ಯುಗಾದಿ, ಚುನಾವಣೆ; ಮನೆಕೆಲಸದಾಕೆಗೆ ರಜೆ, ಮನೆಯೊಡತಿಗೆ ಸಜೆ

ನಗರದ ಮೇಲ್ಮಧ್ಯಮ, ಶ್ರೀಮಂತ ಕುಟುಂಬದ ಗೃಹಿಣಿಯರಿಗೆ ಸಮಸ್ಯೆಯಾಗಿದೆ, ಇದಕ್ಕೆ ಕಾರಣ ...
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ
ಬೆಂಗಳೂರು: ನಗರದ ಮೇಲ್ಮಧ್ಯಮ, ಶ್ರೀಮಂತ ಕುಟುಂಬದ ಗೃಹಿಣಿಯರಿಗೆ ಸಮಸ್ಯೆಯಾಗಿದೆ, ಇದಕ್ಕೆ ಕಾರಣ ಲೋಕಸಭೆ ಚುನಾವಣೆ.
ಅರೆ ಚುನಾವಣೆ ಇರುವುದಕ್ಕೂ ಗೃಹಿಣಿಯರಿಗೂ ಏನು ಸಂಬಂಧ ಎಂದುಕೊಂಡಿರಾ, ಹಲವು ಗೃಹಿಣಿಯರು ತಮ್ಮ ಮನೆಯ ದಿನನಿತ್ಯದ ಕೆಲಸಕ್ಕೆ ಮನೆ ಕೆಲಸದವರನ್ನೇ ನಂಬಿಕೊಂಡಿರುತ್ತಾರೆ. ಅವರಿಲ್ಲದೆ ಕೆಲವು ಗೃಹಿಣಿಯರ ದಿನ ಸರಾಗವಾಗಿ ನಡೆಯುವುದೇ ಇಲ್ಲ. ಈ ತಿಂಗಳು ಯುಗಾದಿ ಹಬ್ಬ ಇನ್ನೊಂದು ವಾರದಲ್ಲಿ ಚುನಾವಣೆ ಇರುವುದರಿಂದ ಮನೆಕೆಲಸದವರು ರಜೆ ಹಾಕಿಕೊಂಡು ಊರಿಗೆ ಹೋಗಿದ್ದಾರಂತೆ.
ನೆರೆಯ ಆಂಧ್ರ ಪ್ರದೇಶ. ತಮಿಳುನಾಡು, ಅಸ್ಸಾಂ ರಾಜ್ಯದಿಂದ ಬಂದ ಮನೆಕೆಲಸದ ಯುವತಿಯರು ಮತ್ತು ಮಹಿಳೆಯರು ಊರಲ್ಲಿ ಯುಗಾದಿ ಹಬ್ಬವಿದೆ, ನಂತರ ಒಂದು ವಾರದಲ್ಲಿ ಚುನಾವಣೆಯಲ್ಲಿ ವೋಟು ಹಾಕಬೇಕು ಎಂದು ಹೇಳಿಕೊಂಡು  15 ದಿನ ರಜೆ ಹಾಕಿಕೊಂಡು ಹೋಗಿದ್ದಾರಂತೆ.
