ಕೊರೋನಾ ಲಸಿಕೆ ಪಡೆದಿದ್ದೀರಾ? ಹಾಗಾದರೆ, ಗರ್ಭಧಾರಣೆ ಯೋಜನೆ ಕನಿಷ್ಟ 2 ತಿಂಗಳು ಮುಂದೂಡಿ!
ಕೆಲ ಕೊರೋನಾ ಲಸಿಕೆಗಳು ಗರ್ಭಿಣಿ ಮಹಿಳೆಯರಿಗೆ ಸುರಕ್ಷಿತವಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು, ಈ ನಡುವಲ್ಲೇ ಭಾರತದಲ್ಲಿಯೂ ಸ್ತ್ರೀರೋಗ ತಜ್ಞರೂ ಕೂಡ ಕೊರೋನಾ ಲಸಿಕೆ ಪಡೆದವರು ಕನಿಷ್ಟವೆಂದರೂ ಗರ್ಭಧಾರಣೆ ಯೋಜನೆಯನ್ನು 2 ತಿಂಗಳು ಮುಂದೂಡುವಂತೆ ಒತ್ತಾಯಿಸಿದ್ದಾರೆ.
Published: 29th January 2021 01:44 PM | Last Updated: 29th January 2021 03:00 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಕೆಲ ಕೊರೋನಾ ಲಸಿಕೆಗಳು ಗರ್ಭಿಣಿ ಮಹಿಳೆಯರಿಗೆ ಸುರಕ್ಷಿತವಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು, ಈ ನಡುವಲ್ಲೇ ಭಾರತದಲ್ಲಿಯೂ ಸ್ತ್ರೀರೋಗ ತಜ್ಞರೂ ಕೂಡ ಕೊರೋನಾ ಲಸಿಕೆ ಪಡೆದವರು ಕನಿಷ್ಟವೆಂದರೂ ಗರ್ಭಧಾರಣೆ ಯೋಜನೆಯನ್ನು 2 ತಿಂಗಳು ಮುಂದೂಡುವಂತೆ ಒತ್ತಾಯಿಸಿದ್ದಾರೆ.
ಲಸಿಕೆ ಅಭಿವೃದ್ಧಿ ಪಡಿಸಿದ ಕಂಪನಿಗಳು ಗರ್ಭಧಾರಣೆ, ಕೃತಕ ಗರ್ಭಧಾರಣೆಗಳನ್ನು ಮುಂದೂಡುವಂತೆ ತಿಳಿಸದೇ ಇದ್ದರೂ, ಲಸಿಕೆ ಪಡೆದ ಮಹಿಳೆಯರಿಗೆ ಗರ್ಭಧಾರಣೆ ಯೋಜನೆಯನ್ನು ಕನಿಷ್ಟ ಎರಡು ತಿಂಗಳು ಮುಂದೂಡುವಂತೆ ತಿಳಿಸುತ್ತಿದ್ದೇವೆಂದು ರೇಂಬೋ ಮಕ್ಕಳ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ಸುಮನ್ ಸಿಂಗ್ ಅವರು ಹೇಳಿದ್ದಾರೆ.
ಯುರೋಪಿಯನ್ ಸೊಸೈಟಿ ಆಫ್ ಹ್ಯೂಮನ್ ರಿಪ್ರೊಡಕ್ಷನ್ ಅಂಡ್ ಎಂಬ್ರಿಯಾಲಜಿಯು ಸುರಕ್ಷಿತ ಸಹಾಯದ ಸಂತಾನೋತ್ಪತ್ತಿ ತಂತ್ರಜ್ಞಾನ (ಎಆರ್ಟಿ)ಕ್ಕೆ ಹಿಂದಿನ ಮಾರ್ಗದರ್ಶನವನ್ನು ಅನುಸರಿಸುವಂತೆ ಪುನರುಚ್ಚರಿಸಿದೆ. ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿಯೇ ಲಸಿಕೆ ಅಭಿಯಾನವನ್ನು ಆರಭಿಸಿದ್ದರೂ ಕೂಡ ಯುರೋಪಿಯನ್ ಸೊಸೈಟಿ ಆಫ್ ಹ್ಯೂಮನ್ ರಿಪ್ರೊಡಕ್ಷನ್ ಅಂಡ್ ಎಂಬ್ರಿಯಾಲಜಿಯು ಹಿಂದಿನ ಮಾರ್ಗದರ್ಶನಗಳನ್ನು ಅನುಸರಿವಂತೆಯೇ ಶಿಫಾರಸು ಮಾಡಿದೆ ಎಂದು ತಿಳಿಸಿದ್ದಾರೆ.
