ಕೋವಿಡ್-19: ಧೂಮಪಾನ ತ್ಯಜಿಸಲು ಇದು ಸೂಕ್ತ ಸಮಯ

ಧೂಮಪಾನ ಮಾಡುವವರು ಕೊರೋನಾ ಸೋಂಕಿಗೆ ತುತ್ತಾಗಬಹುದಾದ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಇದು ಧೂಮಪಾನ ತ್ಯಜಿಸಲು ಸೂಕ್ತ ಸಮಯ ಎಂದು, ಸಾರ್ವಜನಿಕ ಆರೋಗ್ಯ ತಜ್ಞರಾದ ಡಾ. ತ್ರಿವೇಣಿ ಬಿ.ಎಸ್. ಹೇಳಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಧೂಮಪಾನ ಮಾಡುವವರು ಕೊರೋನಾ ಸೋಂಕಿಗೆ ತುತ್ತಾಗಬಹುದಾದ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಇದು ಧೂಮಪಾನ ತ್ಯಜಿಸಲು ಸೂಕ್ತ ಸಮಯ ಎಂದು, ಸಾರ್ವಜನಿಕ ಆರೋಗ್ಯ ತಜ್ಞರಾದ ಡಾ. ತ್ರಿವೇಣಿ ಬಿ.ಎಸ್. ಹೇಳಿದ್ದಾರೆ. 

ಧೂಮಪಾನ ಮುಕ್ತ ನಗರ ಬೆಂಗಳೂರು (Smoke-free city, Bengaluru), ಅಭಿಯಾನದ ಯೋಜನೆಯ ಮುಖ್ಯಸ್ಥರು ಹಾಗು ರಾಜ್ಯ ಎನ್.ಸಿ.ಡಿ. ಪ್ರ್ರಿವೆನ್ಷನ್ ಟಾಸ್ಕ್ ಪೋರ್ಸ್‌ನ ಸದಸ್ಯರೂ ಆಗಿರುವ ಡಾ. ತ್ರಿವೇಣಿ ಅವರು ತಂಬಾಕು ಬಳಕೆಯು ಮಾನವನ ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ ಹಾಗು ಕೊರೋನಾ ಸೋಂಕಿನ ಭೀತಿಯನ್ನು ಹೆಚ್ಚಿಸುತ್ತದೆ. ಧೂಮಪಾನವನ್ನು ತ್ಯಜಿಸಲು ಹಾಗು ಕೋವಿಡ್ ಸೋಂಕಿನಿಂದ ಸುರಕ್ಷಿತವಾಗಿರಲು ಇದು ಒಂದು ಉತ್ತಮ ಸಮಯವಾಗಿದೆ.  ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ಪ್ರತಿ ವರ್ಷ 80 ಲಕ್ಷ ಜನರು ತಂಬಾಕಿನಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ ಇವರಲ್ಲಿ 7 ಲಕ್ಷ ಜನರು ಪ್ರತ್ಯಕ್ಷ ತಂಬಾಕು ಬಳಕೆಯಿಂದ ಹಾಗು 1 ಲಕ್ಷ ಜನರು ಪರೋಕ್ಷ ಧೂಮಪಾನದಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಧೂಮಪಾನ ಹಾಗು ತಂಬಾಕು ಬಳಕೆಯು ಮನುಷ್ಯನ ರೋಗ ನಿರೋಧಕ ಶಕ್ತಿಯನ್ನು ಕ್ಷೀಣ ಮಾಡುತ್ತದೆ. ಈ ಮೂಲಕ ಶ್ವಾಸಕೋಶಕ್ಕೆ ಸಂಬಂಧಿಸಿದ ಸಿಒಪಿಡಿ-(COPD), ಹೃದಯ ಸಂಬಂಧಿ ಖಾಯಿಲೆ ಹಾಗೂ ಮಧುಮೇಹ ದಂತಹ ತೊಂದರೆಗಳಿಗೆ ಎಡೆಮಾಡುತ್ತದೆ. ಈ ಎಲ್ಲಾ ಸಮಸ್ಯೆಗಳು ಕೋವಿಡ್ ಸೋಂಕಿನ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಮುಂದುವರಿದಂತೆ, ಧೂಮಪಾನಿಗಳು ಸತತವಾಗಿ ಕೈಯನ್ನು ಬಾಯಿಯ ಸಂಪರ್ಕಕ್ಕೆ ತರುವುದು ಹಾಗು ಸಿಗರೇಟು ಹಂಚಿಕೊಳ್ಳುವುದರಿಂದ ಕೊರೋನಾ ಸೋಂಕು ತಗಲುವಿಕೆಯನ್ನು ಹೆಚ್ಚಿಸುತ್ತದೆ ಎಂದು ಧೂಮಪಾನ ಮುಕ್ತ ನಗರ ಬೆಂಗಳೂರು, ಅಭಿಯಾನದ ಯೋಜನೆಯ ಮುಖ್ಯಸ್ಥರಾಗಿರುವ ಡಾ. ತ್ರಿವೇಣಿ. ಬಿ.ಎಸ್ ತಿಳಿಸಿದ್ದಾರೆ. 

