social_icon

ನಗರವಾಸಿಗಳನ್ನು ಹೆಚ್ಚು ಕಾಡುತ್ತಿರುವ ಸೈಲೆಂಟ್ ಕಿಲ್ಲರ್ ಅನಿಮಿಯಾ ಬಗ್ಗೆ ನಿಮಗೆಷ್ಟು ಗೊತ್ತು?

ರಕ್ತ ಹೀನತೆ ಎಂದರೆ ದೇಹದಲ್ಲಿ ಹರಿಯುವ ರಕ್ತದ ಕೊರತೆ. ಶರೀರದಲ್ಲಿ ಕೆಂಪು ರಕ್ತಕಣಗಳ ಸಂಖ್ಯೆ ಕಡಿಮೆಯಾದಾಗ ಅನಿಮಿಯಾ ಅಥವಾ ರಕ್ತಹೀನತೆ ಉಂಟಾಗುತ್ತದೆ. ಮನುಷ್ಯನ ದೇಹದಲ್ಲಿ ರಕ್ತವು ನಿಗದಿತ ಪ್ರಮಾಣಕ್ಕಿಂತ ಕಡಿಮೆಯಾಗಬಾರದು. ಹಾಗೆಯೇ ರಕ್ತದಲ್ಲಿ ಕಬ್ಬಿಣದ ಕೊರತೆ ಉಂಟಾಗಬಾರದು.

Published: 10th February 2022 03:18 PM  |   Last Updated: 10th February 2022 06:10 PM   |  A+A-


ಅನಿಮಿಯಾ
Posted By : manjula
Source : The New Indian Express

ರಕ್ತ ಹೀನತೆ ಎಂದರೆ ದೇಹದಲ್ಲಿ ಹರಿಯುವ ರಕ್ತದ ಕೊರತೆ. ಶರೀರದಲ್ಲಿ ಕೆಂಪು ರಕ್ತಕಣಗಳ ಸಂಖ್ಯೆ ಕಡಿಮೆಯಾದಾಗ ಅನಿಮಿಯಾ ಅಥವಾ ರಕ್ತಹೀನತೆ ಉಂಟಾಗುತ್ತದೆ. ಮನುಷ್ಯನ ದೇಹದಲ್ಲಿ ರಕ್ತವು ನಿಗದಿತ ಪ್ರಮಾಣಕ್ಕಿಂತ ಕಡಿಮೆಯಾಗಬಾರದು. ಹಾಗೆಯೇ ರಕ್ತದಲ್ಲಿ ಕಬ್ಬಿಣದ ಕೊರತೆ ಉಂಟಾಗಬಾರದು. 

ಕೆಂಪು ರಕ್ತಕಣಗಳಲ್ಲಿರುವ ಹಿಮೊಗ್ಲೋಬಿನ್ ಶರೀರದ ವಿವಿಧ ಭಾಗಗಳಿಗೆ ಆಮ್ಲಜನಕವನ್ನು ಪೂರೈಸುವ ಕೆಲಸವನ್ನು ಮಾಡುತ್ತದೆ. ರಕ್ತಹೀನತೆಯುಂಟಾದಾಗ ರಕ್ತದ ಮೂಲಕ ಶರೀರದಾದ್ಯಂತ ಆಮ್ಲಜನಕ ಪೂರೈಕೆ ಸಾಮರ್ಥ್ಯವು ಕಡಿಮೆಯಾಗುತ್ತದೆ. ಇದು ಆರೋಗ್ಯಕರ ಕೆಂಪು ರಕ್ತಕಣಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ತಗ್ಗಿಸುವ ಅಥವಾ ಕೆಂಪು ರಕ್ತಕಣಗಳ ವಿಭಜನೆಯನ್ನು ಅಥವಾ ನಷ್ಟವನ್ನು ಹೆಚ್ಚಿಸುವ ಇತರ ಕಾಯಿಲೆಗಳಿಗೂ ಕಾರಣವಾಗುತ್ತದೆ.

ಹೀಗಾಗಿ ಪ್ರತಿನಿತ್ಯ ನಾವು ಸೇವಿಸುವ ಆಹಾರದಲ್ಲಿ ದೇಹಕ್ಕೆ ಅತ್ಯಾವಶ್ಯಕವಾಗಿ ಬೇಕಾಗುವ ಸತ್ವ, ಪೋಷಕಾಂಶ ಇರಬೇಕು.

