ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿಗೆ ಹೊಸ ಟ್ವಿಸ್ಟ್; ಆತ್ಮಹತ್ಯೆಯಲ್ಲ.. ರೇಪ್ ಅಂಡ್ ಮರ್ಡರ್?

ಇತ್ತೀಚೆಗೆ ರಾಯಚೂರಿನಲ್ಲಿ ನಡೆದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು, ಇದು ಆತ್ಮಹತ್ಯೆಯಲ್ಲ ಬದಲಿಗೆ ಅತ್ಯಾಚಾರ ಮತ್ತು ಕೊಲೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ರಾಯಚೂರು: ಇತ್ತೀಚೆಗೆ ರಾಯಚೂರಿನಲ್ಲಿ ನಡೆದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು, ಇದು ಆತ್ಮಹತ್ಯೆಯಲ್ಲ ಬದಲಿಗೆ ಅತ್ಯಾಚಾರ ಮತ್ತು ಕೊಲೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ನಗರದ ಮಾಣಿಕಪ್ರಭು ದೇವಸ್ಥಾನದ ಹಿಂಭಾಗದ ಬೆಟ್ಟದ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಸಾವಿನ ಪ್ರಕರಣ ಈಗ ಹೊಸ ಟ್ವಿಸ್ಟ್ ಪಡೆದಿದೆ. ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಎಂದು ದಾಖಲಾಗಿದ್ದ ಪ್ರಕರಣ ಈಗ ಅತ್ಯಾಚಾರವೆಸಗಿ, ಕೊಲೆ ಎಂದು ದಾಖಲಾಗಿದೆ. ಮೃತ ವಿದ್ಯಾರ್ಥಿನಿ ಮಧು ತಾಯಿ ರೇಣುಕಾದೇವಿ ನೀಡಿದ ದೂರಿನ ಮೇರೆಗೆ ಪೊಲೀಸರು ಅತ್ಯಾಚಾರ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಮಧು ತಾಯಿ ರೇಣುಕಾದೇವಿ ನೀಡಿರುವ ದೂರಿನ ಮೇರೆಗೆ ಅತ್ಯಾಚಾರ, ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಸುದರ್ಶನ್ ಎಂಬಾತನನ್ನು ಬಂಧಿಸಲಾಗಿದೆ. ಇನ್ನೂ ಎರಡು ಮೂರು ದಿನದಲ್ಲಿ ಮರಣೋತ್ತರ ಪರೀಕ್ಷೆಯ ವರದಿ ಬರಲಿದ್ದು ಸತ್ಯಾಂಶ ಹೊರಬರಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಹೋರಾಟವನ್ನು ಇನ್ನೂ ಜೀವಂತವಿಟ್ಟಿರುವ ವಿದ್ಯಾರ್ಥಿಗಳು ಮಧುಸಾವಿಗೆ ನ್ಯಾಯ ಸಿಗುವವರೆಗೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಆಕೆಯ ಸಾವಿಗೆ ನ್ಯಾಯ ಸಿಗದಿದ್ದರೆ ರಾಯಚೂರು ಬಂದ್ ಮಾಡಿ ಹೋರಾಟ ನಡೆಸಲು ಮಂದಾಗುವುದಾಗಿ ತಿಳಿಸಿದ್ದಾರೆ.
ಇನ್ನು ಈಗಾಗಲೇ ಈ ಸಂಬಂಧ ತಮ್ಮ ಹೋರಾಟ ತೀವ್ರಗೊಳಿಸಿರುವ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಜಸ್ಟಿಸ್ ಫಾರ್ ಮಧು (#JusticeForMadhu) ಎಂಬ ಹ್ಯಾಶ್ ಟ್ಯಾಗ್ ನಡಿಯಲ್ಲಿ ಅಭಿಯಾನ ಆರಂಭಿಸಿದ್ದು, ಇದಕ್ಕೆ ವ್ಯಾಪಕ ಬೆಂಬಲ ಕೂಡ ವ್ಯಕ್ತವಾಗುತ್ತಿದೆ.
ನಡೆದದ್ದೇನು….?
