ಎಕ್ಸ್ ಪ್ರೆಸ್ ಫಲಶ್ರುತಿ: ಶಾಲಾ ಮಕ್ಕಳಿಗೆ ಸಾರಿಗೆ ಸೌಲಭ್ಯ ಭಾಗ್ಯ!

ಶಾಲೆಗೆ ಹೋಗಿಬರಲು ಮಕ್ಕಳು 24 ಕಿಲೋ ಮೀಟರ್ ಪ್ರತಿದಿನ ನಡೆದುಕೊಂಡು ಹೋಗಬೇಕಾದ ...
ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಗ್ರಾಮಗಳ ಮಕ್ಕಳು ಶಾಲೆಗೆ ಹೋಗುತ್ತಿರುವುದು
ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಗ್ರಾಮಗಳ ಮಕ್ಕಳು ಶಾಲೆಗೆ ಹೋಗುತ್ತಿರುವುದು
ಬೆಂಗಳೂರು: ಶಾಲೆಗೆ ಹೋಗಿಬರಲು ಮಕ್ಕಳು 24 ಕಿಲೋ ಮೀಟರ್ ಪ್ರತಿದಿನ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಎಂಬ ತಲೆಬರಹದಡಿಯಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜುಲೈ 26ರಂದು ವರದಿಯೊಂದನ್ನು ಪ್ರಕಟಿಸಿತ್ತು. ಇದು ಪರಿಣಾಮ ಬೀರಿದ್ದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ ವಿಶ್ವನಾಥ್ ಶೆಟ್ಟಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸ್ವ ಪ್ರೇರಿತ ತನಿಖೆ ಆರಂಭಿಸಿದ್ದಾರೆ.
ಜುಲೈ 26ರಂದು ಆದೇಶ ಹೊರಡಿಸಿದ್ದ ಆದೇಶದಲ್ಲಿ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಯವರು ಮಕ್ಕಳಿಗೆ ಶಾಲೆಗೆ ಹೋಗಿ ಬರಲು ವಾಹನ ಸೌಲಭ್ಯ ಒದಗಿಸಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. 
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ದಟ್ಟವಾದ ಅರಣ್ಯದ ನಡುವೆ ದಾರಿಯಲ್ಲಿ ಮಕ್ಕಳು ಪ್ರತಿದಿನ 24 ಕಿಲೋ ಮೀಟರ್ ನಡೆದುಕೊಂಡು ಹೋಗಿ ಶಾಲೆಗೆ ಹೋಗಿಬರಬೇಕು ಎಂದು ಅಲ್ಲಿನ ಸ್ಥಿತಿಗತಿ ಬಗ್ಗೆ  ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಕೆಲ ದಿನಗಳ ಹಿಂದೆ ವರದಿ ಪ್ರಕಟಿಸಿತ್ತು. ಕೆಲವು ಸಂದರ್ಭಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ತಮ್ಮ ಗಸ್ತು ತಿರುಗುವ ವಾಹನದಲ್ಲಿ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ಸಹಾಯವನ್ನು ಮಾಡುತ್ತಾರೆ ಎಂದು ಪ್ರಕಟಿಸಲಾಗಿತ್ತು.
ಅರಣ್ಯ ಇಲಾಖೆ ಸಿಬ್ಬಂದಿಯ ಈ ಔದಾರ್ಯ ಗುಣ ಮೆಚ್ಚುವಂತಹದ್ದಾದರೂ ಕೂಡ ಅವರನ್ನೇ ಮಕ್ಕಳು ಯಾವತ್ತೂ ನಂಬಿಕೊಂಡಿರಲು ಸಾಧ್ಯವಾಗುವುದಿಲ್ಲ. ಅತಿಯಾದ ಗಾಳಿ, ಮಳೆ ಬರುವ ಸಂದರ್ಭದಲ್ಲಿ ಮತ್ತು ವನ್ಯ ಜೀವಿಗಳ ಭಯವಿರುವುದರಿಂದ ಈ ದಾರಿಯಲ್ಲಿ ಮಕ್ಕಳು ನಡೆದುಕೊಂಡು ಹೋಗುವುದು ಯಾವತ್ತಿಗೂ ಅಪಾಯವೇ ಎಂದು ಹೇಳಿರುವ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ, ಕರ್ನಾಟಕ ಲೋಕಾಯುಕ್ತ ಕಾಯ್ದೆ ಸೆಕ್ಷನ್ 2(10)ರಡಿಯಲ್ಲಿ ಅಧಿಕಾರಿಗಳ ಅಸಮರ್ಪಕ ಕಾರ್ಯನಿರ್ವಹಣೆಯನ್ನು ಇದು ತೋರಿಸುತ್ತದೆ ಎಂದು ಹೇಳಿರುವ ಲೋಕಾಯುಕ್ತ ನ್ಯಾಯಮೂರ್ತಿಗಳು ಅಧಿಕ ಸಮಯ ಮಕ್ಕಳು ಪ್ರಯಾಣದಲ್ಲಿಯೇ ಕಳೆದುಹೋದರೆ ಅವರ ಕಲಿಕೆ ಮೇಲೆ ಕೂಡ ಪರಿಣಾಮ ಬೀರಬಹುದು ಎಂದು ಹೇಳಿದ್ದಾರೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತ ನ್ಯಾಯಮೂರ್ತಿಗಳು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಸಾರಿಗೆ ಇಲಾಖೆಯ ಉಪ ಆಯುಕ್ತರು, ಬೆಳಗಾವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಕೆಎಸ್ಆರ್ ಟಿಸಿ ಮತ್ತು ಎನ್ ಡಬ್ಲ್ಯುಕೆಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರು, ಬೆಳಗಾವಿ ಜಿಲ್ಲೆ ವಲಯ ಶಿಕ್ಷಣಾಧಿಕಾರಿಗಳಿಗೆ ನೊಟೀಸ್ ಜಾರಿ ಮಾಡಿದ್ದಾರೆ. 
ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿ ನಾಲ್ಕು ವಾರಗಳೊಳಗೆ ವರದಿ ಸಲ್ಲಿಸುವಂತೆ ಲೋಕಾಯುಕ್ತ ನ್ಯಾಯಮೂರ್ತಿಗಳು ಆದೇಶಿಸಿದ್ದು ಮುಂದಿನ ವಿಚಾರಣೆಯನ್ನು ಆಗಸ್ಟ್ 29ಕ್ಕೆ ಮುಂದೂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com