ಕನ್ನಡ ಅವನತಿ ಅಂಚಿಗೆ ತಳ್ಳದಿರಿ

ಪ್ರಪಂಚದ ಸುಮಾರು ಆರು ಸಾವಿರ ಭಾಷೆಗಳಲ್ಲಿ ಅರ್ಧದಷ್ಟು ಅವನತಿಯ ಅಂಚಿನಲ್ಲಿದೆ.

Published: 23rd May 2013 02:00 AM  |   Last Updated: 23rd May 2013 11:40 AM   |  A+A-


Posted By : Srinivasamurthy
ಹ್ಯೂಸ್ಟನ್: ಪ್ರಪಂಚದ ಸುಮಾರು ಆರು ಸಾವಿರ ಭಾಷೆಗಳಲ್ಲಿ ಅರ್ಧದಷ್ಟು ಅವನತಿಯ ಅಂಚಿನಲ್ಲಿದೆ. ಇನ್ನೂ ಶೇ.40 ರಷ್ಟು ಭಾಷೆಗಳು ಆ ಸ್ಥಿತಿಗೆ ಜಾರುತ್ತಿವೆ. ಏಕೆಂದರೆ ಇವುಗಳನ್ನು ಬಳಸುವವರು ವಯಸ್ಕರು ಮಾತ್ರ. ಆದರೂ ಆ ಭಾಷೆ ಬಳಸುವ ಮಕ್ಕಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿವೆ.
-ಹೀಗೆ ಹೇಳಿದವರು ಪ್ರೊ. ತಿರುಮಲೇಶ್. ಕನ್ನಡವನ್ನು ಅವನತಿಯ ಅಂಚಿಗೆ ತಳ್ಳದಿರಿ ಎಂದು ಅವರು ಮನವಿ ಮಾಡಿದರು.  
ಹ್ಯೂಸ್ಟನ್ ಕನ್ನಡ ವೃಂದ ಹಾಗೂ ಇತರ ಟೆಕ್ಸಸ್ ಕನ್ನಡ ಕೂಟಗಳ ಸಹಾಯದೊಂದಿಗೆ ಕನ್ನಡ ಸಾಹಿತ್ಯ ರಂಗ (ಯು.ಎಸ್.ಎ) ರೈಸ್ ವಿಶ್ವ ವಿದ್ಯಾಲಯದ ಹಮ್ಮನ್ ಹಾಲ್‌ನಲ್ಲಿ ಪ್ರಸ್ತುತ ಪಡಿಸಿದ 6ನೇ ವಸಂತ ಸಾಹಿತ್ಯೋತ್ಸವದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮ ಇದು ಕನ್ನಡ ಸಾಹಿತ್ಯ ರಂಗದ ದಶಮಾನೋತ್ಸವವೂ ಆಗಿತ್ತು. ಹ್ಯೂಸ್ಟನ್ ನಗರದಲ್ಲಿರುವ ಭಾರತ ರಾಯಭಾರ ಕಚೇರಿಯ ದೂತವಾಸರಾದ ಹರೀಶ್ ಪರ್ವತನೇನಿ ಅವರಿಂದ ಉದ್ಘಾಟನೆಯಾದ ಸಮಾವೇಶ ಅಮೆರಿಕದ ಕನ್ನಡ ಸಾಹಿತ್ಯಾಸಕ್ತರ ಉಲ್ಲಾಸಕ್ಕೆ ಮುದ ಕೊಟ್ಟಿತ್ತು. ಸಮಾವೇಶದ ಮುಖ್ಯ ಅತಿಥಿಯಾಗಿ ಹೈದರಾಬಾದಿನಿಂದ ಹೊರನಾಡ ಕನ್ನಡಿಗರಾಗಿ ಪ್ರೊ.ತಿರುಮಲೇಶ್, ಆಹ್ವಾನಿತ ಅತಿಥಿಗಳಾಗಿ ಸ್ಟೋನಿ ಬ್ರೂಕ್ ವಿಶ್ವವಿದ್ಯಾಲಯದ ಭಾಷಾ ವಿಭಾಗದ ಪ್ರೊ.ಎಸ್.ಎನ್.ಶ್ರೀಧರ್, ಕರ್ನಾಟಕದಿಂದ ವಿಶೇಷ ಅತಿಥಿಗಳಾಗಿ ಪ್ರೊ. ತಂತ್ರಿ ಆಗಮಿಸಿದ್ದರು. ಪ್ರಾರಂಭದಲ್ಲಿ ಅಮೆರಿಕ ಕನ್ನಡಿಗರು ತಮ್ಮ ಅಮೆರಿಕದಲ್ಲಿನ ಬದುಕಿನ ಬಗೆಗಿನ ಗುರುಪ್ರಸಾದ್ ಕಾಗಿನೆಲೆ ಅವರ ಲೇಖನ ಸಂಗ್ರಹ,  ಜ್ಯೋತಿ ಮಹದೇವ್ ಮತ್ತು ತ್ರಿವೇಣಿ ಶ್ರೀನಿವಾಸ್ ಅವರ ಸಂಪಾದಕತ್ವದಲ್ಲಿ ಮೂಡಿಬಂದ ಬೇರು ಸೂರು ಎಂಬ ಗ್ರಂಥದ ಲೋಕಾರ್ಪಣೆ ಆಯಿತು. ಇದೇ ಸಂದರ್ಭದಲ್ಲಿ ದಿ. ರಾಜಾರಾವ್ ಅವರ ಅಪ್ರಕಟಿತ ಇಂಗ್ಲೀಷ್ ಕಾದಂಬರಿ ದಿ ಸಾಂಗ್ ಆಫ್ ವುಮೆನ್ ನ ಅನುವಾದ ನಾರಿಗೀತ ಸಹ ಲೋಕಾರ್ಪಣೆ ಆಯಿತು.
ಎರಡನೇ ದಿನದ ಕಾರ್ಯಕ್ರಮ ಕಳೆದ ಎರಡು ವರ್ಷಗಳಲ್ಲಿ ಪ್ರಕಟಗೊಂಡ ಅಮೆರಿಕೆಯ ಕನ್ನಡದ ಹೆಮ್ಮೆಯ ಬರಹಗಾರರ ಕೃತಿಗಳ ಬಗ್ಗೆ ವಿಶ್ಲೇಷಿಸಿ ಲೇಖಕರನ್ನು ಗೌರವಿಸಲಾಯಿತು. ಸಭಿಕರಲ್ಲಿ ಬಹಳ ಆಸಕ್ತಿ ಮೂಡಿಸಿದ್ದು ಸಂವಾದ ಕಾರ್ಯಕ್ರಮ. ಹೊರದೇಶದ ಕನ್ನಡಿಗ ಶ್ರೀಧರ್,  ಹೊರನಾಡ ಕನ್ನಡಿಗ ತಿರುಮಲೇಶ್ ಮತ್ತು ಒಳನಾಡ ಕನ್ನಡಿಗರಾದ ತಂತ್ರಿಯವರೊಡನೆ ವಿದೇಶದಲ್ಲಿ ಕನ್ನಡ ಸಾಹಿತ್ಯ ಬೆಳವಣಿಗೆ ಎಂಬ ವಿಷಯವಾಗಿ ಸಂವಾದವನ್ನು ಉಲ್ಲಾಸಕರವಾಗಿ ನಡೆಸಿಕೊಟ್ಟರು ವಲ್ಲೀಶ ಶಾಸ್ತ್ರಿ.

Stay up to date on all the latest ಹೊರನಾಡು ಕನ್ನಡಿಗ news with The Kannadaprabha App. Download now
facebook twitter whatsapp