ಈ ನಡುವೆ ಕೇಂದ್ರ ಸರ್ಕಾರ ಕೂಡ ಗರ್ಭಿಣಿ ಮಹಿಳೆಯರು ಹಾಗೂ ಹಾಲುಣಿಸುವ ಹೆಣ್ಣು ಮಕ್ಕಳಿಗೆ ಲಸಿಕೆ ನೀಡಲಾಗುವುದಿಲ್ಲ ಎಂದು ಹೇಳಿದೆ.
ಲಸಿಕೆಗಳಲ್ಲಿರುವ ಜೀವಂತ ವೈರಸ್ ಗಳು ಗರ್ಭದಲ್ಲಿರುವ ಮಗುವಿಗೆ ಹಾನಿಯುಂಟು ಮಾಡುವ ಸಾಧ್ಯತೆಗಳಿರುವುದರಿಂದ ಈ ಸಂದರ್ಭದಲ್ಲಿ ಲಸಿಕೆ ಹಾಕಿಸಿಕೊಳ್ಳುವುದು ಬೇಡ ಎಂದು ಹೇಳಲಾಗುತ್ತಿದೆ ಎಂದು ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯ ವೈದ್ಯ ಮನೀಶಾ ಸಿಂಗ್ ಅವರು ಹೇಳಿದ್ದಾರೆ.
ಗರ್ಭಿಣಿ ಮಹಿಳೆಯರಿಗೆ ಲಸಿಕೆ ನೀಡಿದಾಗ ಮಹಿಳೆಯಲ್ಲಿ ರೋಗನಿರೋಧಕ ಶಕ್ತಿ ನೀಡುವ ಸಂದರ್ಭದಲ್ಲಿ ಜೀವಂತ ವೈರಸ್ ಗಳು ಮಾಸುಚೀಲ ಪ್ರವೇಶಿಸುವ ಸಾಧ್ಯತೆಗಳಿರುತ್ತವೆ. ವೈರಸ್ ಮಾಸುಚೀಲ ಪ್ರವೇಶಿಸಿದ್ದೇ ಆದರೆ, ಮಗುವಿಗೆ ಅಪಾಯ ಎದುರಾಗುತ್ತದೆ. ಉದಾಹರಣೆಗೆ ಹೇಳುವುದಾದರೆ ರುಬೆಲ್ಲಾ ಲಸಿಕೆಯು ಮಗುವಿನ ದೃಷ್ಟಿ, ಕಿವಿ, ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಲಸಿಕೆ ಪಡೆದ ಬಳಿಕ ಮಹಿಳೆಯರು 6-8 ವಾರಗಳ ಕಾಲ ಗರ್ಭಧರಿಸದಂತೆ ನೋಡಿಕೊಳ್ಳಬೇಕು. ಪ್ರಸ್ತುತ ದೇಶದಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಲಸಿಕೆ ಶಾಶ್ವತವಾಗಿ ರಕ್ಷಣೆಯನ್ನು ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಎರಡೂ ನಿಷ್ಕ್ರಿಯ ಲಸಿಕೆಗಳಾಗಿದ್ದು, ಗರ್ಭಿಣಿಯರು ಲಸಿಕೆ ಪಡೆಯದೇ ಇರುವುದೇ ಉತ್ತಮ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೊರೋನಾ ವೈರಸ್ ಹೊಸದು, ಲಸಿಕೆ ಕೂಡ ಹೊಸದಾಗಿದ್ದು, ಇಂತಹ ಸಂದರ್ಭದಲ್ಲಿ ಕಾಯುವುದು ಹಾಗೂ ಅಧ್ಯಯನ ಮಾಡುವುದು ಬಿಟ್ಟರೆ ನಮಗೆ ಬೇರೆ ಆಯ್ಕೆಗಳಿಲ್ಲ. ವೈದ್ಯರಾದ ನಾವು ರೋಗಿಗಳಿಗೆ ನಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ನೀಡುತ್ತೇವೆ. ಲಸಿಕೆ ಪಡೆದು ಎರಡು ತಿಂಗಳು ಕಾದನಂತರ ಮುಂದಿನ ಯಾವುದೇ ಚಿಕಿತ್ಸೆಗಳನ್ನು ಪಡೆಯುವಂತೆ ಸಲಹೆಗಳನ್ನು ನೀಡುತ್ತಿದ್ದೇವೆ ಎಂದು ಸಂತಾನಫಲ ಚಿಕಿತ್ಸೆ ತಜ್ಞೆ ಡಾ.ದೇವಿಕಾ ಗುಣಶೀಲ ಅವರು ಹೇಳಿದ್ದಾರೆ.