ಬೆಂಗಳೂರು: ಟೆರೇಸ್ ನಲ್ಲಿ ಸಿಗರೇಟು ಸೇದಿದ್ದಕ್ಕೆ ವ್ಯಕ್ತಿ ಮೇಲೆ ಹಲ್ಲೆ; ಪೊಲೀಸರಿಂದ ತನಿಖೆ

ಸ್ನೇಹಿತನ ಮನೆಯ ಟೆರೇಸ್ ಮೇಲೆ ಸಿಗರೇಟು ಹೊತ್ತಿಸಿ ಬಾಯಲ್ಲಿಟ್ಟು ಹೊಗೆ ಬಿಡುತ್ತಿದ್ದ ರಾಮಮೂರ್ತಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಸ್ನೇಹಿತನ ಮನೆಯ ಟೆರೇಸ್ ಮೇಲೆ ಸಿಗರೇಟು ಹೊತ್ತಿಸಿ ಬಾಯಲ್ಲಿಟ್ಟು ಹೊಗೆ ಬಿಡುತ್ತಿದ್ದ ರಾಮಮೂರ್ತಿ ನಗರದ ವಿಜ್ಞಾನಪುರ ನಿವಾಸಿ ಶರವಣ ಜೆ ಅವರಿಗೆ ಸ್ವಲ್ಪ ಹೊತ್ತಿನಲ್ಲಿಯೇ ಸಾವು ಬದುಕಿನ ನಡುವೆ ಹೋರಾಟ ನಡೆಸುವ ಪರಿಸ್ಥಿತಿ ಬರಬಹುದು ಎಂದು ಯೋಚನೆಯೇ ಬಂದಿರಲಿಲ್ಲ.
ನಡೆದಿದ್ದೇನು: 38 ವರ್ಷದ ಶರವಣ್ ತನ್ನ ಸ್ನೇಹಿತ ಶಂಕರ್ ನನ್ನು ಭೇಟಿ ಮಾಡಲೆಂದು ಬಂಜಾರ ಲೇ ಔಟ್ ನಲ್ಲಿರುವ ಮನೆಗೆ ಹೋಗಿದ್ದರು. ಶಂಕರ್ ಮನೆಯ ಟೆರೇಸ್ ಮೇಲೆ ಹೋಗಿ ಸಿಗರೇಟು ಎಳೆಯುತ್ತಾ ಮೊಬೈಲ್ ನಲ್ಲಿ ಯಾರಲ್ಲೋ ಮಾತನಾಡುತ್ತಿದ್ದರು. ಆ ಸಂದರ್ಭದಲ್ಲಿ ಪಕ್ಕದ ಮನೆಯ ಟೆರೇಸ್ ಮೇಲೆ ಇಬ್ಬರು ಹೆಂಗಸರು ನಿಂತಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಶರವಣ್ ಹೇಳಿದ್ದಾರೆ.
ಸಿಗರೇಟು ಎಳೆಯುತ್ತಾ ಅತ್ತಿಂದಿತ್ತ ಅಡ್ಡಾಡುತ್ತಿದ್ದ ಶರವಣ್ ನನ್ನು ನೋಡಿ ಮಹಿಳೆಯರು ಯಾರಿಗೋ ಹೇಳಿದ್ದಾರೆ. ಕೂಡಲೇ ಒಬ್ಬ ವ್ಯಕ್ತಿ ಬಂದು ಶರವಣ್ ಗೆ ಟೆರೇಸ್ ಮೇಲೆ ಸಿಗರೇಟು ಎಳೆಯಬೇಡಿ, ಮನೆಯ ಒಳಗೆ ಹೋಗಿ ಬೇಕಾದರೆ ಎಳೆದುಕೊಳ್ಳಿ ಎಂದಿದ್ದಾರೆ.
ಕೂಡಲೇ ನಾನು ಸಿಗರೇಟನ್ನು ಕೆಳಗೆ ಎಸೆದು ಇಲ್ಲಿ ಎಳೆಯುವುದಿಲ್ಲ ಎಂದು ಹೇಳಿದೆ. ಆತ ಕಿರುಚಾಡುತ್ತಿದ್ದ, ಅದಕ್ಕೆ ಏಕೆ ಕಿರುಚಾಡುತ್ತಿರುವೆ ಎಂದು ಕೇಳಿದೆ. ಆಗ ಪಕ್ಕದ ಮನೆಯವರು ನನ್ನನ್ನು ಕೆಳಗೆ ಬರಲು ಹೇಳಿದರು. ಅವರು ನನ್ನಲ್ಲಿ ಏನೋ ಮಾತನಾಡಲು ಕರೆಯುತ್ತಿದ್ದಾರೆ ಅಂದುಕೊಂಡೆ. ಕೆಳಗೆ ಹೋದರೆ ಟೈಲ್ಸ್ ನಲ್ಲಿ ನನಗೆ ಹೊಡೆಯಲು ಆರಂಭಿಸಿದ ಎಂದು ಶರವಣ ಪೊಲೀಸರಿಗೆ ತಿಳಿಸಿದ್ದಾರೆ.
ಶಂಕರ್ ಮಧ್ಯೆ ಪ್ರವೇಶಿಸಿ ಬಿಡಿಸಲು ಯತ್ನಿಸಿದರಾದರೂ ಇಬ್ಬರು ಮಹಿಳೆಯರು ಮತ್ತೆ ಮತ್ತೆ ಹೊಡೆಯುವಂತೆ ಹೇಳಿದ್ದಾರೆ. ಜಗಳ ಜಾಸ್ತಿಯಾದಾಗ ಸುತ್ತಮುತ್ತಲಿನವರು ಸೇರಿದರು. ಕೂಡಲೇ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲು ಮುಂದಾದೆವು. ಆದರೆ ಪೊಲೀಸರು ಮೊದಲು ಹೋಗಿ ಆಸ್ಪತ್ರೆಯಲ್ಲಿ ಟ್ರೀಟ್ ಮೆಂಟ್ ತೆಗೆದುಕೊಂಡು ಬನ್ನಿ ಎಂದರು. ನಾನು ಕೆ ಆರ್ ಪುರಂನ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ನಂತರ ಮರುದಿನ ಪೊಲೀಸ್ ದೂರು ನೀಡಿದೆ ಎಂದರು ಶರವಣ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com