ವಾರದೊಳಗೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಸಾಧ್ಯತೆ

ಇತ್ತೀಚಿಗೆ ಮುಕ್ತಾಯಗೊಂಡ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ವಾರದೊಳಗೆ ಪ್ರಕಟಗೊಳ್ಳುವ ಸಾಧ್ಯತೆ ಇದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಇತ್ತೀಚಿಗೆ ಮುಕ್ತಾಯಗೊಂಡ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ  ವಾರದೊಳಗೆ ಪ್ರಕಟಗೊಳ್ಳುವ ಸಾಧ್ಯತೆ ಇದೆ.  ಇದೇ ಮೊದಲ ಬಾರಿಗೆ ಸಿಇಟಿ ಪರೀಕ್ಷೆಗೂ ಮುನ್ನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಲಾಗುತ್ತಿದೆ. ಏಪ್ರಿಲ್ 29 ಮತ್ತು 30 ಹಾಗೂ ಮೇ 1 ರಂದು ಸಿಇಟಿ ಪರೀಕ್ಷೆ ನಡೆಯಲಿದೆ.

ಬುಧವಾರವೇ ಫಲಿತಾಂಶ ಪ್ರಕಟಗೊಳ್ಳಬೇಕಿತ್ತು. ಆದರೆ, ಇಲಾಖೆಯ ನಿರ್ದೇಶಕರು ದಿಢೀರ್ ವರ್ಗಾವಣೆಗೊಂಡಿದ್ದರಿಂದ ವಿಳಂಬ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

ಎಲ್ಲಾ ವಿಷಯಗಳ ಮೌಲ್ಯಮಾಪನ ಕಾರ್ಯ ಭಾನುವಾರವೇ ಪೂರ್ಣಗೊಂಡಿದ್ದು, ನಿರ್ದೇಶಕ ಪಿಸಿ ಜಾಫರ್ ಅವರನ್ನು ಮಂಗಳವಾರ ರಾತ್ರಿ ಮಂಡ್ಯ ಜಿಲ್ಲಾಧಿಕಾರಿಯಾಗಿ  ರಾಜ್ಯಸರ್ಕಾರ ವರ್ಗಾವಣೆ ಮಾಡಿದ್ದ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಹೊಸ ನಿರ್ದೇಶಕರು ಫಲಿತಾಂಶ ಪ್ರಕಟಿಸುವ ದಿನಾಂಕವನ್ನು ನಿರ್ಧರಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ವರ್ಷ ಮಾರ್ಚ್ 1 ರಿಂದ 18ರವರೆಗೂ ನಡೆದ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಒಟ್ಟು 6 ಲಕ್ಷ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.  ಬೇಗನೆ ಫಲಿತಾಂಶ ಪ್ರಕಟಿಸುವುದಾಗಿ ಪರೀಕ್ಷೆಗೆ ಆರಂಭಕ್ಕೂ ಮುನ್ನವೇ  ಹೇಳಲಾಗಿತ್ತು. ಏಪ್ರಿಲ್ ಮೊದಲ ವಾರದಲ್ಲಿಯೇ  ಮೌಲ್ಯಮಾಪನ ಕಾರ್ಯ ಪೂರ್ಣಗೊಳಿಸುವುದಾಗಿ ಪಿಸಿ ಜಾಪರ್ ಕೂಡಾ ತಿಳಿಸಿದ್ದರು.

ಈ ವರ್ಷ ಫಲಿತಾಂಶ ಬೇಗನೆ ಪ್ರಕಟಗೊಳ್ಳುತ್ತಿರುವುದರಿಂದ ಸಿಇಟಿ, ನೀಟ್ ನಂತಹ  ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳ ಮೇಲಿನ ಒತ್ತಡ  ಕಡಿಮೆಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com