2 ಲಕ್ಷ ಮನೆ ನಿರ್ಮಾಣದ ಗುರಿ, ಪ್ರಧಾನಿ ಕನಸಿನಂತೆ ಸರ್ವರಿಗೂ ಸೂರು: ಸಿಎಂ ಯಡಿಯೂರಪ್ಪ

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಂತೆ ಪ್ರತಿಯೊಬ್ಬರಿಗೂ ಸೂರು ನೀಡುವ ಯೋಜನೆ ಬಗ್ಗೆ ಚರ್ಚೆ ನಡೆಸಲಾಗಿದ್ದು,...
ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಂತೆ ಪ್ರತಿಯೊಬ್ಬರಿಗೂ ಸೂರು ನೀಡುವ ಯೋಜನೆ ಬಗ್ಗೆ ಚರ್ಚೆ ನಡೆಸಲಾಗಿದ್ದು, 1 ಲಕ್ಷ ಮನೆ ನಿರ್ಮಾಣಕ್ಕೆ ಕೆಲಸ ಆರಂಭವಾಗಿದೆ. ಒಟ್ಟು ಎರಡು ಲಕ್ಷ ಮನೆ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಗುರುವಾರ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ನಡೆದ ಆರ್ಥಿಕ, ಕೃಷಿ, ವಸತಿ ಇಲಾಖೆಯ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬರುವ 2022ರ ವೇಳೆಗೆ ಸರ್ವರಿಗೂ ಸೂರು ಒದಗಿಸುವ ಗುರಿ ಹಮ್ಮಿಕೊಂಡಿದೆ. ಇದಕ್ಕಾಗಿ 1000 ಎಕರೆ ಜಮೀನು ಗುರುತಿಸಲಾಗಿದ್ದು, ಪ್ರತಿಯೊಬ್ಬರಿಗೂ ಮನೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ ಬೆಳೆ ಸಮೀಕ್ಷೆ ಕುರಿತು ಚರ್ಚೆ ಮಾಡಿದ್ದು, ಯುವಕ ಯುವತಿರಯನ್ನು ಬಳಸಿಕೊಂಡು ಬೆಳೆ ಸಮೀಕ್ಷೆ ನಡೆಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಬೆಳೆ ಸಮೀಕ್ಷೆ ಸಮಗ್ರ ಮಾಹಿತಿ ಸಂಗ್ರಹಿಸಲು ಅನುಕೂಲವಾಗಲಿದೆ. ಅಲ್ಲದೆ ಸಾವಿರಾರು ಯುವಕ-ಯುವತಿಯರಿಗೆ ಕೆಲಸ ಸಿಗಲಿದೆ. ಸಮೀಕ್ಷೆ ಬಗ್ಗೆ ಇನ್ನಷ್ಟು ಮಾಹಿತಿ ನೀಡುವ ಕೆಲಸವನ್ನು ಸರ್ಕಾರ ಮಾಡುತ್ತದೆ ಎಂದರು.
ಋಣ ಮುಕ್ತ ಕಾಯ್ದೆ ಜಾರಿ ಸಂಬಂಧ ನಿಯಮ ರೂಪಿಸುವ ಕುರಿತು ಚರ್ಚಿಸಿದ್ದು, ಈ ಸಂಬಂಧ ಕಡತ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಕಾಯ್ದೆಯು ಯಾರಿಗೆ ಅನ್ವಯವಾಗಲಿದೆ ಮತ್ತು ಅದರಿಂದ ಏನೇನು ಅನುಕೂಲವಾಗಲಿದೆ ಎಂಬುದನ್ನು ಪರಿಶೀಲಿಸಿ ಇಂದೇ ಆದೇಶ ಹೊರಡಿಸಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದರು.
ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ. ಸಂಪನ್ಮೂಲ ಕ್ರೂಢೀಕರಣ ಕೂಡಾ ನಿರೀಕ್ಷಿತ ಮಟ್ಟದಲ್ಲಿದ್ದು, ಯಾವುದರಲ್ಲೂ ನಾವು ಹಿಂದೆ ಬಿದ್ದಿಲ್ಲ. ಆರ್ಥಿಕ ಸ್ಥಿತಿ ಬಗ್ಗೆ ನಮಗೆ ತೃಪ್ತಿಯಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಮುಖ್ಯಮಂತ್ರಿ ವಸತಿ ಯೋಜನೆ ಅಡಿಯಲ್ಲಿ 14 ಕ್ಕೂ ಹೆಚ್ಚು ಮಹಡಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಗುಜರಾತ್​ನಲ್ಲೂ ಇದೇ ಮಾದರಿಯ ಮನೆಗಳನ್ನು ನಿರ್ಮಿಸಲಾಗಿದೆ. ಅದೇ ರೀತಿ ಕರ್ನಾಟಕದಲ್ಲಿಯೂ ಬಡವರಿಗೆ ಮನೆ ಒದಗಿಸಲಾಗುವುದು ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com