ಇದನ್ನೂ ಓದಿ: ಕಳೆದ ಆರು ತಿಂಗಳಲ್ಲಿ ಶೇ.35ರಿಂದ ಶೇ.40ರಷ್ಟು ಮಧುಮೇಹ, ಅಧಿಕ ರಕ್ತದೊತ್ತಡ ರೋಗಿಗಳ ಹೆಚ್ಚಳ: ಕೋವಿಡ್ ಕಾರಣ?

ರಕ್ತ ಹೀನತೆ ಎಂಬುದು ಸೈಲೆಂಟ್ ಕಿಲ್ಲರ್ ಆಗಿದ್ದು, ಈ ಸಮಸ್ಯೆಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆದುಕೊಳ್ಳದೇ ಹೋದಲ್ಲಿ ಅಪಾಯಗಳು ಕಟ್ಟಿಟ್ಟ ಬುತ್ತಿ ಎಂದೇ ಹೇಳಲಾಗುತ್ತಿದೆ. 

ಅಂಕಿಅಂಶ ಪ್ರಕಾರ ದೇಶದಲ್ಲಿ ಒಂದೊಂದು ಸೆಕೆಂಡ್ ಗೂ ಮಹಿಳೆಯೊಬ್ಬರು ರಕ್ತ ಹೀನತೆ ಸಮಸ್ಯೆಯಿಂದ ಬಳಲುತ್ತಿರುವುದು ಪತ್ತೆಯಾಗುತ್ತಿದೆ ಎಂದು ಹೇಳಿದೆ. ಆದರೆ, ಸಮಸ್ಯೆ ಪತ್ತೆಯಾದರೂ ಚಿಕಿತ್ಸೆ ಪಡೆದುಕೊಳ್ಳುವುದು ತಡಮಾಡುತ್ತಿದ್ದಾರೆಂದು ತಿಳಿಸಿದೆ. 

ಕೇರಳದ ಮೆಟ್ರೊಪೊಲಿಸ್ ಲ್ಯಾಬ್ ವೊಂದು ಈ ಸಂಬಂಧ ಅಧ್ಯಯನ ನಡೆಸಿದ್ದು, ರಕ್ತ ಹೀನತೆ ಹೊಂದಿರುವ 322 ಮಂದಿ ಪೈಕಿ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿದೆ. ಅದರಲ್ಲೂ ನಗರ ಪ್ರದೇಶಗಳಿಲ್ಲಿನ ಜನರು ಹೆಚ್ಚು ರಕ್ತ ಹೀನತೆ, ರಕ್ತ ಹೀನತೆಗೆ ಕಾರಣವಾಗುವ ಫೋಲಿಕ್ ಆ್ಯಸಿಡ್, ಕಬ್ಬಿಣ ಹಾಗೂ ವಿಟಮಿನ್ ಬಿ12 ಕೊರತೆಯಿಂದ ಬಳಲುತ್ತಿದ್ದಾರೆಂದು ತಿಳಿಸಿದೆ. 

ಅಧ್ಯಯನ ಮಾಡಿದ ಎಲ್ಲಾ ಪ್ರಕರಣಗಳಲ್ಲಿ, ಶೇ,96 ರಷ್ಟು ಜನರು ಫೋಲಿಕ್ ಆ್ಯಸಿಡ್ ಕೊರತೆ, ಶೇ.59 ಕಬ್ಬಿಣಾಂಶದ ಕೊರತೆ ಮತ್ತು ಶೇ.41ರಷ್ಟು ಜನರು ವಿಟಮಿನ್ ಬಿ12 ಕೊರತೆಯಿಂದ ಬಳಲುತ್ತಿರುವುದು ಕಂಡು ಬಂದಿದೆ. ಅಂದರೆ, ಫೋಲಿಕ್ ಆ್ಯಸಿಡ್, ಕಬ್ಬಿಣಾಂಶ ಮತ್ತು ವಿಟಮಿನ್ ಬಿ 12 ನಂತಹ ಪೋಷಕಾಂಶಗಳ ಕೊರತೆಯು ಕೇರಳದ ನಗರಗಳಲ್ಲಿ ರಕ್ತಹೀನತೆಗೆ ಕೊಡುಗೆ ನೀಡುತ್ತಿದೆ ಎಂದು ಮೆಟ್ರೊಪೊಲಿಸ್ ಹೆಲ್ತ್‌ಕೇರ್‌ನ ಕೇರಳ ಆಪರೇಷನ್'ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ ರಮೇಶ್ ಕುಮಾರ್ ಅವರು ಹೇಳಿದ್ದಾರೆ. 