ಮನೆಕೆಲಸದವಳು ಇಲ್ಲವೆಂದರೆ ನನ್ನ ದಿನನಿತ್ಯದ ಕೆಲಸ ಎಲ್ಲ ಸ್ತಬ್ಧವಾಗುತ್ತದೆ. ಮನೆಕೆಲಸದವರು ರಜೆ ಕೇಳಿದಾಗ ಯಾವ ರೀತಿ ಸರಿ ಎನ್ನುವುದು ಎಂದು ಗೊತ್ತಾಗುವುದಿಲ್ಲ ಎನ್ನುತ್ತಾರೆ ಬ್ಯಾಂಕ್ ಉದ್ಯೋಗಿ ನಿರಂಜನಾ ಎಸ್ ಎಂ. ದೆಹಲಿ ಮೂಲದ ಬೆಂಗಳೂರಿನಲ್ಲಿರುವ ಸೋನಿಯಾ ವರ್ಮಾ, ಕೆಲಸದವಳಿಲ್ಲದೆ ನಾನು ಜೀವನ ನಡೆಸುವುದು ಕಷ್ಟವಾಗುತ್ತದೆ. ಮನೆ ಗುಡಿಸಿ, ಒರೆಸುವುದನ್ನು ಹೇಗೋ ನಿಭಾಯಿಸುತ್ತೇನೆ, ಆದರೆ ಪಾತ್ರೆ ತೊಳೆಯುವುದು ಸಾಧ್ಯವೇ ಆಗುವುದಿಲ್ಲ. ಮನೆಕೆಲಸದವಳಿಲ್ಲದಿದ್ದರೆ ನಾನು ಮನೆಯಲ್ಲಿ ಅಡುಗೆ ಮಾಡುವುದಿಲ್ಲ, ಹೊಟೇಲ್ ಊಟವನ್ನೇ ನಂಬಿಕೊಂಡಿರುತ್ತೇವೆ ಎಂದರು.
ಮನೆಕೆಲಸದವರು ಹೆಚ್ಚು ಓದದವರು, ಅನಕ್ಷರಸ್ಥರಾಗಿದ್ದರೂ ಕೂಡ ಪ್ರಜಾಪ್ರಭುತ್ವದ ಹಬ್ಬವಾದ ಮತದಾನದಲ್ಲಿ ಭಾಗವಹಿಸುವ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿಲ್ಲ. ಉತ್ಸಾಹದಿಂದಲೇ ಮತ ಚಲಾಯಿಸಲು ಮುಂದಾಗಿದ್ದಾರೆ. ಬಿಟಿಎಂ ಲೇ ಔಟ್ ನ ಅಪಾರ್ಟ್ ಮೆಂಟ್ ವೊಂದರಲ್ಲಿ ಮನೆ ಕೆಲಸದವರಾಗಿ ಕೆಲಸ ಮಾಡುತ್ತಿರುವ ಆಂಧ್ರ ಪ್ರದೇಶ ಮೂಲದ ಜ್ಯೋತಿ, ನಾವು ಪಕ್ಷಗಳು ಕರೆದರೆ ರ್ಯಾಲಿಗಳಿಗೆ ಹೋಗಿ ಭಾಗವಹಿಸುತ್ತೇವೆ. ಅಲ್ಲಿ ನಮಗೆ ಚೆನ್ನಾಗಿ ಹಣ ನೀಡುತ್ತಾರೆ, ಊಟ ಕೊಡುತ್ತಾರೆ. ಗಿಫ್ಟ್ ಕೊಡುತ್ತಾರೆ ಎಂದರು.
ಉತ್ತರಹಳ್ಳಿಯ ಸುಮಾರು 150 ಅಪಾರ್ಟ್ ಮೆಂಟ್ ನ ನಿವಾಸಿಗಳಿಗೆ ಸಮಸ್ಯೆ ಎದುರಾಗಿದೆ. ಅಲ್ಲಿ ಕೆಲಸ ಮಾಡುವ ಸುಮಾರು 30 ಮನೆಕೆಲಸದವರು 20 ದಿನ ರಜೆ ಕೇಳಿ ಹೋಗಿದ್ದಾರೆ. ರಜೆ ಕೇಳಿದಾಗ ಕೊಡದೆ ನಮಗೆ ಬೇರೆ ಉಪಾಯವಿಲ್ಲ, ನಾವು ಕೊಡದಿದ್ದರೆ ರಜೆ ಹಾಕಿಕೊಂಡು ಊರಿಗೆ ಹೋದರೆ ಮತ್ತೆ ಬರುವುದಿಲ್ಲ, ಆಗ ಮತ್ತೊಬ್ಬರನ್ನು ಹುಡುಕಿ ತರುವುದು ಕಷ್ಟ ಎನ್ನುತ್ತಾರೆ ಸಾಫ್ಟ್ ವೇರ್ ಎಂಜಿನಿಯರ್ ತನ್ಮಯಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com