ಧೂಮಪಾನ ರಹಿತ ದಿನ: ಧೂಮಪಾನ ಮುಕ್ತಗೊಳಿಸಲು ಕೋಟ್ಪಾ ಕಾಯ್ದೆ ತಿದ್ದುಪಡಿಗೆ ವೈದ್ಯರು, ಕ್ಯಾನ್ಸರ್ ಪೀಡಿತರ ಬೆಂಬಲ

ಪ್ರತಿವರ್ಷ ಮಾರ್ಚ್ ಎರಡನೇ ಬುಧವಾರದಂದು ಆಚರಿಸಲಾಗುವ ಧೂಮಪಾನ ರಹಿತ ದಿನದ ಹಿನ್ನೆಲೆಯಲ್ಲಿ ಜನರನ್ನು ಪರೋಕ್ಷ ಧೂಮಪಾನದಿಂದ ರಕ್ಷಿಸಲು ಹೋಟೆಲ್, ರೆಸ್ಟೋರೆಂಟ್ ಮತ್ತು ವಿಮಾನ ನಿಲ್ದಾಣಗಳಲ್ಲಿ ನಿರ್ದಿಷ್ಟ ಧೂಮಪಾನ ಪ್ರದೇಶಗಳನ್ನು ತೆಗೆದುಹಾಕಬೇಕು.

Published: 10th March 2021 12:22 AM  |   Last Updated: 10th March 2021 12:22 AM   |  A+A-


representation purpose only

ಸಂಗ್ರಹ ಚಿತ್ರ

Posted By : Vishwanath S
Source : Online Desk

ಬೆಂಗಳೂರು: ಪ್ರತಿವರ್ಷ ಮಾರ್ಚ್ ಎರಡನೇ ಬುಧವಾರದಂದು ಆಚರಿಸಲಾಗುವ ಧೂಮಪಾನ ರಹಿತ ದಿನದ ಹಿನ್ನೆಲೆಯಲ್ಲಿ ಜನರನ್ನು ಪರೋಕ್ಷ ಧೂಮಪಾನದಿಂದ ರಕ್ಷಿಸಲು ಹೋಟೆಲ್, ರೆಸ್ಟೋರೆಂಟ್ ಮತ್ತು ವಿಮಾನ ನಿಲ್ದಾಣಗಳಲ್ಲಿ ನಿರ್ದಿಷ್ಟ ಧೂಮಪಾನ ಪ್ರದೇಶಗಳನ್ನು ತೆಗೆದುಹಾಕುವಂತೆ ವೈದ್ಯರು, ಕ್ಯಾನ್ಸರ್ ಪೀಡಿತರು ಮತ್ತು ಹೋಟೆಲ್ ಮಾಲೀಕರು ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ. 

ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ ಕೋಟ್ಪಾ 2003ಕ್ಕೆ ತಿದ್ದುಪಡಿ ಪ್ರಕ್ರಿಯೆ ಆರಂಭಿಸಿರುವ ಭಾರತ ಸರ್ಕಾರವನ್ನು ಅಭಿನಂದಿಸಿದ ಅವರು, ಭಾರತವನ್ನು ಶೇ. 100ರಷ್ಟು ಧೂಮಪಾನ ಮುಕ್ತಗೊಳಿಸಲು ಮತ್ತು ಕೋವಿಡ್-19 ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ನಿರ್ದಿಷ್ಟ ಧೂಮಪಾನ ಪ್ರದೇಶಗಳಿಗೆ ಅನುಮತಿ ನೀಡುವ ಕಾನೂನನ್ನು ಕೂಡಲೇ ತೆಗೆದುಹಾಕಬೇಕೆಂದು ಮನವಿ ಮಾಡಿದ್ದಾರೆ.

