ಬಿಸಿಲ ಧಗೆ: ನಿರ್ಜಲೀಕರಣ ಸಮಸ್ಯೆ ಹೆಚ್ಚಳ; ಈ ವಿಶಿಷ್ಟ ಜ್ವರದ ಬಗ್ಗೆ ಎಚ್ಚರವಹಿಸಿ!
ಬಿಸಿಲ ಧಗೆ ಹೆಚ್ಚುತ್ತಿದ್ದಂತೆಯೇ ಸಿಲಿಕಾನ್ ಸಿಟಿಯ ಬಹುತೇಕ ಜನರು ನಿರ್ಜಲೀಕರಣ. ಹೊಟ್ಟೆ ಜ್ವರ, ಹೊಟ್ಟೆ ಸಂಬಂಧಿತ ಸೋಂಕುಗಳು, ಯುಟಿಐ ಸಮಸ್ಯೆಗಳನ್ನು ಎದುರಿಸುವಂತಾಗಿದೆ.
Published: 29th April 2022 01:54 PM | Last Updated: 29th April 2022 02:18 PM | A+A A-

ಸಂಗ್ರಹ ಚಿತ್ರ
ಬೇಸಿಗೆಯ ಪ್ರತಾಪ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಪ್ರತಿದಿನದ ತಾಪಮಾನ ಕನಿಷ್ಟ 22 ಡಿಗ್ರಿ ಸೆಲ್ಸಿಯಸ್‌ನಿಂದ ಆರಂಭಗೊಂಡು ಗರಿಷ್ಠ 36 ಡಿಗ್ರಿ ಸೆಲ್ಸಿಯಸ್‌ವರೆಗೂ ದಾಖಲಾಗುತ್ತಿದೆ. ಬಿಸಿಲ ಧಗೆ ಹೆಚ್ಚುತ್ತಿದ್ದಂತೆಯೇ ಸಿಲಿಕಾನ್ ಸಿಟಿಯ ಬಹುತೇಕ ಜನರು ನಿರ್ಜಲೀಕರಣ. ಹೊಟ್ಟೆ ಜ್ವರ, ಹೊಟ್ಟೆ ಸಂಬಂಧಿತ ಸೋಂಕುಗಳು, ಯುಟಿಐ ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ಬೆಂಗಳೂರು ಎಂದಿಗೂ ಈ ಮಟ್ಟದ ಬಿಸಿಲು ಕಂಡಿರಲಿಲ್ಲ. ಬಿಸಿಲು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಜನರಲ್ಲಿ ಹೊಟ್ಟೆ ಜ್ವರದಂತಹ ಸಮಸ್ಯೆಗಳು ಕಾಮಿಸಿಕೊಳ್ಳುತ್ತಿವೆ. ಇದು ತೀವ್ರತರವಾದ ಗ್ಯಾಸ್ಟ್ರೋಎಂಟರೈಟಿಸ್ ಎಂದು ಹೇಳಬಹುದಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಕಲುಷಿತ ಆಹಾರ ಅಥವಾ ನೀರಿನಿಂದ ಮಕ್ಕಳಿಗೆ ಸಾಮಾನ್ಯವಾಗಿ ಹೊಟ್ಟೆಗೆ ಸಂಬಂಧಿಸಿದ ಸೋಂಕುಗಳು, ಹೊಟ್ಟೆ ನೋವು ಕಾಣಿಸಿಕೊಳ್ಳುತ್ತವೆ. ಈ ಸಂದರ್ಭದಲ್ಲಿ ಒಂದು ಅಥವಾ ಎರಡು ದಿನಗಳ ಕಾಲ ಜ್ವರ, ವಾಂತಿ, ನಂತರ ಸಡಿಲವಾದ ಮಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಯಶವಂತಪುರದ ಮಣಿಪಾಲ್ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ.ಸುಪ್ರಜಾ ಚಂದ್ರಶೇಖರ್ ಹೇಳಿದ್ದಾರೆ.
