ಕೋವಿಡ್-19: ಗರ್ಭಿಣಿಯರೇ ಆತಂಕ, ಭಯ ಬಿಟ್ಹಾಕಿ... ಖುಷಿಯಿಂದ ಮಗುವನ್ನು ಸ್ವಾಗತಿಸಿ!

ಎಲ್ಲಾ ಕಡೆ ಕೊರೋನಾ ಇರುವ ಸಂದರ್ಭದಲ್ಲಿ ಆಸ್ಪತ್ರೆಗೆ ಚೆಕ್ ಅಪ್ ಗೆ ಹೋಗುವುದು ಹೇಗೆ, ಹೆರಿಗೆಯ ಸಂದರ್ಭದಲ್ಲಿ ತೊಂದರೆ ಬಂದರೆ ಏನು ಮಾಡುವುದು, ಹುಟ್ಟಲಿರುವ ಮಗುವಿಗೂ ಕೊರೋನಾ ಬಂದರೆ ಹೀಗೆ ಸಾಕಷ್ಟು ಪ್ರಶ್ನೆಗಳು, ಆತಂಕ, ಗೊಂದಲ, ಭಯದಲ್ಲಿ ಗರ್ಭಿಣಿಯರು ದಿನ ಕಳೆಯುತ್ತಿದ್ದಾರೆ.
ಪಿಪಿಇ ಕಿಟ್ ಧರಿಸಿ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡುತ್ತಿರುವುದು
ಪಿಪಿಇ ಕಿಟ್ ಧರಿಸಿ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡುತ್ತಿರುವುದು

ಹೆರಿಗೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿವೆ ಎಂದು ಆಸ್ಪತ್ರೆಗೆ ಹೋದ ಗರ್ಭಿಣಿಯೊಬ್ಬರು ಕೊರೋನಾ ಪರೀಕ್ಷೆ ಮಾಡಿದಾಗ ಪಾಸಿಟಿವ್ ಎಂದು ಬಂತು. ಮಾನಸಿಕವಾಗಿ ಆಘಾತವಾಯಿತು,ವೈದ್ಯರು, ಮನೆಯವರು ಆಕೆಗೆ ಧೈರ್ಯ ತುಂಬಿದರು, ಇದರಿಂದ ಆ ಗರ್ಭಿಣಿಗೆ ನಿರಾತಂಕವಾಗಿ ಹೆರಿಗೆಯಾಯಿತು, ಮಗುವಿನಲ್ಲಿಯೂ ಕೊರೋನಾ ಪಾಸಿಟಿವ್ ಕಂಡುಬಂತು, ಆದರೆ ಕೊರೋನಾ ಲಕ್ಷಣಗಳೇನು ತಾಯಿ-ಮಗುವಿನಲ್ಲಿ ಕಂಡುಬಂದಿರಲಿಲ್ಲ. ಮನೆಯಲ್ಲಿ ಸೌಕರ್ಯವಿದೆ, ಐಸೊಲೇಷನ್ ನಲ್ಲಿದ್ದು ಸೂಕ್ತ ಆರೋಗ್ಯ ಪಾಲನೆ ಮಾಡಿಕೊಳ್ಳುತ್ತೇವೆ ಎಂದು ಕುಟುಂಬಸ್ಥರು ಹೇಳಿದಾಗ ವೈದ್ಯರು ಮನೆಗೆ ಕಳುಹಿಸಿದರು.

ಆದರೆ ಅವರು ವಾಸವಿದ್ದ ಅಪಾರ್ಟ್ ಮೆಂಟ್ ನಲ್ಲಿ ಅಕ್ಕಪಕ್ಕದ ಮನೆಯವರು, ನೀವು ಆಸ್ಪತ್ರೆಯಲ್ಲಿಯೇ ಇದ್ದು ಸಂಪೂರ್ಣ ಗುಣಮುಖರಾಗಿ ಬರಬೇಕು, ಇಲ್ಲದಿದ್ದರೆ ಇಲ್ಲಿ ಉಳಿದವರಿಗೆ ಹರಡುತ್ತದೆ ಎಂದು ದೂಷಿಸಲು ಆರಂಭಿಸಿದರಂತೆ. ಹೆರಿಗೆಯಾದ ಮಹಿಳೆ ಮನೆಯಲ್ಲಿ ಮೂವರಿಗೆ ಕೊರೋನಾ ಬಂದಿತ್ತು. ಕೊನೆಗೆ ಆಸ್ಪತ್ರೆ ವೈದ್ಯರು ಮತ್ತು ಬಿಬಿಎಂಪಿ ಸಿಬ್ಬಂದಿ ಮಾತುಕತೆ ನಡೆಸಿ ಆಸ್ಪತ್ರೆಯಲ್ಲಿ ಐಸೊಲೇಷನ್ ನಲ್ಲಿ ಇರಿಸಿ ಚಿಕಿತ್ಸೆ ಕೊಡಿಸಿದರು.

