ಸಿದ್ದಾರ್ಥ್ ಮತ್ತು ನನ್ನ ನಡುವೆ ಇದ್ದ ಸ್ನೇಹ, ವ್ಯವಹಾರಗಳನ್ನು ಅವರ ಸಾವಿನ ಜತೆ ತಳುಕು ಹಾಕುವುದು ಬೇಡ: ಡಿಕೆ ಶಿವಕುಮಾರ್

ಕೆಫೆ ಕಾಫಿ ಡೇ ಮಾಲೀಕ ವಿ ಜಿ ಸಿದ್ದಾರ್ಥ್ ಅವರು ಕಾಂಗ್ರೆಸ್ ಹಿರಿಯ ಮುಖಂಡ ಡಿ ಕೆ ಶಿವಕುಮಾರ್ ...
ಡಿ ಕೆ ಶಿವಕುಮಾರ್-ವಿ ಜಿ ಸಿದ್ದಾರ್ಥ್(ಸಂಗ್ರಹ ಚಿತ್ರ)
ಡಿ ಕೆ ಶಿವಕುಮಾರ್-ವಿ ಜಿ ಸಿದ್ದಾರ್ಥ್(ಸಂಗ್ರಹ ಚಿತ್ರ)
ಬೆಂಗಳೂರು: ಕೆಫೆ ಕಾಫಿ ಡೇ ಮಾಲೀಕ ವಿ ಜಿ ಸಿದ್ದಾರ್ಥ್ ಅವರು ಕಾಂಗ್ರೆಸ್ ಹಿರಿಯ ಮುಖಂಡ ಡಿ ಕೆ ಶಿವಕುಮಾರ್ ಜೊತೆಗೆ ನಡೆಸಿದ ಉದ್ಯಮ ವ್ಯವಹಾರಗಳಿಂದ ತೊಂದರೆಗೆ ಸಿಲುಕಿ ಹಾಕಿಕೊಂಡು ಆತ್ಮಹತ್ಯೆಯಂತಹ ಕಠಿಣ ನಿರ್ಧಾರವನ್ನು ಜೀವನದಲ್ಲಿ ತೆಗೆದುಕೊಂಡರು ಎಂಬ ಸುದ್ದಿಗಳು ಹರಿದಾಡುತ್ತಿರುವ ಬಗ್ಗೆ ಡಿ ಕೆ ಶಿವಕುಮಾರ್ ಸ್ವತಃ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಹಾಗೂ ಸಿದ್ದಾರ್ಥ್ ನಡುವಿನ ಸ್ನೇಹ ಸಂಬಂಧದ ಕುರಿತು ಮಾಧ್ಯಮಗಳಲ್ಲಿ ಹೊಸ ಹೊಸ ಕಥೆಗಳನ್ನು ಸೃಷ್ಟಿ ಮಾಡಿ, ಇಲ್ಲಸಲ್ಲದ ವದಂತಿ ಹಬ್ಬಿಸಿ ಪ್ರತಿಬಾರಿ ಸಿದ್ದಾರ್ಥ್ ಅವರನ್ನು ಕೊಲೆ ಮಾಡಲಾಗುತ್ತಿದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿದ್ದಾರ್ಥ್ ಅವರ ಸಾವಿಗೆ ತಾವೇ ಕಾರಣ ಎಂಬಂಥ ಅರ್ಥದಲ್ಲಿ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿದ್ದು ಇವೆಲ್ಲ ಕಪೋಲಕಲ್ಪಿತ ಎಂದು ಆರೋಪಿಸಿದ್ದಾರೆ.