ಇದನ್ನೂ ಓದಿ: ಬೇಸಿಗೆ ಸಂದರ್ಭದಲ್ಲಿ ಗರ್ಭಿಣಿಯರು ಆರೋಗ್ಯ ಕಾಪಾಡಿಕೊಳ್ಳಲು ಪಾಲಿಸಬೇಕಾದ ಉಪಯುಕ್ತ ಸಲಹೆಗಳು
ಸಾಮಾನ್ಯವಾಗಿ ಬೇಸಿಗೆಯಲ್ಲಿ ಹೆಚ್ಚಾಗಿ ಯುಟಿಐ (ಮೂತ್ರ ಸೋಂಕು) ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ದೇಹ ನಿರ್ಜಲೀಕರಣಗೊಳ್ಳುವುದು ಹಾಗೂ ಕಡಿಮೆ ಪ್ರಮಾಣದ ಮೂತ್ರ ವಿಸರ್ಜನೆ ಮಾಡುವುದರಿಂದ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ಕಡಿಮೆ ಮೂತ್ರ ವಿಸರ್ಜನೆಯಿಂದ ಬ್ಯಾಕ್ಟೀರಿಯಾಗಳು ರಚನೆಗೊಂಡು ಇದು ಸೋಂಕಿಗೆ ಕಾರಣವಾಗುತ್ತವೆ ಎಂದು ತಜ್ಞರು ಹೇಳಿದ್ದಾರೆ.
ಈ ಎಲ್ಲಾ ಸಮಸ್ಯೆಗಳಿಗೆ ಪ್ರಮುಖ ಅಂಶವೆಂದರೆ ನಿರ್ಜಲೀಕರಣ. ಈ ಸಮಯದಲ್ಲಿ ಔಷಧಿಗಳ ಅಗತ್ಯವಿಲ್ಲ. ಸಾಮಾನ್ಯವಾಗಿ ಸಮಸ್ಯೆ ಹೇಳಿಕೊಂಡು ಬರುವವರಿಗೆ ಕೂಡಲೇ ಆ್ಯಂಟಿಬಯೋಟಿಕ್ ಗಳನ್ನು ನೀಡುವುದಿಲ್ಲ. ಉಪ್ಪು, ಸಕ್ಕರೆಯನ್ನು ಸಮ ಪ್ರಮಾಣದಲ್ಲಿ ನೀರಿಗೆ ಬೆರೆಸಿ ಕುಡಿಸಬೇಕು. ಸಮಸ್ಯೆಗಳಿಂದ ದೂರ ಉಳಿಯಲು ಮಕ್ಕಳಿಗೆ ಹೆಚ್ಚೆಚ್ಚು ನೀರು ಕುಡಿಸಬೇಕೆಂದು ಡಾ.ಸುಪ್ರಜಾ ಹೇಳಿದ್ದಾರೆ.
ಬಿಸಿಲ ತಾಪ ಹೆಚ್ಚಾಗಿದ್ದು, ಮಕ್ಕಳಲ್ಲಿ ಸೋಂಕುಗಳು ಹೆಚ್ಚಾಗಲಿವೆ. ಸೋಂಕು, ನಿರ್ಜಲೀಕರಣ ಕುರಿತು ಪೋಷಕರು ಹಾಗೂ ಆರೈಕೆಯಲ್ಲಿ ತೊಡಗಿರುವವರು ಎಚ್ಚರಿಕೆ ವಹಿಸಬೇಕಿದೆ ಎಂದು ಸಕ್ರಾ ವರ್ಲ್ಡ್ ಆಸ್ಪತ್ರೆಯ ಹಿರಿಯ ಸಲಹೆಗಾರ ಮತ್ತು ಎಚ್‌ಒಡಿ, ಪೀಡಿಯಾಟ್ರಿಕ್ಸ್ ಮತ್ತು ನಿಯೋನಾಟಾಲಜಿ ಡಾ ರಜತ್ ಆತ್ರೇಯ ಅವರು ಹೇಳಿದ್ದಾರೆ.
ಇದನ್ನೂ ಓದಿ: ಬಿಸಿಲ ಧಗೆ ಬಾಧಿಸದಿರಲಿ ತನುವ (ಕುಶಲವೇ ಕ್ಷೇಮವೇ)
ಬಿಸಿಲು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಕ್ಕಳ ಹೊರಾಂಗಣ ಚಟುವಟಿಕೆಗಳನ್ನು ಬೆಳಿಗ್ಗೆ 11 ಗಂಟೆಯ ಮೊದಲು ಮತ್ತು ಮಧ್ಯಾಹ್ನ 3 ಅಥವಾ 4 ಗಂಟೆಯ ನಂತರ ಸೀಮಿತಗೊಳಿಸುವುದು ಸೂಕ್ತ. ಹೊರಾಂಗಣದಲ್ಲಿ ಆಡುವಾಗ, ಸಡಿಲವಾದ ಬಿಳಿ ಹತ್ತಿ ಬಟ್ಟೆಗಳನ್ನು ಧರಿಸುವುದು ಮುಖ್ಯ, ಅಗಲವಾದ ಅಂಚುಗಳ ಟೋಪಿಗಳು ಸಹಾಯ ಮಾಡುತ್ತದೆ, ”ಎಂದು ತಿಳಿಸಿದ್ದಾರೆ.