ಹೀಗೆ ಕೊರೋನಾ ರೋಗಿಗಳ ಬಗ್ಗೆ ನಿಂದನೆ, ದೂಷಣೆ, ತಪ್ಪು ತಿಳುವಳಿಕೆ, ಕಳಂಕಿತರಂತೆ ನೋಡುವ ಸ್ವಭಾವ ಅಲ್ಲಲ್ಲಿ ನಡೆಯುತ್ತಲೇ ಇರುತ್ತದೆ. ಈ ಸಮಯದಲ್ಲಿ ಕೊರೋನಾ ರೋಗಿಗಳಿಗೆ ಮಾನಸಿಕವಾಗಿ ಧೈರ್ಯ, ಬೆಂಬಲ ನೀಡುವುದು ಬಿಟ್ಟು ಅವರನ್ನು ದೂಷಿಸುವುದು, ತಾತ್ಸಾರ ಮಾಡುವುದು ಮಾಡಬಾರದು, ಜನರು ವಿಶಾಲ ಮನಸ್ಸಿನಿಂದ ನೋಡಬೇಕು ಎನ್ನುತ್ತಾರೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ ಉಷಾ ವಿಕ್ರಾಂತ್.

ಕೊರೋನಾ ವೈರಸ್ ಕಳೆದ ತಿಂಗಳಿನಿಂದ ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಈ ಸಂದರ್ಭದಲ್ಲಿ ಗರ್ಭಿಣಿಯರು ಇರುವ ಮನೆಗಳ ಸದಸ್ಯರು ಆತಂಕಕ್ಕೊಳಗಾಗುವುದು ಸಹಜ. ಎಲ್ಲಾ ಕಡೆ ಕೊರೋನಾ ಇರುವ ಸಂದರ್ಭದಲ್ಲಿ ಆಸ್ಪತ್ರೆಗೆ ಚೆಕ್ ಅಪ್ ಗೆ ಹೋಗುವುದು ಹೇಗೆ, ಹೆರಿಗೆಯ ಸಂದರ್ಭದಲ್ಲಿ ತೊಂದರೆ ಬಂದರೆ ಏನು ಮಾಡುವುದು, ಹುಟ್ಟಲಿರುವ ಮಗುವಿಗೂ ಕೊರೋನಾ ಬಂದರೆ ಹೀಗೆ ಸಾಕಷ್ಟು ಪ್ರಶ್ನೆಗಳು, ಆತಂಕ, ಗೊಂದಲ, ಭಯದಲ್ಲಿ ದಿನ ಕಳೆಯುತ್ತಿದ್ದಾರೆ.ಶಿಶುವಿನ ಆಗಮನಕ್ಕೆ ಸಂಭ್ರಮದಿಂದ ಕಾಯಬೇಕಾದ ತಾಯಿ ಮತ್ತು ಆಕೆಯ ಮನೆಯವರು ಇಂದು ಭಯ, ಆತಂಕದಲ್ಲಿ ನವಮಾಸಗಳನ್ನು ಕಳೆಯುವ ಸ್ಥಿತಿ ಬಂದಿದೆ. ಅನೇಕ ದಂಪತಿಗಳು ಈಗ ಮಗು ಬೇಡ, ಈ ಕೊರೋನಾ ರಗಳೆಗಳೆಲ್ಲವೂ ಮುಗಿಯಲಿ, ಆಮೇಲೆ ಮಗು ಮಾಡಿಕೊಂಡರಾಯಿತು ಎಂದು ಫ್ಯಾಮಿಲಿ ಪ್ಲಾನಿಂಗ್ ಮಾಡಿಕೊಳ್ಳುತ್ತಿದ್ದಾರೆ.

ಹಾಗಾದರೆ ಗರ್ಭಿಣಿಯರಿಗೆ ನಿಜಕ್ಕೂ ಅಪಾಯ ಹೆಚ್ಚಿದೆಯಾ, ಈ ಕೊರೋನಾ ಸಮಯದಲ್ಲಿ ಸುಲಭವಾಗಿ ಹೆರಿಗೆಯಾಗಿ ಆರೋಗ್ಯಯುತ ಮಗುವನ್ನು ಪಡೆಯುವುದು ಹೇಗೆ?, ಗರ್ಭಿಣಿಯರು ಯಾವ ರೀತಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಡಾ ಉಷಾ ವಿಕ್ರಾಂತ್ ವಿವರಿಸಿದ್ದಾರೆ.

