ಸುಲಿಗೆಗಿಳಿದ ಮಧ್ಯವರ್ತಿಗಳು, ಆರ್ ಟಿಐ ಕಾರ್ಯಕರ್ತರು: ಹೈಕೋರ್ಟ್ ತರಾಟೆ

ಕಾನೂನುಬದ್ಧವಾಗಿ ಕಟ್ಟಡ ನಿರ್ಮಿಸಿದ್ದರೂ, ಅದರ ಮಾಲೀಕರಿಗೆ ಸ್ವಾಧೀನ ಪತ್ರ ನೀಡದೆ ಸತಾಯಿಸುತ್ತಿರುವ ಬೃಹತ್ ಬೆಂಗಳೂರು...
ಹೈಕೋರ್ಟ್
ಹೈಕೋರ್ಟ್
ಬೆಂಗಳೂರು: ಕಾನೂನುಬದ್ಧವಾಗಿ ಕಟ್ಟಡ ನಿರ್ಮಿಸಿದ್ದರೂ, ಅದರ ಮಾಲೀಕರಿಗೆ ಸ್ವಾಧೀನ ಪತ್ರ ನೀಡದೆ ಸತಾಯಿಸುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು(ಬಿಬಿಎಂಪಿ) ಮತ್ತೆ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಮಧ್ಯವರ್ತಿಗಳು ಹಾಗೂ ಆರ್ ಟಿಐ ಕಾರ್ಯಕರ್ತರು ಜನಸಾಮಾನ್ಯರನ್ನು ಸುಲಿಗೆ ಮಾಡಲು ನಿಂತಿದ್ದಾರೆ ಎಂದು ಕಿಡಿಕಾರಿದೆ. 
ಹುಳಿಮಾವು ಹೋಬಳಿಯಲ್ಲಿ ವಾಲ್‍ ಮಾರ್ಕ್ ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಸ್ವಾಧೀನ ಪತ್ರ ನೀಡಲು ಬಿಬಿಎಂಪಿ ನಿರಾಕರಿಸುತ್ತಿದೆ ಎಂದು ಆರೋಪಿಸಿ ನಾಕೋಡ ಕನ್ ಸ್ಟ್ರಕ್ಷನ್ ಕಂಪನಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್.ಎನ್.ಸತ್ಯನಾರಾಯಣ ಅವರಿದ್ದ ಏಕಸದಸ್ಯ ಪೀಠ, ಬಿಬಿಎಂಪಿಯ ಅಧಿಕಾರಿಗಳು ಸಮಾಜಘಾತಕ ಶಕ್ತಿಗಳಾಗಿದ್ದಾರೆ. ಕೇವಲ ಸುಲಿಗೆಯಲ್ಲಿ ತೊಡಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಕಾನೂನುಬದ್ಧವಾಗಿದ್ದರೂ, ಕಟ್ಟಡದ ನೋಂದಣಿ ಮಾಡದಂತೆ ವರದಿ ನೀಡಿರುವ ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ಅವರನ್ನು ಕೂಡ  ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ನಾಗರಾಜ್ ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯ ಸಂಪೂರ್ಣ ವಿವರ ಒದಗಿಸುವಂತೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಗೆ ಸೂಚಿಸಿ ವಿಚಾರಣೆಯನ್ನು ಏ. 12ಕ್ಕೆ ಮುಂದೂಡಿತು. 
ಪಾಲಿಕೆ ಜನಸ್ನೇಹಿಯಾಗಿಲ್ಲ. ಕೆಲ  ರೌಡಿ ಎಲಿಮೆಂಟ್ ಗಳು ಬಿಬಿಎಂಪಿಯನ್ನು ನಿಯಂತ್ರಿಸುತ್ತಿವೆ. ಒ.ಸಿ, ಖಾತೆ ಕೊಡೋದು ಪಾಲಿಕೆಯ ದೊಡ್ಡ ದಂಧೆಯಾಗಿದೆ. ಇದಕ್ಕೆ ಕಡಿವಾಣ ಹಾಕಲೇಬೇಕು. ಪಾಲಿಕೆ ಅಧಿಕಾರಿಗಳ ನಾಟಕ ನ್ಯಾಯಾಲಯದಲ್ಲಿ ನಡೆಯುವುದಿಲ್ಲ. ನೀವು ಹೇಳಿದ್ದೆಲ್ಲಾ ನಾವು ನಂಬೋದಿಲ್ಲ ಎಂದು ನ್ಯಾಯಪೀಠ ಚಾಟಿ ಬೀಸಿತು. 
ಪ್ರಕರಣವೇನು?
ಬೆಂಗಳೂರು ದಕ್ಷಿಣ ಜಿಲ್ಲೆ ಬೇಗೂರು ತಾಲೂಕಿನ ಹುಳಿಮಾವು ಹೋಬಳಿಯಲ್ಲಿ ಸರ್ವೆ ನಂ. 52ರಲ್ಲಿನ ಬಫರ್ ವಲಯವನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಲಾಗಿದೆ ಎಂದು ಆಕ್ಷೇಪಿಸಿ ಬಿಬಿಎಂಪಿ ಅಲ್ಲಿನ ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಸ್ವಾಧೀನ ಪತ್ರ ನೀಡಲು ನಿರಾಕರಿಸಿತ್ತು. ಈ ಸಂಬಂಧ ನಿವಾಸಿಗಳು ಬಿಡಿಎಗೆ ದೂರು ಸಲ್ಲಿಸಿದ್ದರು.  2015ರ ಸೆಪ್ಟೆಂಬರ್ ನಲ್ಲಿ ಪ್ರದೇಶದ ಸರ್ವೆ ನಡೆಸಿದ್ದ ಬಿಡಿಎ, ಈ ಪ್ರದೇಶ ಸಂಪೂರ್ಣವಾಗಿ ಅರ್ಜಿದಾರರಾದ ನಿರ್ಮಾಣ ಸಂಸ್ಥೆಗೆ ಸೇರಿದ್ದು, ಅದನ್ನು ಅವರು ಕಾನೂನುಬದ್ಧವಾಗಿಯೇ ಖರೀದಿಸಿದ್ದಾರೆ ಎಂದು ವರದಿ ನೀಡಿತ್ತು. ಆದರೂ, ಬಿಬಿಎಂಪಿ ಸ್ವಾಧೀನ ಪತ್ರ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ನಾಕೋಡ ಕನ್ ಸ್ಟ್ರಕ್ಷನ್ ಕಂಪನಿ  ಹೈಕೋರ್ಟ್ ಮೆಟ್ಟಿಲೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com