ತಂಬಾಕು ಬಳಕೆದಾರರು ಅದರ ಅಭ್ಯಾಸವನ್ನು ಬಿಡಲು ಬಯಸಿದ್ದಲ್ಲಿ ರಾಷ್ಟ್ರೀಯ ತಂಬಾಕು ಕ್ವಿಟ್ ಲೈನ್ ಸಂಖ್ಯೆಯಾದ 1800-11-2356ಗೆ ಕರೆಮಾಡಿ ಉಚಿತ ಆಪ್ತ ಸಮಾಲೋಚನೆ ಪಡೆದುಕೊಳ್ಳಬಹುದಾಗಿದೆ. ತಂಬಾಕು ತ್ಯಜಿಸಲು ದಿನಾಂಕ ನಿಗದಿಪಡಿಸುವುದು, ವೈಯಕ್ತಿಕ ಯೋಜನೆಯನ್ನು ರೂಪಿಸಲು ಹಾಗು ಅದರ ಫಾಲೋ-ಅಪ್‌ಗಾಗಿ ಸೂಕ್ತ ಮಾರ್ಗದರ್ಶನ ದೊರೆಯಲಿದೆ. ಇದರ ಪ್ರಯೋಜನವನ್ನು ಮಂಗಳವಾರದಿಂದ ಭಾನುವಾರದವರೆಗೆ ಬೆಳಿಗ್ಗೆ 8 ರಿಂದ  ರಾತ್ರಿ 8ರವರೆಗೆ  ಇಂಗ್ಲಿಷ್, ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ತರಬೇತಿ ಪಡೆದ ಸಮಾಲೋಚಕರ ಮೂಲಕ ಪಡೆಯಬಹುದಾಗಿದೆ. ಎಲ್ಲಾ ಕರೆಗಳು, ಸಂಭಾಷಣೆಯು ಹಾಗು ವೈಯಕ್ತಿಕ ವಿವರಗಳನ್ನು ಗೌಪ್ಯವಾಗಿ ಇರಿಸಲಾಗುತ್ತದೆ.

ತಂಬಾಕು ಬಳಕೆದಾರರು m-cessation ಮೊಬೈಲ್ ಆಪ್‌ಅನ್ನು ಬಳಸಿ ಅಥವಾ 011-22901701ಗೆ ಮಿಸ್ಡ್ ಕಾಲ್ ಕೊಡುವ ಮೂಲಕ ಸಹಾ ತಂಬಾಕು ವ್ಯಸನ ಮುಕ್ತಿ ಸೇವೆಯನ್ನು ಉಚಿತವಾಗಿ ಬಳಸಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com