ಉಕ್ಕಿ ಹರಿದ ಕೃಷ್ಣಾ ನದಿ: ಬೆಳಗಾವಿ ಜಿಲ್ಲೆಯ ಹಲವು ಗ್ರಾಮಗಳಿಗೆ ಜಲಾವೃತ ಭೀತಿ

ಬೆಳಗಾವಿ ಜಿಲ್ಲೆಯ ಹಲವು ಭಾಗಗಳಲ್ಲಿ ಕಳೆದ ಕೆಲ ದಿನಗಳಿಂದ ವ್ಯಾಪಕ ಮಳೆಯಾಗಿರುವುದರಿಂದ ...
ಅಥಣಿಯಲ್ಲಿ ಕೃಷ್ಣಾ ನದಿ ನೀರು ಉಕ್ಕಿ ಹರಿಯುತ್ತಿರುವುದರ ಮಧ್ಯೆ ರೈತರೊಬ್ಬರು ಜಾನುವಾರನ್ನು ಕರೆದೊಯ್ಯುತ್ತಿರುವುದು
ಅಥಣಿಯಲ್ಲಿ ಕೃಷ್ಣಾ ನದಿ ನೀರು ಉಕ್ಕಿ ಹರಿಯುತ್ತಿರುವುದರ ಮಧ್ಯೆ ರೈತರೊಬ್ಬರು ಜಾನುವಾರನ್ನು ಕರೆದೊಯ್ಯುತ್ತಿರುವುದು
ಬೆಳಗಾವಿ/ಅಥಣಿ: ಬೆಳಗಾವಿ ಜಿಲ್ಲೆಯ ಹಲವು ಭಾಗಗಳಲ್ಲಿ ಕಳೆದ ಕೆಲ ದಿನಗಳಿಂದ ವ್ಯಾಪಕ ಮಳೆಯಾಗಿರುವುದರಿಂದ ನೆರೆ ಪ್ರವಾಹ ಉಂಟಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ. 16ಕ್ಕೂ ಹೆಚ್ಚು ಸೇತುವೆಗಳಲ್ಲಿ ಪ್ರವಾಹ ಉಂಟಾಗಿದೆ. ಅನೇಕ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಗಳು ಹಾನಿಗೀಡಾಗಿವೆ.
ಮಹಾರಾಷ್ಟ್ರ ರಾಜ್ಯದಲ್ಲಿನ ವಿವಿಧ ಭಾಗಗಳಲ್ಲಿ ಸುರಿದಿರುವ ವ್ಯಾಪಕ ಮಳೆಯಿಂದ ಕೃಷ್ಣಾ ನದಿ ನೀರು ಉಕ್ಕಿ ಹರಿಯುತ್ತಿದೆ. ವರದಿ ಪ್ರಕಾರ, ಮಹಾರಾಷ್ಟ್ರದ ಕೊಯ್ನಾದಲ್ಲಿ 165 ಮಿಲಿ ಮೀಟರ್, ನವ್ಜಾದಲ್ಲಿ 147 ಮಿಲಿ ಮೀಟರ್, ಮಹಾಬಲೇಶ್ವರದಲ್ಲಿ 222 ಮಿ.ಮೀ, ವರ್ನಾದಲ್ಲಿ 149ಮಿ.ಮೀ, ಕೊಲ್ಹಾಪುರದಲ್ಲಿ 34ಮಿ.ಮೀ, ರಾಧಾನಗರಿಯಲ್ಲಿ 162ಮಿ.ಮೀ, ದೂದ್ ಗಂಗಾದಲ್ಲಿ 101 ಮಿ.ಮೀ ಮಳೆಯಾಗಿದೆ. 
ಹಿಪ್ಪರಗಿ ಅಣೆಕಟ್ಟಿಯಲ್ಲಿ 524.35 ಮೀಟರ್ ನಷ್ಟು ನೀರು ತುಂಬಿದ್ದು ಅದರ ಒಳಹರಿವು 2 ಲಕ್ಷದ 18 ಸಾವಿರದ 500 ಕ್ಯೂಸೆಕ್ಸ್ ಮತ್ತು ಹೊರಹರಿವು 2 ಲಕ್ಷದ 17 ಸಾವಿರದ 500 ಕ್ಯೂಸೆಕ್ಸ್ ಆಗಿದೆ. ಆಲಮಟ್ಟಿ ಜಲಾಶಯದಲ್ಲಿ ನೀರಿನ ಮಟ್ಟ 518.41 ಮೀಟರ್ ನಷ್ಟಾಗಿದ್ದು ಒಳಹರಿವು 2 ಲಕ್ಷದ 5 ಸಾವಿರದ 832 ಮತ್ತು ಹೊರಹರಿವು 2 ಲಕ್ಷದ 29 ಸಾವಿರದ 292 ಆಗಿದೆ. 
ನದಿ ತಟಗಳಲ್ಲಿ ಮತ್ತು ಉಪ ನದಿಗಳ ಸಮೀಪದ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ವರ್ಗಾಯಿಸಲು ಜಿಲ್ಲಾಧಿಕಾರಿ ಎಸ್ ಬಿ ಬೊಮ್ಮನಹಳ್ಳಿ ಸಂಬಂಧಪಟ್ಟ ಸಹಾಯಕ ಆಯುಕ್ತರು ಮತ್ತು ತಹಸಿಲ್ದಾರ್ ಗಳಿಗೆ ಸೂಚಿಸಿದ್ದಾರೆ. 24*7 ನಿಯಂತ್ರಣ ಕೊಠಡಿ, ತಾಲ್ಲೂಕು ಮತ್ತು ಉಪ ವಿಭಾಗ ಮಟ್ಟಗಳಲ್ಲಿ ಸಿಬ್ಬಂದಿ ನೇಮಕ ಮಾಡುವಂತೆ ಕೂಡ ಹೇಳಿದ್ದಾರೆ.
ಪ್ರವಾಹ ಉಂಟಾದರೆ ಅಗತ್ಯವಿದ್ದರೆ ದೋಣಿ ಮತ್ತು ಇತರ ಸುರಕ್ಷತಾ ವ್ಯವಸ್ಥೆ ಮಾಡುವಂತೆ ಪಂಚಾಯತ್ ರಾಜ್ ಮತ್ತು ಲೋಕೋಪಯೋಗಿ ಇಲಾಖೆಗಳ ಎಂಜಿನಿಯರ್ ಗಳು, ಜಿಲ್ಲಾ ಗೃಹ ರಕ್ಷಕ ದಳ, ಪೊಲೀಸ್ ಇಲಾಖೆ, ಅಗ್ನಿಶಾಮಕ ಸಿಬ್ಬಂದಿ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಗೆ ಸೂಚಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com