ಮಕ್ಕಳು ಹೊರಾಂಗಣದಲ್ಲಿ ಬಿಸಿಲನ್ನು ದೀರ್ಘಕಾಲದವರೆಗೂ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಸಂದರ್ಭದಲ್ಲಿ ಮಕ್ಕಳಿಗೆ 30 ಅಥವಾ ಅದಕ್ಕಿಂತ ಹೆಚ್ಚಿನ SPF ನೊಂದಿಗೆ ಸನ್‌ಸ್ಕ್ರೀನ್ ಅನ್ನು ಬಳಸುವುದು ಮುಖ್ಯವಾಗಿದೆ. ಹಾಲುಣಿಸುವ ಚಿಕ್ಕ ಮಕ್ಕಳನ್ನು ಬಟ್ಟೆಗಳಿಂದ ಸುತ್ತಬಾರದು ಎಂದು ಡಾ.ರಜತ್ ಹೇಳಿದ್ದಾರೆ.
ಬಿಸಿಲು ಹೆಚ್ಚಳ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಬಿಸಿಲ ಕುರಿತು ಪ್ರಧಾನಿ ಮೋದಿಯವರು ನೀಡಿದ್ದ ಹೇಳಿಕೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ನಗರವಾಸಿಗಳನ್ನು ಹೆಚ್ಚು ಕಾಡುತ್ತಿರುವ ಸೈಲೆಂಟ್ ಕಿಲ್ಲರ್ ಅನಿಮಿಯಾ ಬಗ್ಗೆ ನಿಮಗೆಷ್ಟು ಗೊತ್ತು?
ವಿಡಿಯೋದಲ್ಲಿ ಪ್ರಧಾನಿ ಮೋದಿಯವರು, ಇದೂವರೆಗೂ ಕಾಣದ ಪ್ರಮಾಣದಲ್ಲಿ ಬಿಸಿಲ ದಗೆ ಕಂಡು ಬರುತ್ತಿದ್ದು, ಈ ಸಂದರ್ಭದಲ್ಲಿ ನಿರ್ಜಲೀಕರಣ ಸಮಸ್ಯೆಗಳು ಹೆಚ್ಚಾಗಲಿದೆ. ಸಮಸ್ಯೆಗಳಿಂದ ದೂರ ಇರಲು ಹೈಡ್ರೇಟೆಡ್ ಆಗಿರಿ. ಅಗತ್ಯಬಿದ್ದಾಗ ಇತರರಿಗೂ ಸಹಾಯ ಮಾಡಿ. ಮಕ್ಕಳು, ವಯೋವೃದ್ಧರು, ಅಂಗವಿಕಲರ ಮೇಲೆ ಹೆಚ್ಚಿನ ನಿಗಾ ಇರಿಸಿ ಎಂದು ಹೇಳಿದ್ದಾರೆ.
ಮಕ್ಕಳ ಆರೈಕೆ ಹಾಗೂ ಕಾಳಜಿ ಹೀಗಿರಲಿ?
- ಮಕ್ಕಳಿಗೆ ಎಳನೀರು, ಒಆರ್ಎಸ್, ಗಂಜಿ ಇತ್ಯಾಗಿ ದ್ರವ ಪದಾರ್ಥಗಲನ್ನು ಹೆಚ್ಚಾಗಿ ನೀಡಿ. ಇದು ದೇಹ ನಿರ್ಜಲೀಕರಣಗೊಳ್ಳದಂತೆ ನೋಡಿಕೊಳ್ಳಲಿದೆ.
- ಮಕ್ಕಳು ಜ್ವರದಿಂದ ಬಳಲುತ್ತಿದ್ದರೆ ಆ್ಯಂಟಿಬಯಾಟಿಕ್ ಗಳನ್ನು ನಿಯಂತ್ರಿಸಿ ಪ್ಯಾರೆಸಿಟಮಾಲ್ ಅಥವಾ ಐಬುಪ್ರೊಫೇನ್'ನ್ನು ನೀಡಿ.
- ಆರೋಗ್ಯಕರ ಆಹಾರ, ಶುದ್ಧ ನೀರು, ಹಣ್ಣುಗಳು ಮತ್ತು ಹಣ್ಣಿನ ರಸವನ್ನು ನೀಡಿ.
- ಚರ್ಮದ ರಕ್ಷಣೆಗಾಗಿ ಟೋಪಿಗಳು, ಛತ್ರಿ ಮತ್ತು ಸನ್‌ಸ್ಕ್ರೀನ್ ಗಳಂತಹ ವಸ್ತುಗಳನ್ನು ಬಳಸಿ.