ಇವರ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿನಿಂದೀಚೆಗೆ ಹೆರಿಗೆ ಸಮಯದಲ್ಲಿ ಕೊರೋನಾ ಪಾಸಿಟಿವ್ ಬಂದ 5 ಮಂದಿ ಗರ್ಭಿಣಿಯರಿಗೆ ಹೆರಿಗೆ ಸುಸೂತ್ರವಾಗಿ ನಡೆದು ಐವರು ಕೂಡ ಗುಣಮುಖರಾಗಿ ಇಂದು ಆರೋಗ್ಯವಾಗಿದ್ದಾರೆ. ಈ ಐವರಲ್ಲಿ ಇಬ್ಬರ ಶಿಶುಗಳಿಗೂ ಕೊರೋನಾ ಪಾಸಿಟಿವ್ ಬಂದಿತ್ತು. ಇನ್ನೊಬ್ಬ ಗರ್ಭಿಣಿಗೆ 7ನೇ ತಿಂಗಳಲ್ಲಿ ಪಾಸಿಟಿವ್ ಕಂಡುಬಂದಿತ್ತಂತೆ. ಅವರು ಸಹ ಗುಣಮುಖರಾಗಿದ್ದಾರೆ ಎನ್ನುತ್ತಾರೆ ವೈದ್ಯೆ. ಇಲ್ಲಿ ಅವರು ಕೆಲವು ಸಂದೇಹಗಳಿಗೆ ಉತ್ತರಿಸಿದ್ದಾರೆ.

ಕೊರೋನಾ ಪಾಸಿಟಿವ್ ಬಂದ ಗರ್ಭಿಣಿಯರಿಗೆ ತಕ್ಷಣಕ್ಕೆ ಸಿಗಬೇಕಾಗಿದ್ದು ಏನು?
ಕೊರೋನಾ ಪಾಸಿಟಿವ್ ಬಂದ ಗರ್ಭಿಣಿಯರಿಗೆ ಧೈರ್ಯ ಬಹಳ ಮುಖ್ಯ,ಕುಟುಂಬದವರು ಅವರಲ್ಲಿ ಭರವಸೆ, ಆಶಾಕಿರಣ ಮೂಡಿಸಬೇಕು. ಯಾವುದೇ ಕಾರಣಕ್ಕೂ ಧೈರ್ಯಗೆಡುವ ಅಗತ್ಯವಿಲ್ಲ ಎಂದು ಹೇಳಬೇಕು. ಸೋಂಕು ಅಂದರೇನು, ಯಾವ ರೀತಿ ಎಂದು ಸರಿಯಾಗಿ ಗರ್ಭಿಣಿಯರಿಗೆ ಮಾರ್ಗದರ್ಶನ ನೀಡಬೇಕು. ಗರ್ಭಿಣಿಯರಿಗೆ ಸೋಂಕು ತಗುಲಿದರೆ ಕೇವಲ ಶೇಕಡಾ 5ರಷ್ಟು ಮಂದಿಗೆ ಮಾತ್ರ ಸಮಸ್ಯೆ ಜಟಿಲವಾಗಬಹುದು. ಶೇಕಡಾ 95ರಷ್ಟು ಮಂದಿ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖ ಹೊಂದುತ್ತಾರೆ.

ಆರೋಗ್ಯಕರ ಆಹಾರ, ಜೀವನಕ್ರಮ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮನೆಯಲ್ಲಿಯೇ ಇರುವುದು, ಮನೆಯಲ್ಲಿ ಇತರರಿಗೆ ಯಾರಿಗಾದರೂ ಕೊರೋನಾ ಲಕ್ಷಣ ಕಾಣಿಸುತ್ತಿದೆಯಾ ಎಂದು ಗಮನಿಸುತ್ತಿರುವುದು, ಅಗತ್ಯವಿದ್ದರೆ ಮಾತ್ರ ಹೊರಗೆ ಹೋಗುವುದು, ಅಗತ್ಯವಿದ್ದಾಗ ಆಸ್ಪತ್ರೆಗೆ ಹೋಗಿ ಅಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಅಳವಡಿಸಿ ವೈದ್ಯರಿಂದ ಸಲಹೆ ಪಡೆಯುವ ಅಭ್ಯಾಸವನ್ನು ಗರ್ಭಿಣಿಯರು ಪಾಲಿಸಬೇಕು. ಗರ್ಭಿಣಿಯರಿಗೆ ಕುಟುಂಬಸ್ಥರು, ವೈದ್ಯರು ಮಾನಸಿಕ ಮತ್ತು ನೈತಿಕ ಬೆಂಬಲ ಕಡ್ಡಾಯವಾಗಿ ನೀಡಬೇಕು. ಸಮಾಜದಲ್ಲಿ ಜನರು ಈ ಬಗ್ಗೆ ತಪ್ಪು ತಿಳುವಳಿಕೆ ಹೊಂದಬಾರದು.