'ಧೂಮಪಾನ ಕೋವಿಡ್ ಸೋಂಕಿಗೆ ದಾರಿ ಮಾಡಿಕೊಡಬಹುದು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಧೂಮಪಾನ ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಹದಗೆಡಿಸಿ, ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. ಕೋವಿಡ್ ಸೋಂಕಿಗೆ ತುತ್ತಾಗುವ ಧೂಮಪಾನಿಗಳು ಹೆಚ್ಚಿನ ತೊಂದರೆ ಅನುಭವಿಸುವುದಲ್ಲದೆ ಮೃತಪಡುವ ಸಾಧ್ಯತೆ ಹೆಚ್ಚಿರುತ್ತದೆ. ಸಂಪೂರ್ಣ ಧೂಮಪಾನ ಹೊಗೆ ಮುಕ್ತ ವಾತಾವರಣ ಕಲ್ಪಿಸಲು ಹೋಟೆಲ್, ರೆಸ್ಟೋರೆಂಟ್‍ಗಳು ಮಾತ್ರವಲ್ಲದೆ ವಿಮಾನ ನಿಲ್ದಾಣಗಳಲ್ಲಿಯೂ ಎಲ್ಲ ನಿರ್ದಿಷ್ಟ ಧೂಮಪಾನ ಪ್ರದೇಶಗಳನ್ನು ತೆಗೆದು ಹಾಕಬೇಕು. ಬಹುತೇಕ ನಿರ್ದಿಷ್ಟ ಧೂಮಪಾನ ಪ್ರದೇಶಗಳು ಕೋಟ್ಪಾ ನಿಯಮಗಳನ್ವಯ ತೆರೆದಿರುವುದಿಲ್ಲ ಮತ್ತು ಸಾರ್ವಜನಿಕರನ್ನು ಧೂಮಪಾನ ಹೊಗೆಗೆ ಒಡ್ಡಿಕೊಳ್ಳುವಂತೆ ಮಾಡಿ ಆರೋಗ್ಯ ಸಮಸ್ಯೆಗಳಿಗೆ ದೂಡುತ್ತಿವೆ,' ಎಂದು ಪ್ರಸಿದ್ಧ ಕ್ಯಾನ್ಸರ್ ತಜ್ಞರಾದ ಡಾ. ರಮೇಶ್ ಬಿಳಿಮಗ್ಗ ಹೇಳಿದ್ದಾರೆ.

ಭಾರತದಲ್ಲಿ ಕೋಟ್ಪಾ 2003ರ ಅನ್ವಯ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ. ಈ ಕಾಯ್ದೆಯ ನಾಲ್ಕನೇ ಸೆಕ್ಷನ್ ಸಾರ್ವಜನಿಕರಿಗೆ ಪ್ರವೇಶವಿರುವ ಯಾವುದೇ ಸ್ಥಳದಲ್ಲಿ ಧೂಮಪಾನವನ್ನು ನಿಷೇಧಿಸುತ್ತದೆ. ಆದರೆ, ರೆಸ್ಟೋರೆಂಟ್, ಹೋಟೆಲ್, ವಿಮಾನ ನಿಲ್ದಾಣ ಮುಂತಾದ ಸಾರ್ವಜನಿಕ ಸ್ಥಳಗಳ ನಿರ್ದಿಷ್ಟ ಪ್ರದೇಶಗಳಲ್ಲಿ ಧೂಮಪಾನ ಮಾಡಲು ಕೋಟ್ಪಾ 2003 ಅವಕಾಶ ಒದಗಿಸುತ್ತದೆ.

'ಧೂಮಪಾನ ಮಾಡದ ಸಾವಿರಾರು ಜನ ಹೋಟೆಲ್, ರೆಸ್ಟೋರೆಂಟ್, ಬಾರ್ ಮತ್ತು ರೆಸ್ಟೋರೆಂಟ್, ಪಬ್ ಮತ್ತು ಕ್ಲಬ್‍ಗಳಲ್ಲಿ ಪರೋಕ್ಷ ಧೂಮಪಾನಕ್ಕೆ ಒಡ್ಡಿಕೊಂಡು ತಮ್ಮ ಪ್ರಾಣವನ್ನು ಪಣಕ್ಕಿಡುತ್ತಿದ್ದಾರೆ. ಸಿಗರೇಟ್ ಹೊಗೆ ಧೂಮಪಾನ ಪ್ರದೇಶಗಳಿಂದ ಇತರೆ ಪ್ರದೇಶಗಳಿಗೆ ಹಬ್ಬುವುದರಿಂದ, ಯಾವುದೇ ಆವರಣದಲ್ಲಿ ಧೂಮಪಾನಕ್ಕೆ ಅನುಮತಿ ನೀಡದಂತೆ ಕೋಟ್ಪಾ ಕಾಯ್ದೆಗೆ ತಿದ್ದುಪಡಿ ತರಬೇಕಿದೆ. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲ ಸ್ಥಳಗಳು ಸಂಪೂರ್ಣ ಧೂಮಪಾನ ಮುಕ್ತವಾಗಿರಬೇಕು', ಎಂದು ಪರೋಕ್ಷ ಧೂಮಪಾನದ ಸಂತ್ರಸ್ತೆ ಮತ್ತು ಆರೋಗ್ಯ ಕಾರ್ಯಕರ್ತೆ ನಳಿನಿ ಸತ್ಯನಾರಾಯಣ್ ಮನವಿ ಮಾಡುತ್ತಾರೆ.

