ಒಗ್ಗರಣೆಗೆ ಮಾತ್ರ ಸೀಮಿತವಲ್ಲ ಜೀರಿಗೆ

ಸಾವು ಒಂದನ್ನು ಹೊರತುಪಡಿಸಿ ಎಲ್ಲ ಬಗೆಯ ರೋಗಗಳನ್ನು ನಿಯಂತ್ರಿಸಬಲ್ಲದು ಜೀರಿಗೆ ಎಂದು ಪ್ರವಾದಿ ಮಹಮ್ಮದ್ ಪೈಗಂಬರ್ ಹೇಳಿದ್ದಾರೆ. ಜೀರಿಗೆಯ ಮಹತ್ವ ಅಷ್ಟು ....
ಜೀರಿಗೆ ಕಾಳು
ಜೀರಿಗೆ ಕಾಳು

ಸಾವು  ಒಂದನ್ನು ಹೊರತುಪಡಿಸಿ ಎಲ್ಲ ಬಗೆಯ ರೋಗಗಳನ್ನು  ನಿಯಂತ್ರಿಸಬಲ್ಲದು ಜೀರಿಗೆ ಎಂದು ಪ್ರವಾದಿ ಮಹಮ್ಮದ್ ಪೈಗಂಬರ್ ಹೇಳಿದ್ದಾರೆ. ಜೀರಿಗೆಯ ಮಹತ್ವ ಅಷ್ಟು ಉದ್ದ ಮತ್ತು ಆಳ ಆಗಲವಾಗಿದೆ. ಜೀರಿಗೆಯಲ್ಲಿ 2 ವಿಧ. ಒಂದು ಕಪ್ಪು ಜೀರಿಗೆ ಇನ್ನೊಂದು ಕಂದು ಬಣ್ಣದ ಜೀರಿಗೆ.

ಜೀರಿಗೆ ಇಲ್ಲದ ಅಡುಗೆಯಿಲ್ಲ, ಜೀರಿಗೆ ಇರದ ಮನೆಯಿಲ್ಲ. ಮಸಾಲೆ ಪದಾರ್ಥಗಳಲ್ಲಿ ಅತಿ ಹೆಚ್ಚು ಪ್ರಾಮುಖ್ಯತೆ ಪಡೆದಿದೆ ಜೀರಿಗೆ. ಆಯುರ್ವೇದ ಔಷಧಿ ತಯಾರಿಕೆಯಲ್ಲಿ ಜೀರಿಗೆ ಪಾತ್ರ ಅಗ್ರ.

ಇವುಗಳಲ್ಲಿ ಥೈಮೊಕ್ವಿನೋನ್‌ಗೆ ಬ್ರಾಂಕೊಡಿಯಲೇಷನ್ ಗುಣಧರ್ಮವಿದ್ದು, ಶ್ವಾಸಕೋಶದ ಸೂಕ್ಷ್ಮನಾಳಗಳನ್ನು ಹಿಗ್ಗಿಸುವ ಸಾಮರ್ಥ್ಯ ಹೊಂದಿರುವುದರಿಂದ ಆಸ್ತಮಾ ರೋಗಿಗಳಿಗೆ ಒಂದು ರೀತಿಯಲ್ಲಿ ದಿವ್ಯೌಷಧ. ಸಸಾರಜನಕ  ಹಾಗೂ 41ರಷ್ಟು ಕೊಬ್ಬಿನ ಅಂಶವಿರುವುದರಿಂದ ಇದನ್ನು ಪೌಷ್ಟಿಕಾಂಶಗಳ ಆಗರ ಎಂದು ಕರೆಯಬಹುದು. ಮನುಷ್ಯ ದೇಹಕ್ಕೆ ಅತ್ಯುಪಯುಕ್ತ ಎಂದೇ ಪರಿಗಣಿಸಲಾಗಿರುವ ಒಮೆಗಾ-3 ಆಮ್ಲ ಕೂಡ  ಜೀರಿಗೆಯಲ್ಲಿ ಅಧಿಕ ಪ್ರಮಾಣದಲ್ಲಿ ಲಭ್ಯ.

ಮಧುಮೇಹ, ಕ್ಯಾನ್ಸರ್, ರಕ್ತದೊತ್ತಡ, ಚರ್ಮವ್ಯಾಧಿ, ಹೊಟ್ಟೆಯಲ್ಲಿ ಉಂಟಾಗುವ ಹುಳುಗಳ (ಜಂತು) ಬಾಧೆ, ವಾತ, ಊತ, ನೆಗಡಿ, ಕೆಮ್ಮು, ನೋವುಗಳು ಅಲ್ಲದೇ ಏಡ್ಸ್ ನಿಯಂತ್ರಣಕ್ಕೆ ಕೂಡ ಜೀರಿಗೆ ಒಳ್ಳೆಯ ಮದ್ದು.

ಜೀರ್ಣ ಶಕ್ತಿಯನ್ನು ಹೆಚ್ಚಿಸುವ ಜೀರಿಗೆ ಆಸಿಡಿಟಿಯನ್ನು ದೂರ ಓಡಿಸುತ್ತದೆ. ಬಾಣಂತಿಯರು ಜೀರಿಗೆ ಹೆಚ್ಚಾಗಿ ಸೇವಿಸಿದರೆ ಎದೆಹಾಲು ವೃದ್ಧಿಸುತ್ತದೆ. ಮಗುವಿಗೆ ಹೊಟ್ಟೆನೋವು ಸಹ ಬರುವುದಿಲ್ಲ. ಉದರ ಸಂಬಂಧಿ ಸಮಸ್ಯೆಗಳಿಗೆ ಜೀರಿಗೆ ರಾಮಬಾಣ. ಜೀರಿಗೆಯನ್ನು ನುಣ್ಣಗೆ ಪುಡಿ ಮಾಡಿ ತೆಂಗಿನ ಕಾಯಿ ಹಾಲಿನಲ್ಲಿ ಬೆರೆಸಿ ಮೈಗೆ ಹಚ್ಚಿಕೊಂಡು ಅರ್ಧಗಂಟೆಯ ನಂತರ ಉಗುರು ಬಿಸಿ ನೀರಿನಿಂದ ಸ್ನಾನ ಮಾಡಿದರೆ ಬೆವರು ಗುಳ್ಳೆ ಬರುವುದಿಲ್ಲ

ಅಜೀರ್ಣದಿಂದ ಭೇದಿಯಾಗುತ್ತಿದ್ದರೆ ಹುರಿದ ಅಕ್ಕಿ- ಜೀರಿಗೆ ಪುಡಿ ಹಾಗೂ ಸಕ್ಕರೆ ಅಥವಾ ಉಪ್ಪು ಹಾಕಿ ಗಂಜಿ ತಯಾರಿಸಿ ಸೇವಿಸಿದರೆ ಅಜೀರ್ಣ ನಿವಾರಣೆಯಾಗುತ್ತದೆ. ಜೀರಿಗೆಯನ್ನು ಬಾಯಿಯಲ್ಲಿ ಹಾಕಿಕೊಂಡು ಚೆನ್ನಾಗಿ ಅಗಿದು ತಿನ್ನುವುದರಿಂದ ಹಲ್ಲು ನೋವು ಕಡಿಮೆಯಾಗುತ್ತದೆ.ಜೀರಿಗೆ ಪುಡಿಯನ್ನು ಮಜ್ಜಿಗೆ ಹಾಗೂ ಸ್ವಲ್ಪ ಉಪ್ಪು ಬೆರೆಸಿ ಕುಡಿದರೆ ಜೀರ್ಣಶಕ್ತಿ ಹೆಚ್ಚಿಸುತ್ತದೆ.

ಮಜ್ಜಿಗೆಗೆ ಜೀರಿಗೆ ಪುಡಿ ಮತ್ತು ಉಪ್ಪು ಹಾಕಿ ಕಲಸಿ ಕುಡಿದರೆ ಪಿತ್ತ ಶಮನವಾಗುತ್ತದೆ.ಎರಡು ಚಮಚ ಹುರಿದ ಜೀರಿಗೆಯನ್ನು ಒಂದು ದೊಡ್ಡ ಲೋಟ ನೀರು ಹಾಕಿ ಕುದಿಸಿ, ಅರ್ಧ ಲೋಟಕ್ಕೆ ಇಳಿಸಿ ಅದಕ್ಕೆ ಉಪ್ಪು - ತುಪ್ಪ ಬೆರೆಸಿ ಸೇವಿಸಿದರೆ, ಹೊಟ್ಟೆ ಉಬ್ಬರ, ನೋವು ಗುಣವಾಗುತ್ತದೆ. ಹೊಟ್ಟೆ ನೋವು, ವಾಂತಿ ಇದ್ದಾಗ  ಒಂದು ಚಮಚ ಜೀರಿಗೆ , ಒಂದು ಚಮಚ ಏಲಕ್ಕಿ ಪುಡಿಯನ್ನು ಒಂದು ಲೋಟ ನೀರಿನಲ್ಲಿ ಕುದಿಸಿ ಅರ್ಧ ಲೋಟಕ್ಕೆ ಇಳಿಸಬೇಕು. ತಣ್ಣಗಾದ ನಂತರ ಅದಕ್ಕೆ ಸಕ್ಕರೆ , ನಿಂಬೆ ಪಾನಕ ಬೆರೆಸಿ ದಿನಕ್ಕೆ ಮೂರು ಸಲ ಸೇವಿಸಿದರೆ ಹೊಟ್ಟೆ ತೊಳೆಸುವುದು ಮತ್ತು ವಾಂತಿ ನಿಲ್ಲುತ್ತದೆ.

