ಕರ್ನಾಟಕ ಪೊಲೀಸರ ಹೆಗಲಿಗೆ ಮತ್ತೊಂದು ಜವಾಬ್ದಾರಿ: ಇನ್ಮುಂದೆ ಮಾಟಮಂತ್ರಗಳನ್ನೂ ತಡೆಯಬೇಕು!

ಕಳ್ಳರುಕಾಕರ ಮೇಲೆ ನಿಗಾವಹಿಸಬೇಕಾಗಿರುವ ಪೊಲೀಸರು ಇನ್ಮುಂದೆ ಮಾಟಮಂತ್ರ ಇತ್ಯಾದಿ ದುಷ್ಟ ಆಚರಣೆಗಳ ಮೇಲೂ ನಿಗಾವಹಿಸಿ, ಅವುಗಳು ನಡೆಯದಂತೆ ಕ್ರಮಕೈಗೊಳ್ಳಬೇಕಾದ...
ಕರ್ನಾಟಕ ಪೊಲೀಸರು
ಕರ್ನಾಟಕ ಪೊಲೀಸರು
ಬೆಂಗಳೂರು: ಕಳ್ಳರುಕಾಕರ ಮೇಲೆ ನಿಗಾವಹಿಸಬೇಕಾಗಿರುವ ಪೊಲೀಸರು ಇನ್ಮುಂದೆ ಮಾಟಮಂತ್ರ ಇತ್ಯಾದಿ ದುಷ್ಟ ಆಚರಣೆಗಳ ಮೇಲೂ ನಿಗಾವಹಿಸಿ, ಅವುಗಳು ನಡೆಯದಂತೆ ಕ್ರಮಕೈಗೊಳ್ಳಬೇಕಾದ ಜವಾಬ್ದಾರಿಯೂ ಅವರ ಹೆಗಲೇರಿದೆ. 
ಪೊಲೀಸ್ ಠಾಣೆಗಳು ಕಳ್ಳತನ, ದರೋಡೆ ಸೇರಿದಂತೆ ಅಪರಾಧ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳುವ ಜೊತೆಗೆ ಮಾಟ,ಮಂತ್ರದಂತಹ ದುಷ್ಟ ಚಟುವಟಿಕೆಯ ಮೇಲೂ ಕಣ್ಣಿಡುವಂತೆ ಸರ್ಕಾರ ಸೂಚಿಸಿದೆ. ಒಳಾಡಳಿತ ಇಲಾಖೆ ನಿಗದಿಪಡಿಸಿದ ವಿಶೇಷ ಪೊಲೀಸ್ ಠಾಣೆಗಳನ್ನು ಹೊರತುಪಡಿಸಿ, ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳನ್ನು ''ಕರ್ನಾಟಕ ಅಮಾನವೀಯ ದುಷ್ಟಪದ್ಧತಿ ಹಾಗೂ ವಾಮಾಚಾರ ಇವುಗಳ ಪ್ರತಿಬಂಧ ಮತ್ತು ನಿರ್ಮೂಲನಾ ಅಧಿನಿಯಮ-2017''ರ ಅನ್ವಯ ಪೊಲೀಸ್ ಠಾಣೆಗಳು ಎಂದು ಘೋಷಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಈ ಪೊಲೀಸ್ ಠಾಣೆಗಳಲ್ಲಿನ ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ಜಾಗೃತಾಧಿಕಾರಿಗಳನ್ನಾಗಿ ಕರ್ತವ್ಯ ನಿರ್ವಹಿಸಲು ನೇಮಕ ಮಾಡಲಾಗಿದೆ ಎಂದು ಸರ್ಕಾರ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದೆ.
ಮಹಿಳಾ, ಸೈಬರ್ ಸೇರಿದಂತೆ ಇತರೆ ವಿಶೇಷ ಪೊಲೀಸ್ ಠಾಣೆಗಳಿಗೆ ಈ ನಿಯಮ ಒಳಪಡುವುದಿಲ್ಲ. ದುಷ್ಟಪದ್ಧತಿ ಹಾಗೂ ವಾಮಾಚಾರ ಇವುಗಳ ಪ್ರತಿಬಂಧ ಮತ್ತು ನಿರ್ಮೂಲನಾ ಅಧಿನಿಯಮ-2017 ಇದನ್ನು ಮೌಢ್ಯನಿಷೇಧ ಕಾಯಿದೆ ಎಂದು ಸಹ ಕರೆಯಲಾಗುತ್ತಿದ್ದು, ಈ ಕಾಯಿದೆಯನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಜಾರಿಮಾಡಲಾಗಿತ್ತು.
ಮಡೆಮಡೆ ಸ್ನಾನ, ಅಮಾನವೀಯ ವಾಮಾಚಾರ ದುಷ್ಟ ಪ್ರಯೋಗಗಳು ಮತ್ತು ಮಾಟಮಂತ್ರದಂತಹ ಕ್ರಿಯೆಯಲ್ಲಿ ಪಾಲ್ಗೊಳ್ಳುವವರು ಮತ್ತು ಸಹಕರಿಸುವವರು ಸೇರಿದಂತೆ ಈ ಅಧಿನಿಯಮದಲ್ಲಿ ಹೇಳಿರುವ ನಿಯಮಗಳನ್ನು ಉಲ್ಲಂಘಿಸಿದ್ದು ಕಂಡುಬಂದಲ್ಲಿ ಅಥವಾ ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿದಲ್ಲಿ ಜಾಗೃತಾಧಿಕಾರಿಗಳು ಈ ಸಂಬಂಧ ವಿಶೇಷವಾಗಿ ಕರ್ತವ್ಯ ನಿರ್ವಹಿಸಬೇಕಾಗಿರುತ್ತದೆ.
ಮೌಢ್ಯ ನಿಷೇಧ ಕಾಯಿದೆ-2017 ಜಾರಿಯಾದರೂ ಕೂಡ ರಾಜ್ಯದಲ್ಲಿ  ಇದು ಸಮರ್ಪಕವಾಗಿ ಜಾರಿಗೊಂಡಿಲ್ಲ.  ಜಾಗೃತಾಧಿಕಾರಿಗಳು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ, ಶೋಷಣೆ ಕಂಡುಬಂದಲ್ಲಿ ಅಥವಾ ಈ ಸಂಬಂಧ ದೂರುಬಂದಲ್ಲಿ ವಿಶೇಷ ಪ್ರಕರಣ ಎಂದು ಪರಿಗಣಿಸಿ, ಇಂತಹ ಘಟನೆಗಳು ನಡೆಯದಂತೆ ಕರ್ತವ್ಯನಿರ್ವಹಿಸಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com