ಸುಬ್ಬಿ ಕೆರೆ ಬೋಟ್ ನಲ್ಲೇ ವಿಡಿಯೋ ಶೂಟಿಂಗ್, ಆಯತಪ್ಪಿ ನೀರಿಗೆ ಬಿದ್ದ ಯುವಕನ ದಾರುಣ ಸಾವು!

ಬೋಟಿಂಗ್ ಮಾಡುವ ವೇಳೆ ಯುವಕನೋರ್ವ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬಿಲಗುಂದ ಗ್ರಾಮದಲ್ಲಿ ಶನಿವಾರ ವರದಿಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮೈಸೂರು: ಬೋಟಿಂಗ್ ಮಾಡುವ ವೇಳೆ ಯುವಕನೋರ್ವ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬಿಲಗುಂದ ಗ್ರಾಮದಲ್ಲಿ ಶನಿವಾರ ವರದಿಯಾಗಿದೆ.
ತಮಿಳುನಾಡು 24 ವರ್ಷದ ಕಾರ್ತಿಕ್ ನೀರಿನಲ್ಲಿ ಮುಳುಗಿ ಮೃತಪಟ್ಟ ದುರ್ದೈವಿ. ಬಿಲಗುಂದ ಗ್ರಾಮದ ಸುಬ್ಬಿ ಕೆರೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಕಾರ್ತಿಕ್ ಮೂಲತಃ ತಮಿಳುನಾಡಿನವರಾಗಿದ್ದು, ಪ್ರವಾಸಕ್ಕೆಂದು ಆಗಮಿಸಿದ್ದ ವೇಳೆ ದುರಂತ ಸಂಭವಿಸಿದೆ. 
ಬೋಟ್ ನಲ್ಲಿ ತೆರಳುವಾಗ ಕಾರ್ತಿಕ್ ತನ್ನ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ವೇಳೆ ಆತ ಆಯತಪ್ಪಿ ನೀರಿಗೆ ಬಿದ್ದಿದ್ದಾನೆ. ಮೂಲಗಳ ಪ್ರಕಾರ ಕೊಯಮತ್ತೂರು ಮೂಲದ ಶ್ರೀನಿವಾಸನ್‌ ಅವರ ಪುತ್ರ ಐ.ಎಸ್‌.ಎಸ್‌.ಕಾರ್ತಿಕ್‌ ಇತರೆ 50 ಪ್ರವಾಸಿಗರೊಂದಿಗೆ ಇಲ್ಲಿಗೆ ಆಗಮಿಸಿದ್ದನಂತೆ.  ಇಲ್ಲಿನ ಕೊಪ್ಪ ಗ್ರಾಮದಲ್ಲಿರುವ ಅಡ್ವೇಂಚರ್‌ ಎಂಬ ಸಂಸ್ಥೆ ಕೆರೆಯಲ್ಲಿ ಬೋಟಿಂಗ್‌ ಗಾಗಿ ಅನುಮತಿ ಪಡೆದುಕೊಂಡಿದ್ದು, ಆದಾಯ ನಷ್ಟವಾಗಿದ್ದರಿಂದ 15 ದಿನಗಳಿಂದ ಬೋಟಿಂಗ್ ಸ್ಥಗಿತಗೊಳಿಸಲಾಗಿತ್ತು. 
ಆದರೆ ಕೊಯಮುತ್ತೂರಿನಿಂದ 50 ಪ್ರವಾಸಿಗರು ಆಗಮಿಸಿ ಅಕ್ಕಪಕ್ಕದಲ್ಲಿರುವ ಪ್ರವಾಸಿತಾಣಗಳನ್ನು ಪರಿಚಯಿಸುವಂತೆ ಒತ್ತಾಯಿಸಿದಾಗ ಇಲ್ಲಿಗೆ ಕರೆತಂದಿದ್ದಾರೆ. ಪ್ರವಾಸಿಗರು ಕೆರೆಯಲ್ಲಿ ಬೋಟಿಂಗ್‌ ಮಾಡುವಾಗ ಕಾರ್ತಿಕ್‌ ತನ್ನ ಮೊಬೈಲ್‌ನಿಂದ ವಿಡಿಯೋ ತೆಗೆದುಕೊಳ್ಳುವ ಆತುರದಲ್ಲಿ ಆಯತಪ್ಪಿ ಕೆರೆಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಅಗ್ನಿಶಾಮಕ ದಳ ಮತ್ತು ಪೊಲೀಸ್‌ ಇಲಾಖೆಯ ಅಧಿಕಾರಿಗಳು ಧಾವಿಸಿ ದಿನವಿಡೀ ಶೋಧ ನಡೆಸಿ ಈಜು ತಜ್ಞರಿಂದ ಶೋಧ ಕಾರ್ಯ ನಡೆಸಿ ಶವವನ್ನು ಮೇಲೆತ್ತಲಾಯಿತು.  ಈ ಸಂದರ್ಭ ಅಗ್ನಿಶಾಮಕ ಪ್ರಭಾರ ಇನ್ಸ್‌ಪೆಕ್ಟರ್‌ ವೆಂಕಟೇಶ್‌, ಬೆಟ್ಟದಪುರ ಪೊಲೀಸ್‌ ಠಾಣೆಯ ಪಿಎಸ್‌ ಎಂ.ಲೋಕೇಶ್‌, ಎಎಸ್‌ಐ ಜಗದೀಶ್‌ ಸಿಬ್ಬಂದಿ ಸೇರಿದಂತೆ ಮೃತ ಕಾರ್ತಿಕ್‌ ಕುಟುಂಬಸ್ಥರು ಹಾಜರಿದ್ದರು. 
ಪ್ರಸ್ತುತ ಕಾರ್ತಿಕ್ ಪೋಷಕರು ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com