ಕನ್ನಡ ರಂಗಭೂಮಿಗೆ ಚೈತನ್ಯವಿತ್ತ 'ಕವಿಚಂದ್ರ' ಪಂ. ನಲವಡಿ ಶ್ರೀಕಂಠಶಾಸ್ತ್ರಿ

ಮರಾಠಿ ನಾಟಕಗಳ ಪ್ರಭಾವವಿದ್ದ ಕಾಲದಲ್ಲಿ ನಾಟಕಗಳನ್ನು ರಚಿಸಿ ಉತ್ತರ ಕರ್ನಾಟಕದ ಕನ್ನಡ ರಂಗಭೂಮಿಗೆ ಚೈತನ್ಯ ತುಂಬಿದವರು ನಲವಡಿ ಪಂ. ನಲವಡಿ ಶ್ರೀಕಂಠಶಾಸ್ತ್ರಿಗಳು.
ಪಂ. ನಲವಡಿ ಶ್ರೀಕಂಠಶಾಸ್ತ್ರಿ
ಪಂ. ನಲವಡಿ ಶ್ರೀಕಂಠಶಾಸ್ತ್ರಿ

ಮರಾಠಿ ನಾಟಕಗಳ ಪ್ರಭಾವವಿದ್ದ ಕಾಲದಲ್ಲಿ ನಾಟಕಗಳನ್ನು ರಚಿಸಿ ಉತ್ತರ ಕರ್ನಾಟಕದ ಕನ್ನಡ ರಂಗಭೂಮಿಗೆ ಚೈತನ್ಯ ತುಂಬಿದವರು ನಲವಡಿ ಪಂ. ನಲವಡಿ ಶ್ರೀಕಂಠಶಾಸ್ತ್ರಿಗಳು.

ಒಟ್ಟು 44 ನಾಟಕ, 7 ಬಯಲಾಟ (ಮೂಡಲಪಾಯ) ರಚಿಸಿದರು. ಉತ್ತರ ಕರ್ನಾಟಕದಲ್ಲಿ ಮನೆ ಮಾತಾಗಿರುವ ಶಾಸ್ತ್ರಿಗಳ ಮೇರುಕೃತಿ 'ಹೇಮರಡ್ಡಿ ಮಲ್ಲಮ್ಮ' ನಾಟಕ ಆಗ 3 ಆವೃತ್ತಿಗಳಲ್ಲಿ 14 ಸಾವಿರ ಪ್ರತಿ ಮಾರಾಟವಾಗಿದ್ದವು. ಈ ನಾಟಕ ಆಡದ ವೃತ್ತಿ ನಾಟಕ ಕಂಪನಿಗಳಿರಲಿಲ್ಲ. ಅನೇಕ ಕಂಪನಿಗಳಿಗೆ ಜೀವದಾನ ಮಾಡಿದ ನಾಟಕವದು. ಶ್ರೀ ಪಂಚಾಕ್ಷರಿ ನಾಟಕ ಕಂಪನಿ ಗದಗದಲ್ಲಿ 375 ಪ್ರಯೋಗ ಮಾಡಿ 16 ಎಕರೆ ಜಮೀನು ಖರೀದಿಸಿತು!

ಶಾಸ್ತ್ರಿಗಳ ಜನಪ್ರಿಯ ನಾಟಕಗಳು: ಜಗಜ್ಯೋತಿ ಬಸವೇಶ್ವರ, ಚಿ-ಜ್ಯೋತಿ ಉಳವಿ ಚನ್ನಬಸವೇಶ್ವರ, ಮಹಾನಂದ, ಭಕ್ತ ಸುಧನ್ವ, ಪ್ರಪಂಚ ಪರೀಕ್ಷೆ, ಶಿವಶರಣೆ ನಂಬೆಕ್ಕ, ಭಕ್ತ ಮಾರ್ಕಾಂಡೇಯ, ದೇವರ ದುಡ್ಡು, ರೇಣುಕ ವಿಜಯ, ಉಜೈನಿ ಶ್ರೀ ಸಿದ್ಧಲಿಂಗ ಮಹಾತ್ಮೆ, ತ್ರಿಮೂರ್ತಿಗಳ ಲೀಲಾವತಾರ, ಭೌಮಾಸುರ ಮುಂತಾದ ಭಕ್ತಿರಸ ಪ್ರಧಾನ ನಾಟಕಗಳು. ದೈವಚಿತ್ರ, ವಿಚಿತ್ರ ವಿಲಾಸ, ಮಂಗಲಸೂತ್ರ, ಸೋಹಂ ಇತ್ಯಾದಿ ಸಾಮಾಜಿಕ ನಾಟಕಗಳು ಜನಪ್ರಿಯ.

ಇತರ ಸಾಹಿತ್ಯ ಕೃಷಿ, ಬಿರುದು ಸನ್ಮಾನ: ಭಾವಗೀತೆ, ಭಜನಾ ಪದ, ಗೀಗೀಪದ, ಲಾವಣಿ, ರಿವಾಯತ, ಲಾಲಿಹಾಡು, ಡೊಳ್ಳಿನ ಪದ ಇತ್ಯಾದಿ. ಕೀರ್ತನ ತರಂಗಿಣಿ, ಜ್ಯೋತಿಷ್ಯ ಫಲ ದರ್ಶನ ಕೃತಿಗಳನ್ನೂ ರಚಿಸಿದ್ದಾರೆ. ಬಿಡಿಹಾಡುಗಳಿಗಂತೂ ಲೆಕ್ಕವಿಲ್ಲ. ಉಜೈನಿಯ ಸಿದ್ಧಲಿಂಗ ಶಿವಾಚಾರ್ಯ ಶ್ರೀಗಳು 'ಕರ್ನಾಟಕ ಕವಿಚಂದ್ರ' ಬಿರುದು ನೀಡಿ ಸನ್ಮಾನಿಸಿದರೆ, ಕರ್ನಾಟಕ ನಾಟಕ ಅಕಾಡೆಮಿ ವರ್ಷಾಸನ, ಪ್ರಶಸ್ತಿ ನೀಡಿ ಗೌರವಿಸಿತು. ಚಂದ್ರಹಾಸ ಚಲನಚಿತ್ರದ ಎಲ್ಲ ಹಾಡುಗಳೂ ಶಾಸ್ತ್ರಿಯವರದೇ. ಬಾಬಾ ಬಯಸಿದ ಬನಸಿರಿ, ಪೂರ್ಣ ಕಲೆಗಳ ಕಂಗಳ ಜ್ಯೋತಿ-ಜನಪ್ರಿಯವಾಗಿದ್ದವು. ಸಂಭಾಷಣೆ ಬರೆದಿದ್ದ 'ಭಕ್ತಿ ಭಂಡಾರಿ ಬಸವಣ್ಣ' ಚಲನಚಿತ್ರ ದುರ್ದೈವದಿಂದ ಬಿಡುಗಡೆಯಾಗಲಿಲ್ಲ.

ಹೈದ್ರಾಬಾದಿನ ರಜಾಕರ ಹಾವಳಿ ವೇಳೆ 'ಕೇಳಿರಿದೋ ಈ ಕ್ರಾಂತಿಯ ಕಥೆಯ 'ಹೈದ್ರಾಬಾದಿನ ಶರಣಾಗತಿಯ' ಎಂಬ ಲಾವಣಿ ರೆಕಾರ್ಡ್ ಆಗಿ ಫೋನೋಗ್ರಾಫಿಯಲ್ಲಿ ಕೇಳಿ ಬರುತ್ತಿತ್ತು. ಎರಡನೇ ಜಾಗತಿಕ ಮಹಾಯುದ್ಧ ಕುರಿತಾದ 'ಆದಿಯಲ್ಲಿ ಶಾಂತಿ-ಮಂತ್ರ ಮೋದದಿಂದ ಪಠಿಸಿ- ವೇದಕಾದಿ ದೇವ ನಿನ್ನ ಸ್ತುತಿ ಮಾಡುವೆನು 'ಮೇದಿನಿಯೊಳು ನಡೆದ ಮಹಾಯುದ್ಧರಂಗದ ವಾರ್ತೆಯನ್ನು ನಾದದಲ್ಲಿ ನಾದ ಬೆರೆಸಿ ಹಾಡುವೆನು' ಎಂಬ ಹಾಡೂ ಪ್ರಸಿದ್ಧಿ ಪಡೆದಿತ್ತು. ಗುರುಗೀತೆ, ಭಜನ ಗೀತಾವಳಿ, ಜೋಗುಳ ಪದ, ಒಡಪುಗಳು, ಹೆಣ್ಣುಮಕ್ಕಳ ಹಾಡು ಜಾನಪದ ಜಾಡಿನ ಕೃತಿಗಳು.