ಪರೋಕ್ಷ ಧೂಮಪಾನ ನೇರ ಧೂಮಪಾನ ಹಾನಿಕಾರಕವಾಗಿದೆ. ಪರೋಕ್ಷ ಧೂಮಪಾನಕ್ಕೆ ಒಡ್ಡಿಕೊಳ್ಳುವುದರಿಂದ ವಯಸ್ಕರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಮತ್ತು ಹೃದ್ರೋಗ ಸಮಸ್ಯೆ ಉಂಟಾದರೆ ಮಕ್ಕಳಲ್ಲಿ ಶ್ವಾಸಕೋಶದ ದುರ್ಬಲತೆ ಮತ್ತು ಉಸಿರಾಟ ಸಂಬಂಧಿ ಸೋಂಕು ಸೇರಿದಂತೆ ಅನೇಕ ಖಾಯಿಲೆಗಳು ಉಂಟಾಗುತ್ತವೆ. ದುರ್ಬಲ ಉಸಿರಾಟ ಮತ್ತು ಹೃದಯ ರಕ್ತನಾಳದ ಸಮಸ್ಯೆ ಇರುವವರಿಗೆ ಕೋವಿಡ್-19 ಹೆಚ್ಚು ಬಾಧಿಸುವುದಲ್ಲದೆ ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ. ನಿರ್ದಿಷ್ಟ ಧೂಮಪಾನ ಪ್ರದೇಶಗಳಲ್ಲಿ ಸಾಮಾಜಿಕ ಅಂತರ ಪಾಲಿಸಲು ಮತ್ತು ಮಾಸ್ಕ್ ಧರಿಸಲು ಸಾಧ್ಯವಿಲ್ಲದ ಕಾರಣ ಹಾಗು ಧೂಮಪಾನಿಗಳು ಹೊಗೆ ತುಂಬಿದ ವಾತಾವರಣದಲ್ಲಿ ಸಿಲುಕುವುದರಿಂದ, ನಿರ್ದಿಷ್ಟ ಧೂಮಪಾನ ಪ್ರದೇಶಗಳು ಕೋವಿಡ್-19 ಸೋಂಕಿನ ಹರಡುವಿಕೆಯನ್ನು ಹೆಚ್ಚಿಸುತ್ತವೆ.