ಹಳ್ಳಿಗಳಲ್ಲಿರುವ ಬಡ, ಮಧ್ಯಮ ವರ್ಗಗಳ ಗರ್ಭಿಣಿಯರಿಗೆ ಸೋಂಕು ತಗುಲಿದರೆ ಏನು ಮಾಡಬೇಕು?
ಬಡವರು, ಹಳ್ಳಿಯಲ್ಲಿರುವ ಗರ್ಭಿಣಿಯರು, ಹೆರಿಗೆಯಾದವರಲ್ಲಿ ಕೋವಿಡ್-19 ಕಂಡುಬಂದರೆ ಅಂಥವರಿಗಾಗಿಯೇ  ಕೋವಿಡ್ ಕೇರ್ ಸೆಂಟರ್ ಗಳಿರುತ್ತವೆ. ಅಲ್ಲಿ ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರು 14 ದಿನ ನೋಡಿಕೊಂಡು ಮತ್ತೆ ಕೋವಿಡ್ ಪರೀಕ್ಷೆ ಮಾಡಿಸಿ ನೆಗೆಟಿವ್ ಬಂದರೆ ಮನೆಗೆ ಕಳುಹಿಸುತ್ತಾರೆ, ರೋಗ ಉಲ್ಭಣವಾದರೆ ಹೆಚ್ಚಿನ ಚಿಕಿತ್ಸೆಗೆ ದೊಡ್ಡ ಆಸ್ಪತ್ರೆಗೆ ಕಳುಹಿಸುತ್ತಾರೆ.

ಗರ್ಭಿಣಿಯರು ಹೆದರಿಕೊಳ್ಳುವ ಅಗತ್ಯವಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಹಾಕಿಕೊಂಡು, ಕೈಯನ್ನು ಸ್ಯಾನಿಟೈಸ್ ಮಾಡುವುದು, ಸೋಪ್ ನಿಂದ ಗಂಟೆಗೊಮ್ಮೆ ತೊಳೆದುಕೊಳ್ಳುವುದರಿಂದ ಸೋಂಕಿನಿಂದ ಬಚಾವಾಗಬಹುದು, ಚೆನ್ನಾಗಿ ಗಾಳಿ-ಬೆಳಕು ಬರುವಲ್ಲಿ ಉಸಿರಾಟದ ವ್ಯಾಯಾಮ, ಪ್ರಾಣಾಯಾಮ ಮಾಡಬೇಕು, ಒಳ್ಳೊಳ್ಳೆ ಪುಸ್ತಕ ಓದುವುದು, ಸಂಗೀತ ಕೇಳುವುದು, ಸಿನೆಮಾ ನೋಡುವುದು, ಮೈ ಮನಸ್ಸಿಗೆ ಮುದ ನೀಡುವ ಕೆಲಸಗಳನ್ನು ಮಾಡುತ್ತಿರಬೇಕು.

ಗರ್ಭಿಣಿಯರಿಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚು ಎಂಬ ಅಭಿಪ್ರಾಯ ಸಾಮಾನ್ಯವಾಗಿ ಇದೆ, ಅದು ಹೌದೇ?

