ಕುಗ್ರಾಮ ದತ್ತು ಪಡೆದ ವೈದ್ಯೆ: ಗ್ರಾಮಕ್ಕೆ ಬಂತು ವಿದ್ಯುತ್, ಮಕ್ಕಳಿಗೆ ಸಿಕ್ತು ಇ-ಶಾಲೆ

ಮೂಲಸೌಕರ್ಯ ಕೊರತೆ ಹಾಗೂ ಅನಕ್ಷರತೆಯಿಂದ ಬಳಲುತ್ತಿದ್ದ ಗ್ರಾಮವೊಂದನ್ನು ದತ್ತು ಪಡೆದಿರುವ ವೈದ್ಯೆಯೊಬ್ಬರು, ಗ್ರಾಮಕ್ಕೆ ವಿದ್ಯುತ್ ಹಾಗೂ ಮಕ್ಕಳಿಗೆ ಇ-ಶಾಲೆ ವ್ಯವಸ್ಥೆ ಕಲ್ಪಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಗ್ರಾಮ ದತ್ತು ಪಡೆದ ವೈದ್ಯೆ ಸೀಮಾ ಸಾಧಿಕಾ (ಸಂಗ್ರಹ ಚಿತ್ರ)
ಗ್ರಾಮ ದತ್ತು ಪಡೆದ ವೈದ್ಯೆ ಸೀಮಾ ಸಾಧಿಕಾ (ಸಂಗ್ರಹ ಚಿತ್ರ)

ಧಾರವಾಡ: ಮೂಲಸೌಕರ್ಯ ಕೊರತೆ ಹಾಗೂ ಅನಕ್ಷರತೆಯಿಂದ ಬಳಲುತ್ತಿದ್ದ ಗ್ರಾಮವೊಂದನ್ನು ದತ್ತು ಪಡೆದಿರುವ ವೈದ್ಯೆಯೊಬ್ಬರು, ಗ್ರಾಮಕ್ಕೆ ವಿದ್ಯುತ್ ಹಾಗೂ ಮಕ್ಕಳಿಗೆ ಇ-ಶಾಲೆ ವ್ಯವಸ್ಥೆ  ಕಲ್ಪಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಡಾ.ಸೀಮಾ ಸಾಧಿಕಾ ಎಂಬ ವೈದ್ಯೆಯೊಬ್ಬರು ಧಾರವಾಡದ ಬಾಣದೂರ್ ಎಂಬ ಕುಗ್ರಾಮವೊಂದನ್ನು ದತ್ತು ಪಡೆದಿದ್ದು, ಇವರ ಪೋಷಣೆಯಿಂದಾಗಿ ಇದೀಗ ಈ ಗ್ರಾಮಸ್ಥರು ಕೂಡ ವಿದ್ಯುತ್  ಕಾಣುತ್ತಿದ್ದಾರೆ. ಪ್ರಮುಖವಾಗಿ ದೀಪದ ಬೆಳಕಿನಲ್ಲಿ ಓದುತ್ತಿದ್ದ ಮಕ್ಕಳು ಇದೀಗ ಲೈಟ್ ಗಳಡಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪ್ರಮುಖವಾಗಿ ಇಲ್ಲಿನ ಅಂಗನವಾಡಿ ಶಾಲೆಯಲ್ಲಿ ಕೇವಲ  ಐದನೇ ತರಗತಿವರೆಗೆ ಮಾತ್ರ ಓದುತ್ತಿದ್ದ ಮಕ್ಕಳು ಇಂದು ಇ-ಶಾಲೆ ಮುಖಾಂತರವಾಗಿ ತಮ್ಮ ಮುಂದಿನ ವಿದ್ಯಾಬ್ಯಾಸ ಮಾಡುತ್ತಿದ್ದಾರೆ. ಸೀಮಾ ಅವರ ಈ ಕಾರ್ಯ ಇದೀಗ ಶ್ಲಾಘನೆಗೆ  ಪಾತ್ರವಾಗಿದೆ.

ಈ ಹಿಂದೆ ಧಾರವಾಡದ ವಿವಿಧ ಗ್ರಾಮಗಳಲ್ಲಿ ವೈದ್ಯಕೀಯ ಶಿಬಿರಗಳನ್ನು ನಡೆಸುತ್ತಿದ್ದ ಸಂದರ್ಭದಲ್ಲಿ ವೈದ್ಯೆ ಸೀಮಾ ಅವರು ಇಲ್ಲಿನ ಗ್ರಾಮಗಳ ದುಃಸ್ಥಿತಿಯನ್ನು ಕಣ್ಣಾರೆ ನೋಡಿ ಮರುಗಿದ್ದಾರೆ.  ವೈದ್ಯಕೀಯ ಶಿಬಿರದ ಸಂದರ್ಭದಲ್ಲಿ ಈ ಬಗ್ಗೆ ಗ್ರಾಮಸ್ಥರಲ್ಲಿ ಚರ್ಚೆ ನಡೆಸಿದ್ದ ಸೀಮಾ ಅವರಿಗೆ ಹಲವು ಮೂಲಭೂತ ಸಮಸ್ಯೆಗಳು ಕಂಡುಬಂದಿದ್ದು, ಸಮಸ್ಯೆ ಪರಿಹಾರಕ್ಕಾಗಿ ತಮ್ಮಂತೆಯೇ  ಆಲೋಚಿಸುವ ಒಂದಷ್ಟು ಮಂದಿಯನ್ನು ಕಲೆಹಾಕಿ, ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿದ್ದಾರೆ. ಆಗ ಹೊಳೆದಿದ್ದೇ ಸಮುದಾಯ ಅಭಿವೃದ್ಧಿ ಯೋಜನೆಯ ಉಪಾಯ. ಸುಮಾರು 400  ಮಂದಿಯ ತಂಡವನ್ನು ವಿವಿಧ ಭಾಗಗಳಾಗಿ ವಿಂಗಡಿಸಿ ಕೆಲಸ ಆರಂಭಿಸಿದ್ದಾರೆ.

ಈ ಬಗ್ಗೆ ಹೆಮ್ಮೆಯಿಂದಲೇ ಮಾತನಾಡಿರುವ ವೈದ್ಯ ಸೀಮಾ ಅವರು, ಈ ಹಿಂದೆ ಧಾರವಾಡದಲ್ಲಿ ವೈದ್ಯಕೀಯ ಶಿಬಿರದಲ್ಲಿ ಪಾಲ್ಗೊಂಡಿದ್ದಾಗ ಇಲ್ಲಿನ ಗ್ರಾಮಗಳ ಸ್ಥಿತಿ ಕಂಡು ನಿಜಕ್ಕೂ  ಬೇಸರವಾಯಿತು. ಗ್ರಾಮಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳೂ ಕೂಡ ಇರಲಿಲ್ಲ. ವೈದ್ಯಕೀಯ ಶಿಬಿರ ನಡೆಸಿದರೆ ಗ್ರಾಮಸ್ಥರ ಸ್ಥಿತಿ ಸುಧಾರಿಸುವುದಿಲ್ಲ ಎಂದು ಅರಿತೆ. ಪ್ರಮುಖವಾಗಿ  ಇಲ್ಲಿನ ಗ್ರಾಮಸ್ಥರಿಗೆ ಸರ್ಕಾರಗಳ ವಿವಿಧ ಯೋಜನೆಗಳ ಕುರಿತ ಮಾಹಿತಿಯೇ ತಿಳಿದಿಲ್ಲ. ಹೀಗಾಗಿ ನಾವು ಕೆಲವು ಸ್ನೇಹಿತರು ಸೇರಿ ಒಂದಷ್ಟು ಯೋಜನೆ ಹಾಕಿಕೊಂಡು ಕೆಲಸ ಮಾಡಲು  ಆರಂಭಿಸಿದೆವು ಎಂದು ಹೇಳಿದ್ದಾರೆ.

ಅಂತೆಯೇ ಧಾರವಡಾದ ಬಾಣದೂರ್ ಗ್ರಾಮದಲ್ಲಿ ಸರ್ಕಾರಿ ಯೋಜನೆಯಡಿಯಲ್ಲಿ ಸೋಲಾರ್  ಗ್ರಿಡ್ ಗಳನ್ನು ಅಳವಡಿಸುವ ಮೂಲಕ ಸಣ್ಣ ಪ್ರಮಾಣದ ವಿದ್ಯುತ್ ಉತ್ಪಾದನೆ  ಮಾಡಲಾಗುತ್ತಿದೆ. ಇದು ಫಲ ನೀಡಿದ್ದ ಪ್ರಸ್ತುತ ಗ್ರಾಮದ 60 ಮನೆಗಳಿಗೆ 20 ಟ್ಯೂಬ್ ಲೈಟ್ ಹಾಗೂ ಒಂದು ಮೊಬೈಲ್ ಚಾರ್ಜಿಂಗ್ ಮಾಡುವ ಸೌಲಭ್ಯ ನೀಡಲಾಗಿದೆ. ಮೊಬೈಲ್ ಚಾರ್ಜಿಂಗ್  ಗಾಗಿಯೇ ಸಮಯಾವಕಾಶ ನಿಗದಿ ಪಡಿಸಲಾಗಿದ್ದು, ಸಂಜೆ 6 ರಿಂದ ರಾತ್ರಿ 11 ಹಾಗೂ ಬೆಳಗ್ಗೆ 5.30ರಿಂದ 8 ಗಂಟೆಯವರೆಗೆ ನಿಗದಿ ಪಡಿಸಲಾಗಿದೆ. ಅಂತೆಯೇ ಗ್ರಾಮದ ಐದು ರಸ್ತೆಗಳಿಗೂ ಇದೇ  ಸೋಲಾರ್ ವಿದ್ಯುತ್ ಯೋಜನೆಯ ಮೂಲಕ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಇದಲ್ಲದೆ, ವಿದ್ಯಾರ್ಥಿಗಳಿಗಾಗಿ ಇ-ಶಾಲೆ ಆರಂಭಿಸಲಾಗಿದ್ದು, ಗ್ರಾಮದ ಸುಮಾರು 80ಕ್ಕೂ ಹೆಚ್ಚು  ವಿದ್ಯಾರ್ಥಿಗಳು ಈ ಸೌಲಭ್ಯ ಪಡೆಯುತ್ತಿದ್ದಾರೆ. ಅಂತೆಯೇ ವಿದ್ಯಾರ್ಥಿಗಳಲ್ಲಿ ಕೌಶಲ್ಯಾಭಿವೃದ್ಧಿ ಹೆಚ್ಚಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಟೈಲರಿಂಗ್, ತಿಂಡಿ-ತಿನಿಸು  ವ್ಯಾಪಾರೋದ್ಯಮ ಸೇರಿದಂತೆ ವಿವಿಧ ಸ್ವಯಂ ಉದ್ಯೋಗ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಒಟ್ಟಾರೆ ಅವರನ್ನು ಸ್ವಾವಲಂಬಿಯಾಗಿ ಬೆಳೆಸುವ ಉದ್ದೇಶದಿಂದ ಈ  ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com