 ಅರ್ಧ ಚಮಚ ಜೀರಿಗೆಯನ್ನು ಒಂದು ಲೀಟರ್ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಆರಿಸಿ. ಪ್ರತಿನಿತ್ಯ ಕುಡಿಯುವುದರಿಂದ ರಕ್ತ ಶುದ್ಧಿಯಾಗುತ್ತದೆ. 15 ರಿಂದ 20 ದಿನದವರೆಗೆ ಸೇವಿಸುವುದರಿಂದ ಚರ್ಮರೋಗ ಕಡಿಮೆಯಾಗುತ್ತದೆ. ಅರ್ಧ  ಲೋಟ ನೀರಿಗೆ ಅರ್ಧ ಚಮಚ ಜೀರಿಗೆ ಹಾಕಿ, ಕುದಿಸಿ ಶೋಧಿಸಿ ಹಾಲು ಬೆರೆಸಿ ಕಷಾಯ ತಯಾರಿಸಿ ಕುಡಿದರೆ ಆರೋಗ್ಯ ಸುಧಾರಿಸುತ್ತದೆ. ಜೀರಿಗೆ ನೀರು ಮತ್ತು ಜೀರಿಗೆ ಕಷಾಯ ರಕ್ತದ ಒತ್ತಡವನ್ನು ಸರಿ ಪಡಿಸುತ್ತದೆ. ಪಿತ್ತ ಮತ್ತು ಅಜೀರ್ಣದಿಂದ ಆಗುವ ತೊಂದರೆಗಳನ್ನು ಸರಿ ಪಡಿಸುತ್ತದೆ.

ನೆನೆಸಿದ ಮೆಂತ್ಯದ ಬೀಜ, ಜೀರಿಗೆ, ಉಪ್ಪು ಹಾಗೂ ಖಾರ ಹಾಕಿ ಚಟ್ನಿ ತಯಾರಿಸಿ ಚಪಾತಿ ಜೊತೆ ಸೇವಿಸಿ ದೇಹದ ತೂಕ ಕಡಿಮೆಯಾಗುತ್ತದೆ.  ಜೀರಿಗೆ, ಸಕ್ಕರೆ, ಒಣಶುಂಠಿ ಮತ್ತು ಅಡಿಗೆ ಉಪ್ಪು ಇವುಗಳನ್ನು ಒಂದೊಂದು ಟೀ ಚಮಚದಷ್ಟು ತೆಗೆದುಕೊಂಡು ನುಣ್ಣಗೆ ಪುಡಿ ಮಾಡಿ ಒಂದು ಲೋಟ ಬಿಸಿ ನೀರಿಗೆ ಹಾಕಿ ಒಂದು ಹೋಳು ನಿಂಬೆಹಣ್ಣಿನ ರಸವನ್ನು ಸೇರಿಸಿ ಕಫ ಸಮಸ್ಯೆ ನಿವಾರಣೆಯಾಗುತ್ತದೆ.

ಜೀರಿಗೆ ಹಾಗೂ ಕೊತ್ತಂಬರಿ ಬೀಜವನ್ನು ಹುರಿದು ಪುಡಿ ಮಾಡಿ ಸಕ್ಕರೆ ಮತ್ತು ನೀರು ಸೇರಿಸಿ ಕುಡಿದರೆ ಬಾಯಾರಿಕೆ ನಿವಾರಣೆಯಾಗುತ್ತದೆ .ಒಂದು ಲೋಟ ನೀರಿಗೆ ಜಜ್ಜಿದ ಶುಂಠಿ ಮತ್ತು ಕುಟ್ಟಿದ ಜೀರಿಗೆ ಹಾಕಿ ಕುದಿಸಿ, ಸೋಸಿ, ನಿಂಬೆರಸ ಮತ್ತು ಜೇನುತುಪ್ಪವನ್ನು ಬೆರೆಸಿ. ಬೇಕಿದ್ದರೆ ಕಾಳು ಮೆಣಸಿನ ಪುಡಿ ಸೇರಿಸಿ ಕುಡಿದರೆ ಉರಿಮೂತ್ರ ಸಮಸ್ಯೆ ನಿವಾರಣೆಯಾಗುತ್ತದೆ. ಒಂದು ಬೊಗಸೆ ಹುರಿದ ಮೆಂತ್ಯ, ಹುರಿದ ಜೀರಿಗೆಗೆ ಒಂದು ಚಮಚ ಹುರಿದ ಕಾಳು ಮೆಣಸು ಸೇರಿಸಿ ಪುಡಿಮಾಡಿ. ಇದನ್ನು ನೀರಿನೊಂದಿಗೆ ನಿತ್ಯ ಸೇವಿಸಿದರೆ ಸಂಧಿವಾತ ಕಡಿಮೆಯಾಗುತ್ತದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com