ಕೋವಿಡ್-19 ಹರಡಲು ಗರ್ಭಿಣಿಯರು ಮತ್ತು ಇತರ ಸಾಮಾನ್ಯ ವ್ಯಕ್ತಿಗಳು ಎಂಬ ವ್ಯತ್ಯಾಸವಿಲ್ಲ. ಇತರರಿಗೆ ಬರುವಂತೆಯೇ ಗರ್ಭಿಣಿಯರಿಗೂ ಸೋಂಕು ತಗುಲಬಹುದು. ಆದರೆ ಮಹಿಳೆ ಗರ್ಭ ಧರಿಸಿದ ನಂತರ ಶರೀರದಲ್ಲಿ ಹಲವು ಬದಲಾವಣೆಗಳಾಗುವುದರಿಂದ ಹಾಗೂ ದೇಹ ಸೂಕ್ಷ್ಮ ಸ್ಥಿತಿಯಲ್ಲಿರುವುದರಿಂದ ಹೆಚ್ಚು ಜಾಗ್ರತೆ ವಹಿಸಬೇಕು. ಉಸಿರಾಟ, ಜ್ವರ, ಶೀತ, ನೆಗಡಿ, ಕೆಮ್ಮು, ಕಫ, ಮೈಕೈ ನೋವು, ವಾಸನೆ ಬರದಿರುವುದು, ಬಾಯಿರುಚಿ ಹೋಗುವುದು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಅದು ಬಿಟ್ಟರೆ ಗರ್ಭಿಣಿಯರಿಗೆ ಬೇರೆ ಯಾವುದೇ ಹೆಚ್ಚಿನ ಅಪಾಯ, ಆರೋಗ್ಯ ಸಮಸ್ಯೆಯೇನೂ ಇಲ್ಲ.

ತಾಯಿಯಿಂದ ಮಗುವಿಗೆ ಸೋಂಕು ಹರಡುತ್ತದೆಯೇ?
ಇತ್ತೀಚೆಗೆ ಬಂದಿರುವ ಮಾಹಿತಿ ಪ್ರಕಾರ ತಾಯಿಯಿಂದ ಮಗುವಿಗೆ ಹರಡುವ ಸಾಧ್ಯತೆಗಳಿವೆ (Verticale transmission)ಎನ್ನುತ್ತಾರೆ. ಆದರೆ ಹೆಚ್ಚಾಗಿ ಗರ್ಭಪಾತವಾಗುವುದಾಗಲಿ, ಸಮಯಪೂರ್ವ ಹೆರಿಗೆಯಾಗಲಿ ಮತ್ತು ಸೋಂಕಿನಿಂದ ಮಗುವಿಗೆ ಬರುವ ಸಮಸ್ಯೆಗಳು (congenital anamolies) ಹೆಚ್ಚಾಗಿ ಕಂಡುಬಂದಿಲ್ಲ. ಹೆರಿಗೆಗೆ ಮುಂಚೆ ಗರ್ಭಿಣಿಯರನ್ನು ಕೊರೋನಾ ಸೋಂಕು ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಪತ್ತೆಯಾಗಿರುವುದೇ ಹೆಚ್ಚು.

ಸಹಜ ಹೆರಿಗೆ ಅಥವಾ ಸಿಸೇರಿಯನ್ ಉತ್ತಮವೇ?
ಇತರ ಮಹಿಳೆಯರಂತೆಯೇ ಇವರಿಗೂ ಸಹಜ ಹೆರಿಗೆ ಮಾಡಬಹುದು, ಕೊರೋನಾ ಸೋಂಕಿತರು ಮತ್ತು ಸೋಂಕಿನ ಲಕ್ಷಣಗಳಿದ್ದಲ್ಲಿ ಉದಾಹರಣೆ ಜ್ವರ, ಉಸಿರಾಟದ ತೊಂದರೆಗಳಿದ್ದರೆ, ಮಗುವಿಗೆ ತೊಂದರೆಯಾದರೆ (fetal distress) ಸಿಸೇರಿಯನ್ ಮೂಲಕ ಹೆರಿಗೆ ಮಾಡಬೇಕಾಗುತ್ತದೆ.

ಕೊರೋನಾ ಪಾಸಿಟಿವ್ ಬಂದ ಗರ್ಭಿಣಿಯರನ್ನು ಆಸ್ಪತ್ರೆಯಲ್ಲಿ ಹೇಗೆ ನೋಡಿಕೊಳ್ಳುತ್ತಾರೆ?
ಹೆರಿಗೆಗೆ ಸಜ್ಜಾದ ಗರ್ಭಿಣಿಯಲ್ಲಿ ಕೊರೋನಾ ಇದೆ ಎಂದು ಗೊತ್ತಾದ ತಕ್ಷಣ ಐಸೊಲೇಷನ್ ವಾರ್ಡ್ ಗೆ ಶಿಫ್ಟ್ ಮಾಡಲಾಗುತ್ತದೆ. ಆಸ್ಪತ್ರೆಯಲ್ಲಿ ಅವರಿಗೇ ಆದ ಪ್ರತ್ಯೇಕ ಹೆರಿಗೆ ಕೊಠಡಿ ಮತ್ತು ಆಪರೇಷನ್ ಥಿಯೇಟರ್ ನ್ನು ಉಪಯೋಗಿಸಬೇಕಾಗುತ್ತದೆ.  ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರು ಪಿಪಿಇ ಕಿಟ್, ಮಾಸ್ಕ್ ನ್ನು ಧರಿಸಿ ಅವರ ಆರೈಕೆ ಮಾಡುತ್ತಾರೆ.