ಊರಿವರ ಋಣಕ್ಕೆ...: ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ನಲವಡಿ ಗ್ರಾಮದಲ್ಲಿ ಕಡುಬಡತನದ ಜಂಗಮ ಮನೆತನದಲ್ಲಿ ಶಾಸ್ತ್ರಿಗಳು (ಜನ್ಮನಾಮ ರಾಚಯ್ಯ) 1889ನೇ ನವೆಂಬರ್ 14ರಂದು ಅಮರಯ್ಯ-ಗುರುಲಿಂಗಮ್ಮ ದಂಪತಿ ಮಗನಾಗಿ ಜನಿಸಿದರು.

ಪ್ರಾಥಮಿಕ ಶಾಲೆಯಲ್ಲಿದ್ದಾಗ ರಾಚಯ್ಯ 'ವಿಚಿತ್ರ ವಿಲಾಸ' ನಾಟಕ ರಚಿಸಿ ತನ್ನ ಸಹಪಾಠಿಗಳಿಗೆ ಕಲಿಸಿ ಆಡಿಸಿ ಗ್ರಾಮಸ್ಥರ ಮೆಚ್ಚುಗೆ ಗಳಿಸಿದ್ದ. ಆಮೇಲೆ ಗ್ರಾಮಸ್ಥರೆಲ್ಲ ಸೇರಿ ವಂತಿಗೆ ಕೂಡಿಸಿ ಸಂಸ್ಕೃತ ವಿದ್ಯಾಭ್ಯಾಸಕ್ಕಾಗಿ ಕಾಶಿಗೆ ಕಳಿಸಿಕೊಟ್ಟರು. ಕಾಶೀ ವಿದ್ಯಾಪೀಠದಲ್ಲಿ ವ್ಯಾಸಂಗ ಮಾಡಿ ಪಂಡಿತ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣನಾಗಿ 1916ರಲ್ಲಿ ಸ್ವಗ್ರಾಮಕ್ಕೆ ಮರಳಿದ ರಾಚಯ್ಯ ಅವರನ್ನು ಗ್ರಾಮಸ್ಥರು ಮೆರವಣಿಗೆ ಮಾಡಿದರು. ಅನ್ನಸಂತರ್ಪಣೆ ಮೂಲಕ ಖುಷಿ ಹಂಚಿಕೊಂಡರು. ಊರಿನ ಋಣ ತೀರಿಸಲು ನಿರ್ಧರಿಸಿದ ರಾಚಯ್ಯ ತಮ್ಮ ಕಾವ್ಯನಾಮವನ್ನು 'ನಲವಡಿ ಶ್ರೀಕಂಠಶಾಸ್ತ್ರಿ' ಎಂದು ಬದಲಿಸಿಕೊಂಡರು.

ಬದುಕಿಗಾಗಿ ಕೀರ್ತನ, ಅಧ್ಯಾಪಕ ವೃತ್ತಿಯಾಸರೆ: ಸಂಸಾರದ ಭಾರ ಶಾಸ್ತ್ರಿಗಳ ಹೆಗಲೇರಿತು. ಊರೂರು ಅಲೆದು ಕೀರ್ತನೆ ಮಾಡಿ ಬಂದ ಹಣದಲ್ಲಿ ಸಂಸಾರದ ರಥ ಸಾಗಿಸಿದರು. ಆಮೇಲೆ ಗದುಗಿನ ತೋಂಟದಾರ್ಯ ಮಠದ ಸಂಸ್ಕೃತ ಪಾಠಶಾಲೆಯಲ್ಲಿ ಅಧ್ಯಾಪಕರಾಗಿ ಸೇರಿದರು. ಅಲ್ಲಿ ಅಮರಗುಂಡ ಶಾಸ್ತ್ರಿಗಳೊಡನೆ ಶ್ರೀಕಂಠಶಾಸ್ತ್ರಿಗಳ ಸಖ್ಯ ಬೆಳೆಯಿತು. ಅವರು ನಾಟಕ ರಚನೆಗೆ ರಾಚಯ್ಯನವರನ್ನು ಪ್ರೇರೇಪಿಸಿದರು. ಶಾಸ್ತ್ರಿಗಳು ಬರೆದ 50 ನಾಟಕಗಳ ಪೈಕಿ 44 ಮಾತ್ರ ಮುದ್ರಣಗೊಂಡವು. ವಿಚಿತ್ರ ವಿಲಾಸವು ಮೊದಲ ನಾಟಕವಾದರೆ ಲೀಲಾವತಾರವು ಕೊನೆಯದಾಯಿತು.

ಬಡತನದಲ್ಲಿ ಬೆಂದ ಜೀವ...: ಶಾಸ್ತ್ರಿಗಳದು ತುಂಬಿದ ಸಂಸಾರ. ಬಡತನ ಬೇರೆ. ಆದರೂ ಅವರು ಹಾಸ್ಯಪ್ರಿಯರು. 'ಬ್ರಹ್ಮಾಂಡವನ್ನೇ ಬಡಿದು ತಂದು ಹಾಕಿದರೂ ಈ ಸಂಸಾರವೆಂಬ ಬ್ರಹ್ಮರಾಕ್ಷಸನ ಹೊಟ್ಟೆ ತುಂಬಲೊಲ್ಲದು' ಎಂದು ಗಹಗಹಿಸಿ ನಗುತ್ತಿದ್ದರು. ಅಂತರಂಗದ ನೋವೆಲ್ಲ ನಾಟಕಗಳಲ್ಲಿ ನಗೆಯಾಗಿ ರೂಪಾಂತರ ಹೊಂದುತ್ತಿತ್ತು. ಶಾಸ್ತ್ರಿಗಳ ನಾಟಕಗಳಿಂದ ಕಂಪನಿಗಳು ಶ್ರೀಮಂತವಾದವು, ಪ್ರಕಾಶಕರು ಸಿರಿವಂತರಾದರು. ಆದರೆ, ಶಾಸ್ತ್ರಿಯವರಿಗೆ ಮಾತ್ರ ಕೊನೆಯ ವರೆಗೂ ಬಡತನವೇ ಸಂಗಾತಿಯಾಯಿತು. ಶಾಸ್ತ್ರಿಯವರ ಜೀವನ-ಸಾಧನೆ ಕುರಿತು ಅಧ್ಯಯನ ಮಾಡಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದ ಡಾ. ಮೃತ್ಯುಂಜಯ ಹೊರಕೇರಿ ಅವರನ್ನೂ ವಿಧಿ ತನ್ನತ್ತ ಸೆಳೆದಿದ್ದು ದೊಡ್ಡ ದುರಂತ.

ಆಶುಕವಿತ್ವ ಶಾಸ್ತ್ರಿಗಳಿಗೆ ಸಿದ್ಧಿಸಿತ್ತು. ಒಡನಾಡಿಗಳ ಸವಾಲನ್ನು ಸ್ವೀಕರಿಸಿ ಒಂದೇ ರಾತ್ರಿಯಲ್ಲಿ 'ಅಹಿರಾವಣ-ಮಹಿರಾವಣ' ಬಯಲಾಟವನ್ನು ಬರೆದರೆಂದರೆ ಅವರ ಪಾಂಡಿತ್ಯದ ಅರಿವಾದೀತು. ಮೂಲ ಧಾಟಿಗೆ ಚ್ಯುತಿ ಬರದಂತೆ ಹಾಡುಗಳನ್ನು ಬರೆಯುವ ಕಲೆಯೂ ಅವರಿಗೆ ಒಲಿದಿತ್ತು. 1965ರಲ್ಲಿ ಶಾಸ್ತ್ರಿಗಳಿಗೆ ಉಬ್ಬಸ ರೋಗ ಆವರಿಸಿಕೊಂಡಿತು. ಹುಬ್ಬಳ್ಳಿಯ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗಲೂ ಬರೆಯುವುದನ್ನು ಬಿಡಲಿಲ್ಲ. ಆಸ್ಪತ್ರೆಯಲ್ಲೇ 'ಉಜ್ಜಯಿನಿ ಸಿದ್ಧಲಿಂಗ ವಿಜಯ' ಹಾಗೂ 'ಲೀಲಾವತಾರ' ನಾಟಕಗಳನ್ನು ಬರೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com