ನನ್ನ ಮತ್ತು ಸಿದ್ಧಾರ್ಥ್​ದು 30 ವರ್ಷಗಳ ಸ್ನೇಹ. ಅದಕ್ಕೂ ಮೀರಿದ ಬಾಂಧವ್ಯವಿದೆ. ಅದರ ಆಳಗಲ ನಮಗೆ ಮಾತ್ರ ಗೊತ್ತು. ಈಗವರು ಮೃತಪಟ್ಟಿರಬಹುದು ಆದರೆ ಅವರೊಂದಿಗಿನ ಒಡನಾಟದ ನೆನಪು ಚಿರವಾಗಿಯೇ ಇರುತ್ತದೆ. ಅದು ಗೊತ್ತಿಲ್ಲದ ಕೆಲವರು ಇಲ್ಲ-ಸಲ್ಲದ ಸದ್ದಿಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬದುಕಿದ್ದಾಗಲೇ ಸಿದ್ಧಾರ್ಥ್​ ಅವರ ವ್ಯವಹಾರ-ವಹಿವಾಟಿನ ಬಗ್ಗೆ ಏನಾದರೂ ಹೇಳಿದ್ದರೆ ಅವರೇ ಸ್ಪಷ್ಟನೆ ನೀಡುತ್ತಿದ್ದರು. ಆದರೆ ಅವರು ಗತಿಸಿದ ನಂತರ ಮನಬಂದಂತೆ ಮಾತನಾಡಿದರೆ ಅದಕ್ಕೆ ವ್ಯಾಖ್ಯಾನ, ಉತ್ತರ ನೀಡುವುದು ಹೇಗೆ? ಉತ್ತರ ನೀಡಲು ಅವರೇ ಇಲ್ಲ. ಹೀಗಿರುವಾಗ ಅವರ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ಸರಿಯಲ್ಲ, ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅದೇ ರೀತಿ ಅವರ ಕುಟುಂಬದವರನ್ನು ಕೂಡ ನೆಮ್ಮದಿಯಿಂದ ಬದುಕಲು ಬಿಡಿ ಎಂದಿದ್ದಾರೆ. 
ನಾನೊಬ್ಬ ರಾಜಕಾರಣಿ ಮತ್ತು ಉದ್ಯಮಿ. ಅದೇ ರೀತಿ ಸಿದ್ಧಾರ್ಥ್ ಅವರೊಬ್ಬ ಉದ್ಯಮಿ. ರಾಜಕಾರಣ ಮತ್ತು ವ್ಯವಹಾರ ಮಾಡಲು ನನಗೆ ಹಕ್ಕುಗಳಿವೆ. ಅದೇ ರೀತಿ ಸಿದ್ಧಾರ್ಥ್ ಅವರಿಗೂ ಉದ್ಯಮ ನಡೆಸಲು ಹಕ್ಕುಗಳಿವೆ. ಅವರ ಹಕ್ಕೇ ಬೇರೆ. ನನ್ನ ಹಕ್ಕೇ ಬೇರೆ. ನಮ್ಮಿಬ್ಬರ ನಡುವೆ ಸಣ್ಣ-ಪುಟ್ಟ ವ್ಯವಹಾರ ಇದ್ದಿದ್ದು ನಿಜ. ಆದರೆ ಅ ವ್ಯವಹಾರವನ್ನು ಅವರ ಸಾವಿನ ಜತೆ ತಳುಕು ಹಾಕುವುದು ಸರಿಯಲ್ಲ ಎಂದಿದ್ದಾರೆ.
ಸಿದ್ಧಾರ್ಥ್ ಸಾವಿನ ಹಿನ್ನೆಲೆಯಲ್ಲಿ ನನ್ನನ್ನು ಟೀಕಿಸುವವರಿಗೆ ಉದ್ಯಮಿಗಳಾದ ಮೋಹನ್ ದಾಸ್ ಪೈ ಮತ್ತು ಕಿರಣ್ ಮಜೂಂದಾರ್ ಷಾ ಅವರು ನೀಡಿರುವ ಹೇಳಿಕೆಗಳು ಬೆಳಕು ಚೆಲ್ಲುತ್ತವೆ, ಸಿದ್ಧಾರ್ಥ್ ಅವರನ್ನು ಮತ್ತೊಮ್ಮೆ ಕೊಲ್ಲುತ್ತಿರುವವರು ಗಮನ ಹರಿಸಬೇಕು. ಯಾರು ಯಾರಿಗೆ ಬೇಕಾದರೂ ಸುಳ್ಳು ಹೇಳಬಹುದು, ಮೋಸ ಮಾಡಬಹುದು. ಆದರೆ ಆ ದೇವರಿಗೆ ಸುಳ್ಳು ಹೇಳಲು ಸಾಧ್ಯವಿಲ್ಲ. ಆ ಭಗವಂತನೇ ಎಲ್ಲವನ್ನೂ ನೋಡಿಕೊಳ್ಳುತ್ತಾನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com