ಇದನ್ನೂ ಓದಿ: ಯುವಜನತೆಯಲ್ಲಿ ಹೆಚ್ಚುತ್ತಿರುವ ಹೃದಯಾಘಾತ: ಕಾರಣವೇನು, ತಪ್ಪಿಸಲು ಏನು ಮಾಡಬಹುದು? 

ರಾಷ್ಟ್ರೀಯವಾಗಿ, 2019-21ರ ಅವಧಿಯಲ್ಲಿ ವಿವಿಧ ನಗರಗಳ 19,536 ಆರೋಗ್ಯವಂತ ವಯಸ್ಕರಲ್ಲಿ ಹಿಮೋಗ್ಲೋಬಿನ್ ಮಟ್ಟಗಳ ವಿಶ್ಲೇಷಣೆಯು ವಿಶ್ವಾದ್ಯಂತ ಹೋಲಿಸಿದರೆ ಭಾರತದ ಜನಸಂಖ್ಯೆಯಲ್ಲಿ ರಕ್ತಹೀನತೆಯ ಹೆಚ್ಚಾಗಿರುವುದನ್ನು (38.48%) ಎಂದು ಬಹಿರಂಗಪಡಿಸಿದೆ ಎಂದು ರೋಗಶಾಸ್ತ್ರಜ್ಞೆ ಡಾ ಮೇಘಾ ಕಾಂಬ್ಲಿ ಹೇಳಿದ್ದಾರೆ.

ರಕ್ತಹೀನತೆ ಸಾಮಾನ್ಯವಾಗಿ ತೀವ್ರವಾದ ಆಯಾಸ, ತಲೆ ತಿರುಗುವುದು, ತೆಳವಾದ ಚರ್ಮ, ಹೃದಯ ಬಡಿತ ಹೆಚ್ಚಳದಂತಹ ರೋಗ ಲಕ್ಷಣಗಳನ್ನು ಹೊಂದಿದೆ.

ಈ ಹಿಂದೆ ಪ್ರಕಟವಾದ ವಿವಿಧ ಅಧ್ಯಯನಗಳು ಗ್ರಾಮೀಣ ಮತ್ತು ಅಭಿವೃದ್ಧಿಯಾಗದ ಪ್ರದೇಶಗಳಲ್ಲಿ ರಕ್ತಹೀನತೆ ಹೆಚ್ಚಾಗಿದೆ ಎಂದು ಹೇಳಿದ್ದವು. ಆದರೆ, ಈ ಬಾರಿಯ ವರದಿಯು ನಗರವಾಸಿಗಳಲ್ಲೂ ರಕ್ತಹೀನತೆ ಹೆಚ್ಚಾಗಿರುವುದನ್ನು ತಿಳಿಸಿದೆ. ಹೀಗಾಗಿ ನಗರ ಪ್ರದೇಶಗಳಲ್ಲಿ ರಕ್ತಹೀನತೆಯ ಕುರಿತು ಅರಿವು, ತಪಾಸಣೆ ಮತ್ತು ಮೌಲ್ಯಮಾಪನವನ್ನು ಹೆಚ್ಚಿಸುವುದು, ಆರಂಭಿಕ ರೋಗನಿರ್ಣಯ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಿದೆ ಎಂದು ಡಾ ಮೇಘಾ ಅವರು ಹೇಳಿದ್ದಾರೆ. 

ಪೌಷ್ಟಿಕಾಂಶಗಳ ಒದಗಿಸುವ ಮೂಲಕ ರಕ್ತಹೀನತೆ ಸಮಸ್ಯೆಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಬಹುದು ಹಾಗೂ ಈ ರೋಗವನ್ನು ತಡೆಯಬಹುದಾಗಿದೆ. ಕಬ್ಬಿಣದ ಕೊರತೆಯಿಂದಾಗುವ ರಕ್ತಹೀನತೆ ಮತ್ತು ಥಲಸ್ಸೆಮಿಯಾ ಸೇರಿದಂತೆ ಇತರ ರೀತಿಯ ರಕ್ತಹೀನತೆಗಳನ್ನು ಸಮಯೋಚಿತ ರೀತಿಯಲ್ಲಿ ನಿರ್ವಹಿಸಬೇಕಿದೆ. ಆದರೆ, ಸಮಸ್ಯೆಯನ್ನು ಸೂಕ್ತ ಸಮಯದಲ್ಲಿ ಪತ್ತೆ ಮಾಡವುದು ಮುಖ್ಯವಾಗಿದೆ. ಆಗಾಗ ಆರೋಗ್ಯ, ರಕ್ತ ತಪಾಸಣೆ ನಡೆಸಬೇಕಿದೆ. ಯಾವುದೇ ರೀತಿಯ ಲಕ್ಷಣಗಳನ್ನು ಜನರು ನಿರ್ಲಕ್ಷ್ಯಿಸಬಾರದು ಎಂದು ಡಾ.ರಮೇಶ ಅವರು ಹೇಳಿದ್ದಾರೆ. 