ಹೆರಿಗೆಯಾದ ನಂತರ ಮಗುವಿಗೆ ಹಾಲುಣಿಸಬಹುದೇ?  
ತಾಯಿ ಮಾಸ್ಕ್, ಗ್ಲೌಸ್ ಹಾಕಿಕೊಂಡು ಕೈಗಳನ್ನು, ಎದೆಯ ಭಾಗ ಸ್ವಚ್ಛವಾಗಿಟ್ಟುಕೊಂಡು ನೇರವಾಗಿ ಮಗುವಿಗೆ ಹಾಲುಣಿಸಬಹುದು, ಯಾವುದೇ ತೊಂದರೆಯಿಲ್ಲ, ಇಲ್ಲವೇ ತಾಯಿಗೆ ಭಯವಿದ್ದರೆ ಎದೆಯಿಂದ ಹಾಲು ತೆಗೆದು ಆ ಹಾಲನ್ನು ಸೋಂಕು ಇಲ್ಲದ ಆಕೆಯ ಸಹಾಯಕ್ಕೆಂದು ಇರುವ ಕುಟುಂಬದವರು ಮಗುವಿಗೆ ಒಳಲೆಯಿಂದ ಹಾಲುಣಿಸಬಹುದು. ಒಂದು ವೇಳೆ ತಾಯಿ ಹಾಲುಣಿಸುವ ಪರಿಸ್ಥಿತಿಯಲ್ಲಿ ಇರದಿದ್ದರೆ ಅವರು ಚೇತರಿಸಿಕೊಳ್ಳುವವರೆಗೆ ಬ್ರೆಸ್ಟ್ ಮಿಲ್ಕ್ ಬ್ಯಾಂಕಿನ ಸೌಲಭ್ಯವನ್ನು ಬಳಸಿಕೊಳ್ಳಬಹುದು.

ಹೆರಿಗೆಯ ನಂತರ ಬಾಣಂತಿಯ ಆರೈಕೆ ಹೇಗೆ?
ಬಾಣಂತಿಗೆ ಸೋಂಕಿನ ಲಕ್ಷಣಗಳು ಇಲ್ಲದಿದ್ದರೆ ಮತ್ತು ಮನೆಯಲ್ಲಿ ಸೌಕರ್ಯಗಳಿದ್ದರೆ ಅವರನ್ನು ಮನೆಯಲ್ಲಿಯೇ ಆರೈಕೆ ಮಾಡಬಹುದು(ಹೋಂ ಐಸೊಲೇಷನ್), ಅವರಿಗೆ ಚೆನ್ನಾಗಿ ಗಾಳಿ-ಬೆಳಕು ಬರುವ ಪ್ರತ್ಯೇಕ ಕೋಣೆ ಮತ್ತು ಬಾತ್ ರೂಂ ಮತ್ತು ಆರೋಗ್ಯಕರ ಆಹಾರ( ವಿಟಮಿನ್ ಸಿ, ವಿಟಮಿನ್ ಡಿ, ಝಿಂಕ್, ಪ್ರೊಟೀನ್)ವನ್ನು ಕೊಡುವುದು, ಬಾಣಂತಿಯು ಹೆಚ್ಚು ನೀರನ್ನು ಕುಡಿಯಬೇಕು ಮತ್ತು ಕೊರೋನಾ ಲಕ್ಷಣಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು(ಜ್ವರ, ಕೆಮ್ಮು, ಉಸಿರಾಟದ ತೊಂದರೆ, ಆಮ್ಲಜನಕದ ಪ್ರಮಾಣಗಳನ್ನು ಗಮನಿಸುತ್ತಿರುವುದು,), ದಿನನಿತ್ಯ ವೈದ್ಯರ ಅಥವಾ ಆರೋಗ್ಯ ಕಾರ್ಯಕರ್ತೆಯರ ಸಂಪರ್ಕದಲ್ಲಿರುವುದು, ಬಾಣಂತಿಯಲ್ಲಿ ಬೇಗನೆ ರಕ್ತ ಹೆಪ್ಪುಗಟ್ಟುವ ಸಾಧ್ಯತೆಗಳಿರುವುದರಿಂದ ಹೆಚ್ಚಾಗಿ ನೀರು ಕುಡಿಯುವುದು ಮತ್ತು ಅವರು ಹಾಸಿಗೆ ಮೇಲೆಯೇ ಹೆಚ್ಚು ವಿಶ್ರಾಂತಿ ಪಡೆಯುವ ಅಗತ್ಯವಿಲ್ಲ, ಬದಲಾಗಿ ಓಡಾಡುತ್ತಾ ಇದ್ದರೆ ರಕ್ತ ಸಂಚಲನೆಗೆ ನೆರವಾಗುತ್ತದೆ.