"ನಮ್ಮ ರೆಸ್ಟೋರೆಂಟನ್ನು ಶೇ. 100ರಷ್ಟು ಧೂಮಪಾನ ಮುಕ್ತವನ್ನಾಗಿ ಮಾಡಿರುವುದರಿಂದ ಗ್ರಾಹಕರು ಮತ್ತು ಸಿಬ್ಬಂದಿಯ ಆರೋಗ್ಯ ವೃದ್ಧಿಸುತ್ತಿದೆಯಲ್ಲದೆ ವ್ಯಾಪಾರವನ್ನೂ ಹೆಚ್ಚಿಸಿದೆ. ಕುಟುಂಬ ಸಮೇತ ಬರುವ ಗ್ರಾಹಕರು ಧೂಮಪಾನಕ್ಕೆ ಅನುಮತಿ ನೀಡದ ಸ್ಥಳಗಳಲ್ಲಿ ಊಟ  ಮಾಡಲು ಬಯಸುತ್ತಾರೆ. ತಂಬಾಕು ಹೊಗೆಗೆ ಒಡ್ಡಿಕೊಂಡಾಗ ಮಕ್ಕಳು, ಮಹಿಳೆಯರು ಮತ್ತು ಹಿರಿಯರು ಕಸಿವಿಸಿಗೊಳ್ಳುತ್ತಾರೆ. ಧೂಮಪಾನ ಪ್ರದೇಶವನ್ನು ತೆರವುಗೊಳಿಸಿದ ನಂತರ ನಾವು ಹೆಚ್ಚು ಸಂತುಷ್ಟ ಗ್ರಾಹಕರನ್ನು ಪಡೆದಿದ್ದು, ಜಾಗದ ಆರೋಗ್ಯಕರ ಬಳಕೆಯೂ ಸಾಧ್ಯವಾಗಿದೆ,” ಎಂದು ಬೆಂಗಳೂರಿನ ಕಾರಾ ರೆಸ್ಟೋರೆಂಟ್ ಮಾಲೀಕರಾದ ಶ್ರೀಮತಿ. ರಾಧ ನಾಯರ್ ಹೇಳುತ್ತಾರೆ. ಹೆಚ್ಚುತ್ತಿರುವ ವಹಿವಾಟಿನಿಂದ ಸ್ಪೂರ್ತಿ ಪಡೆದಿರುವ ಅವರು, ತಮ್ಮ ವ್ಯವಹಾರವನ್ನು ಹೆಚ್ಚಿಸಿಕೊಳ್ಳಲು ಇತರೆ ಕೆಫೆ ಮತ್ತು ರೆಸ್ಟೋರೆಂಟ್‍ಗಳು ಕೂಡ ಶೇ. 100ರಷ್ಟು ಧೂಮಪಾನ ಮುಕ್ತ ಪ್ರದೇಶಗಳಾಗಬೇಕು ಎಂದು ಒತ್ತಾಯಿಸುತ್ತಾರೆ.

ಕೋಟ್ಪಾ ಕಾಯ್ದೆಗೆ ತಿದ್ದುಪಡಿ ಪ್ರಕ್ರಿಯೆಯನ್ನು ಆರಂಭಿಸಿರುವ ಭಾರತ ಸರ್ಕಾರ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳು (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಪೂರೈಕೆ ಮತ್ತು ವಿತರಣೆ ನಿಯಂತ್ರಣ) (ತಿದ್ದುಪಡಿ) ಮಸೂದೆ, 2020 ಅನ್ನು ಪರಿಚಯಿಸಿದೆ. ಭಾರತದಲ್ಲಿ ನಡೆಸಿದ ಇತ್ತೀಚಿನ ಸಮೀಕ್ಷೆಯೊಂದು ಶೇ. 72ರಷ್ಟು ಜನ ಪರೋಕ್ಷ ಧೂಮಪಾನ ಗಂಭೀರ ಆರೋಗ್ಯ ಸಮಸ್ಯೆ ಎಂದು ಭಾವಿಸಿದ್ದಾರೆ ಮತ್ತು ಶೇ. 88ರಷ್ಟು ಜನ ಈ ಪಿಡುಗನ್ನು ನಿವಾರಿಸಲು ಪ್ರಸ್ತುತ ಜಾರಿಯಲ್ಲಿರುವ ತಂಬಾಕು ನಿಯಂತ್ರಣ ಕಾನೂನನ್ನು ಬಲಪಡಿಸಲು ಪ್ರಬಲವಾಗಿ ಬೆಂಬಲಿಸುತ್ತಾರೆ ಎಂದು ಬಹಿರಂಗಗೊಳಿಸಿತ್ತು.