ಸಾಕಷ್ಟು ಜನರು ಪ್ರಮುಖವಾಗಿ ಮಹಿಳೆಯರು ಇದರ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆಂದು ರಾಷ್ಟ್ರೀಯ ಆರೋಗ್ಯ ಆಯೋಗದ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಇದನ್ನೂ ಓದಿ: ಕ್ಯಾನ್ಸರ್ ಥೆರಪಿ: ಆರಂಭಿಕ ಹಂತದಲ್ಲೇ ಟ್ಯೂಮರ್ ಪತ್ತೆ ಹಚ್ಚುವ ವಿಧಾನ; ಸಂಶೋಧಕರ ಸಾಧನೆ

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಪ್ರತಿ ಐದು ತಾಯಂದಿರ ಸಾವಿನಲ್ಲಿ ಒಂದು ಸಾವು ರಕ್ತಹೀನತೆಯಿಂದ ಸಂಭವಿಸುತ್ತಿದೆ ಎಂದು ಹೇಳಿದೆ. ಆರಂಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಪ್ರಕರಣಗಳು ಹೆಚ್ಚಾಗಿತ್ತು. ಆದರೆ ಈಗ ನಗರವಾಸಿಗಳ ಮೇಲೂ ಪರಿಣಾಮ ಬೀರುತ್ತಿದೆ. ಪ್ರಸ್ತುತ ಕೋವಿಡ್ ಪರಿಸ್ಥಿತಿಯು ರಕ್ತಹೀನತೆಯ ರೋಗಿಯ ಆರೋಗ್ಯ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ. 

ಈ ಸಮಸ್ಯೆಗೆ ಚಿಕಿತ್ಸೆ ನೀಡದೆ ಬಿಟ್ಟರೆ, ರಕ್ತಹೀನತೆಯು ಹೃದಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ತೀವ್ರ ದೌರ್ಬಲ್ಯ, ದುರ್ಬಲ ರೋಗನಿರೋಧಕ ಶಕ್ತಿ ಮತ್ತು ಬಹು ಅಂಗಗಳ ವೈಫಲ್ಯವನ್ನೂ ಇದು ಉಂಟುಮಾಡಬಹುದು ಎಂದು ತಿಳಿಸಿದ್ದಾರೆ.

ರೋಗ ನಿಯಂತ್ರಣಕ್ಕೆ ಸಮತೋಲಿತ ಆಹಾರವು ಮುಖ್ಯ
WHO ಪ್ರಕಾರ ಪೌಷ್ಟಿಕಾಂಶದ ಕೊರತೆಯಿಂದಾಗಿ ಈ ಸಮಸ್ಯೆ ಎದುರಾಗಲಿದ್ದು, ಇದನ್ನು ತಡೆಯಲು ಸಮತೋಲಿತ ಆಹಾರ ಸೇವೆ ಅತೀ ಮುಖ್ಯವಾಗಿದೆ ಎಂದು ಹೇಳಿದೆ. 

ಆರೋಗ್ಯಕರ ಆಹಾರ ಕ್ರಮಗಳ ಅನುಸರಿಸುವುದರಿಂದ ದೇಹವು ಆರೋಗ್ಯಕರ ರಕ್ತ ಕಣಗಳನ್ನು ಉತ್ಪಾದಿಸಲು ಸಾಧ್ಯವಾಗುತ್ತದೆ. ಕಬ್ಬಿಣಾಂಶ, ವಿಟಮಿನ್ ಬಿ ಅಥವಾ ಫೋಲಿಕ್ ಆ್ಯಸಿಡ್ ಕೊರತೆ ರಕ್ತಹೀನತೆಗೆ ಕಾರಣವಾಗಲಿದ್ದು, ಈ ಸಮಸ್ಯೆಯಿಂದ ದೂರ ಉಳಿಯಲು ಸಾಕಷ್ಟು ಕಬ್ಬಿಣಾಂಶವಿರುವ ಆಹಾರಗಳು, ಹಸಿರು ಮತ್ತು ಎಲೆಗಳ ತರಕಾರಿಗಳು, ಮಾಂಸ, ಬೀನ್ಸ್, ಧಾನ್ಯಗಳು ಮತ್ತು ಮೀನು, ಹಾಲು, ಮೊಟ್ಟೆ, ಬೆಣ್ಮೆ ಮತ್ತು ವಿಟಮಿನ್ ಸಿ-ಭರಿತ ಆಹಾರಗಳನ್ನು ಸೇವಿಸುವುದು ಮುಖ್ಯವಾಗಿದೆ. 

