ಕೊರೋನಾ ವೈರಸ್ ಚಿಕಿತ್ಸೆಯಲ್ಲಿ ಪ್ರಮುಖವಾಗಿರುವ 'ಪ್ಲಾಸ್ಮಾ ಥೆರಪಿ' ಎಂದರೇನು?

ಭಾರತದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ನಡುವೆ ಸೋಂಕಿಗೆ ಲಸಿಕೆ ಇಲ್ಲದಿರುವುದು ಮತ್ತಷ್ಟು ಸಂಕಷ್ಟಕ್ಕೆ ಕಾರಣವಾಗಿದೆ. ಈ ಬೆಳವಣಿಗೆಗಳ ಮಧ್ಯೆ ಪ್ಲಾಸ್ಮಾ ಥೆರಪಿ ಎನ್ನುವ ಚಿಕಿತ್ಸೆ ಕೊರೊನಾ ವಿರುದ್ಧದ ಹೋರಾಟಕ್ಕೆ ಸಂಜೀವಿನಿ ರೂಪದಲ್ಲಿ  ಕಾಣುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ನಡುವೆ ಸೋಂಕಿಗೆ ಲಸಿಕೆ ಇಲ್ಲದಿರುವುದು ಮತ್ತಷ್ಟು ಸಂಕಷ್ಟಕ್ಕೆ ಕಾರಣವಾಗಿದೆ. ಈ ಬೆಳವಣಿಗೆಗಳ ಮಧ್ಯೆ ಪ್ಲಾಸ್ಮಾ ಥೆರಪಿ ಎನ್ನುವ ಚಿಕಿತ್ಸೆ ಕೊರೊನಾ ವಿರುದ್ಧದ ಹೋರಾಟಕ್ಕೆ ಸಂಜೀವಿನಿ ರೂಪದಲ್ಲಿ  ಕಾಣುತ್ತಿದೆ.

ಹೌದು.. ಪ್ರಸ್ತುತ ಲಸಿಕೆ ಮತ್ತು ಔಷಧಿಯೇ ಇಲ್ಲದ ಮಾರಕ ಕೊರೋನಾ ವೈರಸ್ ಗೆ ಈ ವರೆಗೂ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದು, ಲಸಿಕ ಮತ್ತು ಔಷಧಿ ಇಲ್ಲದೆ ರೋಗಿಗಳಿಗೆ ಯಾವ ಚಿಕಿತ್ಸೆ ನೀಡಬೇಕು ಎಂಬ ಗೊಂದಲ ವೈದ್ಯರಲ್ಲಿದೆ. ಇದರ ನಡುವೆಯೇ ಕೆಲ ದೇಶಗಳಲ್ಲಿ ನಡೆದ  ಪ್ಲಾಸ್ಮಾ ಥೆರಪಿ ಚಿಕಿತ್ಸೆ ಸೋಂಕಿತರಲ್ಲಿ ಸಕಾರಾತ್ಮಕ ಚೇತರಿಕೆ ತಂದಿದ್ದು, ಇದೇ ಪ್ಲಾಸ್ಮಾ ಥೆರಪಿ ಇದೀಗ ಕೊರೋನಾ ವೈರಸ್ ಸಂಜೀವಿನಿಯಾಗುತ್ತಿದೆ.

ಹಾಗದರೆ ಇಷ್ಟಕ್ಕೂ ಏನಿದು ಪ್ಲಾಸ್ಮಾ ಥೆರಪಿ? ಇಲ್ಲಿದೆ ಉತ್ತರ
ಯಾವುದೇ ರೋಗದ ವಿರುದ್ಧ ಹೋರಾಡಲು ಮಾನವನ ದೇಹವು ರೋಗನಿರೊಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತದೆ. ರೋಗವನ್ನು ಉಂಟು ಮಾಡುವ ವೈರಾಣುಗಳ ವಿರುದ್ಧ ಹೋರಾಡಲು ದೇಹವು ಪ್ರತಿರೋಧಕ ಗುಣಗಳನ್ನು ಬೆಳೆಸಿಕೊಂಡಿರುತ್ತವೆ. ಕೋವಿಡ್–19 ರೋಗದಿಂದ  ಗುಣಮುಖರಾದವರ ದೇಹದಲ್ಲೂ ಇಂತಹ ಪ್ರತಿರೋಧ ಕಣಗಳು ಅಭಿವೃದ್ಧಿಯಾಗಿರುತ್ತವೆ. ಇವು ರಕ್ತದ ದುಗ್ಧರಸದಲ್ಲಿ (ರಕ್ತದಲ್ಲಿರುವ ಪಾರದರ್ಶಕ ದ್ರವ) ಇರುತ್ತವೆ.