ನಗರದ ನವೋದಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಐದನೇ ಸೆಮಿಸ್ಟರ್ ಸಿವಿಲ್ ಇಂಜಿನಿಯರಿಂಗ್ ಓದುತ್ತಿದ್ದ ನಗರದ ಐಡಿಎಸ್ ಎಂಟಿ ಬಡಾವಣೆ ನಿವಾಸಿ ಮಧು ಪತ್ತಾರ್ ಏಪ್ರಿಲ್ 13 ರಂದು ಕಾಣೆಯಾಗಿದ್ದಳು. ಪೋಷಕರು ಗೊತ್ತಿರುವ ಎಲ್ಲಾ ಕಡೆ ಹುಡುಕಾಡಿ ಕೊನೆಗೆ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಆದರೆ ಮಧು ಸುಳಿವು ಮಾತ್ರ ಸಿಕ್ಕಿರಲಿಲ್ಲ. ಮಧು ಸಹೋದರಿ ತನ್ನ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವಂತೆ ಏಪ್ರಿಲ್ 17ಕ್ಕೆ ಮಧು ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಾಗಿತ್ತು, ಆದರೆ ಏಪ್ರಿಲ್ 16 ಕ್ಕೆ ಮಧು ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆರೋಪಿ ಸುದರ್ಶನ್ ಮಧು ಜೊತೆ ತುಂಬಾ ದಿನಗಳಿಂದ ಸ್ನೇಹದಲ್ಲಿದ್ದ. ಅಲ್ಲದೆ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಇದಕ್ಕೆ ಆಕೆ ನಿರಾಕರಿಸಿದಾಗ ಆತ ತನ್ನ ಸ್ನೇಹಿತರೊಂದಿಗೆ ಸೇರಿ ಆಕೆಯನ್ನು ಅಪಹರಿಸಿ ಅತ್ಯಾಚಾರ ಮಾಡಿ ಬಳಿಕ ಆಕೆಯನ್ನು ಸುಡಲು ಯತ್ನಿಸಿದ್ದಾರೆ. ನಂತರ ಆಕೆಯ ಅರೆಬಂದ ದೇಹವನ್ನು ನೇಣು ಬಿಗಿದ ಸ್ಥಿತಿಯ ಬಿಟ್ಟು ಪರಾರಿಯಾಗಿದ್ದಾರೆ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಇಂಬು ನೀಡುವಂತೆ ಮಧು ಪೋಷಕರೂ ಕೂಡ ಈತನ ಮೇಲೆಯೇ ಸಂಶಯ ವ್ಯಕ್ತಪಡಿಸಿದ್ದಾರೆ. ಈ ಅನುಮಾನದ ಮೇಲೆಯೇ ಪೊಲೀಸರು ಅವನನ್ನು ಶವ ಪತ್ತೆಯಾದ ದಿನವೇ ವಶಕ್ಕೆ ಪಡೆದಿದ್ದರು. 
ಮೊದಲು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು?
ಏಪ್ರಿಲ್ 16 ರಂದು ಪ್ರಕರಣ ಹೊರ ಜಗತ್ತಿಗೆ ತಿಳಿಯಿತು. ಆದರೆ ಅದರ ಹಿಂದಿನ ದಿನವೇ ಅಂದರೆ ಏಪ್ರಿಲ್ 15ರಂದು ಬೆಟ್ಟದಲ್ಲಿ ಯುವತಿಯ ಶವ ನೇತಾಡುತ್ತಿರುವುದು ಪೊಲೀಸರ ಗಮನಕ್ಕೆ ಬಂದಿತ್ತು. ಕೊಳೆತ ಸ್ಥಿತಿಯಲ್ಲಿದ್ದ ಶವವನ್ನ ಒಂದು ದಿನ ಬಿಟ್ಟು ಪೊಲೀಸರು ಕೆಳಗಿಳಿಸಿದ್ದಾರೆ. ಫೋರೆನ್ಸಿಕ್ ತಜ್ಞರ ತಂಡ ಬರುವವರೆಗೂ ಪೊಲೀಸರು ಶವವನ್ನು ಹಾಗೇ ಬಿಟ್ಟಿದ್ದಾರೆ. ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶವದ ಬಳಿ ಸಿಕ್ಕ ಡೆತ್ ನೋಟ್ ನಿಂದಾಗಿ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಹೇಳುತ್ತಿದ್ದಾರೆ. ಪದೇ ಪದೇ ಪರೀಕ್ಷೆಯಲ್ಲಿ ಫೇಲ್ ಆಗುತ್ತಿರುವುದರಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ, ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಡೆತ್ ನೋಟ್ ನಲ್ಲಿ ಬರೆಯಲಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದ್ದವು. ಆದರೆ ಮಧು ಪತ್ತಾರ್ ಓದಿನಲ್ಲಿ ಹಿಂದೆ ಬಿದ್ದಿರಲಿಲ್ಲ ಹಾಗೂ ಫೇಲ್ ಆಗಿರಲಿಲ್ಲ. ಅಂತೆಯೇ ಮಧು ಮೃತದೇಹದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಮೇಲೆ ಕೊಲೆ ಸಂಶಯ ಹೆಚ್ಚಾಗಿ ವಿದ್ಯಾರ್ಥಿಗಳು ನಿರಂತರ ಹೋರಾಟಕ್ಕೆ ಮುಂದಾದರು. ಕೊನೆಗೆ ಪೋಷಕರ ದೂರಿನ ಮೇರೆಗೆ ಅತ್ಯಾಚಾರ, ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಸುದರ್ಶನ್ ಯಾದವ್ ನನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com