ಪ್ರವಾಹ: ರಕ್ಷಣಾ ಕಾರ್ಯಕ್ಕೆ ಹೆಚ್ಚುವರಿ ಸೇನೆ ನಿಯೋಜನೆ, ಮೃತ ಕುಟುಂಬಕ್ಕೆ 5 ಲಕ್ಷ ಪರಿಹಾರ-ಸಿಎಂ ಯಡಿಯೂರಪ್ಪ

ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಪ್ರವಾಹ ಉಂಟಾಗಿ ಆರು ಜನರು ಮೃತಪಟ್ಟಿದ್ದು, ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಸಿಎಂ ಯಡಿಯೂರಪ್ಪ ಪತ್ರಿಕಾಗೋಷ್ಠಿ
ಸಿಎಂ ಯಡಿಯೂರಪ್ಪ ಪತ್ರಿಕಾಗೋಷ್ಠಿ
ಬೆಳಗಾವಿ: ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಪ್ರವಾಹ ಉಂಟಾಗಿ ಆರು ಜನರು ಮೃತಪಟ್ಟಿದ್ದು, ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ "ನೆರೆ ಹಾವಳಿಯಲ್ಲಿ ಸಿಕ್ಕಿರುವವರ ರಕ್ಷಣೆಗೆ ಅಧಿಕಾರಿಗಳು ಎಲ್ಲಾ ಬಗೆಯ ಪ್ರಯತ್ನ ನಡೆಸುತ್ತಾರೆ. ಅಗತ್ಯವಾದಲ್ಲಿ ಇನ್ನು ಮೂರು ದಿನ ಕಾಲ ನಾನಿಲ್ಲಿಯೇ ವಾಸ್ತವ್ಯ ಹೂಡಿ ಪರಿಹಾರ ಕಾರ್ಯದ ಉಸ್ತುವಾರಿ ನೋಡಿಕೊಳ್ಳುವೆ" ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
"ಧಾರಾಕಾರ ಮಳೆ ಸುರಿಯುತ್ತಿದ್ದ ವೇಳೆ ರಸ್ತೆ ಸಂಚಾರ ನಿಯಂತ್ರಣದ ಸಂದರ್ಭದಲ್ಲಿ ಅಪಘಾತದಲ್ಲಿ ಮೃತಪಟ್ಟಿರುವ ಪಿ.ಎಸ್.ಐ ಲಟ್ಟೆ ಕುಟುಂಬಕ್ಕೆ ಐವತ್ತು ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ಒದಗಿಸಲಾಗುವುದು." ಎಂದು ಅವರು ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ 106 ಗ್ರಾಮಗಳು ಜಲಾವೃತಗೊಂಡಿದ್ದು, ಜನ-ಜಾನುವಾರುಗಳ ರಕ್ಷಣೆಗೆ ಸರ್ಕಾರ ಆದ್ಯತೆ ನೀಡಲಿದೆ. ನಾಳೆ ಹೆಚ್ಚುವರಿ ಸೇನೆಯ ತುಕಡಿಗಳನ್ನು ನಿಯೋಜಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.
ಎಂಟು ಸೇನಾ ತುಕಡಿ, 5 ಎನ್.ಡಿ.ಆರ್.ಎಫ್. 2 ಎಸ್ ಡಿ.ಆರ್.ಎಫ್. ನಿಯೋಜನೆ ಮಾಡಲಾಗಿದೆ. ನಾಳೆ ನಾಲ್ಕು ಎನ್.ಡಿ.ಆರ್.ಎಫ್. ಹಾಗೂ ಸೇನಾ ತುಕಡಿಗಳ ಆಗಮಿಸಲಿವೆ.
ಅಧಿಕಾರಿಗಳು ದೃತಿಗೆಡದೇ ರಕ್ಷಣಾ ಕಾರ್ಯದಲ್ಲಿ ತೊಡಗಲಿ. ಸರ್ಕಾರದಿಂದ ಎಲ್ಲ ರೀತಿಯ ಸಹಾಯ ಒದಗಿಸಲಾಗುವುದು ಎಂದರು. 
ಚಿಕ್ಕೋಡಿ, ಹುಕ್ಕೇರಿ, ಗೋಕಾಕ, ಅಥಣಿ, ರಾಯಬಾಗ ತಾಲ್ಲೂಕುಗಳಲ್ಲಿ ಹೆಚ್ಚು ಹಾನಿ ಸಂಭವಿಸಿದೆ. ಸಮರ್ಪಕ ರಕ್ಷಣಾ ಕೇಂದ್ರಗಳ ಸ್ಥಾಪನೆಗೆ ಸೂಚನೆ ನೀಡಲಾಗಿದೆ. ಜಿಲ್ಲೆಯ ಐದು ನದಿಗಳ ನೀರು ಸೇರಿದಂತೆ 5 ಲಕ್ಷ ಕ್ಯುಸೆಕ್ ನೀರು ಕೃಷ್ಣೆಯ ಮೂಲಕ ಹರಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆಗೆ ಜಿಲ್ಲಾಡಳಿತ ಎಲ್ಲ ರೀತಿಯ ಪ್ರಯತ್ನ ನಡೆಸಿದೆ. ಇದಕ್ಕಾಗಿ ಹೆಲಿಕಾಪ್ಟರ್ ನಿಯೋಜನೆ ಮಾಡಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com