ಬಾಣಂತಿ ಮತ್ತು ಮಗುವಿನ ಆರೈಕೆ ಮಾಡುವವರು ಮಾಸ್ಕ್ ಧರಿಸಿ ಕೈಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಅಗತ್ಯವಿದ್ದಷ್ಟು ಹೊತ್ತು ಮಾತ್ರ ರೋಗಿಯ ಬಳಿ ಇದ್ದು ನಂತರ ಅಂತರ ಕಾಯ್ದುಕೊಳ್ಳಬೇಕು. ರೋಗ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಬೇಕು.

ಕೊರೋನಾ ಸಂದರ್ಭದಲ್ಲಿ ಗರ್ಭಪಾತ ಮಾಡಿಸಿಕೊಳ್ಳಬಹುದೇ?
ಗರ್ಭ ಮುಂದುವರಿಸುವ ಇಚ್ಛೆ ಇಲ್ಲದಿದ್ದರೆ ವೈದ್ಯರ ಸಲಹೆ ಮೇರೆಗೆ ಗರ್ಭಪಾತ ಮಾಡಿಸಿಕೊಳ್ಳಬಹುದು. ಗರ್ಭವನ್ನು ಮುಂದುವರಿಸಬೇಕಾದರೆ ವೈದ್ಯರ ಸಲಹೆ ಪ್ರಕಾರ ತಪಾಸಣೆ ಮಾಡಿಸಿಕೊಳ್ಳಬೇಕು.

ಬಂಜೆತನಕ್ಕೆ ಚಿಕಿತ್ಸೆ ತೆಗೆದುಕೊಳ್ಳುವುದು ಎಷ್ಟು ಸುರಕ್ಷಿತ?
ಗರ್ಭಧಾರಣೆ ಬಯಸಿ ವೈದ್ಯರ ನೆರವು ಪಡೆಯುವುದನ್ನು ಸದ್ಯಕ್ಕೆ ಮುಂದೂಡಬಹುದು. ಏಕೆಂದರೆ ಅದಕ್ಕಾಗಿ ಪದೇ ಪದೇ ಆಸ್ಪತ್ರೆಗೆ ಹೋಗಬೇಕಾಗಿ ಬರಬಹುದು.ಅದರಿಂದ ಸೋಂಕಿನ ಸಾಧ್ಯತೆಗಳು ಹೆಚ್ಚಿರುತ್ತದೆ.

ಕೊರೋನಾ ಪಾಸಿಟಿವ್ ಬಂದು ಹೆರಿಗೆಯಾದ ಮಹಿಳೆ ಅಭಿಪ್ರಾಯ:
''ನನಗೆ ಸಿಸೇರಿಯನ್ ಹೆರಿಗೆ ಜುಲೈ 1ರಂದು ಎಂದು ನಿಗದಿಯಾಗಿತ್ತು. ಅದಕ್ಕೆ ಒಂದು ದಿನ ಮೊದಲು ಭ್ರೂಣದಲ್ಲಿ ಅನಿರೀಕ್ಷಿತವಾಗಿ ನೀರು ಒಡೆದು ಆಸ್ಪತ್ರೆಗೆ ಹೋಗಿ ದಾಖಲಾದೆನು. ಕೊರೋನಾ ಪರೀಕ್ಷೆಗೊಳಪಡಿಸಿದರು, ಪಾಸಿಟಿವ್ ಎಂದು ಗೊತ್ತಾದಾಗ ನನಗೆ ವಿಷಯ ಅರಗಿಸಿಕೊಳ್ಳಲಾಗಲಿಲ್ಲ.

ಹೆರಿಗೆಯಾಯಿತು, ಕೊರೋನಾದ ಯಾವ ಲಕ್ಷಣವೂ ಇರಲಿಲ್ಲ, ಆದರೂ ಪಾಸಿಟಿವ್ ಹೇಗೆ ಬಂತು ಎಂದು ಚಿಂತೆಯಾಯಿತು, ಮಗುವಿಗೆ ಟೆಸ್ಟ್ ಮಾಡಿಸಿದಾಗ ನೆಗೆಟಿವ್ ಬಂತು. ಹೀಗಾಗಿ ಹೆರಿಗೆಯಾದ ದಿನ ಸಂಜೆಯೇ ಮನೆಗೆ ಹೋಗಿ ಐಸೊಲೇಷನ್ ನಲ್ಲಿದ್ದು ಎಲ್ಲಾ ಮುನ್ನೆಚ್ಚರಿಕೆ ವಹಿಸಿಕೊಳ್ಳುತ್ತೇವೆ ಎಂದು ವೈದ್ಯರನ್ನು ಕೇಳಿಕೊಂಡೆವು. ಅವರು ಒಪ್ಪಿದರು. ಮನೆಯಲ್ಲಿ ಕುಟುಂಬದವರಿಂದ ಎಲ್ಲಾ ರೀತಿಯಿಂದಲೂ ಸಹಕಾರ ದೊರೆಯಿತು.

ಎನ್-95 ಮಾಸ್ಕ್ ಎಲ್ಲರೂ ಹಾಕಿಕೊಂಡು ಹಾಲುಣಿಸುವಾಗ ಮಾತ್ರ ಮಗುವನ್ನು ಕರೆದುಕೊಂಡು ನಾನಿದ್ದ ರೂಮಿಗೆ ಬಂದು ಕೊಟ್ಟು ಹೋಗುತ್ತಿದ್ದರು. ಚೆನ್ನಾಗಿ ಎದೆಭಾಗ, ಕೈ ಸ್ವಚ್ಛ ಮಾಡಿಕೊಂಡು ಮಗುವಿಗೆ ಹಾಲುಣಿಸುತ್ತಿದ್ದೆ. 15 ದಿನ ನಾನು ಮತ್ತು ಮಗು ಸಂಪರ್ಕದಲ್ಲಿರಲಿಲ್ಲ. ದೂರವೇ ಇಡುತ್ತಿದ್ದರು. ಹಾಲುಣಿಸುವಾಗ ಮಾತ್ರ ನನ್ನ ಬಳಿ ಕರೆದುಕೊಂಡು ಬರುತ್ತಿದ್ದರು. ಮನೆಯಲ್ಲಿ ನನ್ನ ಮತ್ತು ಮಗುವಿನ ಆರೋಗ್ಯ ತಪಾಸಣೆ ಮಾಡಲು ಧರ್ಮೊಮೀಟರ್, ಆಕ್ಸಿಮೀಟರ್ ಮತ್ತು ಇತರ ಸೌಕರ್ಯಗಳನ್ನು ಇಟ್ಟುಕೊಂಡಿದ್ದೆವು. 15 ದಿನಗಳ ಕಾಲ ನಿರಂತರ ವೈದ್ಯರ ಜೊತೆ ಸಂಪರ್ಕದಲ್ಲಿದ್ದು ನಂತರ ನನಗೆ ಮತ್ತು ಮಗುವಿಗೆ ಮತ್ತೊಮ್ಮೆ ಕೋವಿಡ್ ಟೆಸ್ಟ್ ಮಾಡಿಸಿದಾಗ ನೆಗೆಟಿವ್ ಬಂತು. ಯಾವುದೇ ಸಮಸ್ಯೆಯಾಗಲಿಲ್ಲ.

ಗರ್ಭಿಣಿಯರಿಗೆ ಕೊರೋನಾ ಬಂದಾಗ ಭಯ ಪಟ್ಟುಕೊಂಡು, ಅತ್ತು ಪ್ರಯೋಜನವಿಲ್ಲ, ವಾಸ್ತವವನ್ನು ಸ್ವೀಕರಿಸಿಕೊಂಡು ಕುಟುಂಬದವರ ಬೆಂಬಲ ಪಡೆದು ಮುನ್ನೆಚ್ಚರಿಕೆ ವಹಿಸಿಕೊಂಡರೆ ಯಾವ ತೊಂದರೆಯೂ ಇಲ್ಲ ಎನ್ನುತ್ತಾರೆ ಹೆರಿಗೆ ಸಮಯದಲ್ಲಿ ಕೊರೋನಾ ಕಾಣಿಸಿಕೊಂಡು ಗುಣಮುಖ ಹೊಂದಿದ ಮಹಿಳೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com