ರಕ್ತಹೀನತೆಗೆ ಕಾರಣಗಳು
ರಕ್ತಹೀನತೆಯನ್ನು ಅದರ ಕಾರಣಗಳನ್ನು ಅವಲಂಬಿಸಿ ಮೂರು ಗುಂಪುಗಳಲ್ಲಿ ವರ್ಗೀಕರಿಸಲಾಗಿದೆ. ರಕ್ತ ನಷ್ಟ ಅಥವಾ ಕಡಿಮೆ ಅಥವಾ ದೋಷಯುಕ್ತ ಕೆಂಪು ರಕ್ತಕಣಗಳ ಉತ್ಪಾದನೆ ಅಥವಾ ಕೆಂಪುರಕ್ತಕಣಗಳ ನಾಶ ಇವು ರಕ್ತಹೀನತೆಗೆ ಪ್ರಮುಖ ಕಾರಣಗಳಾಗಿವೆ. 

ಸ್ಟಿರಾಯ್ಡೇತರ ಉರಿಯೂತ ನಿರೋಧಕ ಔಷಧಿಗಳ ಸೇವನೆ, ಜಠರಗರುಳು ಸಮಸ್ಯೆ, ಮುಟ್ಟಿನ ಸಂದರ್ಭದಲ್ಲಿ ತೀವ್ರ ರಕ್ತಸ್ರಾವ, ಅಸ್ಥಿಮಜ್ಜೆ ಮತ್ತು ಕಾಂಡಕೋಶ ಸಮಸ್ಯೆಗಳು, ನಿರೋಧಕ ವ್ಯವಸ್ಥೆಯಲ್ಲಿ ಸಮಸ್ಯೆ ಇತ್ಯಾದಿಗಳೂ ರಕ್ತಹೀನತೆಗೆ ಕಾರಣವಾಗಿವೆ.

ಲಕ್ಷಣಗಳೇನು? 
ಎದೆನೋವು, ಬವಳಿ ಬರುವಿಕೆ, ಕಣ್ಣು ಮತ್ತು ಚರ್ಮ ಹಳದಿ ಬಣ್ಣಕ್ಕೆ ತಿರುಗುವುದು, ಬಳಲಿಕೆ, ನಿಶ್ಶಕ್ತಿ, ಉಸಿರಾಟದ ತೊಂದರೆ, ಸ್ನಾಯುಗಳಲ್ಲಿ ನಿಶ್ಶಕ್ತಿ, ಗುಲ್ಮ ದೊಡ್ಡದಾಗುವಿಕೆ, ಮಲದ ಬಣ್ಣದಲ್ಲಿ ಬದಲಾವಣೆ, ಅನಿಯಮಿತ ಹೃದಯಬಡಿತ, ತಲೆನೋವು, ಶರೀರವು ಪೇಲವಗೊಳ್ಳುವುದು, ಆ್ಯಂಜಿನಾ ಮತ್ತು ಹೃದಯಘಾತ ಇತ್ಯಾದಿಗಳು ರಕ್ತಹೀನತೆಯ ಲಕ್ಷಣಗಳಲ್ಲಿ ಸೇರಿವೆ.