ರೋಗದಿಂದ ಗುಣಮುಖರಾದವರ ದುಗ್ಧರಸದಲ್ಲಿ ಇರುವ ಪ್ರತಿರೋಧ ಕಣಗಳನ್ನು ತೆಗೆದುಕೊಂಡು, ರೋಗದಿಂದ ಬಳಲುತ್ತಿರುವ ವ್ಯಕ್ತಿಯ ರಕ್ತಕ್ಕೆ ಸೇರಿಸಲಾಗುತ್ತದೆ. ಹೀಗೆ ಒಬ್ಬ ಸೋಂಕಿನಿಂದ ಗುಣಮುಖನಾದ ವ್ಯಕ್ತಿಯಿಂದ ಎರಡು ಡೋಸ್‌ನಷ್ಟು ಪ್ರತಿರೋಧ ಕಣಗಳನ್ನು  ತೆಗೆಯಬಹುದಾಗಿದೆ. ಒಬ್ಬ ರೋಗಿಗೆ ಒಂದು ಡೋಸ್ ನೀಡಬೇಕಾಗುತ್ತದೆ. ಹೀಗಾಗಿ ಒಬ್ಬ ಗುಣಮುಖನಾದ ಸೋಂಕಿತನಿಂದ ಇಬ್ಬರು ರೋಗಿಗಳಿಗೆ ಪ್ರತಿರೋಧ ಕಣಗಳನ್ನು ನೀಡಿ ಅವರಿಬ್ಬರನ್ನು ಗುಣಪಡಿಸಬಹುದಾಗಿದೆ. 

ಕೋವಿಡ್–19 ರೋಗದಿಂದ ಗುಣಮುಖರಾದವರ ದೇಹದಲ್ಲಿದ್ದಾಗ ಈ ಪ್ರತಿರೋಧ ಕಣಗಳು, ಕೊರೋನಾ ವೈರಾಣುಗಳ ಮೇಲೆ ದಾಳಿ ನಡೆಸುವ ಗುಣ ಬೆಳೆಸಿಕೊಂಡಿರುತ್ತವೆ. ದಾಳಿಯ ಗುಣವನ್ನು ಈ ಕಣಗಳು ಶಾಶ್ವತವಾಗಿ ಕಾಯ್ದುಕೊಳ್ಳುತ್ತವೆ. ಈಗ ರೋಗಪೀಡಿತ ದೇಹ ಸೇರಿದ  ನಂತರವೂ ಈ ದಾಳಿಯನ್ನು ಅವು ಮುಂದುವರಿಸುತ್ತವೆ. ಹೊಸ ದೇಹದಲ್ಲಿ ಕೆಲವು ಕಾಲವಷ್ಟೇ ಈ ಪ್ರತಿರೋಧ ಕಣಗಳು ಸಕ್ರಿಯವಾಗಿರುತ್ತವೆ. ಅವು ನಿಷ್ಕ್ರಿಯವಾಗುವಷ್ಟರಲ್ಲಿ ದೇಹವು ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಂಡಿರುತ್ತವೆ. ಹೀಗಾಗಿ ರೋಗಿ ಆದಷ್ಟು ಬೇಗ  ಗುಣಮುಖನಾಗುತ್ತಾನೆ.

ಆದರೆ ಈ ಪ್ಲಾಸ್ಮಾ ಥೆರಪಿಯ ಫಲಿತಾಂಶಗಳು ರೋಗಿಯಿಂದ ರೋಗಿಗೆ ಅಂದರೆ ರೋಗಿಯಲ್ಲಿನ ರೋಗ ನಿರೋಧಕ ಶಕ್ತಿ ಸಾಮರ್ಥ್ಯದ ಮೇಲೆ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಒಟ್ಟಾರೆ ಲಸಿಕೆ ಮತ್ತು ಔಷಧಿ ಇಲ್ಲದ ಈ ಕೊರೋನಾ ವೈರಸ್ ಗೆ ಪ್ಲಾಸ್ಮಾ ಥೆರಪಿ ತಾತ್ಕಾಲಿಕ  ಸಂಜೀವಿನಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com