ಸರ್ಕಾರಿ ಶಾಲಾ ಮಕ್ಕಳಿಗೆ 22 ಭಾರತೀಯ ಭಾಷೆಗಳ ಪರಿಚಯ; ಒಂದು ತಿಂಗಳ 'ಭಾಷಾ ಸಂಗಮ'

ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಆರಂಭಿಸಿದ ಹೊಸ ಯೋಜನೆಯಡಿ ದೇಶಾದ್ಯಂತ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಆರಂಭಿಸಿದ ಹೊಸ ಯೋಜನೆಯಡಿ ದೇಶಾದ್ಯಂತ ಸರ್ಕಾರಿ ಶಾಲಾ ಮಕ್ಕಳಿಗೆ ಒಂದು ತಿಂಗಳಲ್ಲಿ 22 ಭಾರತೀಯ ಭಾಷೆಗಳ ಪರಿಚಯ ಮಾಡಿಕೊಡಲಾಗುತ್ತದೆ.

ಏಕ್ ಭಾರತ್ ಶ್ರೇಷ್ಟ ಭಾರತ್ ಯೋಜನೆಯಡಿ ಭಾಷಾ ಸಂಗಮ ಕಾರ್ಯಕ್ರಮ ಏರ್ಪಡಿಸಲಾಗಿದ್ದು ನವೆಂಬರ್ 20ರಿಂದ ಡಿಸೆಂಬರ್ 21ರವರೆಗೆ ಸಂವಿಧಾನದ 8ನೇ ಪರಿಚ್ಛೇದದಡಿ 22 ಭಾರತೀಯ ಭಾಷೆಗಳನ್ನು ಪರಿಚಯಿಸಲಾಗುತ್ತಿದೆ.

ಪ್ರತಿ ಭಾಷೆಯ ಪರಿಚಯಕ್ಕೆ ಸಮಯ ಸೂಚಿಸಿರುವ ಮಾನವ ಸಂಪನ್ಮೂಲ ಸಚಿವಾಲಯ ಸರ್ಕಾರಿ ಶಾಲಾ ಮಕ್ಕಳಿಗೆ ಈಗಾಗಲೇ ಅಸ್ಸಾಂ ಮತ್ತು ಬೆಂಗಾಳಿ ಭಾಷೆಯ ಪರಿಚಯ ಮಾಡಿಕೊಡಲಾಗಿದೆ. ಇದೇ 26ರಂದು ಬೊಡೊ, 27ರಂದು ಡೊಗ್ರಿ ಹಾಗೂ 30ರಂದು ಕನ್ನಡ ಭಾಷೆಗಳನ್ನು ಹೇಳಿಕೊಡಲಾಗುತ್ತದೆ.

ಭಾಷಾ ಸಂಗಮ ಕಾರ್ಯಕ್ರಮದಡಿ ನಿಗದಿಪಡಿಸಿದ ದಿನಾಂಕಗಳಂದು ಬೆಳಗಿನ ಪ್ರಾರ್ಥನೆ ಅವಧಿಯಲ್ಲಿ ಮಕ್ಕಳಿಗೆ ಆ ಭಾಷೆಯ 5 ಸಾಮಾನ್ಯ ಬಳಕೆಯ ವಾಕ್ಯಗಳನ್ನು ಪರಿಚಯ ಮಾಡಿಕೊಡಬೇಕಾಗುತ್ತದೆ. ಅದನ್ನು ವಿದ್ಯಾರ್ಥಿಗಳು ಪುನರಾವರ್ತಿಸಬೇಕು. ಒಂದು ವೇಳೆ ಯಾರಾದರೂ ವಿದ್ಯಾರ್ಥಿಗಳಿಗೆ ಆ ಭಾಷೆಯ ಪರಿಚಯವಿದ್ದರೆ ಅವರಿಂದ ಹೇಳಿಸುತ್ತೇವೆ ಎಂದು ಬೆಂಗಳೂರಿನ ಸರ್ಕಾರಿ ಶಾಲೆಯೊಂದರ ಶಿಕ್ಷಕಿ ಹೇಳುತ್ತಾರೆ.

ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತ ದೇಶದಲ್ಲಿ ಭಾಷಾ ಸಹಿಷ್ಣುತೆ, ಗೌರವ ಮತ್ತು ರಾಷ್ಟ್ರೀಯ ಸಮಗ್ರತೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲು ಈ ಪ್ರಯತ್ನವಾಗಿದೆ.

ಭಾಷೆಗಳ ಆಡಿಯೊ ರೆಕಾರ್ಡಿಂಗ್ http://epathshala.gov.in ನಲ್ಲಿ ಮತ್ತು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ httl://mhrd.gov.in/bhashasangam ವೆಬ್ ಸೈಟ್ ಗಳಲ್ಲಿ ಲಭ್ಯವಿದ್ದು ಭಾಷೆಗಳ ಸ್ಪಷ್ಟ ಉಚ್ಛಾರಣೆಯನ್ನು ಶಾಲಾ ಮಕ್ಕಳು ಕೇಳಿಸಿಕೊಳ್ಳಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com