ಅಪಾಯಕಾರಿ ಬ್ಲ್ಯಾಕ್ ಫಂಗಸ್ ವಿರುದ್ಧ ಮುನ್ನೆಚ್ಚರಿಕೆ ಹೇಗೆ? ಐಸಿಎಂಆರ್ ನೀಡಿದ ಸಲಹೆಗಳು...

ಕೋವಿಡ್ ಸೋಂಕಿತರಿಗೆ ಅಪಾಯಕಾರಿ ಪರಿಣಮಿಸುತ್ತಿರುವ ಬ್ಲ್ಯಾಕ್ ಫಂಗಸ್ ಕುರಿತಂತೆ ಐಸಿಎಂಆರ್ ಮಾರ್ಗಸೂಚಿ ಮತ್ತು ಸಲಹೆಗಳನ್ನು ಬಿಡುಗಡೆ ಮಾಡಿದೆ.
ಕಪ್ಪು ಫಂಗಸ್ (ಸಂಗ್ರಹ ಚಿತ್ರ)
ಕಪ್ಪು ಫಂಗಸ್ (ಸಂಗ್ರಹ ಚಿತ್ರ)

ನವದೆಹಲಿ: ಕೋವಿಡ್ ಸೋಂಕಿತರಿಗೆ ಅಪಾಯಕಾರಿ ಪರಿಣಮಿಸುತ್ತಿರುವ ಬ್ಲ್ಯಾಕ್ ಫಂಗಸ್ ಕುರಿತಂತೆ ಐಸಿಎಂಆರ್ ಮಾರ್ಗಸೂಚಿ ಮತ್ತು ಸಲಹೆಗಳನ್ನು ಬಿಡುಗಡೆ ಮಾಡಿದೆ.

ಭಾರತದಲ್ಲಿ ಬ್ಲ್ಯಾಕ್ ಫಂಗಸ್ ಸಮಸ್ಯೆಯು ದಿನೇ ದಿನೇ ಏರುತ್ತಲೇ ಇದ್ದು, ಮಹಾರಾಷ್ಟ್ರದಲ್ಲಿ ಹೆಚ್ಚಿನ ಜನರು ಬ್ಲ್ಯಾಕ್ ಫಂಗಸ್ ನಿಂದ ತೊಂದರೆಗೆ ಒಳಗಾಗುತ್ತಿದ್ದಾರೆ. ಮಹಾರಾಷ್ಟ್ರ ಮಾತ್ರವಲ್ಲದೇ ಕರ್ನಾಟಕದಲ್ಲೂ ಕಪ್ಪು ಶೀಲೀಂದ್ರ ಸಮಸ್ಯೆಗೀಡಾದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕೊರೊನಾ ಸೋಂಕಿಗೆ  ಒಳಗಾಗಿ ಚಿಕಿತ್ಸೆ ಪಡೆಯುವ ಮಧುಮೇಹ ರೋಗಿಗಳಲ್ಲಿ ಮತ್ತು ಚಿಕಿತ್ಸೆ ವೇಳೆ ಅತಿಯಾಗಿ ಸ್ಟಿರಾಯ್ಡ್‌ ನೀಡಲಾದ ರೋಗಿಗಳಲ್ಲಿ ಈ ಬ್ಲ್ಯಾಕ್‌ ಫಂಗಸ್‌ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. 

ಸೋಂಕಿನ ಚಿಕಿತ್ಸೆ ವೇಳೆ ನೀಡುವ ಕೆಲವು ಔಷಧಗಳಿಂದಾಗಿ ರಕ್ತದಲ್ಲಿ ಸಕ್ಕರೆ ಪ್ರಮಾಣ ಒಮ್ಮೆಗೇ ಏರುತ್ತದೆ. ಇದು ಮಧುಮೇಹ ರೋಗಿಗಳಿಗೆ ಇನ್ನಷ್ಟು ಅಪಾಯ ಉಂಟು ಮಾಡುವ ಸಾಧ್ಯತೆ ಇದ್ದರೆ, ಸಾಮಾನ್ಯ ಆರೋಗ್ಯವಂತರೂ ಡಯಾಬಿಟಿಸ್‌ ಬಲೆಗೆ ಬೀಳುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಅವರು  ಗುಣಮುಖರಾಗಿ ಮನೆಗೆ ಬಂದ ಬಳಿಕ ಬ್ಲ್ಯಾಕ್‌ ಫಂಗಸ್‌ ಬಲೆಗೆ ಬೀಳುವ ಅಪಾಯ ಕಂಡುಬರುತ್ತದೆ. ಕೆಲವೊಮ್ಮೆ ಆಮ್ಲಜನಕ ಪೂರಣದ ವೇಳೆಯೂ ಫಂಗಸ್‌ ದಾಳಿ ನಡೆಯುವ ಸಾಧ್ಯತೆ ಇರುತ್ತದೆ.

ಕೋವಿಡ್ ಸೋಂಕಿನ ಆರಂಭಿಕ ಚಿಕಿತ್ಸೆಯ ಸಮಯದಲ್ಲಿ ಸ್ಟೀರಾಯ್ಡ್‌ಗಳ ಅತಿಯಾದ ಬಳಕೆಯ ಬಗ್ಗೆ ವೈದ್ಯರು ಎಚ್ಚರಿಸಿದ್ದು, ಇಂಡಿಯನ್ ಕೌನ್ಸಿಲ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮ್ಯೂಕೋರ್ಮೈಕೋಸಿಸ್ ಅನ್ನು ಪರೀಕ್ಷಿಸಲು, ರೋಗನಿರ್ಣಯ ಮಾಡಲು ಮತ್ತು ನಿರ್ವಹಿಸಲು ಪುರಾವೆ ಆಧಾರಿತ ಸಲಹೆಗಳನ್ನು ಬಿಡುಗಡೆ ಮಾಡಿದೆ. 

ಏನಿದು ಬ್ಲ್ಯಾಕ್ ಫಂಗಸ್?
ಮ್ಯೂಕೋರ್ಮೈಕೋಸಿಸ್ ಎನ್ನುವ ಒಂದು ಗುಂಪಿನ ಶಿಲೀಂಧ್ರಗಳಿಂದಸ ಈ ಬ್ಲ್ಯಾಕ್ ಸಮಸ್ಯೆ ಉಂಟಾಗುತ್ತದೆ. ಇದು ಗಾಳಿಯಲ್ಲಿ ಹರಿದಾಡುತ್ತದೆ. ಈ ಗಾಳಿಯನ್ನು ಉಸಿರಾಡಿದ ವೇಳೆ ಅದು ರೋಗಿಯ ದೇಹ ಸೇರುತ್ತದೆ. ಇದು ಸೈನಸ್ ಕುಳಿಗಳು, ಶ್ವಾಸಕೋಶ ಮತ್ತು ಎದೆಯ ಕುಳಿಗಳಲ್ಲಿ ಹೋಗಿ ಸೇರಿಕೊಳ್ಳುತ್ತದೆ. ಆದರೆ ಇದಕ್ಕೆ ಮತ್ತು ಕೋವಿಡ್ ಗೆ ಸಂಬಂಧವೇನು ಎನ್ನುವುದು ಇದುವರೆಗೆ ತಿಳಿದುಬಂದಿಲ್ಲ. ಕೋವಿಡ್-19 ವೇಳೆ ತೆಗೆದುಕೊಳ್ಳುವಂತಹ ಸ್ಟಿರಾಯ್ಡ್ ಗಳು ಇದಕ್ಕೆ ಕಾರಣವಾಗಿರಬಹುದು ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಸಮಸ್ಯೆಯ ಲಕ್ಷಣಗಳೇನು?
ಈ ಕಪ್ಪು ಶಿಲೀಂಧ್ರ ಸೋಂಕು ಹಬ್ಬಿದರೆ, ಆಗ ಮುಖದಲ್ಲಿ ಬದಲಾವಣೆಗಳು ಕಂಡುಬರುತ್ತದೆ.. ಕೆಲವೊಂದು ಸಲ ಇದು ಒಳಗಿನ ಅಂಗಾಂಗಗಳ ಮೇಲೆ ಕೂಡ ಪರಿಣಾಮ ಬೀರಬಹುದು. ಕೆಲವೊಂದು ತೀವ್ರ ರೀತಿಯ ಲಕ್ಷಣಗಳು ಇದರಿಂದ ಕಂಡುಬರುತ್ತದೆ. ಅತಿಯಾದ ತಲೆನೋವು, ದೃಷ್ಟಿ ಮಂದವಾಗುವುದು, ದವಡೆ ಮತ್ತು ಮುಖದ ಭಾಗಗಳಲ್ಲಿ ಊತ, ಮಾನಸಿಕ ಗೊಂದಲ, ಮೂಗಿನ ಮೇಲೆ ಕಪ್ಪು ಬಣ್ಣ ಮೂಡುತ್ತದೆ. ಇದು ಬಾಯಿಗೆ ಹಬ್ಬಿದರೆ ಅದರಿಂದ ಹಲ್ಲುಗಳು ಮತ್ತು ದವಡೆ ಮೇಲೆ ಕೂಡ ಪರಿಣಾಮವಾಗಬಹುದು.

