೆ ಅಣಿಯಾದ ಮೊರವನ್ನು ಶುಭ್ರಗೊಳಿಸಿ ಅದಕ್ಕೆ ಅರಿಶಿನ, ಕುಂಕುಮ ಹಚ್ಚಿ ಚೆನ್ನಾಗಿ ಆರಿಸಿ ನಂತರ ಧಾನ್ಯಗಳು, ತೆಂಗಿನಕಾಯಿ, ಬಳೆಬಿಚ್ಚೋಲೆ, ಕನ್ನಡಿ , ಬಳೆಗಳು, 5 ಬಗೆಯ ಹಣ್ಣುಗಳು, ರವಿಕೆ ಕಣ, ತಾಯಿಗೆ ಹಾಗೆ ಅತ್ತಿಗೆ, ನಾದಿನಿಯರಿಗೆ ಸೀರೆಯನ್ನು ಹಾಕಿ, ಸುಮಂಗಲಿಯರು ಉಪಯೋಗಿಸುವ ವಸ್ತುಗಳು ,ಭಕ್ಷ್ಯಗಳು ಹಾಕಿ ಮೊರದ ಬಾಗಿನ ಸಿದ್ಧ ಪಡಿಸಬೇಕು.



ದೇವಿಯನ್ನು ಸ್ಥಾಪನೆ ಮಾಡುವ ಸ್ಥಳವನ್ನು ಶುಭ್ರವಾಗಿ ಅಲಂಕರಿಸಿ ,ಗೌರಿ ಮೂರ್ತಿಯನ್ನು ಶೃಂಗರಿಸಿ, ತೋರಣದಿಂದ ಮಂಟಪವನ್ನು ಹಾಗೆ ಮನೆಯ ಮುಂಬಾಗಿಲನ್ನು ಅಲಂಕರಿಸಬೇಕು. ಪತ್ರೆಗಳನ್ನು,ಹೂವುಗಳನ್ನು, ಹೂವಿನ ಮಾಲೆಗಳನ್ನು ಕಟ್ಟಿ, 5 ತೆಂಗಿನಕಾಯಿ  ಪೂಜೆಗಾಗಿ ಅರಿಶಿನ ಕುಂಕುಮ, ಚಂದ್ರ, ಚಂದನ, ಅಡಿಕೆ, ದಶಾಂಗಂ, ೫ ಬಗೆಯ ಹಣ್ಣುಗಳನ್ನು, ದೀಪದ ಕಂಬಕ್ಕೆ ದೀಪದ ಬತ್ತಿಗಳನ್ನು ತುಪ್ಪದಲ್ಲಿ ನೆನಸಿ, ಗೆಜ್ಜೆವಸ್ತ್ರಗಳು, 16 ಎಳೆಯ ಗೆಜ್ಜೆವಸ್ತ್ರ ಹಾಗೆ 16 ಎಳೆ ದೋರ ಗ್ರಂಥಿಗಳನ್ನು ತಯಾರಿಸಬೇಕು ಅದಕ್ಕೆ 16 ಗಂಟನ್ನು ಹಾಕಿ ದೋರವನ್ನು ಸಿದ್ಧ ಪಡಿಸಬೇಕು. ಪಂಚಾಮೃತ ಅಭಿಷೇಕ ಮಧುಪರ್ಕ,ಮಂಗಳಾರತಿ ಬತ್ತಿಗಳು. ಒಂದು ತಟ್ಟೆಯಲ್ಲಿ ಉಪಾಯನ ದಾನಕ್ಕಾಗಿ 2 ತೆಂಗಿನಕಾಯಿಗಳು ನಾಲ್ಕು ವಿಳ್ಳೆದೆಲೆ, ಅಡಿಕೆಗಳು, ದಕ್ಷಿಣೆ, ಸ್ವಲ್ಪ ಅಕ್ಕಿ ಅದನ್ನು ಮುಚ್ಚಲು ಒಂದು ತಟ್ಟೆ ಅಥವಾ ಬಾಳೆಯೆಲೆ ಉಪಯೋಗಿಸಬೇಕು.

ಕಲಶದ ವಿಧಾನ
ಇನ್ನು ಕೆಲವರು ಮರಳಗೌರಿಯನ್ನು ಕೆಲವರು ಅರಿಶಿನ ಗೌರಿಯನ್ನು ಇಡುವ ಪದ್ಧತಿ ವಾಡಿಕೆಯಲ್ಲಿ ಇರುತ್ತೆ. ಅವರವರ ಸಂಪ್ರದಾಯದಂತೆ ಗೌರಿಯನ್ನು ಪ್ರತಿಸ್ಠಾಪಿಸಿ ಪೂಜೆ ಮಾಡಬೇಕು.



 ಹಾಗೆಯೇ ಕಲಶದಲ್ಲಿ ಗಂಗೆಯನ್ನು ಅದಕ್ಕೆ 5 ವಿಳ್ಳೆದೆಲೆಯನ್ನು ಇಟ್ಟು ಹಾಗೆ ಯಾವುದಾದರು ಹಣ್ಣನ್ನು ಕಳಸದಲಿ ಇಡಬೇಕು ಕಲಶದ ಸುತ್ತ ಬಿಳಿ ಸುಣ್ಣ ಹಚ್ಚಿ ಅದಕ್ಕೆ ೪ ಕಡೆ ಅರಿಶಿನ ಕುಂಕುಮ ಹಚ್ಚಬೇಕು. ಒಂದು ತಟ್ಟೆಯಲ್ಲಿ ಹಳದಿ (ಅರಿಶಿನ ಹಾಕಿ ವಸ್ತ್ರವನ್ನು ಸಿದ್ಧಪಡಿಸಬಹುದು) ವಸ್ತ್ರವನ್ನು ಹಾಸಿ ಎರೆಡು ವಿಳ್ಳೆದೆಲೆಯ ಜೊತೆ ಎರೆಡು ಬಟ್ಳಡಿಕೆ ಇಟ್ಟು ಗೌರಿಯ ಮೂರ್ತಿ,ಅರಿಶಿನಗೌರಿ ಅಥವಾ ಮರಳ ಗೌರಿಯನ್ನು ಅದರ ಮೇಲೆ ಇಡಬೇಕು  ಜೊತೆಯಲ್ಲಿ ಸಿದ್ಧಪಡಿಸಿದ ಕಲಶವನ್ನು ಸ್ಥಾಪನೆ ಮಾಡಬೇಕು .

ಮೊರದ ಬಾಗಿನ ಕೊಡುವಾಗ ಈ ಕೆಳಕಂಡ ಮಂತ್ರವನ್ನು  ಶ್ರದ್ಧಾಪೂರ್ವಕವಾಗಿ ಹೇಳಿ ಬಾಗಿನ ಕೊಟ್ಟರೆ ಬ್ರಹ್ಮಾಂಡ ದಾನ ಮಾಡಿದ ಪುಣ್ಯ ಲಭಿಸುವುದೆಂದು  ಹೇಳಿಕೆಯಿದೆ.
"ರಾಮಪತ್ನಿ ಮಹಾಭಾಗಿ ಪುಣ್ಯಮೂರ್ತಿ ನಿರಾಮುಖಿ  ಮಯಾದತ್ತಾಣಿ ಸೂರ್ಪಾಣಿ  ಗೃಹಾಣಿ  ಮಾನಿ  ಜಾನಕಿ '.

ದೇವರ ವಿಸರ್ಜನೆ: ದೇವರನ್ನು ವಿಸರ್ಜನೆ ಮಾಡುವ ಮುಂಚೆ ದೇವರನ್ನು ಕದಲಿಸಿ ಸೋಬಲಕ್ಕಿ ಇಡಬೇಕು. ಅದಕ್ಕೆ ಬೇಕಾಗುವ ಸಾಮಾಗ್ರಿಗಳು: ತೆಂಗಿನಕಾಯಿ ಅಥವಾ ಒಣಕೊಬ್ಬರಿ ಬಟ್ಟಲನ್ನು ಉಪಯೋಗಿಸಿ, ಬೆಲ್ಲದಚ್ಚು, ಬಳೆ ಬಿಚ್ಚೋಲೆ, ವಿಳ್ಳೆದೆಲೆ, ಅಡಿಕೆ, ದಕ್ಷಿಣೆ, ಸೀರೆ, ಎರೆಡು ರವಿಕೆ ಕಣಗಳು, ಹಣ್ಣುಗಳಾದ ದಾಳಿಂಬೆ, ಸೀಬೆ ಹಣ್ಣು, ಸೀತಾ ಫಲ, ಸಪೋಟ, ಮೂಸಂಬಿ, ಕಿತ್ತಳೆ. ನಂತರ ಮಂಗಳಾರತಿ ಮಾಡಿ  ದೇವಿಯ ಜೊತೆ ಗಣೇಶನನ್ನು ವಿಸರ್ಜನೆ ಮಾಡಬೇಕು.



ಮೊಸರನ್ನವನ್ನು ಮೂರ್ತಿಯ ಜೊತೆ ವಿಸರ್ಜಿಸಿ ಸ್ವಲ್ಪ ಪ್ರಸಾದವಾಗಿ ಮನೆಯವರೆಲ್ಲಾ ಸೇವಿಸಬೇಕು .

ಸ್ವರ್ಣಗೌರಿ ಹಬ್ಬದ ದಿನ ಈ ಕೆಳಗಿನ ಶ್ಲೋಕವನ್ನು 108 ಬಾರಿ ಶ್ರದ್ಧಾ ಭಕ್ತಿಯಿಂದ ಆಚರಿಸಿದಲ್ಲಿ, ಜಪಿಸಿದಲ್ಲಿ ತಮ್ಮ ಬೇಡಿಕೆಗಳು ಪೂರೈಸುತ್ತವೆ ಎನ್ನುವ ನಂಬಿಕೆ ಇದೆ.
"ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣೀ ನಮೋಸ್ತುತೇ".

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com