“ತಂಬಾಕು ನಿಯಂತ್ರಣ ಕಾನೂನು ಕೋಟ್ಪಾ 2003ಕ್ಕೆ ತಿದ್ದುಪಡಿ ಪ್ರಕ್ರಿಯೆ ಆರಂಭಿಸಿರುವ ಭಾರತ ಸರ್ಕಾರವನ್ನು ನಾವು ಶ್ಲಾಘಿಸುತ್ತೇವೆ. ಇದು ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವ ಪ್ರಮುಖ ಹೆಜ್ಜೆಯಾಗಿದೆ. ಬೇಜವಾಬ್ದಾರಿಯುತ ಧೂಮಪಾನಿಗಳು ಸುತ್ತಮುತ್ತಲಿನ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸದ ಕಾರಣ ಭಾರತವನ್ನು ಶೇ. 100ರಷ್ಟು ಧೂಮಪಾನ ಮುಕ್ತವಾಗಿಸುವ ನಿಟ್ಟಿನಲ್ಲಿ  ಕಾನೂನುಗಳನ್ನು ಬಲಪಡಿಸುವ ತುರ್ತು ಅಗತ್ಯವಿದೆ. ಧೂಮಪಾನಿಗಳಲ್ಲದವರು ಕೂಡ ಇದನ್ನು ಪ್ರತಿಭಟಿಸುವಲ್ಲಿಉದಾಸೀನ ತೋರುತ್ತಿದ್ದು, ಜವಾಬ್ದಾರಿಯುತ ಜನಪ್ರತಿನಿಧಿಗಳು ತಂಬಾಕು ಸಂಬಂಧಿತ ಖಾಯಿಲೆ ಮತ್ತು ಸಾವಿನಿಂದ ಜನರನ್ನು ರಕ್ಷಿಸಲು ಕಾನೂನನ್ನು ಕಠಿಣವಾಗಿ ಜಾರಿಗೆ ತರಲು ಸಿಒಟಿಪಿಎನೂ ಕಾಳಜಿ ವಹಿಸುತ್ತಿಲ್ಲ,” ಎಂದು ಶ್ರೀ ಎಸ್ ಜೆ ಚಂದರ್, ಸಂಚಾಲಕರು, ಕನ್ಸೋರ್ಟಿಯಂ ಫಾರ್ ಟೊಬ್ಯಾಕೋ ಫ್ರೀ ಕರ್ನಾಟಕ, ತಿಳಿಸಿದರು.

ತಂಬಾಕು ಬಳಕೆ ಜಾಗತಿಕವಾಗಿ ರೋಗ ಮತ್ತು ಅಕಾಲಿಕ ಮರಣಗಳಿಗೆ ಪ್ರಮುಖ ಹಾಗು ತಡೆಗಟ್ಟಬಹುದಾದ ಕಾರಣವಾಗಿದ್ದು, ಭಾರತದಲ್ಲಿ ಪ್ರತಿವರ್ಷ 12 ಲಕ್ಷ ಮಂದಿ ತಂಬಾಕು ಸಂಬಂಧಿತ ಖಾಯಿಲೆಗಳಿಂದ ಮೃತಪಡುತಿದ್ದಾರೆ. ಸಮಾಜದ ಎಲ್ಲ ಸ್ತರಗಳಿಗೆ ಸೇರಿದ 26 ಕೋಟಿಗೂ ಹೆಚ್ಚು ತಂಬಾಕು ಬಳಕೆದಾರರು ಭಾರತದಲ್ಲಿದ್ದಾರೆ. ತಂಬಾಕು ಸಂಬಂಧಿತ ಖಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗೆ ಪ್ರತಿವರ್ಷ 1,82,000 ಕೋಟಿ ರೂಪಾಯಿಗಳು ವ್ಯಯವಾಗುತ್ತಿದ್ದು, ಇದು ಭಾರತದ ಜಿಡಿಪಿಯ ಶೇಕಡಾ 1.8% ರಷ್ಟಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನೀಡಿರುವ ಮಾಹಿತಿಯ ಪ್ರಕಾರ, ತಂಬಾಕಿನ ಎಲ್ಲ ರೀತಿಯ ಬಳಕೆಗೂ, ಅದು ಧೂಮಪಾನವಾಗಲಿ ಅಥವ ಜಗಿಯುವುದಾಗಲಿ, ಕೋವಿಡ್ ಸಂಬಂಧಿ ಸಾವು-ನೋವುಗಳಿಗೂ ಗಮನಾರ್ಹ ನಂಟಿದೆ.

Stay up to date on all the latest ಆರೋಗ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp