ಕೋವಿಡ್-19 ಸೋಂಕು ತಗುಲಿದರೆ ಏನು ಮಾಡಬೇಕು, ಹೋಂ ಐಸೊಲೇಷನ್ ನಲ್ಲಿ ಇರುವುದು ಹೇಗೆ? 

ಕೋವಿಡ್ ಸೋಂಕು ತಗುಲಿ, ಹೋಂ ಐಸೊಲೇಷನ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾದವರು ನಮ್ಮ ಸುತ್ತಮುತ್ತ ಹಲವರಿದ್ದಾರೆ, ಆದರೂ ನಮ್ಮಲ್ಲಿ ಸಾಕಷ್ಟು ಮಂದಿಗೆ ಕೊರೋನಾ ಸೋಂಕು ಬಂದರೆ ಏನು ಮಾಡಬೇಕು, ನಮ್ಮ ಕುಟುಂಬದವರಿಂದ ದೂರ ಇರುವುದು ಹೇಗೆ ಎಂಬೆಲ್ಲ ಗೊಂದಲಗಳು ಸಾಕಷ್ಟು ಕಾಡುತ್ತಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್ ಸೋಂಕು ತಗುಲಿ, ಹೋಂ ಐಸೊಲೇಷನ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾದವರು ನಮ್ಮ ಸುತ್ತಮುತ್ತ ಹಲವರಿದ್ದಾರೆ, ಆದರೂ ನಮ್ಮಲ್ಲಿ ಸಾಕಷ್ಟು ಮಂದಿಗೆ ಕೊರೋನಾ ಸೋಂಕು ಬಂದರೆ ಏನು ಮಾಡಬೇಕು, ನಮ್ಮ ಕುಟುಂಬದವರಿಂದ ದೂರ ಇರುವುದು ಹೇಗೆ ಎಂಬೆಲ್ಲ ಗೊಂದಲಗಳು ಸಾಕಷ್ಟು ಕಾಡುತ್ತಿವೆ. ಇದಕ್ಕೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿ ಸಮಾಲೋಚಕ ಮತ್ತು ವಿಭಾಗ ಮುಖ್ಯಸ್ಥ ಡಾ ರಂಜನ್ ಶೆಟ್ಟಿ ಉತ್ತರಿಸಿದ್ದಾರೆ.

ಹೋಂ ಐಸೊಲೇಷನ್ ಹೇಗೆ ಇರಬಹುದು?
-ಹೋಂ ಐಸೊಲೇಷನ್ ಗೆ ಪೂರ್ವ ಯೋಜನೆ ಮಾಡಿಕೊಳ್ಳಬೇಕು. ಮನೆಯಲ್ಲಿ ಹಿರಿಯ ವಯಸ್ಸಿನವರು, ಆರೋಗ್ಯ ಸಮಸ್ಯೆಯಿರುವವರು ಇದ್ದರೆ ಹೋಂ ಐಸೊಲೇಷನ್ ಕಷ್ಟವಾಗುತ್ತದೆ, ಅಂಥವರು ಸಾಕಷ್ಟು ಯೋಜನೆ ಹಾಕಿಕೊಳ್ಳಬೇಕು. ಈ ಸಮಯದಲ್ಲಿ ಎಲ್ಲರ ಮನೆಯಲ್ಲಿ ಡಿಜಿಟಲ್ ಥರ್ಮೊಮೇಟರ್, ಪಲ್ಸ್ ಆಕ್ಸಿಮೀಟರ್ ಇಟ್ಟುಕೊಂಡರೆ ಒಳ್ಳೆಯದು. ಈ ಮೂಲಕ ನಿರಂತರವಾಗಿ ವೈದ್ಯರೊಂದಿಗೆ ಸಂಪರ್ಕದಲ್ಲಿದ್ದು ಮನೆಯಲ್ಲಿ ಯಾವ ರೀತಿ ನಿರ್ವಹಿಸಿಕೊಂಡು ಹೋಗಬೇಕು ಎಂದು ಸೋಂಕಿಗೆ ಒಳಗಾದ ಹೋಂ ಐಸೊಲೇಷನ್ ನಲ್ಲಿ ಇದ್ದವರು ನಿರ್ಧರಿಸಬೇಕು.

ಪ್ರೋನಿಂಗ್ ಎಂದರೇನು, ಕೊರೋನಾ ಸಮಯದಲ್ಲಿ ಹೇಗೆ ಮುಖ್ಯ? 
ದೇಹದೊಳಗೆ ಆಕ್ಸಿಜನ್ ಮಟ್ಟವನ್ನು ಹೆಚ್ಚಿಸಲು ಕವುಚಿ ಬೋರಲು ಮಲಗುವುದು ಅಥವಾ ಒಂದು ಭಾಗದಲ್ಲಿ ಮಲಗುವುದನ್ನು ಪ್ರೋನಿಂಗ್ ಎನ್ನುತ್ತಾರೆ. ಆಕ್ಸಿಜನ್ ಮಟ್ಟ ಶೇಕಡಾ 93ಕ್ಕಿಂತ ಕಡಿಮೆಯಾದರೆ ಈ ರೀತಿ ಪ್ರೋನಿಂಗ್ ಅಭ್ಯಾಸ ಮಾಡಿದರೆ ಉತ್ತಮ. ಇಂಥ ರೋಗಿಗಳು ನಿರಂತರವಾಗಿ ವೈದ್ಯರೊಂದಿಗೆ ಸಂಪರ್ಕದಲ್ಲಿದ್ದು ಬೇರೆ ಔಷಧೋಪಚಾರಗಳನ್ನು ಆರಂಭಿಸಬಹುದು. ಪ್ರೋನಿಂಗ್ ತಾತ್ಕಾಲಿಕ ಶಮನ ಮಾತ್ರ ನೀಡುತ್ತದೆ. ಆಕ್ಸಿಜನ್ ಪ್ರಮಾಣ ಶೇಕಡಾ 93ಕ್ಕಿಂತ ಕಡಿಮೆ ಹೋದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.

ಕೋವಿಡ್ ರೋಗಿಗಳಿಗೆ 6 ನಿಮಿಷಗಳ ನಡಿಗೆ ಪರೀಕ್ಷೆ ಮುಖ್ಯವೇ?
-ಕೋವಿಡ್ ಸೋಂಕಿತರು 5-6 ನಿಮಿಷ ನಡೆಯುವಾಗ ಮತ್ತು ವಿಶ್ರಾಂತಿ ಸಮಯದಲ್ಲಿಯೂ ದಿನಕ್ಕೆ ಮೂರು ಬಾರಿ ಆಕ್ಸಿಜನ್ ಮಟ್ಟವನ್ನು ಪರೀಕ್ಷೆ ಮಾಡುತ್ತಿರಬೇಕು. ಎಲ್ಲಾ ಸಮಯದಲ್ಲಿಯೂ ಆಕ್ಸಿಜನ್ ಮಟ್ಟ ಶೇಕಡಾ 94ಕ್ಕಿಂತ ಹೆಚ್ಚಾಗಿರಬೇಕು. ಶೇಕಡಾ 94ಕ್ಕಿಂತ ಕಡಿಮೆಯಾದರೆ ವೈದ್ಯರನ್ನು ಸಂಪರ್ಕಿಸಬೇಕು.

ಆಸ್ಪತ್ರೆಗಳು ಸ್ಥಾಪಿಸಿರುವ ಮನೆಯ ಆರೈಕೆ ಕೇಂದ್ರಗಳನ್ನು ಎಂಥವರಿಗೆ ಶಿಫಾರಸು ಮಾಡುತ್ತೀರಿ?
-ಕೋವಿಡ್ ರೋಗಿಗಳಲ್ಲಿ ಎರಡು ವಿಧದವರಿಗೆ ಮನೆ ಆರೈಕೆ ಕೇಂದ್ರಗಳನ್ನು ಶಿಫಾರಸು ಮಾಡುತ್ತೇವೆ. ಕೊರೋನಾ ರೋಗ ಲಕ್ಷಣವನ್ನು ಹೊಂದಿಲ್ಲದವರು ಮನೆಯಲ್ಲಿ ಹೋಂ ಐಸೊಲೇಷನ್ ಗೆ ಸೌಕರ್ಯಗಳಿಲ್ಲದವರಿಗೆ, ಅಂಥವರಿಗೆ ಆಸ್ಪತ್ರೆಯ ಈ ಐಸೊಲೇಷನ್ ಕೇಂದ್ರ ಸಹಾಯವಾಗಲಿದ್ದು ಅಲ್ಲಿ ನಿರಂತರವಾಗಿ ವೈದ್ಯರ ನಿಗಾ, ಬಾತ್ ರೂಂ ವ್ಯವಸ್ಥೆ, ಆಹಾರ, ಕುಡಿಯುವ ನೀರು ಇತ್ಯಾದಿ ನೀಡಲಾಗುತ್ತದೆ.

ಕಡಿಮೆ ರೋಗ ಲಕ್ಷಣ ಹೊಂದಿರುವ ಅಂದರೆ ಜ್ವರ, ಸಿಟಿ ಸ್ಕ್ಯಾನ್ ವರದಿಯಲ್ಲಿ ವ್ಯತ್ಯಾಸ, ಆಕ್ಸಿಜನ್ ಅಗತ್ಯವಿರುವವರಿಗೆ ಸಹ ಈ ಕೇಂದ್ರಗಳು ಸಹಾಯವಾಗುತ್ತದೆ. ಇಲ್ಲಿ ಕೋವಿಡ್ ಸೋಂಕಿತರಿಗೆ ಜೀವ ರಕ್ಷಕ ಚಿಕಿತ್ಸೆಗಳನ್ನು ವೃತ್ತಿಪರರು ನೀಡುತ್ತಾರೆ.
ಆದರೆ ಹೋಂ ಐಸೊಲೇಷನ್, ಆಸ್ಪತ್ರೆಯ ಆರೈಕೆ ಕೇಂದ್ರಗಳು ತೀವ್ರ ಸ್ವರೂಪದ ರೋಗಿಗಳಿಗೆ ಉತ್ತಮವಲ್ಲ, ಅವರು ಆಸ್ಪತ್ರೆಗೆ ದಾಖಲಾಗಲೇಬೇಕು. 

ಕೋವಿಡ್ ತುರ್ತು ವೈದ್ಯಕೀಯ ಕೊಠಡಿ ಅಪಾರ್ಟ್ ಮೆಂಟ್ ಗಳಲ್ಲಿ ಸ್ಥಾಪನೆ ಸಾಧ್ಯವೇ?
-ತುರ್ತು ಪರಿಸ್ಥಿತಿಯಲ್ಲಿ ಕೋವಿಡ್ ರೋಗಿಗಳಿಗೆ ಇಎಂಆರ್ ಸೌಲಭ್ಯವನ್ನು ಸ್ಥಾಪಿಸಲು ಆಸ್ಪತ್ರೆಗಳು ನೆರವಾಗುತ್ತವೆ. ವೈದ್ಯಕೀಯ ನೆರವು ಸಿಗುವವರೆಗೆ ರೋಗಿಗಳಿಗೆ ಈ ಇಎಂಆರ್ ಸಹಾಯ ಮಾಡುತ್ತವೆ. ತಕ್ಷಣಕ್ಕೆ ಆಸ್ಪತ್ರೆ ಸೌಲಭ್ಯ ಸಿಗದವರಿಗೂ ಇದು ಸಹಾಯವಾಗುತ್ತದೆ. ಅವರು ಅಗತ್ಯವಿರುವ ಎಲ್ಲಾ ವ್ಯವಸ್ಥೆ, ಉಪಕರಣಗಳು, ಗೊತ್ತುಪಡಿಸಿದ ಸದಸ್ಯರಿಗೆ ತರಬೇತಿ, ಹಾಸಿಗೆ, ಆಮ್ಲಜನಕ, ವರ್ಚುವಲ್ ನರ್ಸಿಂಗ್ ಮತ್ತು ವೈದ್ಯರ ಬೆಂಬಲವನ್ನು ಒದಗಿಸುತ್ತಾರೆ.ಇತ್ತೀಚೆಗೆ, ಮಣಿಪಾಲ್ ಆಸ್ಪತ್ರೆ ತುರ್ತು ವೈದ್ಯಕೀಯ ಕೊಠಡಿಗಳನ್ನು (ಇಎಂಆರ್) ಆರಂಭಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com