ಮಧುಮೇಹಿಗಳಲ್ಲಿ ಕೊರೋನಾ ಪರಿಣಾಮ ತೀವ್ರ: ಮುಂಜಾಗ್ರತೆ ವಹಿಸುವುದು ಹೇಗೆ?

ದೀರ್ಘಕಾಲಿಕ ರೋಗಗಳಿಂದ ಬಳಲುತ್ತಿರುವ ಜನರನ್ನು ಮಹಾಮಾರಿ ಕೊರೋನಾ ವೈರಸ್ ಹೆಚ್ಚು ಬಾಧಿಸುತ್ತದೆ. ಸಾಕಷ್ಟು ಜನರು ಕೊರೋನಾ ಸೋಂಕು ತಗುಲಿದ ಕೂಡಲೇ ಜೀವನವೇ ಮುಗಿಯಿತು ಎಂದು ಭಾವಿಸುತ್ತಿದ್ದಾರೆ. ಸಾವೇ ನಿಶ್ಚಿತ ಎಂದು ಬಹುತೇಕರು ತಿಳಿದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ದೀರ್ಘಕಾಲಿಕ ರೋಗಗಳಿಂದ ಬಳಲುತ್ತಿರುವ ಜನರನ್ನು ಮಹಾಮಾರಿ ಕೊರೋನಾ ವೈರಸ್ ಹೆಚ್ಚು ಬಾಧಿಸುತ್ತದೆ. ಸಾಕಷ್ಟು ಜನರು ಕೊರೋನಾ ಸೋಂಕು ತಗುಲಿದ ಕೂಡಲೇ ಜೀವನವೇ ಮುಗಿಯಿತು ಎಂದು ಭಾವಿಸುತ್ತಿದ್ದಾರೆ. ಸಾವೇ ನಿಶ್ಚಿತ ಎಂದು ಬಹುತೇಕರು ತಿಳಿದಿದ್ದಾರೆ. ಇದಕ್ಕೆ ಕಾರಣ ಕೊರೋನಾ ಸೋಂಕಿಗೆ ಔಷಧ ಇಲ್ಲದಿರುವುದು. ಜೊತೆಗೆ ಸೋಂಕಿನ ಬಗ್ಗೆ ವಿಶ್ವದಾದ್ಯಂತ ಭಯದ ವಾತಾವರಣ ನಿರ್ಮಾಣವಾಗಿರುವುದೂ ಕೂಡ ಆಗಿದೆ.

ದೇಶದಲ್ಲಿ ದೀರ್ಘಕಾಲಿಕ ರೋಗಗಳಿಂದ ಬಳಲುತ್ತಿರುವ ಶೇ.73ರಷ್ಟು ಜನರು ಕೊರೋನಾಗೆ ಬಲಿಯಾಗಿದ್ದಾರೆ. ದೀರ್ಘಕಾಲಿಕ ರೊಗಗಳಲ್ಲಿ ಒಂದಾಗಿರುವ ಮಧುಮೇಹ ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಜನರನ್ನು ಬಾಧಿಸುತ್ತಿದ್ದು, ಮಧುಮೇಹ ನಿಯಂತ್ರಣ ಚಿಂತೆ ಒಂದೆಡೆಯಾದರೆ ಮತ್ತೊಂದೆಡೆ ಕೊರೋನಾ ವೈರಸ್ ಕೂಡ ಮಧುಮೇಹಿಗಳನ್ನು ಮತ್ತಷ್ಟು ಆತಂಕಕ್ಕೊಳಗಾಗುವಂತೆ ಮಾಡಿದೆ. ಕೊರೋನಾ ನಡುವೆ ಮಧುಮೇಹ ನಿಯಂತ್ರಣ ಹೇಗೆ, ಮುಂಜಾಗ್ರತೆ ವಹಿಸುವುದಾದರೂ ಹೇಗೆ ಎಂಬುದರ ಬಗ್ಗೆ ನಗರದ ವಿಕ್ರಮ್ ಆಸ್ಪತ್ರೆಯ ಮಧುಮೇಹ ಮತ್ತು ಎಂಡೋಕ್ರೈನ್ ವಿಭಾಗದ ವೈದ್ಯರು ಮಾಹಿತಿ ನೀಡಿದ್ದಾರೆ...

ಮಧುಮೇಹಿಗಳು ಕೊರೋನಾಗೆ ಹೆಚ್ಚು ಸೋಂಕಿಗೊಳಗಾಗುತ್ತಾರೆಯೇ...? ಸೋಂಕು ತಗುಲಿದ ಮಧುಮೇಹಿಗಳಿಗೆ ಜೀವ ಅಪಾಯದಲ್ಲಿರಲಿದೆಯೇ? 
ಮಧುಮೇಹ ಇರುವವರಿಗೆ ಹೆಚ್ಚು ಕೊರೋನಾ ಸೋಂಕು ತಗುಲುತ್ತದೆ ಎಂದು ಹೇಳುವುದಕ್ಕೆ ಯಾವುದೇ ರೀತಿಯ ವರದಿಗಳಿಲ್ಲ. ಆದರೆ, ಕೊರೋನಾ ಸೋಂಕಿಗೊಳಗಾಗಿದ್ದೇ ಆದರೆ, ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೆಚ್ಚಿನ ವಯಸ್ಸು ಮತ್ತು ಸ್ಥೂಲಕಾಯತೆ ಇರುವವರು ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಒಂದು ಅಧ್ಯಯನವೊಂದರಲ್ಲಿ ಎಚ್‌ಬಿಎ 1 ಸಿ > 7.5% ರೋಗಿಗಳಲ್ಲಿ ಮರಣ ಪ್ರಮಾಣ ಹೆಚ್ಚು ಎಂದು ತಿಳಿಸಿದೆ.

ಕೊರೋನಾ ಸೋಂಕು ಪೀಡಿತ ಮಧುಮೇಹಿಗಳು ನಿಯಮಿತವಾಗಿ ಮಧುಮೇಹ ಔಷಧಿಗಳನ್ನು ಮುಂದುವರಿಸಬಹುದೇ?
ಸೋಂಕಿಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರೆ, ವೈದ್ಯರೇ ಈ ಬಗ್ಗೆ ಚಿಕಿತ್ಸೆಗಳನ್ನು ನೀಡುತ್ತಾರೆ. ಮನೆಯಲ್ಲಿ ಕ್ವಾರಂಟೈನ್ ನಲ್ಲಿರುವವರು ಬಹುತೇಕ ಔಷಧಿಗಳನ್ನು ಮುಂದುವರೆಸಬಹುದು. ಒಂದು ವೇಳೆ ಸೋಂಕಿತ ವ್ಯಕ್ತಿ ಆಹಾರ ಸೇವನೆ ಮಾಡಲು ಸಾಧ್ಯವಾಗದಿದ್ದರೆ ಅಥವಾ ವಾಂತಿಯಾಗುತ್ತಿದ್ದರೆ ಇಂತಹ ಅನಾರೋಗ್ಯದ ಸಮಯದಲ್ಲಿ ಮೆಟ್‌ಫಾರ್ಮಿನ್, ಎಸ್‌ಜಿಎಲ್‌ಟಿ 2 ಐ ನಂತಹ ಕೆಲವು ಔಷಧಿಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾಗುತ್ತದೆ.

ಕೋವಿಡ್-19 ನೊಂದಿಗೆ ಮಧುಮೇಹ ನಿಯಂತ್ರಣ ಹದಗೆಡುತ್ತದೆಯೇ?
ಹೌದು, ಕೋವಿಡ್ -19 ಸೋಂಕು ಇನ್ಸುಲಿನ್ ಪ್ರತಿರೋಧದಿಂದಾಗಿ ಹೈಪರ್ಗ್ಲೈಸೀಮಿಯಾವನ್ನು ಇನ್ನಷ್ಟು ಹದಗೆಡಿಸುತ್ತದೆ, ಮಧುಮೇಹ ಕೀಟೋಆಸಿಡೋಸಿಸ್ ಮತ್ತು ಹೈಪರೋಸ್ಮೋಲಾರ್ ಹೈಪರ್ಗ್ಲೈಸೀಮಿಯಾ ಸಿಂಡ್ರೋಮ್ ಅನ್ನು ಉಂಟುಮಾಡಬಹುದು. ಕೆಲವು ರೋಗಿಗಳಲ್ಲಿ ಸ್ಟೀರಾಯ್ಡ್ ಔಷಧಿಗಳ ಬಳಕೆಯಿಂದ ಈ ಹೈಪರ್ಗ್ಲೈಸೀಮಿಯಾ ಮತ್ತಷ್ಟು ಹೆಚ್ಚಾಗುತ್ತದೆ. ಆದರೆ ಇದಕ್ಕೆ ಚಿಂತೆ ಪಡುವ ಅಗತ್ಯವಿಲ್ಲ. ಇನ್ಸುಲಿನ್ ಚುಚ್ಚುಮದ್ದು ಮತ್ತು ರಕ್ತದಲ್ಲಿನ ಗ್ಲೂಕೋಸ್‌ ಮೇಲಿನ ನಿಗಾಯಿರಿಸಿ ಔಷಧಿಗಳೊಂದಿಗೆ ಇದನ್ನು ನಿರ್ವಹಿಸಬಹುದು. ಮುಖ್ಯವಾಗಿ ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ ರಕ್ತದಲ್ಲಿನ ಗ್ಲೂಕೋಸ್ ಅನ್ನು ಆಗಾಗ ಪರಿಶೀಲಿಸುತ್ತಿರಬೇಕಾಗುತ್ತದೆ. 