ರಕ್ತಹೀನತೆಯಿಂದ ದೂರ ಇರುವುದು ಹೇಗೆ? 
ರಕ್ತಹೀನತೆಯಿಂದ ಬಳಲುತ್ತಿರುವವರು ಕಬ್ಬಿಣ ಮತ್ತು ವಿಟಾಮಿನ್‌ಗಳು ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು ಅಗತ್ಯವಾಗಿದೆ. ಹಸಿರು ಸೊಪ್ಪುಗಳು,ಒಣಹಣ್ಣುಗಳು ಮತ್ತು ಬೀಜಗಳು ಅಧಿಕ ಮಟ್ಟದಲ್ಲಿ ಕಬ್ಬಿಣವನ್ನು ಹೊಂದಿರುತ್ತವೆ. ವಿಟಾಮಿನ್ ಬಿ-12 (ಫಾಲಿಕ್ ಆ್ಯಸಿಡ್) ಪೂರಕ,ಮಾಂಸ ಇತ್ಯಾದಿಗಳನ್ನೂ ಸೇವಿಸಲು ವೈದ್ಯರು ರೋಗಿಗಳಿಗೆ ಶಿಫಾರಸು ಮಾಡುತ್ತಾರೆ. ಕಿತ್ತಳೆ ಜಾತಿಯ ಹಣ್ಣುಗಳು,ದ್ವಿದಳ ಧಾನ್ಯಗಳು ಮತ್ತು ಕಡುಹಸಿರು ಸೊಪ್ಪುಗಳೂ ಫಾಲಿಕ್ ಆ್ಯಸಿಡ್ ಅನ್ನು ಒಳಗೊಂಡಿರುತ್ತವೆ. ಕಬ್ಬಿಣಾಂಶವನ್ನು ಅತಿಯಾದ ಪ್ರಮಾಣದಲ್ಲಿ ಸೇವಿಸುವುದು ಅಪಾಯಕಾರಿಯಾಗುತ್ತದೆ ಎನ್ನುವುದು ಗಮನದಲ್ಲಿರಲಿ.

ರಕ್ತಹೀನತೆ ಅಥವಾ ಅನಿಮಿಯಾದಲ್ಲಿ ವಿವಿಧ ಬಗೆಗಳಿವೆ. ಹೀಗಾಗಿ ವೈದ್ಯರು ರೋಗಿಯನ್ನು ವಿವಿಧ ರಕ್ತ ರೋಗಗಳ ಕುರಿತು ಪ್ರಾವೀಣ್ಯ ಹೊಂದಿರುವ ಹೆಮಟಾಲಜಿಸ್ಟ್ ಅಥವಾ ರಕ್ತಶಾಸ್ತ್ರಜ್ಞರ ಬಳಿ ಕಳುಹಿಸಬಹುದು.

ರಕ್ತಹೀನತೆಯಿಂದ ಬಳಲುತ್ತಿರುವವರು ಇಡಿಯ ಧಾನ್ಯಗಳು, ಚಹಾ, ಕಾಫಿ, ಡೇರಿ ಉತ್ಪನ್ನಗಳು, ಟ್ಯಾನಿನ್ ಒಳಗೊಂಡಿರುವ ಕಾರ್ನ್, ದ್ರಾಕ್ಷಿಯಂತಹ ಆಹಾರಗಳು, ಪಾಸ್ತಾದಂತಹ ಗ್ಲುಟೆನ್ ಸಮೃದ್ಧವಾಗಿರುವ ಖಾದ್ಯಗಳು, ಬಾರ್ಲಿ, ಗೋದಿ, ಓಟ್ಸ್, ಇಡಿಯ ಗೋದಿಯ ಉತ್ಪನ್ನಗಳಂತಹ ಆಹಾರಗಳಿಂದ ದೂರವಿರಬೇಕು.

ಕಂದು ಅಕ್ಕಿಯಂತಹ ಫೈಟೇಟ್‌ಗಳು ಅಥವಾ ಫೈಟಿಕ್ ಆಮ್ಲವನ್ನೊಳಗೊಂಡ ಆಹಾರಗಳನ್ನೂ ರಕ್ತಹೀನತೆ ರೋಗಿಗಳು ಸೇವಿಸಬಾರದು. ನೆಲಗಡಲೆ, ಕೊತ್ತಂಬರಿ ಸೊಪ್ಪು ಮತ್ತು ಚಾಕಲೆಟ್‌ಗಳು ಆಕ್ಸಾಲಿಕ್ ಆಮ್ಲವನ್ನು ಒಳಗೊಂಡಿರುವುದರಿಂದ ಇವುಗಳಿಂದಲೂ ಇಂತಹ ರೋಗಿಗಳು ದೂರವಿರಬೇಕಾಗುತ್ತದೆ.


Stay up to date on all the latest ಆರೋಗ್ಯ news
Poll
Railways Minister Ashwini Vaishnaw waves at a goods train as train services resume

ಒಡಿಶಾದಲ್ಲಿ ಭೀಕರ ರೈಲು ಅಪಘಾತದ ನೈತಿಕ ಹೊಣೆ ಹೊತ್ತು ರೈಲ್ವೆ ಸಚಿವರು ರಾಜೀನಾಮೆ ನೀಡಬೇಕೇ?


Result
ಹೌದು
ಬೇಡ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp