ಫೇಸ್ ಬುಕ್ ನಲ್ಲಿ ಅಪರಿಚಿತನ ಸ್ನೇಹ; 2 ಲಕ್ಷ ರೂ.ಬೆಲೆ ಬಾಳುವ ಚಿನ್ನ ಕಳೆದುಕೊಂಡ ಮಹಿಳೆ

ಆನ್ ಲೈನ್ ನಲ್ಲಿ ಸ್ನೇಹ ಮಾಡುವಾಗ ಹುಷಾರಾಗಿರಿ ಎಂದು ಮಾಧ್ಯಮಗಳಲ್ಲಿ ಹಾಗೂ ಪೊಲೀಸರು ಅನೇಕ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಆನ್ ಲೈನ್ ನಲ್ಲಿ ಸ್ನೇಹ ಮಾಡುವಾಗ ಹುಷಾರಾಗಿರಿ ಎಂದು ಮಾಧ್ಯಮಗಳಲ್ಲಿ ಹಾಗೂ ಪೊಲೀಸರು ಅನೇಕ ಬಾರಿ ಎಚ್ಚರಿಕೆ ನೀಡುತ್ತಿದ್ದರೂ ಅವರ ಸಲಹೆಯಿಂದ ಯಾವುದೇ ಪರಿಣಾಮ ಬೀರುವಂತೆ ಕಾಣುತ್ತಿಲ್ಲ. 
ಫೇಸ್ ಬುಕ್ ನಲ್ಲಿ ಅಪರಿಚಿತನೊಬ್ಬನ ಜೊತೆ ಸ್ನೇಹ ಮಾಡಿಕೊಂಡ 23 ವರ್ಷದ ಮಹಿಳೆ 2.2 ಲಕ್ಷ ರೂಪಾಯಿ ಮೌಲ್ಯದ ಆಭರಣ ಕಳೆದುಕೊಂಡಿದ್ದಾರೆ.
ನಡೆದ ಘಟನೆಯೇನು?: ಬೆಂಗಳೂರಿನ ರಾಜರಾಜೇಶ್ವರಿನಗರದ ಗೃಹಿಣಿ ಅಶ್ವಿನಿ ವಿ, ಜೆ.ಪಿ ನಗರ 6ನೇ ಹಂತದ ನಿವಾಸಿ ವಿನೋದ್ ಅಲಿಯಾಸ್ ಮಂಜುನಾಥ್ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕಳೆದ ಜೂನ್ 1ರಂದು ವಿನೋದ್ ನಿಂದ ಅಶ್ವಿನಿಗೆ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಆತನ ಪರಿಚಯ ಆಕೆಗಿಲ್ಲದಿದ್ದರೂ ಕೂಡ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದರು. ನಂತರ ಚಾಟಿಂಗ್ ಮಾಡಿ ಪರಿಚಯವಾಗಿ 10 ದಿನಗಳೊಳಗೆ ಮೊಬೈಲ್ ನಂಬರ್ ಬದಲಾಯಿಸಿಕೊಂಡರು.
ಒಂದು ದಿನ ವಿನೋದ್ ಅಶ್ವಿನಿಗೆ ಕರೆ ಮಾಡಿ ತಾನು ಕಷ್ಟದಲ್ಲಿದ್ದು ತನ್ನ ಸೋದರಿಗೆ ನೀಡಲು ಹಣ ಬೇಕೆಂದು ಕೇಳಿದನು. ಅಶ್ವಿನಿ ನಾಲ್ಕೂವರೆ ಸಾವಿರ ರೂಪಾಯಿ ಕೊಟ್ಟರು. ಕೆಲ ದಿನಗಳು ಕಳೆದ ನಂತರ ಮತ್ತೆ ಕರೆ ಮಾಡಿ ತಾಯಿಗೆ ಆರೋಗ್ಯ ಸರಿಯಿಲ್ಲ ಸರ್ಜರಿಯಾಗಬೇಕು ಹಣ ನೀಡಿ ಎಂದು ಕೇಳಿದನು. 
ತಮ್ಮ ಬಳಿ ಹಣ ಇಲ್ಲ ಎಂದು ಅಶ್ವಿನಿ ಹೇಳಿದಾಗ ಚಿನ್ನ ಕೊಡಿ ಎಂದು ಕೇಳಿದನು. ಆತನನ್ನು ನಂಬಿ ಅಶ್ವಿನಿ ಎರಡು ಚಿನ್ನದ ಸರ, ಬ್ರೇಸ್ ಲೆಟ್, 3 ಉಂಗುರ, ಕಿವಿಯೋಲೆ ಎಲ್ಲಾ ಸೇರಿ 2 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಚಿನ್ನ ನೀಡಿದ್ದಾರೆ. 
ಚಿನ್ನ ಪಡೆದ ನಂತರ ವಿನೋದ್ ಅಶ್ವಿನಿಯಿಂದ ದೂರವಾಗಲು ಪ್ರಯತ್ನಿಸಿದ. ಆತನನ್ನು ಸಂಪರ್ಕಿಸಲು ಯತ್ನಿಸಿದರೆ ಆತ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಅಶ್ವಿನಿಗೆ ಆಗ ಮೋಸ ಹೋಗಿದ್ದು ಅರಿವಿಗೆ ಬಂತು. ಆತನ ಹೆಸರು ವಿನೋದ್ ಬದಲಿಗೆ ಮಂಜುನಾಥ್ ಎಂದಾಗಿತ್ತು. 
ಕೇಸು ದಾಖಲಿಸಿ ತನಿಖೆ ಕೈಗೊಂಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com