ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ

ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿರುವ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ...

Published: 04th August 2019 12:00 PM  |   Last Updated: 04th August 2019 02:07 AM   |  A+A-


D K Shivakumar-Basana Gowda Patil Yatnal

ಡಿಕೆ ಶಿವಕುಮಾರ್-ಬಸವರಾಜ್ ಪಾಟೀಲ್ ಯತ್ನಾಳ್

Posted By : SUD SUD
Source : UNI
ಬೆಂಗಳೂರು: ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು  ಕೇಂದ್ರದ ಮಾಜಿ ಸಚಿವ, ಬಿಜೆಪಿ ಮುಖಂಡ ಹಾಗೂ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮಾಜಿ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ 204 ಕೋಟಿ ರುಪಾಯಿಗೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ತಮ್ಮ ತವರು ಕ್ಷೇತ್ರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನಕಪುರದ ಸೀನಿಯರ್ ಸಿವಿಲ್ ಜಡ್ಜ್ ಹಾಗೂ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಡಿ.ಕೆ. ಶಿವಕುಮಾರ್ ದಾಖಲಿಸಿರುವ ಮಾನನಷ್ಟ ಸಿವಿಲ್ ಮೊಕದ್ದಮೆ (288/2019) ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿರುವ ನ್ಯಾಯಾಧೀಶರು ಪ್ರತಿವಾದಿ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸಮನ್ಸ್ ಜಾರಿ ಮಾಡಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 18 ಕ್ಕೆ ನಿಗದಿ ಮಾಡಲಾಗಿದೆ.

ಅರ್ಜಿದಾರ ಡಿ.ಕೆ. ಶಿವಕುಮಾರ್ ಅವರು ನ್ಯಾಯಾಲಯಕ್ಕೆ ಚೆಕ್ ಮೂಲಕ 1 ಕೋಟಿ 4 ಲಕ್ಷದ 8 ಸಾವಿರ ರುಪಾಯಿ ಕೋರ್ಟ್ ಶುಲ್ಕ ಪಾವತಿಸಿದ್ದಾರೆ.

ಆರೋಪಿ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಳೆದ ಜೂನ್ 23 ರಂದು ವಿಜಯಪುರದಲ್ಲಿ ಮಾಧ್ಯಮದವರ ಜತೆ ಮಾತನಾಡುತ್ತಾ ತಮ್ಮ ಬಗ್ಗೆ ಮಾನಹಾನಿ ಹೇಳಿಕೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ತಮ್ಮ ವಿರುದ್ಧ ದಾಖಲಾಗಿರುವ ಆದಾಯ ತೆರಿಗೆ ಇಲಾಖೆ (ಐಟಿ), ಜಾರಿ ನಿರ್ದೇಶನಾಲಯದ (ಇಡಿ) ಪ್ರಕರಣಗಳಿಂದ ಮುಕ್ತಿಗೊಳಿಸಲು ಸಹಾಯ ಮಾಡುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕೇಂದ್ರದ ಸಚಿವರುಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ನನ್ನ ವಿರುದ್ಧದ ಪ್ರಕರಣಗಳನ್ನು ಮುಕ್ತಾಯ ಮಾಡಿದರೆ ಇದಕ್ಕೆ ಪ್ರತಿಯಾಗಿ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಮಾಡಲು ನಾನು ವಿರೋಧ ಮಾಡುವುದಿಲ್ಲ ಅಂತ ಭರವಸೆ ನೀಡಿದ್ದಾರೆ ಎಂದು ಯತ್ನಾಳ್ ಅವರು ಈ ಸಂದರ್ಭದಲ್ಲಿ ಸುಳ್ಳು ಆರೋಪ ಮಾಡಿದ್ದಾರೆ. ಯತ್ನಾಳ್ ಅವರ ಈ ಹೇಳಿಕೆ ಎಲೆಕ್ಟ್ರಾನಿಕ್ ಹಾಗೂ ಮುದ್ರಣ ಮಾಧ್ಯಮದಲ್ಲಿ ಪ್ರಸಾರವಾಗಿದೆ. ಯತ್ನಾಳ್ ಅವರ ಸತ್ಯಕ್ಕೆ ದೂರವಾದ ಹೇಳಿಕೆಯಿಂದ ತಮ್ಮ ಪ್ರಾಮಾಣಿಕತೆ, ನೈತಿಕತೆ, ಪ್ರತಿಷ್ಠೆ ಹಾಗೂ ವರ್ಚಸ್ಸಿಗೆ ಧಕ್ಕೆಯಾಗಿದೆ. ಯತ್ನಾಳ್ ಅವರ ಈ ಆರೋಪ ಆಧಾರರಹಿತ, ದುರುದ್ದೇಶಪೂರ್ವಕ ಹಾಗೂ ಬೇಜವಾಬ್ದಾರಿಯಿಂದ ಕೂಡಿದ್ದು, ತಮ್ಮ ಮಾನಕ್ಕೆ ಹಾನಿ ಮಾಡಿದೆ ಎಂದು ಶಿವಕುಮಾರ್ ಆರ್ಜಿಯಲ್ಲಿ ವಾದಿಸಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಸರಕಾರ ರಚನೆಗೆ ನೆರವಾಗುತ್ತೇನೆ ಎಂದು ತಾವು ಆ ಪಕ್ಷದ ವರಿಷ್ಠರಿಗೆ ಹೇಳಿರುವುದಾಗಿ ಯತ್ನಾಳ್ ಅವರು ಮಾಡಿರುವ ಆರೋಪವು ಗಂಭೀರ ಸ್ವರೂಪದ್ದಾಗಿದ್ದು, ಇದು ಕಾಂಗ್ರೆಸ್ ರಾಜ್ಯ, ರಾಷ್ಟ್ರೀಯ ಮುಖಂಡರು ಹಾಗೂ ಮೈತ್ರಿ ಸರಕಾರದ ಮುಖಂಡರು ಕೂಡ ತಮ್ಮನ್ನು ಗುಮಾನಿಯಿಂದ ನೋಡಲಿ ಮತ್ತು ತಮ್ಮ ರಾಜಕೀಯ ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿ ಎಂಬ ದುರುದ್ದೇಶದಿಂದಲೂ ಕೂಡಿದೆ ಎಂದು ಅರ್ಜಿದಾರರು ದೂರಿದ್ದಾರೆ.

ಹಿಂದಿನ ಮೈತ್ರಿ ಸರಕಾರದಲ್ಲಿ ಜಲ ಸಂಪನ್ನೂಲ ಸಚಿವರಾಗಿದ್ದ ತಾವು ಕೆಲವು ಬಾರಿ ದಿಲ್ಲಿಗೆ ಅಧಿಕೃತ ಭೇಟಿ ನೀಡಿರುವುದು ನಿಜ. ಜೂನ್ 12 ರಿಂದ ಜೂನ್ 19 ರ ನಡುವೆ ಇಂಥ ಪ್ರವಾಸ ಮಾಡಿದಾಗ ಕೇಂದ್ರದ ಕೆಲವು ಸಚಿವರುಗಳನ್ನು ಭೇಟಿ ಮಾಡಿ ಮಹದಾಯಿ, ಮೇಕೆದಾಟು ಸೇರಿದಂತೆ ಕರ್ನಾಟಕದ ನಾನಾ ಜಲ ಸಂರಕ್ಷಣೆ, ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನಕ್ಕೆ ನೆರವಾಗುವಂತೆ ಮನವಿ ಮಾಡಿದ್ದೇನೆ. ಜಲ ಸಂಪನ್ನೂಲ ಸಚಿವರಾಗಿ ಅದು ತಮ್ಮ ಕರ್ತವ್ಯವೂ ಹೌದು. ಆದರೆ ಈ ಭೇಟಿ ಬೆನ್ನಲ್ಲೇ ಅಂದರೆ ಜೂನ್ 23ರಂದು ಯತ್ನಾಳ್ ಅವರು ಈ ರೀತಿ ಅಪಾರ್ಥದ ಹೇಳಿಕೆಗಳನ್ನು ನೀಡಿರುವುದು ತಮ್ಮ ಕರ್ತವ್ಯನಿಷ್ಠೆ, ಗೌರವ ಹಾಗೂ ಘನತೆಗೆ ಭಂಗ ತಂದಿದೆ. ಯತ್ನಾಳ್ ಆರೋಪ ಕುರಿತು ಕನಕಪುರ ಕ್ಷೇತ್ರದ ಮತದಾರರು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮನ್ನು ಪ್ರಶ್ನೆ ಮಾಡಿದ್ದಾರೆ. ಇದರಿಂದ ತಮಗೆ ಮಾನಸಿಕ ಹಿಂಸೆಯಾಗಿದೆ. ಸಾರ್ವಜನಿಕರ ಎದುರು ಅನಗತ್ಯವಾಗಿ ತಲೆ ತಗ್ಗಿಸುವಂತೆ ಮಾಡಿದೆ ಎಂದು ಶಿವಕುಮಾರ್ ಅಲವತ್ತುಕೊಂಡಿದ್ದಾರೆ.

ಸಾರ್ವಜನಿಕ ಬದುಕಿನಲ್ಲಿ ತಮ್ಮ ಗೌರವ, ಘನತೆಗೆ ಕುಂದುಂಟು ಮಾಡಿರುವುದಕ್ಕೆ ಪ್ರತಿಯಾಗಿ ಬಸನಗೌಡ ಪಾಟೀಲ್ ಯತ್ನಾಳ್ ಅವರಿಂದ ತಮಗೆ 204 ಕೋಟಿ ರುಪಾಯಿ ಪರಿಹಾರ ಕೊಡಿಸಬೇಕು ಹಾಗೂ ಶಾಶ್ವತವಾಗಿ ತಮ್ಮ ವಿರುದ್ಧ ಮಾತಿನ ಹಾಗೂ ಬರಹ ಸ್ವರೂಪದಲ್ಲಿ ಯಾವುದೇ ಹೇಳಿಕೆ ನೀಡದಂತೆ ಅವರಿಗೆ ನಿರ್ಬಂಧ ಹೇರಬೇಕು ಎಂದು ಶಿವಕುಮಾರ್ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
Stay up to date on all the latest ರಾಜ್ಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp