ಖಾಸಗಿ ಶಾಲೆಗಳಿಗೆ ಆರ್ ಟಿಇ ಶುಲ್ಕಕ್ಕೆ ನೀಡುವ ಹಣದಲ್ಲಿ ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಬಹುದು: ಅಡ್ವೊಕೇಟ್ ಜನರಲ್

ಶಿಕ್ಷಣ ಹಕ್ಕು ಕಾಯ್ದೆಯಡಿ ವಿದ್ಯಾರ್ಥಿಗಳ ಪ್ರವೇಶಾತಿಗೆ ಖಾಸಗಿ ಶಾಲೆಗಳಿಗೆ ನೀಡುವ ಹಣವನ್ನು ...

Published: 05th April 2019 12:00 PM  |   Last Updated: 05th April 2019 10:17 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : SUD SUD
Source : The New Indian Express
ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆಯಡಿ ವಿದ್ಯಾರ್ಥಿಗಳ ಪ್ರವೇಶಾತಿಗೆ ಖಾಸಗಿ ಶಾಲೆಗಳಿಗೆ ನೀಡುವ ಹಣವನ್ನು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಬಳಸಿಕೊಳ್ಳಬಹುದು. ಇದರಿಂದ ಸರ್ಕಾರಿ ಶಾಲೆಗಳಲ್ಲಿ 14 ವರ್ಷ ದಾಟಿದ ಮಕ್ಕಳಿಗೂ ಉತ್ತಮ ವಿದ್ಯಾಭ್ಯಾಸ ಕಲ್ಪಿಸಬಹುದು ಎಂದು ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ ರಾಜ್ಯ ಹೈಕೋರ್ಟ್ ಮುಂದೆ ವಾದ ಮಂಡಿಸಿದ್ದಾರೆ.

ಆರ್ ಟಿಇ ಕಾಯ್ದೆಗೆ ತಿದ್ದುಪಡಿ ತಂದಿರುವ ಸರ್ಕಾರದ ನಿರ್ಧಾರವನ್ನು ಅವರು ಸಮರ್ಥಿಸಿ ಈ ವಾದ ಮಂಡಿಸಿದ್ದಾರೆ. ಈ ಮೂಲಕ ಆರ್ ಟಿಇ ಕೋಟಾದಡಿ ಖಾಸಗಿ ಶಾಲೆಗಳಲ್ಲಿ ಪ್ರವೇಶಾತಿ ಪಡೆಯುವ ಬದಲು ಸ್ಥಳೀಯ ಪರಿಸರದಲ್ಲಿರುವ ಸರ್ಕಾರಿ ಅಥವಾ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಪ್ರವೇಶ ನೀಡುವ ಸರ್ಕಾರದ ತಿದ್ದುಪಡಿ ಮಸೂದೆ ಸರಿಯಾಗಿದೆ ಎಂದು ವಾದ ಮುಂದಿಟ್ಟಿದ್ದಾರೆ.

ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್ ನಾರಾಯಣ ಸ್ವಾಮಿ ಮತ್ತು ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಸರ್ಕಾರದ ತಿದ್ದುಪಡಿಯನ್ನು ವಿರೋಧಿಸಿ ಪೋಷಕರ ಒಕ್ಕೂಟ ಮತ್ತು ಆರ್ ಟಿಇಯಡಿ ಸೀಟು ಗಳಿಸಿದ ವಿದ್ಯಾರ್ಥಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿ ಈ ತೀರ್ಪು ನೀಡಿದೆ.

ಆರ್ ಟಿಇ ಕಾಯ್ದೆಯಡಿ ಖಾಸಗಿ ಶಾಲೆಗಳಲ್ಲಿ ಪ್ರವೇಶಾತಿ ಪಡೆದ ಮಕ್ಕಳು ತಮ್ಮ 8ನೇ ತರಗತಿ ಮುಗಿದ ನಂತರ ಅವರ ವಿದ್ಯಾಭ್ಯಾಸದ ವೆಚ್ಚವನ್ನು ಸರ್ಕಾರ ನೀಡುವುದಿಲ್ಲ ಎಂಬ ವಾದ ಮುಂದಿಟ್ಟರು.