ಕೋವಿಡ್ -19 ಸೋಂಕಿನ ಸಮಯದಲ್ಲಿ ನಿಯಮಿತವಾಗಿ ಬಿಪಿ ಮತ್ತು ಕೊಲೆಸ್ಟ್ರಾಲ್'ಗೆ ಸಂಬಂಧಿಸಿ ಔಷಧಿಗಳನ್ನು ತೆಗೆದುಕೊಳ್ಳುವುದು ಸುರಕ್ಷಿತವೇ?
ಎಸಿಇ ಇನ್ಹಿಬಿಟರ್ಸ್ ಮತ್ತು ಎಆರ್'ಬಿ ಬಗ್ಗೆ ಆರಂಭದಲ್ಲಿ ಕೆಲವು ಚಿಂತೆಗಳು ಸೃಷ್ಟಿಯಾಗಿದ್ದವು. ಆದರೆ, ಅಧ್ಯಯನಗಳು ಯಾವುದೇ ಹಾನಿಯಲ್ಲ ಎಂದು ತಿಳಿಸಿದ ಬಳಿಕ ಇವುಗಳನ್ನು ಸುರಕ್ಷಿತವಾಗಿ ಮುಂದುವರಿಸಬಹುದಾಗಿದೆ. ಕೋವಿಡ್-19 ಹೃದಯದ ತೊಂದರೆಗಳಿಗೆ ಕಾರಣವಾಗಬಹುದು ಮತ್ತು ಸ್ಟ್ಯಾಟಿನ್ಗಳು ರಕ್ಷಣಾತ್ಮಕವಾಗಿರುವುದರಿಂದ ಸ್ಟ್ಯಾಟಿನ್ ನಂತಹ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಔಷಧಿಗಳನ್ನು ಮುಂದುವರಿಸಬೇಕಾಗುತ್ತದೆ. 

ಮಧುಮೇಹ ಹೊಂದಿರುವ ರೋಗಿಗಳು ಈ ಸಾಂಕ್ರಾಮಿಕ ಸಮಯದಲ್ಲಿ ಇನ್‌ಫ್ಲೂಯೆಂಜಾ ಲಸಿಕೆ ತೆಗೆದುಕೊಳ್ಳಬಹುದೇ?
ಹೌದು, ವೈದ್ಯರ ಸೂಚನೆಯಂತೆ ವಾರ್ಷಿಕ ಫ್ಲೂ ಲಸಿಕೆ ತೆಗೆದುಕೊಳ್ಳಬಹುದು, ವಾಸ್ತವವಾಗಿ, ಇನ್‌ಫ್ಲೂಯೆಂಜಾ ಲಸಿಕೆ ತೆಗೆದುಕೊಳ್ಳುವುದರಿಂದ ಆಗಾಗ ಆಸ್ಪತ್ರೆಗೆ ಭೇಟಿ ನೀಡುವುದು ಕಡಿಮೆಯಾಗುತ್ತದೆ. ಇದರಿಂತ ಕೊರೋನಾ ಸೋಂಕು ತಗುಲುವ ಸಾಧ್ಯತೆಗಳೂ ಕೂಡ ಕಡಿಮೆಯಾಗುತ್ತದೆ. 

ಮಧುಮೇಹ ಹೊಂದಿರುವವರಿಗೆ ಕೋವಿಡ್-19 ನ ಪರೋಕ್ಷ ಪರಿಣಾಮಗಳು ಯಾವುವು?
ಸಾಂಕ್ರಾಮಿಕ ರೋಗವು ಮಧುಮೇಹಿಗಳಲ್ಲಿ ಒತ್ತಡ, ನಿಯಮ ಆಹಾರ ಸೇವನೆಯಲ್ಲಿ ಅಡ್ಡಿ, ವ್ಯಾಯಾಮಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹೀಗಾಗಿ ಮಧುಮೇಹಿಗಳು ಸಾಧ್ಯವಾದಷ್ಟು ಆರೋಗ್ಯಕವಾದ ಆಹಾರವನ್ನು ಸೇವನೆ ಮಾಡಬೇಕು. ಮನೆಯಲ್ಲಿ, ಮನೆಯ ಮಹಡಿ ಮೇಲೆ ಅಥವಾ ಉದ್ಯಾನವನಗಳಲ್ಲಿ ವ್ಯಾಯಾಮ ಮಾಡಬೇಕು. ಯೋಗ ಮಾಡುವುದನ್ನು ರೂಢಿಸಿಕೊಳ್ಳಬೇಕು. ಸಾಮಾಜಿಕ ಅಂತರ ಹಾಗೂ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು. ಪ್ರಮುಖವಾಗಿ ಪ್ರತೀನಿತ್ಯ ಮನೆಯಲ್ಲಿಯೇ ಬಿಪಿ ಹಾಗೂ ಗ್ಲೂಕೋಸ್ ಪ್ರಮಾಣ, ತೂಕವನ್ನು ಪರಿಶೀಲಿಸುತ್ತಿರಬೇಕು. ಕುಟುಂಬಸ್ಥರು, ವೈದ್ಯಕೀಯ ತಂಡ ಹಾಗೂ ಸ್ನೇಹಿತರೊಂದಿಗೆ ಆನ್'ಲೈನ್ ಮೂಲಕ ಸಂಪರ್ಕವನ್ನು ಹೊಂದಿರಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com