ಪತ್ತೆ ಮಾಡುವುದು ಹೇಗೆ?

  • ಸೈನಟಿಸ್-ಅತಿಯಾದ ಮೂಗು ಕಟ್ಟುವಿಕೆ ಮತ್ತು ನೋವು
  • ಮೂಗಿನಿಂದ ಕಪ್ಪು ವಿಸರ್ಜನೆ (ಕಪ್ಪು ಬಣ್ಣದ ರಕ್ತಸಿಕ್ತ ದ್ರವ)
  • ಕೆನ್ನೆಯ ಮೂಳೆಯ ಮೇಲೆ ನೋವು
  • ಒಂದು ಬದಿಯ ಮುಖದ ನೋವು, ಮರಗಟ್ಟುವಿಕೆ ಅಥವಾ ತಲೆನೋವು, ಹಲ್ಲುನೋವು
  • ನೋವಿನಿಂದ ಮಸುಕಾದ ದೃಷ್ಟಿ, ಎದೆ ನೋವು, ಉಸಿರಾಟದ ಸಮಸ್ಯೆ

ಯಾರಿಗೆಲ್ಲಾ ಅಪಾಯ?

  • ಅನಿಯಂತ್ರಿತ ಡಯಾಬಿಟಿಸ್ ಸಮಸ್ಯೆ ಇರುವವರು
  • ರೋಗ ನಿರೋಧಕ ಶಕ್ತಿ ಕುಂದಿ ಸ್ಟಿರಾಯ್ಡ್ ಗಳನ್ನು ಹೆಚ್ಚು ಬಳಕೆ ಮಾಡುತ್ತಿರುವವರು
  • ದೀರ್ಘಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿರುವವರು
  • ಅಂಗಾಂಗ ಕಸಿ, ಇತರೆ ಗಂಭೀರ ಅನಾರೋಗ್ಯ ಸಮಸ್ಯೆ ಇರುವವರು 

ಮುನ್ನೆಚ್ಚರಿಕೆ ಹೇಗೆ?

  • ಹೈಪರ್ಗ್ಲೈಸೀಮಿಯಾ ನಿಯಂತ್ರಣ ಅತ್ಯಗತ್ಯ
  • ಕೋವಿಡ್ ಚಿಕಿತ್ಸೆ ಬಳಿಕ ರಕ್ತದಲ್ಲಿನ ಗ್ಲೂಕೋಸ್ ಮಟ್ಟದ ನಿರಂತರ ಮೇಲ್ವಿಚಾರಣೆ
  • ಸ್ಟೀರಾಯ್ಡ್ ಗಳ ಬಳಕೆ ಮೇಲೆ ನಿಯಂತ್ರಣ
  • ಆಮ್ಲಜನಕ ಚಿಕಿತ್ಸೆಯ ಸಮಯದಲ್ಲಿ ಆರ್ದ್ರಕಗಳಿಗೆ ಶುದ್ಧ, ಬರಡಾದ ನೀರನ್ನು ಬಳಸಿ
  • ಆ್ಯಂಟಿ ಬಯಾಟಿಕ್ ಗಳು ಮತ್ತು ಆ್ಯಂಟಿಫಂಗಲ್ ಔಷಧಿಗಳ ಕ್ರಮಬದ್ಧ ಬಳಕೆ

ಏನು ಮಾಡಬಾರದು?

  • ಅಲ್ಪ ಪ್ರಮಾಣ ಅಥವಾ ಸೌಮ್ಯ ಸೋಂಕು ಲಕ್ಷಣಗಳಿದ್ದರೂ ಆರಂಭದಲ್ಲೇ ಸೂಕ್ತ ಚಿಕಿತ್ಸೆ ಪಡೆದರೆ ಉತ್ತಮ
  • ಮೂಗು ಕಟ್ಟುವ ಪ್ರತಿ ಪ್ರಕರಣಗಳೂ ಬ್ಲಾಕ್ ಫಂಗಸ್ ಸಮಸ್ಯೆ ಅಲ್ಲ
  • ಕಪ್ಪು ಶಿಲೀಂಧ್ರ ರೋಗಶಾಸ್ತ್ರವನ್ನು ಕಂಡುಹಿಡಿಯಲು KOH ಸ್ಟೇನಿಂಗ್, ಮೈಕ್ರೋಸ್ಕೋಪಿ, ಕಲ್ಚರ್, MALDITOF ನಂತಹ ಪರೀಕ್ಷೆಗಳನ್ನು ಮಾಡಬಹುದು
  • ಯಾವುದೇ ಕಾರಣಕ್ಕೂ ಚಿಕಿತ್ಸೆ ತಡಮಾಡಬೇಡಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com