ರಾಜ್ಯ ಸರ್ಕಾರ ಹೈಕೋರ್ಟ್ ಗೆ ಸಲ್ಲಿಸಿದ ತನ್ನ ಹೇಳಿಕೆಯಲ್ಲಿ, ಆರ್ ಟಿಇ ಕೋಟಾದಡಿ ಪ್ರವೇಶಾತಿ ಪಡೆಯುವ ಮಕ್ಕಳ ವೆಚ್ಚವನ್ನು ಭರಿಸುವ ಬಗ್ಗೆ ಮಾಹಿತಿ ನೀಡಿದೆ. ಇದುವರೆಗೆ ಆರ್ ಟಿಇ ಕಾಯ್ದೆಯಡಿ ರಾಜ್ಯ ಸರ್ಕಾರ ಒಟ್ಟು 1 ಸಾವಿರದ 78 ಕೋಟಿ ರೂಪಾಯಿ ವೆಚ್ಚವನ್ನು ಭರಿಸಿದೆ. ಕಳೆದ ಶೈಕ್ಷಣಿಕ ಸಾಲಿನಲ್ಲಿ ಖಾಸಗಿ ಶಾಲೆಗಳಿಗೆ ಆರ್ ಟಿಇ ಕೋಟಾದಡಿ ಮಾಡಿರುವ ವೆಚ್ಚ ಸುಮಾರು 700 ಕೋಟಿ ರೂಪಾಯಿಗಳು. ಅದು ಪ್ರತಿ ವರ್ಷ ವೆಚ್ಚ ಜಾಸ್ತಿಯಾಗುತ್ತದೆ. ರಾಜ್ಯದಲ್ಲಿನ ಸುಮಾರು 24,981 ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸುಮಾರು 1,030 ಕೋಟಿ ರೂಪಾಯಿ ಅಗತ್ಯವಿದೆ. ಖಾಸಗಿ ಶಾಲೆಗಳಲ್ಲಿ ಆರ್ ಟಿಇ ಕಾಯ್ದೆಯ ಸೌಲಭ್ಯದಿಂದಾಗಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ ತಿಳಿಸಿದರು.

ಇದೇ ಸಂದರ್ಭದಲ್ಲಿ ಕೇರಳ ರಾಜ್ಯವನ್ನು ಶಿಕ್ಷಣದಲ್ಲಿ ಉತ್ತಮ ಉದಾಹರಣೆಯಾಗಿ ತೆಗೆದುಕೊಂಡ ಅವರು, ಆರ್ ಟಿಇ ಕಾಯ್ದೆಯಡಿ ಸರ್ಕಾರಿ ಶಾಲೆಗಳಿಗೆ ಆ ರಾಜ್ಯದಲ್ಲಿ ಮೊದಲ ಆದ್ಯತೆ ನೀಡಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಕೂಡ ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸಲು ಇದೇ ನೀತಿ ಜಾರಿಗೆ ತರಬೇಕು, ಸರ್ಕಾರಿ ಶಾಲೆಗಳು ದೇಶದ ಇಡೀ ಶಿಕ್ಷಣ ವ್ಯವಸ್ಥೆಯ ಬೆನ್ನೆಲುಬು ಎಂದು ಸರ್ಕಾರ ವಾದ ಮಂಡಿಸಿದೆ.

ಇನ್ನೊಂದೆಡೆ ಖಾಸಗಿ ಶಾಲೆಗಳ ಪರವಾಗಿ ಅಡ್ವೊಕೇಟ್ ಮಾನಸಿ ಶರ್ಮ ವಾದ ಮಂಡಿಸಿ ರಾಜ್ಯ ಸರ್ಕಾರ ಶಿಕ್ಷಣಕ್ಕೆ ಒಟ್ಟು ಬಜೆಟ್ ನಲ್ಲಿ ಕೇವಲ ಶೇಕಡಾ 12ರಷ್ಟು ಹಣವನ್ನು ವೆಚ್ಚ ಮಾಡುತ್ತಿದ್ದು ಅದು ರಾಷ್ಟ್ರದ ಸರಾಸರಿ ಶೇಕಡಾ 16ರಷ್ಟಕ್ಕೆ ಕೂಡ ಸಮನಾಗಿಲ್ಲ. ದೆಹಲಿ ಶೇಕಡಾ 26ರಷ್ಟು ಶಿಕ್ಷಣಕ್ಕೆ ವೆಚ್ಚ ಮಾಡುತ್ತದೆ ಎಂದರು.

ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp