ಜೂನ್ ನಲ್ಲಿ ಪೂರಕ ಪರೀಕ್ಷೆ: ಫಲಿತಾಂಶ ನೋಡುವ ವೆಬ್ ಸೈಟ್ ಗಳ ವಿವರ; ಜಿಲ್ಲಾವಾರು ಪಿಯುಸಿ ರಿಸಲ್ಟ್

ಎಂದಿನಂತೆ ಬಾಲಕಿಯರು ಪರೀಕ್ಷೆಯಲ್ಲಿ ಮೇಲುಗೈ ಸಾಧಿಸಿದ್ದು, ಶೇ. 68.24 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಬಾಲಕರ ತೇರ್ಗಡೆ ಪ್ರಮಾಣ ಶೇ.55.29ರಷ್ಟಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ...
ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ
ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ
ಬೆಂಗಳೂರು: ‌ಕಳೆದ ಮಾರ್ಚ್ ತಿಂಗಳಲ್ಲಿ ನಡೆದ 2018–19ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಹೊರಬಿದ್ದಿದ್ದು, ನಿರೀಕ್ಷೆಯಂತೆ ಬಾಲಕಿಯರೇ ಮೇಲುಗೈಸಾಧಿಸಿದ್ದಾರೆ. 
ಪರೀಕ್ಷೆ ಬರೆದ ಒಟ್ಟು 6.71 ವಿದ್ಯಾರ್ಥಿಗಳ ಪೈಕಿ 4.14 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಒಟ್ಟು ಶೇ.61.73 ಫಲಿತಾಂಶ ಹೊರಬಿದ್ದಿದೆ. 
ವಾಡಿಕೆಯಂತೆ ಉಡುಪಿ ಶೇ.92.20 ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಗಳಿಸಿದ್ದರೆ, ದಕ್ಷಿಣ ಕನ್ನಡ ಜಿಲ್ಲೆ ಶೇ.90.91 ಫಲಿತಾಂಶದೊಂದಿಗೆ ಎರಡನೇ ಸ್ಥಾನದಲ್ಲಿದೆ. ಚಿತ್ರದುರ್ಗ ಜಿಲ್ಲೆ ಶೇ.51.42 ಫಲಿತಾಂಶದೊಂದಿಗೆ ಕೊನೆಯ ಸ್ಥಾನಕ್ಕೆ ಕುಸಿದಿದೆ. 
ಇವರಲ್ಲಿ 3.83 ಲಕ್ಷ ಹೊಸ ವಿದ್ಯಾರ್ಥಿಗಳು, 23 ಸಾವಿರ ಪುನ‌ರಾವರ್ತಿತ ಹಾಗೂ 7,641 ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಕಲಾ ವಿಭಾಗದಲ್ಲಿ ಶೇ.50.53, ವಾಣಿಜ್ಯ ವಿಭಾಗದಲ್ಲಿ ಶೇ.66.39, ಫಲಿತಾಂಶ ದಾಖಲಾಗಿದೆ. 
ಎಂದಿನಂತೆ ಬಾಲಕಿಯರು ಪರೀಕ್ಷೆಯಲ್ಲಿ ಮೇಲುಗೈ ಸಾಧಿಸಿದ್ದು, ಶೇ. 68.24 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಬಾಲಕರ ತೇರ್ಗಡೆ ಪ್ರಮಾಣ ಶೇ.55.29ರಷ್ಟಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ.61.38, ಗ್ರಾಮಾಂತರ ಜಿಲ್ಲೆಯಲ್ಲಿ ಶೇ.62.88 ಫಲಿತಾಂಶ ಹೊರಬಿದ್ದಿದೆ. ಒಟ್ಟಾರೆಯಾಗಿ ಕನ್ನಡ ಮಾಧ್ಯಮದ ಶೇ.55.08 ಹಾಗೂ ಶೆ.66.90ರಷ್ಟು ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 
ರಾಜ್ಯದ ವಿವಿಧ ಕಾಲೇಜುಗಳ ಒಟ್ಟು 54,823 ವಿದ್ಯಾರ್ಥಿಗಳು ಶೇ.85 ಹಾಗೂ ಅದಕ್ಕೂ ಹೆಚ್ಚು, 2.27 ಲಕ್ಷ ಪ್ರಥಮ ದರ್ಜೆ (ಶೇ.60ಕ್ಕಿಂತ ಹೆಚ್ಚು), 80, 357 ವಿದ್ಯಾರ್ಥಿಗಳು ದ್ವಿತೀಯ ದರ್ಜೆ (ಶೇ.50ಕ್ಕಿಂತ ಹೆಚ್ಚು) ಹಾಗೂ 52,106 ವಿದ್ಯಾರ್ಥಿಗಳು ಶೇ.50ಕ್ಕಿಂತ ಕಡಿಮೆ ಅಂಕ ಪಡೆದು ತೃತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. 
ಈ ಬಾರಿ ನೂರಕ್ಕೆ ನೂರು ಅಂಕ ಗಳಿಸಿದ ವಿದ್ಯಾರ್ಥಿಗಳು ಅತಿ ಹೆಚ್ಚಿದ್ದು, ಗಣಿತಶಾಸ್ತ್ರವೊಂದರಲ್ಲೇ 2,447 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಗಳಿಸಿದ್ದಾರೆ. ಉಳಿದಂತೆ ಲೆಕ್ಕಶಾಸ್ತ್ರದಲ್ಲಿ 1,939, ಗಣಕ ವಿಜ್ಞಾನದಲ್ಲಿ 1,546, ಸಂಖ್ಯಾಶಾಸ್ತ್ರದಲ್ಲಿ 977, ವ್ಯವಹಾರ ಅಧ್ಯಯನ ವಿಷಯದಲ್ಲಿ 955, ಸಂಸ್ಕೃತದಲ್ಲಿ 852, ಭೂಗೋಳಶಾಸ್ತ್ರದಲ್ಲಿ 757, ರಸಾಯನಶಾಸ್ತ್ರದಲ್ಲಿ 754, ಬೇಸಿಕ್‌ ಮ್ಯಾಥ್ಸ್ ನಲ್ಲಿ 357, ಅರ್ಥಶಾಸ್ತ್ರದಲ್ಲಿ 303, ಕನ್ನಡದಲ್ಲಿ 161  ವಿದ್ಯಾರ್ಥಿಗಳು 100ಕ್ಕೆ 100 ಅಂಕ ಗಳಿಸಿದ್ದಾರೆ. 
15 ಸರ್ಕಾರಿ , 1 ಅನುದಾನಿತ , 63 ಅನುದಾನ ರಹಿತ, 1 ವಿಭಜಿತ ಸೇರಿ 80 ಕಾಲೇಜುಗಳು ಶೇ.100ರಷ್ಟು ಫಲಿತಾಂಶ ದಾಖಲಿಸಿದ್ದರೆ, 3, ಸರ್ಕಾರಿ, 1 ಅನುದಾನಿತ, 94 ಅನುದಾನ ರಹಿತ ಕಾಲೇಜುಗಳು ಸೇರಿ 98 ಕಾಲೇಜುಗಳು ಶೂನ್ಯ ಫಲಿತಾಂಶ ದಾಖಲಿಸಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. 
ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳ ಭಾವಚಿತ್ರದಲ್ಲಿನ ನ್ಯೂನತೆಯನ್ನು ಸರಿಪಡಿಸಲು ಏ. 16ರಿಂದ ಏ.30ರವರೆಗೆ ಆನ್‌ ಲೈನ್‌ ಪೋರ್ಟ ಲ್ ತೆರೆಯಲಾಗುವುದು. ವಿದ್ಯಾರ್ಥಿಗಳು ಉತ್ತರ ಪತ್ರಿಕೆಗಳ  ಸ್ಕ್ಯಾನಿಂಗ್ ಪ್ರತಿ ಹಾಗೂ ಮರುಮೌಲ್ಯಮಾಪನ ಶುಲ್ಕ ಪಾವತಿಗೆ ಆನ್‌ಲೈನ್‌ ಪೇಮೆಂಟ್ ವ್ಯವಸ್ಥೆ ಕಲ್ಪಿಸಲಾಗಿದೆ. 
ಉತ್ತರಪತ್ರಿಕೆಯ ಸ್ಕ್ಯಾನಿಂಗ್ ಪ್ರತಿಗೆ ಅರ್ಜಿ ಸಲ್ಲಿಸಲು ಏ. 17ರಿಂದ ಏ.2ರವರೆಗೆ ಅವಕಾಶ ಕಲ್ಪಿಸಲಾಗಿದೆ. ಸ್ಕ್ಯಾನಿಂಗ್ ಪ್ರತಿಯನ್ನು ಡೌನ್‌ ಲೊಡ್‌ ಮಾಡಿಕೊಳ್ಳಲು ಏ. 24ರಿಂದ ಮೇ 5ರವರೆಗೆ ಕಾಲಾವಕಾಶವಿರಲಿದೆ. ಸ್ಕ್ಯಾನಿಂಗ್ ಪ್ರತಿ ತೆಗೆದುಕೊಂಡವರಿಗೆ ಉತ್ತರಪತ್ರಿಕೆಯ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಹಾಗೂ ಮರುಎಣಿಕೆ ಅರ್ಜಿ ಸಲ್ಲಿಕೆಗೆ ಏ.29ರಿಂದ ಮೇ 8ರವರೆಗೆ ಸಮಯ ನಿಗದಿಪಡಿಲಾಗಿದೆ. ಪ್ರತಿ ವಿಷಯದ ಉತ್ತರಪತ್ರಿಕೆಗೆ ಸ್ಕ್ಯಾನಿಂಗ್ ಶುಲ್ಕ 530 ರೂ. ಹಾಗೂ ಮರುಮೌಲ್ಯಮಾಪನ ಶುಲ್ಕ 1670 ರೂ. ಇರಲಿದೆ. ಮರು ಮೌಲ್ಯಮಾಪನ ಹಾಗೂ ಮರುಎಣಿಕೆಯ ಫಲಿತಾಂಶವನ್ನು www.pue.kar.nic.in ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು. 
ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಜೂನ್‌ ಮೊದಲ ಇಲ್ಲವೇ ಎರಡನೇ ವಾರದಲ್ಲೇ ಪೂರಕ ಪರೀಕ್ಷೆ ನಡೆಸಲಾಗುವುದು. ಪೂರಕ ಪರೀಕ್ಷೆಗೆ ಆನ್‌ ಲೈನ್‌ ಪೋರ್ಟ ಲ್ ನಲ್ಲಿ ಅಪ್‌ಡೇಟ್ ಮಾಡಲು ಹಾಗೂ ಶುಲ್ಕ ಪಾವತಿಗೆ ಏ.30 ಕೊನೆಯ ದಿನಾಂಕವಾಗಿದೆ. ಆಯಾ ಕಾಲೇಜಿನ ಆಡಳಿತ ಮಮಡಳಿ  ಮೇ 4ರೊಳಗೆ ಪರೀಕ್ಷಾ ಅರ್ಜಿಗಳನ್ನು ಉಪನಿರ್ದೇಶಕರಿಗೆ ಸಲ್ಲಿಸಬೇಕು. 
ಜಿಲ್ಲಾವಾರು ಫಲಿತಾಂಶ 
ಉಡುಪಿ ಜಿಲ್ಲೆ–ಶೇ.92.20
ದಕ್ಷಿಣ ಕನ್ನಡ – ಶೇ.90.91
ಕೊಡಗು– ಶೇ.83,.31
ಉತ್ತರ ಕನ್ನಡ –ಶೇ.79.59
ಚಿಕ್ಕಮಗಳೂರು–ಶೇ. 76.42
ಹಾಸನ –ಶೇ.75.19
ಬಾಗಲಕೋಟೆ –ಶೇ.74.26
ಬೆಂಗಳೂರು ದಕ್ಷಿಣ– ಶೇ.74.25
ಶಿವಮೊಗ್ಗ–ಶೇ.73.54
ಬೆಂಗಳೂರು ಗ್ರಾಮಾಂತರ–ಶೇ.72.91
ಬೆಂಗಳೂರು ಉತ್ತರ–ಶೇ.72.68
ಚಾಮರಾಜನಗರ–ಶೇ.72.67
ಚಿಕ್ಕಬಳ್ಳಾಪುರ–ಶೇ.70.11
ವಿಜಯಪುರ–ಶೇ.68.55
ಮೈಸೂರು–ಶೇ.68.55
ಹಾವೇರಿ–ಶೇ.68.40
ತುಮಕೂರು–ಶೇ.65.81
ಕೋಲಾರ–ಶೇ.65.19
ಬಳ್ಳಾರಿ–ಶೇ.64.87
ಕೊಪ್ಪಳ–ಶೇ.63.15
ಮಂಡ್ಯ–ಶೇ.63.08
ದಾವಣಗೆರೆ–ಶೇ.62.53
ಧಾರವಾಡ–ಶೇ.62.49
ರಾಮನಗರ–ಶೇ.62.08
ಚಿಕ್ಕೋಡಿ–ಶೇ.60.86
ಗದಗ– ಶೇ.57.76
ರಾಯಚೂರು–ಶೇ.56.73
ಬೆಳಗಾವಿ– ಶೇ.56.18
ಕಲಬುರಗಿ– ಶೇ.56.09
ಬೀದರ್ –ಶೇ.55.78
ಯಾದಗಿರಿ–ಶೇ.53.02
ಚಿತ್ರದುರ್ಗ–ಶೇ..51.42
ಪರೀಕ್ಷಾ ಫಲಿತಾಂಶದ ವಿವರಗಳಿಗೆ –www.pue.kar.nic.in ಹಾಗೂ www.karresults.nic.in ಗೆ ಸಂಪರ್ಕಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com